ಶುಕ್ರವಾರ, ಜುಲೈ 30, 2021
25 °C
‘ಸಂವೇದನಾ’ದಲ್ಲಿ ಸಚಿವ ಸುರೇಶ್‌ಕುಮಾರ್ ಮಾಹಿತಿ

‘ಶಾಲೆಗಳಲ್ಲಿ ಕರಾಟೆ’: ಸಚಿವ ಸುರೇಶ್‌ಕುಮಾರ್ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 Sureshkumar

ಬೆಂಗಳೂರು: ‘ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ತುಂಬುವ ಮತ್ತು ಅವರ ಸ್ವಯಂರಕ್ಷಣೆಗೆ ನೆರವಾಗುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಕರಾಟೆ ತರಗತಿ ಕಡ್ಡಾಯಗೊಳಿಸುವ ಚಿಂತನೆ ಇದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಹೇಳಿದರು. 

ನಗರದಲ್ಲಿ ಸೋಮವಾರ ‘ಸಂವೇದನಾ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಗತ್ಯವಿರುವ ಕಡೆಗೆ ಕ್ಲಸ್ಟರ್‌ ಮಟ್ಟದಲ್ಲಿ ಒಬ್ಬ ಕರಾಟೆ ಶಿಕ್ಷಕರ ನೇಮಕಕ್ಕೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

‘ಕಾಡುದಾರಿಯಲ್ಲಿ ಒಬ್ಬಂಟಿಯಾಗಿ ಹೋಗುವಾಗ ಭಯವಾಗುತ್ತದೆ. ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದರೆ ಅನುಕೂಲವಾಗುತ್ತದೆ’ ಎಂದು ಚಿಕ್ಕಮಗಳೂರು ಕೊಪ್ಪ ತಾಲ್ಲೂಕಿನ ಹತ್ತನೇ ತರಗತಿ ವಿದ್ಯಾರ್ಥಿನಿ ಸುಚಿತಾ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ಈ ಭರವಸೆ ನೀಡಿದರು. 

ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಇದೆಯೇ, ಇಲ್ಲವೇ ಎಂದು ಹಲವು ವಿದ್ಯಾರ್ಥಿಗಳು ಪ್ರಶ್ನಿಸಿದರು. ವಿದ್ಯಾರ್ಥಿನಿಯರು ಪಬ್ಲಿಕ್‌ ಪರೀಕ್ಷೆ ಇರಲಿ ಎಂದು ಹೇಳಿದರೆ, ವಿದ್ಯಾರ್ಥಿಗಳು ಬೇಡ ಎಂದು ಪ್ರತಿಕ್ರಿಯಿಸಿದರು. ಈ ಕುರಿತು ಕೆಲವೇ ದಿನಗಳಲ್ಲಿ ಸ್ಪಷ್ಟ ನಿರ್ಧಾರ ಪ್ರಕಟಿಸಲಾಗುವುದು ಎಂದು ಸುರೇಶ್‌ ಕುಮಾರ್‌ ಹೇಳಿದರು. 

ಶಾಲೆಗಳಲ್ಲಿ ನೀಡುತ್ತಿರುವ ಹಾಲು ರುಚಿಯಾಗಿಲ್ಲ. ಹೊಟ್ಟೆ ನೋವು ಬಂದಂತಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕ್ಷೀರಭಾಗ್ಯ ಯೋಜನೆಯ ಹಾಲು ರುಚಿ ಮತ್ತು ಶಕ್ತಿವರ್ಧಕವಾಗಿದ್ದು, ಸತ್ಯಸಾಯಿ ಅನ್ನಪೂರ್ಣೇಶ್ವರಿ ಟ್ರಸ್ಟ್ ನ ‘ಸಾಯಿಶ್ಯೂರ್’ ಪುಡಿಯನ್ನು (ಹಾರ್ಲಿಕ್ಸ್‌ ಮಾದರಿ) ಸೇರಿಸಿ ನೀಡಲಾಗುವುದು’ ಎಂದರು.

35 ಸಾವಿರ ಶಿಕ್ಷಕರ ಕೊರತೆ

ರಾಜ್ಯದಲ್ಲಿ 35 ಸಾವಿರ ಶಿಕ್ಷಕರ ಕೊರತೆ ಇದೆ. ಪ್ರತಿ ವರ್ಷ ಹತ್ತು ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು. ಈಗ 10,700 ಶಿಕ್ಷಕರ ನೇಮಕ ಪ್ರಕ್ರಿಯೆ ಮುಗಿದಿದ್ದು, ಇದೇ 19ಕ್ಕೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಚಿವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು