ಭಾನುವಾರ, ಫೆಬ್ರವರಿ 23, 2020
19 °C
ಮಹಿಳೆಯರ ಸೃಜನಾತ್ಮಕವಾಗಿ ನಡೆಸಿದ ಹೋರಾಟ ಅನನ್ಯ: ತಾರಿಣಿ ಶುಭದಾಯಿನಿ

ಮಹಿಳಾ ಹೋರಾಟ ಧ್ವನಿಸಿದ ಗೋಷ್ಠಿ

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

ಶ್ರೀವಿಜಯ ವೇದಿಕೆ (ಕಲಬುರ್ಗಿ): ಪೌರತ್ವ (ತಿದ್ದುಪಡಿ) ಕಾಯ್ದೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ನೀತಿಗಳು ಮತ್ತು ಅದಕ್ಕೆ ಪ್ರತಿರೋಧವಾಗಿ ದೇಶದಾದ್ಯಂತ ರೂಪುಗೊಂಡ ಪ್ರತಿಭಟನೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಮಹಿಳೆಯರ ಪ್ರತಿಭಟನೆಯ ಹಾದಿಗಳ ಕುರಿತು ‘ಸ್ತ್ರೀ ಲೋಕ: ತಲ್ಲಣಗಳು’ ಗೋಷ್ಠಿಯಲ್ಲಿ ಚರ್ಚೆ ನಡೆಯಿತು.

‘ಮಹಿಳೆಯರು ಅನುಸರಿಸಿದ ಅಹಿಂಸಾ ತಂತ್ರವನ್ನು ಗಾಂಧಿ ಬಳಸಿಕೊಂಡು ವಸಹತುಶಾಹಿ ಆಡಳಿತವನ್ನು ತೊಲಗಿಸಿ ಸ್ವಾತಂತ್ರ್ಯ ತಂದುಕೊಟ್ಟರು. ಇತ್ತೀಚಿನ ಮದ್ಯ ನಿಷೇಧ ಹೋರಾಟದಲ್ಲಿ ಕೃಷ್ಣಾ ನದಿಯಲ್ಲಿ ಅರ್ಧ ಮುಳುಗಿ ಮಹಿಳೆಯರು ನಡೆಸಿದ ಹೋರಾಟ ಮತ್ತು ಹೀಗೆ ಮಹಿಳೆಯರ ಸೃಜನಾತ್ಮಕವಾಗಿ ನಡೆಸಿದ ಹೋರಾಟ ಅನನ್ಯವಾದುದು’ ಎಂದು ಲೇಖಕಿ ತಾರಿಣಿ ಶುಭದಾಯಿನಿ ಬಣ್ಣಿಸಿದರು.

‘ಬೀದರ್‌ನಲ್ಲಿ ಆ ತಾಯಂದಿರನ್ನು ಬಂಧಿಸಿರುವ ವಿರುದ್ಧ ನಾವು ದನಿ ಎತ್ತಬೇಕಾಗಿದೆ. ಜತೆಗೆ, ದೇಶದಾದ್ಯಂತ ವಿವಿಧ ಶಾಹಿನ್‌ಬಾಗ್‌ಗಳು ಮೊಳಕೆಯೊಡೆದಿವೆ. ಮಹಿಳೆಯರು ನಡೆಸುತ್ತಿರುವ ಹೋರಾಟ ನಮ್ಮ ಕಾಲದ ವಿಶೇಷ ಬೆಳವಣಿಗೆ. ಮಹಿಳೆಯ ಕರುಳಲ್ಲಿ ಬೇರೂರಿರುವ ಸಮಾನತೆಯ ಬೀಜವೇ ಈ ಎಲ್ಲಾ ಹೋರಾಟಗಳಿಗೆ ಪ್ರೇರಣೆಯಾಗಿದೆ’ ಎಂದು ಹಿರಿಯ ಪತ್ರಕರ್ತೆ ಆರ್‌. ಪೂರ್ಣಿಮಾ ಹೇಳಿದರು. 

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ತಂದಿರುವ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಅಂತಹ ಜೀವವಿರೋಧಿ ನೀತಿಗಳ ವಿರುದ್ಧದ ಹೋರಾಟಗಳಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಮಹಿಳೆ
ಯರು ಪಾಲ್ಗೊಳ್ಳುತ್ತಿರುವುದು ಭರವಸೆ ಹುಟ್ಟಿಸುತ್ತಿರುವ ಸಂಗತಿಯಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಮಹಿಳೆಯರಿಗೆ ಸವಲತ್ತು ಕೊಡುವುದು ನಿಜವಾದ ಸಬಲೀಕರಣವಲ್ಲ. ಆಕೆಗೆ ಅಧಿಕಾರ ಕೊಡುವುದು ನಿಜವಾದ ಸಬಲೀಕರಣ. ನಮ್ಮನ್ನು ಆಳುವ ಗಂಡು ವರ್ಗ ಈ ಮಸೂದೆಯನ್ನು ಸಂಸತ್ತಿನಲ್ಲೇ ಕೊಳೆಯುವಂತೆ ಮಾಡಿದ್ದಾರೆ’ ಎಂದು ಪೂರ್ಣಿಮಾ ಅವರು ಕಟುವಾಗಿ ಮಾತನಾಡಿದರು.

ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಮಸೂದೆಯ ಕುರಿತೂ ಗೋಷ್ಠಿಯಲ್ಲಿ ಚರ್ಚೆ ನಡೆಯಿತು.

ಇದೇ ವಿಷಯವಾಗಿ ಮಾತನಾಡಿದ ಪ್ರೊ. ಶಿವಗಂಗಾ ರುಮ್ಮಾ, ‘ಸ್ತ್ರೀ ವಾದ ಎಂದರೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ ಪಡೆಯುವುದಲ್ಲ; ಸಂಸತ್ತಿಗೆ ಪ್ರವೇಶ ಪಡೆಯುವುದೇ ಆಗಿದೆ’ ಎಂದು ಪ್ರತಿಪಾದಿಸಿದರು.

ಆತ್ಮ ವಿಮರ್ಶೆಯ ಕೆಲಸ ಆಗಬೇಕು

ಪುರುಷ ಮಾಡಿರುವ ವ್ಯವಸ್ಥೆ ಎಂದೆಲ್ಲಾ ವಿರೋಧಿಸುವ ಮಹಿಳೆಯರು ಎಲ್ಲೋ ಒಂದು ಕಡೆ ಆ ವ್ಯವಸ್ಥೆಯನ್ನು ಒಪ್ಪಿಕೊಂಡು ಬಿಟ್ಟಿದ್ದೇವೆ. ಇದರಿಂದ ಹೊರ ಬರಲು ನಾವು ಯಾಕೆ ಪ್ರಯತ್ನ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಬಿ.ಟಿ. ಲಲಿತಾನಾಯಕ್‌
ಅಭಿಪ್ರಾಯಪಟ್ಟರು.

ದೇಶದಲ್ಲಿ ಇರಲು ನನ್ನ ಅಪ್ಪನ, ಅಜ್ಜನ ಗುರುತು ಕೇಳಲಾಗುತ್ತಿದೆ. ಇಂದು ಒಬ್ಬ ತಾಯಿ ತನ್ನ ಗಂಡನ ಬಳಿಯೇ ವಯಸ್ಸಿಗೆ ಬಂದ ಮಗಳನ್ನು ಬಿಡದಿರುವ ಪರಿಸ್ಥಿತಿ ಇದೆ. ಇಂಥ ಹಲವಾರು ತಲ್ಲಣಗಳು ನಮ್ಮ ನಡುವೆ ಇವೆ. ಇದಕ್ಕೆ ನಾವು ಪರಿಹಾರ ಕಂಡುಕೊಳ್ಳಬೇಕು ಎಂದರು.

ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಅಲ್ಲಿ ಗಲ್ಲಿಗೇರಿಸುತ್ತಿದ್ದರೆ, ಇಲ್ಲಿ ಮತ್ತೊಂದು ನಿರ್ಭಯಾದಂತಹುದೇ ಪ್ರಕರಣ ನಡೆಯುತ್ತಿರುತ್ತದೆ. ಆದ್ದರಿಂದ ಸಮಸ್ಯೆಯ ಮೂಲವನ್ನು ಅರಿಯುವ ಕೆಲಸ ಆಗಬೇಕು ಎಂದರು.

***

ಇವತ್ತಿನ ವರೆಗೂ ಯಾಕೆ ಯಾವ ಮಹಿಳೆಯರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ್ಯರಾಗಿಲ್ಲ ಎಂದು ಕೇಳುತ್ತಾರೆ. ನಾವು ಹೋಗಿ ಬೇಡಿಕೊಳ್ಳಬೇಕೇ?

– ಬಿ.ಟಿ ಲಲಿತಾನಾಯಕ್‌, ಸಾಮಾಜಿಕ ಹೋರಾಟಗಾರ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು