ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ವಾಸ್ತವ್ಯಕ್ಕಾಗಿ ಬದಲಾದ ವಾಸ್ತವ!

Last Updated 25 ಜೂನ್ 2019, 19:30 IST
ಅಕ್ಷರ ಗಾತ್ರ

ರಾಯಚೂರು:ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜೂನ್‌ 26 ರ ಗ್ರಾಮವಾಸ್ತವ್ಯ ಯಶಸ್ವಿ ಮಾಡುವುದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಗಲಿರುಳು ಶ್ರಮ ವಹಿಸಿದ್ದು, ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೇಗುಡ್ಡ ಗ್ರಾಮದ ವಾಸ್ತವ ಸ್ಥಿತಿಯನ್ನು ಬದಲಾಯಿಸಿದ್ದಾರೆ!

ಆಧೋಗತಿಯಲ್ಲಿದ್ದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮದುವೆ ಮನೆಯಂತೆ ಕಂಗೊಳಿಸುತ್ತಿದೆ. ಶಾಲೆಗೆ ಆವರಣ ಗೋಡೆ, ಸುಸಜ್ಜಿತವಾದ ಶೌಚಾಲಯಗಳನ್ನು ಒಂದು ವಾರದಲ್ಲಿ ನಿರ್ಮಿಸಲಾಗಿದೆ.

ಗ್ರಾಮದಲ್ಲಿ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಶುದ್ಧ ನೀರಿನ ಘಟಕ ದುರಸ್ತಿಗೊಂಡಿದೆ. ಐದು ಕಡೆ ಕೊಳವೆಬಾವಿಗಳನ್ನು ಕೊರೆದು ಕೈಪಂಪು ಅಳವಡಿಸಲಾಗಿದೆ. ಗ್ರಾಮ ಮಾರ್ಗದ ಕಚ್ಚಾರಸ್ತೆಯು ಪಕ್ಕಾರಸ್ತೆಯಾಗಿ ಪರಿವರ್ತನೆಯಾಗಿದೆ. ಬಯಲು ಬಹಿರ್ದೆಸೆಗೆ ಬಳಕೆಯಾಗುತ್ತಿದ್ದ ಕಲ್ಲುಗುಡ್ಡೆ ಮತ್ತು ಮುಳ್ಳಿನ ಗಿಡಗಳಿದ್ದ ಜಾಗವನ್ನು ಸಮತಟ್ಟುಗೊಳಿಸಿ, ಸರ್ಕಾರಿ ಅಧಿಕಾರಿಗಳ ವಾಹನ ನಿಲುಗಡೆ ತಾಣವಾಗಿ ಬದಲಾಯಿಸಲಾಗಿದೆ.

ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೆ ಹರಿದುಹೋಗುತ್ತಿದ್ದ ಗ್ರಾಮದ ಕಲ್ಮಶಕ್ಕೆ ಈಗ ಚರಂಡಿ ಮಾರ್ಗ ಮಾಡಲಾಗಿದೆ. ಸಿಸಿ ರಸ್ತೆಯೊಂದು ನಿರ್ಮಾಣವಾಗಿದೆ. ಗ್ರಾಮಕ್ಕೆ ಒಂದೇ ವಿದ್ಯುತ್‌ ಪರಿವರ್ತಕ ಇದ್ದುದರಿಂದ ಮೇಲಿಂದ ಮೇಲೆ ವಿದ್ಯುತ್‌ ಸಂಪರ್ಕದಲ್ಲಿ ಸಮಸ್ಯೆಯಾಗುತ್ತಿತ್ತು. ಈಗ ಹೆಚ್ಚುವರಿ ಎರಡು ವಿದ್ಯುತ್‌ ಪರಿವರ್ತಕಗಳನ್ನು ಹಾಕಲಾಗಿದೆ.

ಗ್ರಾಮದ ಹೊರಭಾಗದಲ್ಲಿ ಮುಳ್ಳಿನ ಗಿಡಗಳಿಂದ ಆವೃತ್ತವಾಗಿದ್ದ 22 ಎಕರೆ ಖಾಸಗಿ ಜಮೀನು ಸಮತಟ್ಟು ಪ್ರದೇಶವಾಗಿ ಪರಿವರ್ತನೆಗೊಂಡಿದ್ದು, ಮುಖ್ಯಮಂತ್ರಿ ಜನತಾದರ್ಶನಕ್ಕೆ ಇದೇ ಸ್ಥಳದಲ್ಲಿ ವೇದಿಕೆ ನಿರ್ಮಿಸಲಾಗಿದೆ. ವಾಸ್ತವವಾಗಿ ಕನಿಷ್ಠ ಮೂಲ ಸೌಕರ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕರೇಗುಡ್ಡ ಗ್ರಾಮದ ಚಿತ್ರಣ ಒಂದು ವಾರದಲ್ಲಿ ಸ್ವಲ್ಪಮಟ್ಟಿಗಾದರೂ ಬದಲಾಗಿದೆ.

‘ಸಿಎಂ ಬರುತ್ತಿರುವುದರಿಂದ ಕರೇಗುಡ್ಡದಲ್ಲಿ ಕೆಲವು ಸೌಲಭ್ಯಗಳನ್ನು ಅಧಿಕಾರಿಗಳು ಮಾಡಿದ್ದಾರೆ. ಆದರೆ, ಗ್ರಾಮದ ಜನರಿಗೆ ಸ್ಮಶಾನ ಭೂಮಿಯಿಲ್ಲ. ಕರೇಗುಡ್ಡದಿಂದ ಜಾನೇಕಲ್‌ಗೆ ಹೋಗುವ ಮಾರ್ಗದ ಹಳ್ಳಕ್ಕೆ ಸೇತುವೆಯೊಂದನ್ನು ನಿರ್ಮಿಸಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ಗ್ರಾಮದ ಮುಖಂಡ ಶರಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾನ್ವಿ ತಾಲ್ಲೂಕಿನ ಕರೇಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಮಾನ್ವಿ ತಾಲ್ಲೂಕಿನ ಕರೇಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ರಾಯಚೂರಿಗೆ ಮುಖ್ಯಮಂತ್ರಿ ಇಂದು
ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕರೇಗುಡ್ಡ ಗ್ರಾಮದಲ್ಲಿ ಗ್ರಾಮವಾಸ್ತವ್ಯಕ್ಕಾಗಿ ಜೂನ್‌ 26 ರ ಬೆಳಿಗ್ಗೆ ರಾಯಚೂರಿಗೆ ರೈಲಿನ ಮೂಲಕ ಆಗಮಿಸುವರು.

ರಾಯಚೂರಿನಿಂದ ಕರೇಗುಡ್ಡಕ್ಕೆ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿ, ದಿನವಿಡೀ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ. ರಾತ್ರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಉಳಿದುಕೊಂಡು, ಜೂನ್‌ 27 ರ ಬೆಳಿಗ್ಗೆ ಹೆಲಿಕಾಪ್ಟರ್‌ ಮೂಲಕ ಬೀದರ್ ಜಿಲ್ಲೆಗೆ ಪ್ರಯಾಣಿಸುವರು.

ಬಸ್‌ನಲ್ಲಿ ಬರುವ ಸಿಎಂ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕರೇಗುಡ್ಡ ಗ್ರಾಮದಲ್ಲಿ ಗ್ರಾಮವಾಸ್ತವ್ಯಕ್ಕಾಗಿ ಜೂನ್‌ 26 ರ ಬೆಳಿಗ್ಗೆ ರಾಯಚೂರಿಗೆ ರೈಲಿನ ಮೂಲಕ ಬರುವರು.ರಾಯಚೂರಿನಿಂದ ಕರೇಗುಡ್ಡಕ್ಕೆ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿ, ದಿನವಿಡೀ ಜನರ ಅಹವಾಲುಗಳನ್ನು ಆಲಿಸುವರು. ರಾತ್ರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಉಳಿದುಕೊಂಡು, ಜೂನ್‌ 27 ರ ಬೆಳಿಗ್ಗೆ ಹೆಲಿಕಾಪ್ಟರ್‌ ಮೂಲಕ ಬೀದರ್ ಜಿಲ್ಲೆಗೆ ಪ್ರಯಾಣಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT