ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ‘ಪ್ರಕಾಶಿಸುತ್ತಿದೆ’...

Last Updated 30 ಅಕ್ಟೋಬರ್ 2019, 9:49 IST
ಅಕ್ಷರ ಗಾತ್ರ

ಪುಸ್ತಕ ಪ್ರಕಾಶನದ ಮೂಲಕ ರಾಜ್ಯವೂ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಕನ್ನಡ ಬೆಳೆಸುವ ಕಾಯಕವನ್ನು ಹಲವು ದಶಕಗಳಿಂದ ಪ್ರಮುಖ ಪ್ರಕಾಶನ ಸಂಸ್ಥೆಗಳು ಮುನ್ನಡೆಸುತ್ತ ಬಂದಿವೆ. ಕನ್ನಡದ ಶ್ರೇಷ್ಠ ಕೃತಿಗಳನ್ನು ಪ್ರಕಟಿಸಿ, ಮನೆ, ಮನೆಗೆ ಹೋಗಿ ಅವುಗಳನ್ನು ಖರೀದಿಸಿ, ಓದುವಂತೆ ಮಾಡಿವೆ. ಧಾರವಾಡದ ಮನೋಹರ ಗ್ರಂಥಮಾಲೆ 86 ವರ್ಷಗಳಿಂದ (1933) ಮಾಡಿಕೊಂಡು ಬಂದರೆ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ 33 (ಸಾಹಿತ್ಯ ಭಂಡಾರ–85 (1934)) ವರ್ಷಗಳಿಂದ ನಿರಂತರವಾಗಿ ಕನ್ನಡ ಕಟ್ಟುವ ಮೌಲಿಕವಾದ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಪುಸ್ತಕ ಪ್ರಕಾಶನ ಸಂಸ್ಥೆ ಮುನ್ನಡೆಸುವವರ ಮಾತುಗಳು ಇಲ್ಲಿವೆ...

***

‘ಕನ್ನಡ ಪುಸ್ತಕಗಳನ್ನು ಪ್ರಕಟಿಸುವ ಕಾರ್ಯದಲ್ಲಿ ನಾನು ಸ್ವತಂತ್ರವಾಗಿ ತೊಡಗಿಕೊಳ್ಳುವ ಉದ್ದೇಶದಿಂದ 1986ರ ಅಕ್ಟೋಬರ್‌ 12ಕ್ಕೆ ಹುಬ್ಬಳ್ಳಿಯಲ್ಲಿ ‘ಸಾಹಿತ್ಯ ಪ್ರಕಾಶನ’ವನ್ನು ಆರಂಭಿಸಿದೆ. ಆಗ ನನ್ನ ಬಳಿ ಯಾವುದೇ ಬಂಡವಾಳವೂ ಇರಲಿಲ್ಲ. ಕನ್ನಡ ಸಾಹಿತ್ಯ, ಸಾಹಿತಿಗಳು ಹಾಗೂ ಪುಸ್ತಕಗಳ ಮೇಲಿನ ಅಭಿಮಾನವೇ ನನ್ನ ಕೈ ಹಿಡಿದು ಮುನ್ನಡೆಸಿದ್ದು. ಅಲ್ಲಿಂದ ಮುಂದಿನದು ಇತಿಹಾಸ. ಕಳೆದ ಮೂರು ದಶಕಗಳಲ್ಲಿ ನಮ್ಮ ಪ್ರಕಾಶನದಿಂದ ಒಟ್ಟು 630 ಪುಸ್ತಕಗಳು ಹೊರಬಂದಿವೆ’ ಎನ್ನುತ್ತ ಸಾರ್ಥಕ ಭಾವದಲ್ಲಿ ಮಾತು ಮುಂದುವರಿಸಿದವರು ಹುಬ್ಬಳ್ಳಿ ಸಾಹಿತ್ಯ ಪ್ರಕಾಶನ (ಸಾಹಿತ್ಯ ಭಂಡಾರ)ದ ಮಾಲೀಕ, ಪ್ರಕಾಶಕ ಎಂ.ಎ.ಸುಬ್ರಹ್ಮಣ್ಯ ಅವರು.

‘ನಮ್ಮ ಮನೆಯಲ್ಲಿ ಮೊದಲಿನಿಂದಲೂ ಕನ್ನಡ ಸಾಹಿತ್ಯ, ಸಾಹಿತಿಗಳು, ಪುಸ್ತಕಗಳ ಒಡನಾಟವಿತ್ತು. ನಮ್ಮ ದೊಡ್ಡಪ್ಪ 1934ರಲ್ಲಿ ಹುಬ್ಬಳ್ಳಿಯಲ್ಲಿ ‘ಸಾಹಿತ್ಯ ಭಂಡಾರ’ ಎಂಬ ಪುಸ್ತಕ ಪ್ರಕಾಶನ ಸಂಸ್ಥೆ ಆರಂಭ ಮಾಡಿದ್ದರು. ಆಗ ಅವರು ಸ್ವಾತಂತ್ರ್ಯ ಹೋರಾಟಗಾರರ ಆದರ್ಶ, ಆ ಕಾಲದ ಬರಹಗಾರರು, ಚಳವಳಿ ಇತ್ಯಾದಿಗಳ ಬಗ್ಗೆ ಪುಸ್ತಕ ಮುದ್ರಣ ಮಾಡುತ್ತಿದ್ದರು. ಒಂದರ್ಥದಲ್ಲಿ ಆದರ್ಶಮಯ ಸಾಹಿತ್ಯದ ಮುದ್ರಣ ಅನ್ನಬಹುದು. ಗಾಂಧೀಜಿ, ನೆಹರೂ, ಜೆಪಿ, ತಿಲಕರ ಬಗ್ಗೆ ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದರು. ತದನಂತರ 1969ರಲ್ಲಿ ಸಾಹಿತಿ ಎಸ್‌.ಎಲ್‌.ಭೈರಪ್ಪನವರು ನಮ್ಮೊಂದಿಗೆ ಸೇರಿಕೊಂಡರು. ಅರ್ಥಾತ್‌ ಅವರ ಎಲ್ಲ ಕಾದಂಬರಿಗಳನ್ನು ಸಾಹಿತ್ಯ ಭಂಡಾರದಿಂದ ಮುದ್ರಣ ಮಾಡಲು ಆರಂಭಿಸಿದೆವು. ಬೆಂಗಳೂರಿನಲ್ಲಿ ಕೂಡ ಒಂದು ಶಾಖೆಯನ್ನೂ ಆರಂಭಿಸಿದೆವು.’

‘ತಕ್ಷಣ ಹಣ ಮಾಡಬೇಕು ಅಂತ ಈ ಉದ್ಯೋಗ ಆಯ್ದುಕೊಂಡರೆ ಇದು ತಕ್ಕುದಾದ ವೃತ್ತಿಯಲ್ಲ. ಕನ್ನಡ ಭಾಷೆಯ ಮೇಲೆ ಪ್ರೀತಿ, ಅಭಿಮಾನ, ಸಾಹಿತಿಗಳೊಂದಿಗೆ ಸಿಗುವ ಒಡನಾಟ, ಜನರಿಗೆ ಓದುವ ಅಭಿರುಚಿ ಬೆಳೆಸುವ ಕೆಲಸದ ಬಗ್ಗೆ ಆಸಕ್ತಿ ಇದ್ದರೆ ಮಾತ್ರ ಈ ಕ್ಷೇತ್ರದಲ್ಲಿ ಮುಂದುವರಿಯಬಹುದು. ನಾನಂತೂ ಅದೇ ಉದ್ದೇಶದಲ್ಲಿ ಸ್ವತಂತ್ರವಾಗಿ ಈ ವೃತ್ತಿ ಆರಂಭಿಸಿದೆ. ಆರಂಭದಲ್ಲಿ ನನ್ನ ಬಳಿ ಏನೂ ಹಣವಿರಲಿಲ್ಲ. ಅವರಿವರ ಬಳಿ ಸಾಲ ಪಡೆದು ಪುಸ್ತಕ ಹುಬ್ಬಳ್ಳಿಯ ದಾಜೀಬಾನ್‌ ಪೇಟೆಯಲ್ಲಿ ಮುದ್ರಣ ಆರಂಭಿಸಿದೆ. ಆರಂಭದ ದಿನಗಳು ಕಷ್ಟಕರವಾಗಿದ್ದವು. ಜನರೊಂದಿಗಿನ ಒಡನಾಟ, ಸಮ್ಮೇಳನಗಳಿಗೆ ಭೇಟಿ, ಊರೂರಿನ ಅಲೆದಾಟಗಳಿಂದ ಪುಸ್ತಕ ಮಾರಾಟ ಮಾಡಬೇಕಾದ ಸನ್ನಿವೇಶಗಳಿದ್ದವು. ಆದರೆ ನಿರಂತರ ಪರಿಶ್ರಮ ಹಾಗೂ ಜನರ ಪುಸ್ತಕ ಪ್ರೀತಿಯಿಂದ ಇವೆಲ್ಲ ಸಾಧ್ಯವಾಯಿತು.’

‘1986ರ ಸಮಯದಲ್ಲಿ ಕಾದಂಬರಿಗಳಿಗೆ ಬೇಡಿಕೆ ಇದ್ದ ಕಾಲ.ಯಂಡಮೂರಿಯವರ ಕಾದಂಬರಿಯನ್ನು ಮೊದಲು ಮುದ್ರಿಸಿದೆ. ಬಳಿಕ ವಿಜಯ ಸಾಸನೂರ, ಕೆ.ಟಿ.ಗಟ್ಟಿ ಕಾದಂಬರಿ ಮುದ್ರಿಸಿದೆ. ಹಾಗೆಯೇ ವೈಚಾರಿಕ ಬರಹಗಳ ಪುಸ್ತಕಗಳಾಗಿ ಶಂಭಾ ಜೋಷಿ, ಡಾ. ಪಾಟೀಲ ಪುಟ್ಟಪ್ಪ, ಕೆ.ಎಸ್‌.ನಾರಾಯಣಾಚಾರ್ಯ, ಎನ್ಕೆ ಹೀಗೆ ಹಲವರ ಅವರ ಪುಸ್ತಕ ಮುದ್ರಿಸಿದೆ. 2000ದಲ್ಲಿ ಸಾಹಿತ್ಯ ಭಂಡಾರದ ಜವಾಬ್ದಾರಿಯನ್ನು ತೆಗೆದುಕೊಂಡೆ. ಕನ್ನಡ ಪುಸ್ತಕಗಳ ಮಾರಾಟ ಮತ್ತು ಮುದ್ರಣ ಜತೆಯಾದವು. ಅಲ್ಲಿಂದ ನಾವು ಹಿಂತಿರುಗಿ ನೋಡಿಲ್ಲ.’

‘ಕನ್ನಡ ಪುಸ್ತಕ ಓದುವುದಿಲ್ಲ, ಕನ್ನಡ ಪುಸ್ತಕ ಪ್ರಕಾಶನ ನಷ್ಟದಲ್ಲಿದೆ ಎನ್ನುವುದು ತಾಳ್ಮೆ ಇಲ್ಲದೇ ಇರುವವರು ಹೇಳುವ ಮಾತು. ನನ್ನ ವಿಚಾರದಲ್ಲಿ ಸುಳ್ಳು. ನಾನಂತೂ ನಷ್ಟದಲ್ಲಿಲ್ಲ. ಸರ್ಕಾರಿ ಯೋಜನೆಗಳನ್ನು ನಂಬಿಕೊಂಡಿದ್ದರೆ ಕಷ್ಟ. ಜನರಿಗೆ ಏನು ಬೇಕು, ಎಲ್ಲೆಲ್ಲಿ ಓದುಗರು ಸಿಗುತ್ತಾರೆ ಅಲ್ಲಿಗೆಲ್ಲ ಹೋಗುತ್ತೇನೆ, ಸಾಹಿತ್ಯ ಸಮ್ಮೇಳನಗಳಿಗೆ ಹೋಗುತ್ತೇನೆ, ಊರೂರು ಅಲೆದಾಡುತ್ತೇನೆ, ಒಂದೊಂದು ಹೊಸ ಪುಸ್ತಕ ಮುದ್ರಿಸಿದಾಗ ಅದರ ಬಂಡಲ್‌ ಕಟ್ಟಿಕೊಂಡು ರಾಜ್ಯವ್ಯಾಪಿ ಓಡಾಡುತ್ತೇನೆ. ಜನರಲ್ಲಿ ಓದುವ ಅಭಿರುಚಿ ಮೂಡಿಸುತ್ತೇನೆ. ಇದನ್ನೆಲ್ಲ ಪ್ರೀತಿಯಿಂದ ಮಾಡುವುದರಿಂದ ನನಗ್ಯಾವತ್ತೂ ಈ ವೃತ್ತಿ ಕಷ್ಟಕರ ಅಂತ ಅನ್ನಿಸಿಲ್ಲ. ಈಗ ನನ್ನ ಬಳಿ ₹1.50 ಕೋಟಿ ಮೊತ್ತದ ಪುಸ್ತಕಗಳಿವೆ, ಮುದ್ರಿಸಿದ ಪುಸ್ತಕ ಸಂಗ್ರಹಕ್ಕೆ ನಾಲ್ಕು ಗೋಡೌನ್‌ಗಳಿವೆ.’

‘ಕನ್ನಡದಲ್ಲಿ ಓದುಗರಿಲ್ಲ ಎನ್ನುವುದು ಸುಳ್ಳು.ಈಗಲೂ ನನ್ನ ಬಳಿ ಭೈರಪ್ಪ, ಮಾಸ್ತಿ, ಶಿವರಾಮ ಕಾರಂತ, ಡಿ.ವಿ.ಗುಂಡಪ್ಪ, ಬೇಂದ್ರೆ, ದೇವನೂರ, ಕುವೆಂಪು ಮುಂತಾದವರ ಪುಸ್ತಕಗಳು ನಿರಂತರವಾಗಿ ಖರ್ಚಾಗುತ್ತವೆ. ಓದುಗರ ಕೊರತೆಯಿಲ್ಲ;ಸೃಜನಶೀಲತೆಯ ಕೊರತೆಯಿದೆ, ಗಂಭೀರವಾಗಿ ಬರೆಯುವವರ ಕೊರತೆಯಿದೆ. ಓದುವುದನ್ನು ನಾವು ಮನೆ ಮನೆಯಲ್ಲಿ ಕಲಿಸಬೇಕು. ಪುಸ್ತಕ ಅಭಿರುಚಿ ಬೆಳೆಸಬೇಕು’ ಎನ್ನುವ ಸುಬ್ರಹ್ಮಣ್ಯ, ಕನ್ನಡ ಪುಸ್ತಕ ಮುದ್ರಣ ಹಾಗೂ ಪ್ರಕಾಶನದ ವೃತ್ತಿಯಿಂದ ತಾವು ಹೊಸ ಓದುಗರನ್ನು ಸೃಷ್ಟಿಸಿದ ಸಾರ್ಥಕಭಾವ, ಖುಷಿ, ಸಂತೃಪ್ತಿಯಲ್ಲಿರುವುದಾಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT