ಮಂಗಳವಾರ, ಅಕ್ಟೋಬರ್ 15, 2019
25 °C
ನ.1ರೊಳಗೆ ಕೆಲಸ ಮಾಡಿ ತೋರಿಸಲು ತಜ್ಞರ ಸಲಹೆ

ಶಾಸ್ತ್ರೀಯ ಕನ್ನಡ: ಇನ್ನಿಲ್ಲ ವಿಳಂಬ

Published:
Updated:

ಬೆಂಗಳೂರು: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತು 11 ವರ್ಷ ಕಳೆದರೂ ಯಾವೊಂದು ಪ್ರಗತಿಯೂ ಸಾಧ್ಯವಾಗಿಲ್ಲದಿರುವುದಕ್ಕೆ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇನ್ನಷ್ಟು ‘ವಿಳಂಬ ಶಾಸ್ತ್ರ’ದಿಂದ ಹೊರಬರಲು ಸರ್ಕಾರವೂ ನಿರ್ಧರಿಸಿದೆ.

ವಿಧಾನಸೌಧದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ ಅವರು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ವೇಳೆ ಶಾಸ್ತ್ರೀಯ ಕನ್ನಡಕ್ಕೆ ಒದಗಿರುವ ದುಃಸ್ಥಿತಿಯ ಬಗ್ಗೆ ಕಳವಳ ವ್ಯಕ್ತವಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇನ್ನು ಮುಂದೆ ವಿಳಂಬ ಧೋರಣೆಯನ್ನು ಹತ್ತಿಕ್ಕಿ, ತ್ವರಿತವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ನವೆಂಬರ್‌ 1ರೊಳಗೆ ಪ್ರತ್ಯೇಕ ಆಡಳಿತ ಮಂಡಳಿ, ಹಣಕಾಸು ಸಮಿತಿ ಮತ್ತು ಪಂಡಿತ ಮಂಡಳಿ ರಚನೆ, ಜಮೀನು ಗುರುತಿಸುವಿಕೆಯಂತಹ ಕ್ರಮಗಳನ್ನು ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು.

‘2008ರಿಂದೀಚೆಗೆ ಶಾಸ್ತ್ರೀಯ ಸ್ಥಾನಮಾನ ಪಡೆದ ಕನ್ನಡದ ಹಲವು ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ₹ 10 ಕೋಟಿ ಅನುದಾನವನ್ನು ಮಾತ್ರ ಬಿಡುಗಡೆ ಮಾಡಿದೆ. ಆದರೆ ಸೂಕ್ತ ಮೂಲಸೌಲಭ್ಯ ಇಲ್ಲದ ಕಾರಣ ವಾರ್ಷಿಕ ₹ 84 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವುದು ರಾಜ್ಯಕ್ಕೆ ಸಾಧ್ಯವಾಗಿಲ್ಲ. ಉಳಿದ ಹಣ ಕೇಂದ್ರಕ್ಕೆ ವಾಪಸ್‌ ಹೋಗುವಂತಾಗಿದೆ’ ಎಂದರು.

ಸದ್ಯ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ಅದರ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡದ ಅಧ್ಯಯನದ ಉತ್ಕೃಷ್ಟತಾ ಕೇಂದ್ರಕ್ಕೆ ಇದೀಗ ಅಗತ್ಯವಾಗಿ 5 ಎಕರೆ ಜಮೀನು ಬೇಕಾಗಿದೆ. ಮೈಸೂರು ವಿಶ್ವವಿದ್ಯಾಲಯ ತನ್ನ ಕ್ಯಾಂಪಸ್‌ನಲ್ಲಿ 5 ಎಕರೆ ಜಾಗ ನೀಡಲು ಮುಂದಾಗಿದೆ. ಜ್ಞಾನಭಾರತಿ ಆವರಣದಲ್ಲಿ 3 ಎಕರೆ ಸ್ಥಳ ಇದೆ. ತಜ್ಞರ ಅಭಿಮತದಂತೆ ಮೈಸೂರಿನಲ್ಲೇ ಈ ಕೇಂದ್ರ ತಲೆ ಎತ್ತಲಿದೆ ಎಂದರು.

‘ಸ್ವಾಯತ್ತ ಸಂಸ್ಥೆಯಾಗಬೇಕು’

ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್‌ ಕ್ವಾರ್ಟರ್ಸ್‌ ಕಟ್ಡಡದಲ್ಲಿರುವ ಶಾಸ್ತ್ರೀಯ ಕನ್ನಡ ಉತ್ಕೃಷ್ಟತಾ ಕೇಂದ್ರವು ಸಮರ್ಪಕವಾಗಿ ಕೆಲಸ ಮಾಡಲು ಅದು ಸ್ವಾಯತ್ತ ಸಂಸ್ಥೆಯಾಗುವ ಅಗತ್ಯ ಇದೆ. ಜತೆಗೆ ಕೇಂದ್ರ ಸರ್ಕಾರ ಸಿಬ್ಬಂದಿ, ಮೂಲಸೌಲಭ್ಯ ನೀಡಬೇಕಿದೆ. ಶಾಸ್ತ್ರೀಯ ತಮಿಳು ಕೇಂದ್ರದ ಮಾದರಿಯಲ್ಲಿ ರೂಪಿಸುವ ಸಲುವಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಒಪ್ಪಂದ ಮಾಡಕೊಳ್ಳಲಾಗುವುದು ಎಂದು ಸಚಿವ ಸಿ.ಟಿ. ರವಿ ಹೇಳಿದರು.

ಕೇಂದ್ರವು 2004ರಲ್ಲಿ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದರೆ, 2005ರಲ್ಲಿ ಸಂಸ್ಕೃತ, 2008ರಲ್ಲಿ ಕನ್ನಡ ಮತ್ತು ತೆಲುಗು, 2013ರಲ್ಲಿ ಮಲಯಾಳ ಹಾಗೂ 2014ರಲ್ಲಿ ಒಡಿಯಾ ಭಾಷೆಗಳಿಗೆ ಈ ಸ್ಥಾನಮಾನ ನೀಡಿದೆ. ಮರಾಠಿಗೂ ಈ ಸ್ಥಾನಮನ ನೀಡುವ ಚಿಂತನೆಯಲ್ಲಿದೆ.

Post Comments (+)