ಭಾನುವಾರ, ಆಗಸ್ಟ್ 14, 2022
24 °C
ಕಳಸಾ– ಬಂಡೂರಿ ನಾಲಾ ಯೋಜನೆ

ಕಳಸಾ – ಬಂಡೂರಿ: ಹೊಸದಾಗಿ ಪ್ರಸ್ತಾವನೆ ಕಳುಹಿಸಲು ರಾಜ್ಯಕ್ಕೆ ಸೂಚಿಸಿದ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Mahadayi river

ಬೆಳಗಾವಿ: ಕಳಸಾ– ಬಂಡೂರಿ ನಾಲಾ ಜೋಡಣೆ ಯೋಜನೆಗೆ ಪರಿಸರಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆಯಲು ಹೊಸದಾಗಿ ಪ್ರಸ್ತಾವನೆ ಕಳುಹಿಸುವಂತೆ ಕೇಂದ್ರದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ (ಅರಣ್ಯ ಸಂರಕ್ಷಣಾ ವಿಭಾಗ) ಸಚಿವಾಲಯವು ರಾಜ್ಯಕ್ಕೆ ಸೂಚಿಸಿದೆ.

ಕಳಸಾ ನಾಲಾ ತಿರುವು ಯೋಜನೆಗೆ ಸಂಬಂಧಿಸಿದಂತೆ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿಯ 258 ಹೆಕ್ಟೇರ್‌ ಅರಣ್ಯ ಭೂಮಿ ಹಾಗೂ ಬಂಡೂರಿ ನಾಲಾ ಯೋಜನೆಗೆ ಸಂಬಂಧಿಸಿದಂತೆ ನೆರ್ಸ್‌ ಗ್ರಾಮದ ಬಳಿಯ 243 ಹೆಕ್ಟೇರ್‌ ಅರಣ್ಯ ಭೂಮಿಯಲ್ಲಿ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರವು ಮೇ 20ರಂದು ಕೇಂದ್ರಕ್ಕೆ ಪತ್ರ ಬರೆದಿತ್ತು.

ಈ ಪತ್ರಕ್ಕೆ ಸ್ಪಂದಿಸಿರುವ ಅರಣ್ಯ ಇಲಾಖೆಯ ಡಿಐಜಿ ಬ್ರಿಜೇಂದ್ರ ಸ್ವರೂಪ, ‘ಈ ಯೋಜನೆಗೆ ಗೋವಾ ಸರ್ಕಾರವು ಆಕ್ಷೇಪ ವ್ಯಕ್ತಪಡಿಸಿದ್ದರಿಂದ 2003ರಲ್ಲಿಯೇ ರಾಜ್ಯ ಸರ್ಕಾರಕ್ಕೆ ವಾಪಸ್‌ ಕಳುಹಿಸಲಾಗಿದೆ. ಸದ್ಯಕ್ಕೆ ಸಚಿವಾಲಯದಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವನೆಯು ಇಲ್ಲ’ ಎಂದು ಹೇಳಿದ್ದಾರೆ.

‘ಅರಣ್ಯ (ಸಂರಕ್ಷಣಾ) ಎರಡನೇ ತಿದ್ದುಪಡಿ ನಿಯಮಗಳು 2014 ಅಡಿ ಹಾಗೂ ಸಾಕಷ್ಟು ಸಮಯ ವಿಳಂಬವಾಗಿದ್ದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹೊಸದಾಗಿ ಪ್ರಸ್ತಾವನೆಯನ್ನು ಪರಿವೇಶ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಕಳುಹಿಸಿಕೊಡಬೇಕು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು