ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ

ಲೋಪ ಕಂಡುಬಂದರೆ ಬಿಇಒ, ಡಿಡಿಪಿಐಗಳೇ ಹೊಣೆಗಾರರು
Last Updated 25 ಜೂನ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಸಿಬಿಎಸ್ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು. ಇದರಲ್ಲಿ ಲೋಪವೇನಾದರೂ ಕಂಡುಬಂದರೆ ಬಿಇಒ ಮತ್ತು ಡಿಡಿಪಿಐಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಆರ್.ಶ್ರೀನಿವಾಸ್ ಎಚ್ಚರಿಸಿದರು.

ಅಧಿಕಾರ ವಹಿಸಿಕೊಂಡ ಬಳಿಕ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಪಠ್ಯಕ್ರಮದಲ್ಲಿ ಬೋಧನೆ ಮಾಡುವ ಅನುಮತಿ ಪಡೆದು ಕೇಂದ್ರೀಯ ಪಠ್ಯಕ್ರಮದಲ್ಲಿ ಪಾಠ ಮಾಡುವ ಶಾಲೆಗಳಬಗ್ಗೆಯೂ ಮಾಹಿತಿ ಇದೆ. ಪ್ರತಿ ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಲಿದ್ದೇನೆ. ಕೆಲವು ಶಾಲೆಗಳಿಗೆ ಭೇಟಿ ನೀಡಲಿದ್ದೇನೆ. ಆಗ ಇಂತಹ ಅಕ್ರಮ ನಡೆಯುತ್ತಿರುವುದು ಸಾಬೀತಾದರೆ ಕ್ರಮ ನಿಶ್ಚಿತ’ ಎಂದರು.

‘ಮುಖ್ಯಮಂತ್ರಿ ಅವರು ಈಗಾಗಲೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಿದ್ದಾರೆ. ಪ್ರಾಯೋಗಿಕವಾಗಿ ಇಂದು ತಾಲ್ಲೂಕಿನಲ್ಲಿ 4ರಿಂದ 5 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಕಲಿಕೆ ಆರಂಭವಾಗಿದೆ. ಇದನ್ನು ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಇದರ ಬಗ್ಗೆ ಚರ್ಚಿಸಿ ಮುಂದಿನ ವರ್ಷದಿಂದ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕನ್ನಡ ಶಾಲೆಗಳು ಮುಚ್ಚುವ ಪ್ರಮಾಣ ಹೆಚ್ಚುತ್ತಿದ್ದು, ಅದನ್ನು ತಡೆಗಟ್ಟಲು ಸಹ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಶಾಲೆಗಳ ಮೂಲಸೌಲಭ್ಯ ಸುಧಾರಣೆಗಾಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್‌ಆರ್‌) ಬಳಸಿಕೊಳ್ಳುವ ಚಿಂತನೆ ಇದೆ ಎಂದರು.

ಶಿಕ್ಷಕರ ವರ್ಗಾವಣೆಯಲ್ಲಿ ಕೆಲವೊಂದು ಲೋಪಗಳಿರುವ ಬಗ್ಗೆ ಕೇಳಿಬಂದಿದೆ, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ, ಲೋಪದೋಷ ನಿವಾರಿಸುವ ಮತ್ತು ಅರ್ಹ ಶಿಕ್ಷಕರಿಗೆ ವರ್ಗಾವಣೆ ದೊರಕಿಸಿಕೊಡಲಾಗುವುದು. ಈಗಾಗಲೇ ವರ್ಗಾವಣೆ ಮಾರ್ಗಸೂಚಿ ನೀಡಲಾಗಿದ್ದು, ಅದರಂತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದರು.

ಉ.ಕರ್ನಾಟಕ: 11 ಸಾವಿರ ಶಿಕ್ಷಕರ ನೇಮಕ

ಉತ್ತರ ಕರ್ನಾಟಕ ಭಾಗದಲ್ಲಿ 11 ಸಾವಿರ ಶಿಕ್ಷಕರ ನೇಮಕಾತಿಗಾಗಿ ಕಳೆದ ವರ್ಷ ಅರ್ಜಿ ಆಹ್ವಾನಿಸಲಾಗಿತ್ತು. ಅದರೆ 2 ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡುವುದು ಸಾಧ್ಯವಾಗಿತ್ತು. ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡುವುದಕ್ಕೆ ಈ ಬಾರಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶ್ರೀನಿವಾಸ್‌ ಹೇಳಿದರು.

‘ಶಿಕ್ಷಕರ ಗುಣಮಟ್ಟ ಉತ್ತಮವಾಗಿರಬೇಕು ಎಂಬ ಕಾರಣಕ್ಕೆ ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿತ್ತು. ಶೇ 75ಕ್ಕಿಂತ ಅಧಿಕ ಅಂಕ ಗಳಿಸಿದವವರನ್ನಷ್ಟೇ ಪರಿಗಣಿಸಲಾಗಿತ್ತು. ಇದಕ್ಕಿಂತ ಕಡಿಮೆ ಅಂಕ ಗಳಿಸಿದವರನ್ನೂ ಶಿಕ್ಷಕರನ್ನಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಕೇಂದ್ರದಿಂದಲೇ ಸೂಕ್ತ ಆದೇಶ ಹೊರಡಿಸಿ’

ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಿದ ನೂತನ ಶಿಕ್ಷಣ ಸಚಿವರ ಆಶಯ ಒಳ್ಳೆಯದೇ. ಆದರೆ ಅಧಿಕಾರಿಗಳು ಅವರಿಗೆ ಈ ವಿಷಯದಲ್ಲಿ ಅರ್ಧ ಸತ್ಯವನ್ನಷ್ಟೇ ಹೇಳಿ ದಾರಿ ತಪ್ಪಿಸಿದಂತೆ ಕಾಣುತ್ತದೆ. ವಿಷಯವನ್ನು ಸರಿಯಾಗಿ ತಿಳಿದುಕೊಂಡರೆ ಎಲ್ಲರಿಗೂ ಅನುಕೂಲ’ ಎಂದು ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತಮಂಡಳಿಗಳ ಸಂಘದ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

‘ಐಸಿಎಸ್‌ಇಯಲ್ಲಿ ಎರಡು ಭಾಷೆ ಕಲಿಕೆಗೆ ಮಾತ್ರ ಅವಕಾಶ ಇದೆ. ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿದರೆ ಕನ್ನಡ ಗೊತ್ತಿಲ್ಲದ ರಾಜ್ಯದ ಹೊರಭಾಗದವರು ನ್ಯಾಯಾಲಯದಲ್ಲಿ ದಾವೆ ಹೂಡಿದರೆ ಉದ್ದೇಶ ಬುಡಮೇಲಾಗಿ ಬಿಡುತ್ತದೆ. ಹೀಗಾಗಿ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವತಿಯಿಂದ ಕನ್ನಡ ಭಾಷೆ ಕಲಿಕೆಗೆ ಹಾಗೂ ಕನ್ನಡ ಪರೀಕ್ಷೆ ನಡೆಸುವ ಸಂಬಂಧ ಸೂಕ್ತ ಆದೇಶ ಹೊರಡಿಸಬೇಕು ಎಂದು ಹೇಳಿದ ಅವರು, ಕನ್ನಡ ಕಲಿಸುವುದಕ್ಕೆ ಅಧಿಕೃತ ಮಾನದಂಡವನ್ನು ನಿಗದಿಪಡಿಸಿದರೆ ಯಾವುದೇ ತೊಂದರೆ ಇಲ್ಲದೆ ಶಾಲೆಗಳು ಕನ್ನಡ ಕಲಿಸಬಹುದು’ ಎಂದು ಹೇಳಿದ್ದಾರೆ.

**

ನಾನು ಗ್ರಾಮೀಣ ಭಾಗದ ಶಾಲೆಯಲ್ಲಿ ಓದಿದವನು. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ
- ಎಸ್‌.ಆರ್.ಶ್ರೀನಿವಾಸ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT