ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿನಗರದಲ್ಲಿ ಸಬ್ಸಿಡಿ ನುಂಗಣ್ಣರ ಹಾವಳಿ; ಮಕ್ಕಳ ಚಿತ್ರದಲ್ಲಿ ಸಬ್ಸಿಡಿ ಗುಳುಂ

Last Updated 7 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಸರ್ಕಾರದ ಸಬ್ಸಿಡಿ ಹಣ ಕಬಳಿಸುವ ಏಕೈಕ ಉದ್ದೇಶವಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಸಿನಿಮಾಗಳಿಂದಾಗಿ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ಕಾಳಿಗಿಂತ ಜೊಳ್ಳಿನ ರಾಶಿ ಬೆಳೆಯುತ್ತಿದೆ. ಗುಣಾತ್ಮಕ ಸಿನಿಮಾಗಳ ಸಬ್ಸಿಡಿ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆಯ ಹಣ ಲೂಟಿಯಾಗುತ್ತಿರುವುದರ ಸುತ್ತ ಈ ವಾರದ ಒಳನೋಟ...

ಬೆಂಗಳೂರು: ಮಕ್ಕಳ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ರಾಜ್ಯ ಸರ್ಕಾರ, ಅತ್ಯುತ್ತಮ ಮಕ್ಕಳ ಚಲನಚಿತ್ರ ಪ್ರಶಸ್ತಿ ಪಡೆದ ನಾಲ್ಕು ಚಲನಚಿತ್ರಗಳಿಗೆ ತಲಾ ₹25 ಲಕ್ಷ ಸಬ್ಸಿಡಿ ನೀಡುವ ಯೋಜನೆ ಜಾರಿ ಮಾಡಿದೆ. ಆದರೆ, ಈ ಯೋಜನೆ ಕೂಡ ದುರುಪಯೋಗ ಆಪಾದನೆಯಿಂದ ಮುಕ್ತವಾಗಿಲ್ಲ. ಮಕ್ಕಳ ಚಿತ್ರದ ಹೆಸರಿನಲ್ಲಿ ಸಬ್ಸಿಡಿ ಕಬಳಿಸುವುದು ಸದ್ದಿಲ್ಲದೆ ನಡೆಯುತ್ತಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿ ಅದು. ಅಂತರ ರಾಷ್ಟ್ರೀಯ ಮಕ್ಕಳ ಸಿನಿಮೋತ್ಸವದಲ್ಲಿ ಮಕ್ಕಳ ಚಲನಚಿತ್ರಗಳಿಗೆ ಸಬ್ಸಿಡಿಯನ್ನು ₹25 ಲಕ್ಷಕ್ಕೆ ಹೆಚ್ಚಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದರು. ಸಬ್ಸಿಡಿ ಹೆಚ್ಚಿಸಿದ ನಂತರ, ಗುಣಮಟ್ಟದ ಮಕ್ಕಳ ಸಿನಿಮಾ ನಿರ್ಮಾಣಕ್ಕಿಂತ, ಸ್ಮಾರ್ಟ್‌ ಫೋನ್‌ಗಳಲ್ಲಿ ಚಿತ್ರೀಕರಿಸಿದ ವಿಡಿಯೊ ದೃಶ್ಯಗಳು ಮಕ್ಕಳ ಸಿನಿಮಾ ಹೆಸರಿನಲ್ಲಿ ಸಬ್ಸಿಡಿ ಪಟ್ಟಿಗೆ ಬರಲಾರಂಭಿಸಿವೆ ಎನ್ನುತ್ತಾರೆ ಆಯ್ಕೆ ಸಮಿತಿಯಲ್ಲಿದ್ದ ಸದಸ್ಯರೊಬ್ಬರು.

ವಯಸ್ಕರ ಸಿನಿಮಾಗಳು (ಎ ಪ್ರಮಾಣ ಪತ್ರ ಪಡೆದ ಸಿನಿಮಾ, ಬ್ಲೂಫಿಲಂಗಳು) ಕೂಡ ಸಬ್ಸಿಡಿ ಪಡೆದಿರುವ ನಿದರ್ಶನಗಳಿವೆ. ಈ ಸಿನಿಮಾಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ, ಆಯ್ಕೆ ಸಮಿತಿ ಸದಸ್ಯರೇ ಕಲೆಯ ಅಭಿವ್ಯಕ್ತಿ ಸ್ವಾತಂತ್ರ್ಯದ ಸಬೂಬು ಹೇಳಿ ಸಮರ್ಥಿಸಿ ಕೊಳ್ಳುತ್ತಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಇಲಾಖೆ ಅಧಿಕಾರಿಗಳು ನಾಮಕಾವಾಸ್ತೆಗೆ ಇರುತ್ತಾರೆ. ಆದರೆ, ಸಲಹಾ ಸಮಿತಿ ನೀಡುವ ಪಟ್ಟಿಯೇ ಅಂತಿಮ. ರಾಜ್ಯಪಾಲರಿಂದ ಒಪ್ಪಿಗೆ ಪಡೆದು ಬರುವ ಈ ಪಟ್ಟಿಗೆ ಅನುದಾನ ಬಿಡುಗಡೆ ಮಾಡುವುದಷ್ಟೇ ಇಲಾಖೆಯ ಕೆಲಸ ಎನ್ನುವಂತಾಗಿದೆ ಎನ್ನುವುದು ಕೆಲವು ಅಧಿಕಾರಿಗಳ ಅಸಹಾಯಕ ನುಡಿ.

ಇನ್ನೂ ಚಾರಿತ್ರಿಕ ಸಿನಿಮಾ ವಿಭಾಗದಲ್ಲಿ ಸಬ್ಸಿಡಿಗಾಗಿ ‘ಜ್ಯೋತಿ ಅಲಿಯಾಸ್‌ ಕೋತಿರಾಜ್‌’ ಸಿನಿಮಾ ಬಂದಿತ್ತು. ಜ್ಯೋತಿರಾಜ್‌ ಎಂಬ ಸಾಹಸಿ ಚಿತ್ರದುರ್ಗದ ಕಲ್ಲಿನಕೋಟೆ ಹತ್ತುವುದು, ಇಳಿಯುವುದೇ ಸಿನಿಮಾ ಕಂಟೆಂಟ್‌. ದುರ್ಗದ ಕೋಟೆ ತೋರಿಸ ಲಾಗಿದೆ ಎನ್ನುವ ಒಂದೇ ಕಾರಣಕ್ಕೆ ಸಬ್ಸಿಡಿಗೆ ಪರಿಗಣಿಸಬೇಕೆನ್ನುವುದು ಚಿತ್ರ ನಿರ್ಮಾಪಕರ ಕೋರಿಕೆಯಾಗಿತ್ತು. ಗುಣಮಟ್ಟ, ವಸ್ತುವಿಷಯ ಇಲ್ಲದ ಕಾರಣಕ್ಕೆ ಆ ಸಿನಿಮಾವನ್ನು ಸಬ್ಸಿಡಿಗೆ ಪರಿಗಣಿಸಿರಲಿಲ್ಲ ಎನ್ನುತ್ತಾರೆ ಆಯ್ಕೆ ಸಲಹಾ ಸಮಿತಿಯಲ್ಲಿದ್ದ ಸದಸ್ಯರೊಬ್ಬರು.

ಸಬ್ಸಿಡಿಗಾಗಿಯೇ ಮಾಜಿ ಮುಖ್ಯಮಂತ್ರಿಯೊಬ್ಬರ ಮಗನ ಸಿನಿಮಾವನ್ನು ಬೆಂಗಳೂರಿನ ಮೂಲೆಯ ಚಿತ್ರಮಂದಿರದಲ್ಲಿ ಒಂದು ದಿನದ ಮಟ್ಟಿಗೆ ತೆರೆಕಾಣಿಸಿದ ಪ್ರಸಂಗವೂ ಇದೆ. ಸಬ್ಸಿಡಿ ಫಲ ಪಡೆದ ಎಷ್ಟೋ ಚಿತ್ರಗಳು ಚಲನಚಿತ್ರಮಂದಿರದಲ್ಲೂ ತೆರೆ ಕಾಣದೆ, ಟಿ.ವಿಗಳಲ್ಲೂ ಪ್ರಸಾರವಾಗದೆ ಡಬ್ಬದಲ್ಲೇ ಉಳಿಯುತ್ತಿವೆ.

₹15 ಲಕ್ಷ ನೇರ ಸಬ್ಸಿಡಿಗೆ ಬರುವ ಪ್ರಶಸ್ತಿಪುರಸ್ಕೃತ ಚಿತ್ರಗಳು

* ರಾಷ್ಟ್ರಮಟ್ಟದಲ್ಲಿ ಸ್ವರ್ಣ ಮತ್ತು ರಜತ ಕಮಲ ಪಡೆದ ಚಲನಚಿತ್ರಗಳು

* ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು

* ಭಾರತೀಯ ಪನೋರಮ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಚಿತ್ರಗಳು

* ರಾಜ್ಯ ಸರ್ಕಾರದ ಪ್ರಥಮ, ದ್ವಿತೀಯ ಮತ್ತು ತೃತೀಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದ ಚಿತ್ರಗಳು

* ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಹಾಗೂ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರಗಳು

* ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರಗಳು

ಆಯ್ಕೆ ಸಮಿತಿ, ಏನು ಎತ್ತ?

* ಚಿತ್ರರಂಗದ ಪರಿಣತರು ಮತ್ತು ಅಧಿಕಾರಿಗಳಿರುವ ಏಳು ಸದಸ್ಯರನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿ ಚಲನಚಿತ್ರಗಳನ್ನು ವೀಕ್ಷಿಸಿ ಗುಣಾತ್ಮಕ, ಐತಿಹಾಸಿಕ, ಮಕ್ಕಳ ಚಿತ್ರ ಹಾಗೂ ಉತ್ತಮ ಸಾಹಿತ್ಯ ಕೃತಿ ಆಧರಿಸಿ ನಿರ್ಮಿಸಿದ ಚಿತ್ರಗಳನ್ನು ಆಯ್ಕೆ ಮಾಡುತ್ತದೆ.

* ಸಿನಿಮಾ, ಸಂಗೀತ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಪರಿಣತಿ ಇದ್ದು, ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಸಿನಿಮಾ ಅಭಿರುಚಿ ಇರುವ ಸರ್ಕಾರೇತರ ವ್ಯಕ್ತಿಯನ್ನು ಆಯ್ಕೆ ಸಮಿತಿಗೆ ನೇಮಕ ಮಾಡಲಾಗುತ್ತದೆ

* ಅಧ್ಯಕ್ಷರಾಗಿ, ಆಯಾ ಕ್ಷೇತ್ರಗಳಲ್ಲಿನ ಪರಿಣತ ಐದು ಮಂದಿಯನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗುತ್ತದೆ.

* ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಅಥವಾ ನಿರ್ದೇಶಕರು ಅಥವಾ ಅವರಿಂದ ನಾಮನಿರ್ದೇಶಿತರಾದ ಜಂಟಿ ನಿರ್ದೇಶಕರು ಆಯ್ಕೆ ಸಮಿತಿಯ ಸಹ ಕಾರ್ಯದರ್ಶಿಯಾಗಿರುತ್ತಾರೆ. ಸಮಿತಿ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕನಿಷ್ಠ ಐದು ಸದಸ್ಯರ ಕೋರಂ ಇರಬೇಕು. ಹೆಚ್ಚು ಅಂಕ ಪಡೆಯುವ ಗುಣಾತ್ಮಕ ಚಿತ್ರ ಸಬ್ಸಿಡಿಗೆ ಆಯ್ಕೆಯಾಗುತ್ತದೆ.

ಇಲಾಖೆಯಲ್ಲಿ ಭ್ರಷ್ಟಾಚಾರದ ಭೂತ: ಮಧ್ಯವರ್ತಿಗಳ ಕಾರುಬಾರು

ವಾರ್ತಾ ಇಲಾಖೆಯಲ್ಲಿ (ಸಿನಿಮಾ ವಿಭಾಗ) ಬೇರು ಬಿಟ್ಟಿರುವ ಭ್ರಷ್ಟಾಚಾರ ಸ್ವಚ್ಛಗೊಳಿಸಲು ಯಾರೇ ಕೈಹಾಕಿ ದರೂ ಅಂತಹ ಅಧಿಕಾರಿಗಳನ್ನು ಸಬ್ಸಿಡಿ ಹಿಂದೆ ಇರುವ ಮಾಫಿಯಾವೇ ವರ್ಗ ಮಾಡಿಸುತ್ತದೆ ಎನ್ನುವ ಮಾತನ್ನು ಇಲಾಖೆಯಲ್ಲಿದ್ದ ಅಧಿಕಾರಿಗಳೇ ಹೇಳುತ್ತಾರೆ.

ಸುಮಾರು ಹದಿನೈದು ಇಪ್ಪತ್ತು ವರ್ಷದಿಂದ ಇಲಾಖೆಯ ಸಿನಿಮಾ ವಿಭಾಗದಲ್ಲಿ ತಳವೂರಿದ್ದ ಸಿಬ್ಬಂದಿಯೊಬ್ಬರನ್ನು ಈ ಹಿಂದಿನ ಆಯುಕ್ತರು ವರ್ಗಾವಣೆ ಮಾಡಿದ್ದರು. ಆದರೆ, ಆಯುಕ್ತರು ವರ್ಗಾವಣೆಯಾದ ಮರು ದಿನವೇ ಆ ವ್ಯಕ್ತಿ ಅದೇ ಜಾಗಕ್ಕೆ ಮರುನೇಮಕಗೊಂಡಿದ್ದಾರೆ. ಈತನ ಮೇಲೆ ಸಿನಿಮಾ ಮಂದಿ ಮತ್ತು ಸಬ್ಸಿಡಿ ಚಿತ್ರಗಳ ಆಯ್ಕೆ ಸಲಹಾ ಸಮಿತಿ ಸದಸ್ಯರ ನಡುವೆ ಮಧ್ಯವರ್ತಿಯ ಕೆಲಸ ಮಾಡುತ್ತಿರುವ ಆರೋಪಗಳಿವೆ.

ಸಬ್ಸಿಡಿ ಸಿನಿಮಾಗಳ ಆಯ್ಕೆಯಲ್ಲಿ ಪಾರದರ್ಶಕತೆ ತರಲು ಕನಿಷ್ಠ ನೂರು ಮಂದಿ ಸ್ವತಂತ್ರ ತೀರ್ಪುಗಾರರನ್ನು ಗೌರವ ಧನದ ಮೇಲೆ ನಿಯೋಜಿಸಲು ವಾರ್ತಾ ಇಲಾಖೆಯ ಈ ಹಿಂದಿನ ಆಯುಕ್ತರು ಯೋಜನೆ ರೂಪಿಸಿದ್ದರು. ಅದು ನನೆಗುದಿಗೆ ಬಿದ್ದಿದೆ. ಒಂದೇ ಒಂದು ದಿನವೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣದ ಸಿನಿಮಾಗಳು ಸಬ್ಸಿಡಿ ಪಡೆದುಕೊಳ್ಳುತ್ತವೆ. ಗುಣಾತ್ಮಕ ಸಿನಿಮಾಗಳ ಆಯ್ಕೆಗೆ ಸಿನಿಮಾ ನೋಡುವಷ್ಟು ಪುರುಸೊತ್ತು ಅಧಿಕಾರಿಗಳಿಗೆ ಇರುವುದಿಲ್ಲ. ಇದುವರೆಗೂ ಇಲಾಖೆಯ ಯಾವ ನಿರ್ದೇಶಕರು, ಆಯುಕ್ತರೂ ಒಂದೇ ಒಂದು ಸಿನಿಮಾ ಪೂರ್ಣವಾಗಿ ನೋಡಿದ ನಿದರ್ಶನ ಇಲ್ಲ. ಹಾಗೊಂದು ವೇಳೆ ಅಧಿಕಾರಿಗಳು ಸಿನಿಮಾ ನೋಡಲು ಹೋದಾಗ, ಆ ದಿನ ಅತ್ಯಂತ ಕೆಟ್ಟ ಸಿನಿಮಾ ತೋರಿಸಿ, ಅವರ ಆಸಕ್ತಿ ಕುಂದಿಸುತ್ತಾರೆ. ಕೆಟ್ಟ ಸಿನಿಮಾ ವೀಕ್ಷಣೆಗಿಂತ ದೊಡ್ಡ ಟಾರ್ಚರ್‌ ಮತ್ತೊಂದಿಲ್ಲವೆಂದು ಅಧಿಕಾರಿಗಳು ಸಿನಿಮಾ ವೀಕ್ಷಣೆಯತ್ತ ತಲೆಹಾಕುವುದೇ ಇಲ್ಲ ಎನ್ನುತ್ತಾರೆ ಇಲಾಖೆಯ ಕೆಳಸ್ತರದ ಅಧಿಕಾರಿಗಳು.

ಕೆಟ್ಟ ಸಂಪ್ರದಾಯಕ್ಕೆ ಕೊನೆ ಎಂದು?

ಆಯ್ಕೆ ಸಮಿತಿ ನಿಯಮ ಮುರಿದು ಕೆಲವರು ಅಧ್ಯಕ್ಷರಾಗುವುದರಿಂದಲೂ ಸಬ್ಸಿಡಿ ಸಿನಿಮಾಗಳ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎನ್ನುವ ದೂರುಗಳೂ ಇವೆ.

ಇದೇ ಸಮಸ್ಯೆಯಿಂದಾಗಿ 2017ರ ಸಾಲಿನ ಸಿನಿಮಾಗಳ ಆಯ್ಕೆ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಈ ಸಾಲಿನ ಆಯ್ಕೆ ‌ಸಮಿತಿಗೆ ಅಧ್ಯಕ್ಷರಾಗಿದ್ದ ಎಸ್‌.ಕೆ.ಭಗವಾನ್‌ ತಾವು ನಟಿಸಿದ್ದ ‘ಎರಡು ಕನಸುಗಳು’ ಸಿನಿಮಾ ಸಬ್ಸಿಡಿ ಪಟ್ಟಿಗೆ ಬಂದಿದ್ದರಿಂದಾಗಿ ಈಗ ಸಮಿತಿಯಿಂದ ಹೊರ ನಡೆದಿದ್ದಾರೆ. ಆ ಕಾರಣಕ್ಕೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಲಾಖೆ ವಿಮುಕ್ತಗೊಳಿಸಿದೆ. ಈಗ ಆ ಸಮಿತಿಯಲ್ಲಿ ಇರುವ ಇನ್ನೊಬ್ಬ ಸದಸ್ಯರನ್ನು ಅಧ್ಯಕ್ಷರನ್ನಾಗಿ ನೇಮಿಸಿ, ಬಾಕಿ ಉಳಿದಿರುವ ಸಿನಿಮಾಗಳನ್ನು ವೀಕ್ಷಿಸಿ, ಆಯ್ಕೆ ಪಟ್ಟಿ ಸಿದ್ಧಪಡಿಸಬೇಕಾಗಿದೆ.

2011ರಲ್ಲಿ ವಿಜಯಮ್ಮ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದಾಗ ಅವರ ಮಗ, ನಿರ್ದೇಶಕರಾದ ಬಿ.ಸುರೇಶ್‌ ಅವರ ಸಿನಿಮಾವೊಂದು ಸಬ್ಸಿಡಿಗೆ ಬಂದಿತ್ತು. ಆಗ, ವಿಜಯಮ್ಮ ಸಮಿತಿ ಯಿಂದ ಹೊರನಡೆದಿದ್ದರು. ಆ ಸಾಲಿಗೆ ಬಿ.ಎಸ್‌.ಲಿಂಗದೇವರು ಅಧ್ಯಕ್ಷರಾದರು. ನಂತರದ ವರ್ಷದಲ್ಲಿ ಸುಂದರ್ ರಾಜ್‌ ಅಧ್ಯಕ್ಷರಾಗಿದ್ದಾಗಲೂ ಅವರ ಪತ್ನಿ ಪ್ರಮೀಳಾ ಜೋಷಾಯ್‌ ನಟಿಸಿದ್ದ ಸಿನಿಮಾ ಸಬ್ಸಿಡಿ ಪಟ್ಟಿಗೆ ಬಂದಾಗ, ಅದೇ ಸ್ಥಿತಿ ಮರುಕಳಿಸಿತ್ತು. ಸುಂದರ್‌ ರಾಜ್‌ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿ, ಹುಲಿ ಚಂದ್ರಶೇಖರ್‌ ಅಧ್ಯಕ್ಷರಾದರು.

ನಿಯಮದ ಪ್ರಕಾರ ಅಧ್ಯಕ್ಷರು ಮತ್ತು ಸದಸ್ಯರು ಆಯಾ ಸಾಲಿನಲ್ಲಿ ಸಬ್ಸಿಡಿಗೆ ಬರುವ ಸಿನಿಮಾಗಳ ಜತೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧ ಹೊಂದಿರುವಂತಿಲ್ಲ. ಹಾಗೇ ನಾದರೂ ಇದ್ದರೆ ಅವರು ಸಮಿತಿ ಯಿಂದ ಹೊರಹೋಗಬೇಕು; ಇಲ್ಲವೇ ಅಂತಹ ಸಿನಿಮಾಗಳನ್ನು ಆಯ್ಕೆಗೆ ಪರಿಗಣಿಸುವಂತಿಲ್ಲ ಎಂಬ ನಿಯಮವಿದೆ.

ಇನ್ನೆಷ್ಟು ಕಾಲ ಬೇಕು ಸಬ್ಸಿಡಿ?

ಕನ್ನಡದ ಗುಣಾತ್ಮಕ ಚಿತ್ರಗಳಿಗೆ 60ರ ದಶಕದಿಂದಲೂ ಸಬ್ಸಿಡಿ ಕೊಡಲಾಗುತ್ತಿದೆ. ಈಗ ಬೇನಾಮಿ ಹಣ, ಕಪ್ಪು ಹಣ ಹೂಡಿಕೆ ಮಾಡಿ ನಿರ್ಮಿಸುವ, ಗಲ್ಲಾ ಪೆಟ್ಟಿಗೆಯಲ್ಲಿ ಕೋಟಿ ಕೋಟಿ ಸಂಪಾದಿಸುವ ಸಿನಿಮಾಗಳಿಗೆ ಸರ್ಕಾರದ ಸಬ್ಸಿಡಿ ಯಾಕೆ ಬೇಕು? ಇನ್ನೆಷ್ಟು ಕಾಲ ಸಬ್ಸಿಡಿ ಬೇಕು? ಎನ್ನುವ ಪ್ರಶ್ನೆಗಳು ಚಿತ್ರರಂಗದಲ್ಲಿ ಮೂಡಿವೆ.

₹5 ಲಕ್ಷದಿಂದ 50 ಲಕ್ಷದೊಳಗೆ ಸಿನಿಮಾ ಬಜೆಟ್‌ ಇರುತ್ತಿದ್ದಾಗ ₹ 5 ಲಕ್ಷವೋ, ₹10 ಲಕ್ಷವೋ ಸಬ್ಸಿಡಿ ನೀಡುವುದರಲ್ಲಿ ಅರ್ಥವಿತ್ತು. ಆದರೆ, ಈಗ ಸಿನಿಮಾ ಬಜೆಟ್‌ ₹25 ಕೋಟಿ, ₹50 ಕೋಟಿ ದಾಟಿ ಹೋಗುತ್ತಿದೆ. ಈಗಿರುವಾಗ ಈ ಸಬ್ಸಿಡಿ ಪ್ರಹಸನ ಏಕೆ? ಎಂದು ಪ್ರಶ್ನಿಸುತ್ತಾರೆ ಕನ್ನಡ ಚಿತ್ರರಂಗದ ಹಲವು ಮಂದಿ ಹಿರಿಯ ನಿರ್ದೇಶಕರು. ಗುಣಾತ್ಮಕ ಸಿನಿಮಾಗಳ ಹೆಸರಿನಲ್ಲಿ ವರ್ಷಕ್ಕೆ ಸುಮ್ಮನೇ ₹20 ಕೋಟಿ ಸಬ್ಸಿಡಿ ವ್ಯರ್ಥ ಮಾಡುವ ಬದಲು ಚಿತ್ರ ನಿರ್ಮಾಣಕ್ಕೆ ಅನುಕೂಲವಾಗುವ ಮೂಲಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ದ್ರಾಕ್ಷಿ ಹುಳಿ

ಕೆಲವರು ಸಬ್ಸಿಡಿ ಸಿಗದೇ ಹೊಟ್ಟೆ ಉರಿಗೆ ಏನೆಲ್ಲಾ ಹೇಳ್ತಾ ಇರುತ್ತಾರೆ. ದ್ರಾಕ್ಷಿ ಹಣ್ಣು ಸಿಗದ್ದಕ್ಕೆ ಯಾವುದೋ ಒಂದು ಪ್ರಾಣಿ ಹುಳಿ ಅಂದಿತ್ತಂತೆ. ವ್ಯವಸ್ಥೆಯಲ್ಲಿ ಸಣ್ಣಪುಟ್ಟ ದೋಷಗಳು ಇರಬಹುದು. ಎಲ್ಲದರಲ್ಲೂ ತಪ್ಪು ಹುಡುಕಬಾರದು. ಸರ್ಕಾರ ಎಲ್ಲ ಸಿನಿಮಾಗಳಿಗೂ ಸೌಲಭ್ಯ ಕೊಡುತ್ತಿದೆ. ಕನ್ನಡ ಚಿತ್ರರಂಗ ಚೆನ್ನಾಗಿ ಬೆಳೆಯುತ್ತಿದೆ.

-ಕೆ.ಮಂಜು, ನಿರ್ಮಾಪಕ

‘ಮರಾಠಿ ಮಾದರಿ’ಗೆ ನಮ್ಮಲ್ಲೂ ಬೇಡಿಕೆ

ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಸಬ್ಸಿಡಿ ದಂಧೆ ತಡೆಗಟ್ಟಲು ಮತ್ತು ಗುಣಾತ್ಮಕ ಚಿತ್ರಗಳನ್ನು ಪ್ರೋತ್ಸಾಹಿಸಲು ಈಗಿರುವ ಸಬ್ಸಿಡಿ ವ್ಯವಸ್ಥೆ ಕೈಬಿಟ್ಟು, ಮರಾಠಿ ಮಾದರಿ ಜಾರಿಗೆ ತರಬೇಕು ಎನ್ನುವುದು ಹಲವು ನಿರ್ದೇಶಕರ ಒತ್ತಾಯ.

ಮಹಾರಾಷ್ಟ್ರ ಸರ್ಕಾರ ಮರಾಠಿ ಸಿನಿಮಾ ಗಳಿಗೆ ಸಬ್ಸಿಡಿ ನೀಡುವಾಗ ಸಿನಿಮಾಗಳ ಗುಣಮಟ್ಟಕ್ಕೆ ಅನುಗುಣವಾಗಿ ಎ, ಬಿ, ಸಿ ಗ್ರೇಡಿಂಗ್ ಮಾಡಿ ಸುತ್ತದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾದರೆ ಅಥವಾ ಸ್ವರ್ಣ ಕಮಲ ಪುರಸ್ಕಾರ ಪಡೆದರೆ ಅಂತಹ ಚಿತ್ರಗಳನ್ನು ಎ ಗ್ರೇಡಿನಲ್ಲಿ ಪರಿಗಣಿಸಿ ₹40 ಲಕ್ಷ, ರಜತ ಪದಕ ಪಡೆದ ಸಿನಿಮಾಗಳನ್ನು ಬಿ ಗ್ರೇಡಿನಲ್ಲಿ ಪರಿಗಣಿಸಿ ₹30 ಲಕ್ಷ ಹಾಗೂ ಸಿ ಗ್ರೇಡಿನಲ್ಲಿ ಬರುವ ಸಿನಿಮಾಗಳಿಗೆ ₹20 ಲಕ್ಷ ಸಹಾಯಧನ ನೀಡುತ್ತದೆ.

2003ರಲ್ಲಿ ಆಸ್ಕರ್‌ಗೆ ‘ಶ್ವಾಸ್’ ಸಿನಿಮಾ ನಾಮನಿರ್ದೇಶನಗೊಂಡಾಗ ಈ ಗ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸಿತು. ಇದರಿಂದಾಗಿ ಮರಾಠಿ ಸಿನಿಮಾ ರಂಗದಲ್ಲಿ ಒಳ್ಳೆಯ ಚಿತ್ರಗಳು ತಯಾರಾಗುತ್ತಿವೆ. ಸದಭಿರುಚಿಯ ಚಿತ್ರಗಳ ಸಂಖ್ಯೆಯೂ ಹೆಚ್ಚುತ್ತಿವೆ ಎನ್ನುತ್ತಾರೆ ಗಾಂಧಿನಗರದ ಮಂದಿ.

ರಾಜ್ಯದಲ್ಲೂ ಮರಾಠಿ ಮಾದರಿ ಜಾರಿ ಮಾಡಬೇಕೆಂದು ಒತ್ತಾಯಿಸುತ್ತಲೇ ಇದ್ದೇವೆ. ಸರ್ಕಾರ ಗಮನ ಕೊಟ್ಟಿಲ್ಲ. ಈ ವರ್ಷ ಕನ್ನಡ ಚಿತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರ ಪ್ರಶಸ್ತಿಗಳು ಬಂದಿವೆ. ಮರಾಠಿ ಮಾದರಿ ಜಾರಿಯಾದರೆ ಕನ್ನಡ ಚಿತ್ರರಂಗವನ್ನು ಇನ್ನಷ್ಟು ಗುಣಮಟ್ಟದಿಂದ ಬೆಳೆಸಬಹುದೆಂಬ ಸಲಹೆಗೆ ನಿರ್ದೇಶಕರಾದ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು, ಪಿ.ಶೇಷಾದ್ರಿ ಹಾಗೂ ವಿಜಯಲಕ್ಷ್ಮಿ ಸಿಂಗ್‌ ಧ್ವನಿಗೂಡಿಸಿದ್ದಾರೆ.

‘ರಾಜ್ಯದಲ್ಲಿ 1986ರಲ್ಲಿ ಸುಮಾರು 20 ಗುಣಾತ್ಮಕ ಚಿತ್ರಗಳಿಗೆ ತಲಾ ₹10 ಲಕ್ಷ ಸಬ್ಸಿಡಿ ಕೊಡುತ್ತಿದ್ದರು. ಆಗ ಗುಣಾತ್ಮಕ ಸಿನಿಮಾಗಳ ಪಟ್ಟಿ ಇರುತ್ತಿತ್ತು. ಆಗ 60ರಿಂದ 70 ಸಿನಿಮಾಗಳು ಆಗುತ್ತಿದ್ದವು. ಆಗಿನ ಕಾಲಕ್ಕೆ ಸಬ್ಸಿಡಿ ಮೊತ್ತವೂ ದೊಡ್ಡದೇ. ಸಬ್ಸಿಡಿ ಇಲ್ಲದಿದ್ದರೆ ನಮ್ಮಂತಹವರು ಸಿನಿಮಾ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಸಬ್ಸಿಡಿಗಿಂತ ಗುಣಾತ್ಮಕ ಅಂಶ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೆವು. ನಂತರದ ವರ್ಷಗಳಲ್ಲಿ ಸಬ್ಸಿಡಿ ಸಿನಿಮಾ ಸಂಖ್ಯೆ 50, 75, 100 ಈಗ 125 ಕ್ಕೇರಿದೆ. ಆದರೆ, ಸಬ್ಸಿಡಿ ಮೊತ್ತ ಮಾತ್ರ ₹10 ಲಕ್ಷದಲ್ಲೇ ಉಳಿದಿದೆ’ ಎಂಬುದು ಶೇಷಾದ್ರಿ ಅವರ ಬೇಸರ.

ಸಬ್ಸಿಡಿ ಮಾನದಂಡ

* ಜನವರಿ 1ರಿಂದ ಡಿಸೆಂಬರ್‌ 31ರವರೆಗೆ ನಿರ್ಮಾಣವಾಗಿ, ಸೆನ್ಸಾರ್ ಆದ ಸಿನಿಮಾಗಳನ್ನು ಆ ವರ್ಷದ ಸಬ್ಸಿಡಿಗೆ ಪರಿಗಣಿಸಲಾಗುತ್ತದೆ.

* ರಾಜ್ಯದಲ್ಲಿಯೇ ಸಂಪೂರ್ಣ ಅಥವಾ ನಿರ್ಮಾಣವಾಗುವ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಗುಣಾತ್ಮಕ ಚಲನಚಿತ್ರಗಳು ಸಹಾಯಧನಕ್ಕೆ ಅರ್ಹವಾಗಿವೆ

* ಫ್ಯೂಚರ್ ಸಿನಿಮಾ (ಕಥಾನಕ ಸಿನಿಮಾ) ಕನಿಷ್ಠ 90 ನಿಮಿಷ ಹಾಗೂ ಮಕ್ಕಳ‌ ಸಿನಿಮಾ ಕನಿಷ್ಠ 70 ನಿಮಿಷಕ್ಕೆ ಕಡಿಮೆ ಇಲ್ಲದ ಅವಧಿ ಹೊಂದಿರಬೇಕು

* ಚಲನಚಿತ್ರಗಳ ಸಂಸ್ಕರಣ, ಸಂಕಲನ, ಧ್ವನಿ ಮುದ್ರಣ ರಾಜ್ಯದಲ್ಲಿಯೇ ನಡೆದಿರಬೇಕು

ಈ ಸಿನಿಮಾಗಳಿಗೆ ಸಬ್ಸಿಡಿ ಇಲ್ಲ

* ಬೇರೆ ಭಾಷೆಗಳಿಂದ ಕನ್ನಡಕ್ಕೆ ಡಬ್, ರಿಮೇಕ್‌ ಆಗಿದ್ದರೆ

* ಚಿತ್ರದ ಶೇ 50ಕ್ಕಿಂತ ಹೆಚ್ಚು ಭಾಗ ಹೊರ ರಾಜ್ಯ ಅಥವಾ ವಿದೇಶಗಳಲ್ಲಿ ಚಿತ್ರೀಕರಣವಾಗಿದ್ದರೆ

ಮಾರ್ಗಸೂಚಿ ಏನು ಹೇಳುತ್ತದೆ

* ಚಿತ್ರದಲ್ಲಿ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವ, ಮತೀಯ ಗಲಭೆಗಳಿಗೆ ಪ್ರಚೋದನೆ ನೀಡುವ ಕಥೆ, ದೃಶ್ಯ ಅಥವಾ ಸಂಭಾಷಣೆ ಇರಬಾರದು.

* ಮಹಿಳೆಯರ ಮೇಲಿನ ಹಿಂಸೆ, ಅತ್ಯಾಚಾರ, ಲೈಂಗಿಕತೆ, ಕೀಳುಮಟ್ಟದ ಕಾಮಪ್ರಚೋದನೆಯಂತಹ ಕಥೆ, ಕ್ರೌರ್ಯದ ದೃಶ್ಯ ಇರಬಾರದು.

* ಕೀಳು ಅಭಿರುಚಿಯ ದ್ವಂದ್ವಾರ್ಥ ಸಂಭಾಷಣೆ ಇರಬಾರದು.

* ಅನಾವಶ್ಯಕ ಹೊಡೆದಾಟ, ಕ್ರೌರ್ಯ, ಹಿಂಸೆ, ಅಶ್ಲೀಲ ನೃತ್ಯ ವಿಜೃಂಬಿಸುವ ದೃಶ್ಯ ಇರಬಾರದು.

* ಸಮಾಜದ ಮೇಲೆ ಅದರಲ್ಲೂ ವಿದ್ಯಾರ್ಥಿ, ಯುವ ಸಮುದಾಯದ ಮೇಲೆ ದುಷ್ಪರಿಣಾಮ ಬೀರುವಂತಹ ಕಥೆ, ದೃಶ್ಯ, ನಿರೂಪಣೆ ಇರಬಾರದು

ಮಕ್ಕಳ ಚಿತ್ರದಲ್ಲಿ ಏನಿರಬೇಕು

* ಮಕ್ಕಳ ವಿಷಯ ಕುರಿತ ಕಥಾವಸ್ತು ಹೊಂದಿರಬೇಕು.

* ಮಕ್ಕಳ ಜೀವನ, ಪರಿಸರ ಮತ್ತು ಜಗತ್ತನ್ನು ಬಿಂಬಿಸಬೇಕು.

* ಸೆನ್ಸಾರ್ ಮಂಡಳಿಯಿಂದ ಮಕ್ಕಳ ಚಿತ್ರವೆಂಬ ಪ್ರಮಾಣ ಪತ್ರ ಪಡೆದಿರಬೇಕು.

ಚಾರಿತ್ರಿಕ ಮತ್ತು ಪ್ರವಾಸಿ ತಾಣಗಳ ಸಿನಿಮಾಗಳು

* 1947ಕ್ಕೆ ಹಿಂದಿನ ಕಥಾವಸ್ತು ಒಳಗೊಂಡ ರಾಜ್ಯದ ಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿ ಬಿಂಬಿಸುವ ಚಿತ್ರಗಳಾಗಿರಬೇಕು.

* ರಾಜ್ಯದ ಪಕ್ಷಿಧಾಮ, ವನ್ಯಸಂಕುಲ, ಜಲಪಾತ, ಐತಿಹಾಸಿಕ ಕೋಟೆ ಕೊತ್ತಲಗಳು, ಪಾರಂಪರಿಕ ತಾಣಗಳು, ಸಮುದ್ರ ತೀರಗಳಂತಹ ಪ್ರವಾಸಿ ತಾಣಗಳನ್ನು ಕೇಂದ್ರೀಕರಿಸಿರಬೇಕು.

* ಪ್ರಾಸಂಗಿಕವಾಗಿ ಪ್ರವಾಸಿ ಸ್ಥಳ, ಧಾರ್ಮಿಕ ಕ್ಷೇತ್ರಗಳಲ್ಲಿ ಚಿತ್ರೀಕರಿಸಿದ್ದರೆ ಅದನ್ನು ಅರ್ಹತೆಯಾಗಿ ಪರಿಗಣಿಸುವಂತಿಲ್ಲ.

* ರಾಜ್ಯದ ಪ್ರವಾಸಿ ತಾಣಗಳನ್ನು ದೇಶ ವಿದೇಶಗಳ ಪ್ರವಾಸಿಗರಿಗೆ ಪರಿಚಯಿಸುವಂತೆ, ತನ್ಮೂಲಕ ಅವರನ್ನು ಆಕರ್ಷಿಸುವಂತೆ ಚಿತ್ರ ನಿರ್ಮಿಸಿರಬೇಕು.

ಚಿತ್ರರಂಗದ ಗಣ್ಯರು ಏನನ್ನುತ್ತಾರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT