ಕ್ಯಾನ್ಸರ್‌ ತಜ್ಞ ಡಾ.ಆರ್‌.ಬಿ.ಪಾಟೀಲ ನಿಧನ

7

ಕ್ಯಾನ್ಸರ್‌ ತಜ್ಞ ಡಾ.ಆರ್‌.ಬಿ.ಪಾಟೀಲ ನಿಧನ

Published:
Updated:
Prajavani

ಹುಬ್ಬಳ್ಳಿ: ಪದ್ಮಶ್ರೀ ಪುರಸ್ಕೃತ, ಕ್ಯಾನ್ಸರ್‌ ತಜ್ಞ ಡಾ.ಆರ್.ಬಿ.ಪಾಟೀಲ (94) ಶನಿವಾರ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ ಯಮುನಕ್ಕ, ಪುತ್ರ ಡಾ.ಬಿ.ಆರ್.ಪಾಟೀಲ, ಪುತ್ರಿಯರಾದ ಡಾ.ಸರೋಜಾ ಭೈರಿ, ಡಾ.ಶೈಲಜಾ ಮುದರಡ್ಡಿ ಇದ್ದಾರೆ.

ಉತ್ತರ ಕರ್ನಾಟಕದಲ್ಲಿ ಮೊದಲ ಕ್ಯಾನ್ಸರ್‌ ಆಸ್ಪತ್ರೆ (ಕರ್ನಾಟಕ ಕ್ಯಾನ್ಸರ್‌ ಥೆರಪಿ ಆ್ಯಂಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್) ಕಟ್ಟಿದ ಶ್ರೇಯಸ್ಸು ಡಾ.ಆರ್‌.ಬಿ.ಪಾಟೀಲ ಅವರದ್ದು.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಅಂಗಡಿಗೇರಿಯಲ್ಲಿ 1926ರ ನ.30 ರಂದು ಜನಿಸಿದ ಡಾ.ಪಾಟೀಲರು, 1951ರಲ್ಲಿ ಮುಂಬೈನ ಕೆ.ಇ.ಎಂ. ಆಸ್ಪತ್ರೆಯಲ್ಲಿ ವೈದ್ಯಕೀಯ ಪದವಿ ಪಡೆದು, 1956ರಲ್ಲಿ ಇಂಗ್ಲೆಂಡ್‌ನಲ್ಲಿ ಎಫ್‌.ಆರ್‌.ಸಿ.ಎಸ್‌. ಮಾಡಿದ್ದರು. 1957ರಲ್ಲಿ ಹುಬ್ಬಳ್ಳಿಯ ಕೋ ಆಪರೇಟಿವ್‌ ಆಸ್ಪತ್ರೆ ಮುಖ್ಯ ವೈದ್ಯಕೀಯ ಅಧೀಕ್ಷಕರಾಗಿ ವೃತ್ತಿ ಆರಂಭಿಸಿದ ಅವರು, ನಂತರ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು.

1970ರಲ್ಲಿ ವಿದ್ಯಾನಗರದಲ್ಲಿ ನರ್ಸಿಂಗ್‌ ಹೋಂ ಆರಂಭಿಸಿದ್ದರು. ಉತ್ತರ ಕರ್ನಾಟಕ ಭಾಗದ ಕ್ಯಾನ್ಸರ್‌ ರೋಗಿಗಳಿಗೆ ಅನುಕೂಲವಾಗಲಿ ಎಂದು ಸಮಾನ ಮನಸ್ಕ ದಾನಿಗಳ ಜೊತೆಗೂಡಿ, ನವನಗರದಲ್ಲಿ 1976ರಲ್ಲಿ 30 ಹಾಸಿಗೆಯುಳ್ಳ ಮತ್ತೊಂದು ಆಸ್ಪತ್ರೆ ಆರಂಭಿಸಿದ್ದರು. ಮದರ್‌ ತೆರೆಸಾ ಅವರು ಕ್ಯಾನ್ಸರ್‌ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೋಗಿಗಳ ಕುಶಲೋಪರಿಯನ್ನು ವಿಚಾರಿಸಿದ್ದರು.

ವೈದ್ಯಕೀಯ ಕ್ಷೇತ್ರದ ಸೇವೆಗಾಗಿ 1969ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದ ಅವರು,1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರ್‌ ಆಫ್‌ ಸೈನ್ಸ್ ಪದವಿಗೆ ಭಾಜನರಾಗಿದ್ದರು. ವೈದ್ಯಕೀಯ ಕ್ಷೇತ್ರದ ಸೇವೆಗಾಗಿಯೇ 1989ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದರು. 75,000 ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. 25ಸಾವಿರ ಶಸ್ತ್ರಚಿಕಿತ್ಸೆ ನಡೆಸಿ, ರೋಗಿಗಳ ಪಾಲಿಗೆ ಪವಾಡ ಚಿಕಿತ್ಸಕರೆನಿಸಿದ್ದರು.

ಅಂತ್ಯಕ್ರಿಯೆಯು ಸ್ವಗ್ರಾಮ ಅಂಗಡಿಗೇರಿ ಸಮೀಪದ ಕೌಲಗಿಯಲ್ಲಿನ ಅವರ ತೋಟದಲ್ಲಿ ಭಾನುವಾರ ನೆರವೇರಲಿದೆ.‌ ಮೊಬೈಲ್ ಸಂಖ್ಯೆ: ಡಾ.ಬಿ.ಆರ್‌.ಪಾಟೀಲ 94481 22258

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !