ಭಾನುವಾರ, ಸೆಪ್ಟೆಂಬರ್ 27, 2020
21 °C

ಕರ್ನಾಟಕ ಸಂಗೀತಕ್ಕೆ ಬೆಲ್ಜಿಯಂ ವಾದ್ಯ ಸ್ಯಾಕ್ಸೊಫೋನ್ ಒಗ್ಗಿದ ಕಥೆ

ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಸುಷಿರ ವಾದ್ಯ ಸ್ಯಾಕ್ಸೊಫೋನ್‌ನ ಮೂಲ ಬೆಲ್ಜಿಯಂ ದೇಶ. ಆದರೆ ಇಂದು ಕರ್ನಾಟಕ ಸಂಗೀತದ 72 ಮೇಳಕರ್ತ ರಾಗಗಳು, ಜನ್ಯರಾಗಗಳು ಅಷ್ಟೇ ಅಲ್ಲದೆ ದೇವರನಾಮ, ವರ್ಣ, ತಿಲ್ಲಾನಗಳೂ ಈ ವಾದ್ಯದ್ಲಲಿ ಮೊಳಗುತ್ತವೆ.

ವಿದೇಶಗಳಲ್ಲಿ ಇದನ್ನು ಮಿಲಿಟರಿ ಬ್ಯಾಂಡ್‌ಗೆ ಬಳಸುವುದು ರೂಢಿ. ಬೆಲ್ಜಿಯಂನ ಅಡಾಲ್ಫ್ ಸ್ಯಾಕ್ಸ್ ಎಂಬವವನು 1846ರಲ್ಲಿ ಈ ವಾದ್ಯವನ್ನು ಕಂಡುಹಿಡಿದ. ಕಂಚಿನಿಂದ ತಯಾರಿಸಿದ ಈ ವಾದ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಸಂಗೀತ ಕೇಳಲು ಸಾಧ್ಯ ಎಂಬುದು ಆತನ ಭಾವನೆಯಾಗಿತ್ತು.

ಇದನ್ನೂ ಓದಿ: ಸ್ಯಾಕ್ಸೋಫೋನ್‌ ಚಕ್ರವರ್ತಿ ಕದ್ರಿ ಗೋಪಾಲನಾಥ್‌ ನಿಧನ

ಅಲ್ಲಿನ ಮಿಲಿಟರಿ ಬ್ಯಾಂಡ್‌ಗಳಲ್ಲಿ ಬಳಸಲಾರಂಭಿಸಿದ ಸ್ಯಾಕ್ಸೊಫೋನ್‌, ನಂತರ ಆರ್ಕೆಸ್ಟ್ರಾಗಳಲ್ಲಿ ಬಳಕೆಗೆ ಬಂತು. ಅದಾಗಿ ಪಾಶ್ಚಾತ್ಯ ಜಾಸ್ ಸಂಗೀತದಲ್ಲಿ ಬಳಸಲಾರಂಭಿಸಿದರು. ಕರ್ನಾಟಕ ಸಂಗೀತದಲ್ಲಿ ಕ್ಲಾರಿಯೊನೆಟ್, ನಾಗಸ್ವರಗಳಿಗಿಂತಲೂ ಸ್ಯಾಕ್ಸೊಫೋನ್ ಇಂದು ಹೆಚ್ಚು ಜನಪ್ರಿಯವಾಗಿದೆ. ಮದುವೆ, ಮುಂಜಿಗಳಂಥ ಶುಭ ಕಾರ್ಯಗಳ್ಲಲಿ ಸ್ಯಾಕ್ಸೊಫೋನ್ ಕಛೇರಿಗಳು ಶೋಭೆ ಹೆಚ್ಚಿಸುತ್ತವೆ.

ವಾದ್ಯ ಸಂಗೀತದಲ್ಲಿ ಮಹಿಳೆಯರು ಕಲಿಯಲು ಆಸಕ್ತಿ ವಹಿಸುವುದು ಸಾಮಾನ್ಯವಾಗಿ ಸುಲಭದಲ್ಲಿ ಒಲಿಯುವ ವಾದ್ಯಗಳನ್ನೇ. ಸುಷಿರ ವಾದ್ಯ, ಅದರಲ್ಲೂ ಸ್ಯಾಕ್ಸೊಫೋನ್ ಕಲಿಕೆ ಆರಂಭದಲ್ಲಿ ಕೊಂಚ ಕಷ್ಟವೇ. ಆದರೂ ಮಹಿಳೆಯರಿಗೆ ಇದು ಸಾಧ್ಯವಿಲ್ಲ ಎನ್ನುವುದು ತಪ್ಪು ಕಲ್ಪನೆ. ಇದೀಗ ಬಹಳಷ್ಟು ಹುಡುಗಿಯರೂ ಸ್ಯಾಕ್ಸೊಫೋನ್ ಕಲಿಯುತ್ತಿದ್ದಾರೆ.

ಇದನ್ನೂ ಓದಿ: ವಿಶೇಷ ಸಂದರ್ಶನ | ಸೈನಿಕರಿಗೆ ಸಂಗೀತ: ಕದ್ರಿ ಕನಸು

ವಾದ್ಯ ಸಂಗೀತ ಕಲಿತರೆ ವಿಭಿನ್ನವಾದದ್ದನ್ನು, ಯಾರೂ ಮಾಡದೇ ಇರುವುದರಲ್ಲೇ ಸಾಧನೆ ಮಾಡಿ ತೋರಿಸಬೇಕು ಎಂದು ಪಣ ತೊಟ್ಟು ಯಶಸ್ವಿಯಾದವರು ಮಂಗಳೂರು ಮೂಲದ ಸ್ಯಾಕ್ಸೊಫೋನ್‌ ವಿದುಷಿಯರಾದ ಲಾವಣ್ಯ ಮತ್ತು ಸುಬ್ಬುಲಕ್ಷ್ಮಿ. ಕದ್ರಿ ಗೋಪಾಲನಾಥ್ ಅವರ ಶಿಷ್ಯೆಯರಾದ ಇವರಿಬ್ಬರೂ ಇದೀಗ ದೇಶ ವಿದೇಶಗಳಲ್ಲಿ ನೂರಾರು ಕಛೇರಿ ನೀಡುತ್ತಿದ್ದಾರೆ. ಈ ವಾದ್ಯದಲ್ಲಿ ದಕ್ಷಿಣಾದಿ ಸಂಗೀತವನ್ನು ಜನಪ್ರಿಯಗೊಳಿಸುತ್ತಿದ್ದಾರೆ. 

ಕದ್ರಿ ಗೋಪಾಲನಾಥ್ ಅವರೇ ಸುಮಾರು 500ಕ್ಕೂ ಹೆಚ್ಚು ಶಿಷ್ಯರನ್ನು ತಯಾರು ಮಾಡಿದ್ದಾರೆ. ಅದರಲ್ಲಿ ಮಹಿಳೆಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.

ಆತುರ ಬೇಡ: ‘ಈ ವಾದ್ಯವನ್ನು ಕುಳಿತುಕೊಂಡೇ ನುಡಿಸಬೇಕು. ಉಸಿರಿನ ನಿಯಂತ್ರಣ ಇರಬೇಕು. ಸಂಗೀತದ ಜ್ಞಾನ ಇರಬೇಕು. ಮೊದಲು ಬೇರೆ ಯಾವುದಾದರೂ ವಾದ್ಯವನ್ನು ಕಲಿಯಿರಿ. ಆಗ ಸ್ಯಾಕ್ಸೊಫೋನ್ ಬೇಗ ಒಲಿಯುತ್ತದೆ. ಕನಿಷ್ಠ 8 ವರ್ಷವಾದರೂ ಅಭ್ಯಾಸ ಮಾಡಿ. ಅಲ್ಲಿಯವರೆಗೆ ಕಛೇರಿ ಕೊಡುವ ಆತುರ ಬೇಡ. ಕಛೇರಿ ಕೊಡುವ ಮುನ್ನ 50 ಸಲ ಅಭ್ಯಾಸ ಮಾಡಿ’ ಎನ್ನುವುದು ಕದ್ರಿ ಗೋಪಾಲನಾಥ್ ಅವರು ಹೊಸಬರಿಗೆ ಕೊಡುತ್ತಿದ್ದ ಸಲಹೆ.  

ಇದನ್ನೂ ಓದಿ: ರಾಮನವಮಿ ಸಂಗೀತೋತ್ಸವದಲ್ಲಿ ಇನ್ನು ಕೇಳದು ‘ಕದ್ರಿ‘ ಸ್ಯಾಕ್ಸೋಫೋನ್‌ ಇಂಪು

ಬಳಸಲು ಯೋಗ್ಯವಿರುವ ಸ್ಯಾಕ್ಸೊಫೋನ್‌ ಖರೀದಿಗೆ ಸುಮಾರು ₹10 ಸಾವಿರ ಬೇಕು. ₹20 ಸಾವಿರಕ್ಕೆ ಉತ್ತಮ ಗುಣಮಟ್ಟದ ಸ್ಯಾಕ್ಸೊಫೋನ್‌ ಸಿಗುತ್ತದೆ. ಒಂದೂವರೆ ಲಕ್ಷ ರೂಪಾಯಿವರೆಗೂ ಬೆಲೆ ಬಾಳುವ ಸ್ಯಾಕ್ಸೊಫೋನ್‌ಗಳು ಸಿಗುತ್ತವೆ. ಎಲ್ಲ ಪ್ರಮುಖ ಸಂಗೀತ ವಾದ್ಯಗಳ ಮಳಿಗೆಗಳಲ್ಲಿ ಸ್ಯಾಕ್ಸೊಫೋನ್ ಲಭ್ಯ.

ಕದ್ರಿ ಗೋಪಾಲನಾಥ್‌ ಸ್ಯಾಕ್ಸಾಫೋನ್ ಒಲಿಸಿಕೊಂಡಿದ್ದು...

ತಾವು ಸ್ಯಾಕ್ಸಾಫೋನ್ ಒಲಿಸಿಕೊಂಡ ವಿಧವನ್ನು ಕದ್ರಿ ಗೋಪಾಲನಾಥ್ 2013ರಲ್ಲಿ ಹೀಗೆ ನೆನಪಿಸಿಕೊಂಡಿದ್ದರು...

‘ಅದು ಮೈಸೂರು ಅರಮನೆಯಲ್ಲಿ ನಡೆದ ದಸರಾ ದರ್ಬಾರ್ ಉತ್ಸವ. ಬೆಳಿಗ್ಗೆ ಮಹಾರಾಜರ ನೇತೃತ್ವದಲ್ಲಿ ವಿವಿಧ ವಾದ್ಯಗಳಿಂದ ಸುಮಾರು ಒಂದು ಗಂಟೆ ಕಾಲ ವಾದ್ಯ ಮೇಳ. ಅಲ್ಲಿ ನಾಗಸ್ವರ, ವೀಣೆ, ಪಿಟೀಲು, ಕೊಳಲು ಎಲ್ಲವೂ ಇತ್ತು. ಅದೇ ಮೇಳದಕರ್ತದಲ್ಲಿ ಮಹಾರಾಜರದ್ದೇ ಸಂಗೀತ ಸಂಯೋಜನೆಯ ಒಂದು ರಾಗವನ್ನು ಸ್ಯಾಕ್ಸೊಫೋನ್‌ನಲ್ಲಿ ನುಡಿಸಿದೆ. ಅವರಿಗೆ ಬಹಳ ಖುಷಿಯಾಗಿ ಅಭಿನಂದಿಸಿದರು. ಈ ಕ್ಷಣವನ್ನು ಮರೆಯುವಂತೆಯೇ ಇಲ್ಲ.

ಇದನ್ನೂ ಓದಿ: ವ್ಯಕ್ತಿತ್ವ | ಸ್ಯಾಕ್ಸೋಫೋನ್ ಚಕ್ರವರ್ತಿ ‘ಕದ್ರಿ’

‘ವಿದೇಶಿ ವಾದ್ಯವನ್ನು ಕರ್ನಾಟಕ ಸಂಗೀತದ ಗಮಕಗಳಿಗೆ ಪಳಗಿಸುವುದು ಒಂದು ದೊಡ್ಡ ಸವಾಲು. ಮೊದಲು ಶಾಸ್ತ್ರೀಯ ಹಾಡುಗಾರಿಕೆ ಕಲಿತೆ. ಸ್ವಲ್ಪ ಸಮಯ ನಾಗಸ್ವರ ಅಭ್ಯಾಸ ಮಾಡಿದೆ. ಅದರ ಸ್ಥಾಯಿ ಗೊತ್ತಾದ ಮೇಲೆ ಪಾಶ್ಚಿಮಾತ್ಯ ಸಂಗೀತವನ್ನೂ ಅಭ್ಯಾಸ ಮಾಡಿದೆ. ಕರ್ನಾಟಕ ಸಂಗೀತದ ಎಲ್ಲ ರಾಗಗಳು ಗೊತ್ತಾದ ಮೇಲೆ ಸ್ಯಾಕ್ಸೊಫೋನ್‌ನಲ್ಲಿ ಅದನ್ನು ಅಳವಡಿಸಿದೆ. ನಿತ್ಯವೂ ಐದಾರು ಗಂಟೆಗಳ ಕಾಲ ಅಭ್ಯಾಸ ನಡೆಸಿ ನಮ್ಮ ಸಂಗೀತಕ್ಕೆ ವಾದ್ಯವನ್ನು ಒಗ್ಗಿಕೊಳ್ಳುವಂತೆ ಮಾಡಲು ಬಹಳ ಶ್ರಮಪಟ್ಟೆ.

‘ಮೊದಮೊದಲು ಕಛೇರಿ ಕೊಡುವಾಗ ಸ್ಯಾಕ್ಸೊಫೋನ್‌ನ ಸುಮಧುರ ನಾದ ನನಗೇ ರೋಮಾಂಚನ ನೀಡುತ್ತಿತ್ತು. ನನಗಾಗ 15 ವರ್ಷ. ಮಂಗಳೂರಿನ ಮಾಧ್ವರೊಬ್ಬರ ಮನೆಯಲ್ಲಿ ಸತ್ಯನಾರಾಯಣ ಪೂಜೆ. ಅಲ್ಲಿ ನನಗೆ ಕಛೇರಿ ಕೊಡಲು ಆಹ್ವಾನ ಬಂತು. ಅವರ ಮನಗೆ ಹೋಗಿ ಅರ್ಧ ಗಂಟೆ ಸ್ಯಾಕ್ಸೊಫೋನ್‌ನಲಲ್ಲಿ ದೇವರನಾಮ ನುಡಿಸಿದೆ. ಆ ಮನೆಯ ಯಜಮಾನರು ಅದೇ ಮೊದಲು ಸ್ಯಾಕ್ಸೊಫೋನ್‌ ನೋಡಿದ್ದು, ಸಂಗೀತ ಕೇಳಿದ್ದು. ಅವರು ಬಂದು, ‘ಅದು ಎಂಥದು ವಾದ್ಯ ಮಾರಾಯರೆ, ಸೌಂಡು ಭಾರೀ ಚಂದ ಉಂಟಲ್ಲ’ ಎಂದರು. ಆಗ ಸ್ಯಾಕ್ಸೊಫೋನ್‌ ಅವರ ಕೈಗೆ ಕೊಟ್ಟು ವಿವರ ನೀಡಿದೆ. ಅಲ್ಲಿಂದ ಪ್ರತಿ ವರ್ಷ ಸತ್ಯನಾರಾಯಣ ಪೂಜೆ ಸಮಯಕ್ಕೆ ಆಹ್ವಾನ ಬರುತ್ತಿತ್ತು’.

ಇನ್ನಷ್ಟು...

ಕುವೈತ್‌ನಲ್ಲಿರುವ ಕದ್ರಿ ಗೋಪಾಲನಾಥ್ ಪುತ್ರನಿಗೆ ವೀಸಾ ವ್ಯವಸ್ಥೆ ಮಾಡಿಕೊಡಿ: ಮನವಿ 
ಕದ್ರಿ ಗೋಪಾಲನಾಥ್ ಮನದ ಮಾತು: ಸಂಗೀತಕ್ಕೆ ಜಾತಿ ಇಲ್ಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು