ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯ ನಿರ್ಣಯದ ದಿನ ಬಂದೇ ಬರುತ್ತದೆ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ಟೀಕೆ

Last Updated 19 ಜುಲೈ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಯ ನಿರ್ಣಯದ ಆ ದಿನ ಬಂದೇ ಬರುತ್ತದೆ. ಅಂದು ನಮ್ಮ ನಡವಳಿಕೆ, ಕಾಯಕಗಳಿಗೆ ನಾವೇ ಉತ್ತರಿಸಬೇಕು. ಆ ಮಹತ್ವದ ದಿನ ನಮ್ಮ ಪರವಾಗಿ ವಾದಿಸಲು ವಕೀಲರೂ ಇರುವುದಿಲ್ಲ. ಬಂಧುಗಳು, ಅಭಿಮಾನಿಗಳು ಇರುವುದಿಲ್ಲ’.

ಬೈಬಲ್‌ನ ‘ಜಡ್ಜ್‌ಮೆಂಟ್‌ ಡೇ’ ಕುರಿತ ಪುಸ್ತಕವೊಂದರ ಸಾಲುಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಆ ಪಕ್ಷದ ನಾಯಕರನ್ನು ಚುಚ್ಚಿದ ಬಗೆ ಇದು.

ವಿಧಾನಸಭೆಯಲ್ಲಿ ಶುಕ್ರವಾರ ವಿಶ್ವಾಸಮತ ನಿರ್ಣಯದ ಮೇಲೆ ಚರ್ಚೆ ಆರಂಭಿಸಿದ ಅವರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸುಮಾರು ಒಂದೂವರೆ ಗಂಟೆ ವಾಗ್ದಾಳಿ ನಡೆಸಿದರೂ ಬಿಜೆಪಿ ಸದಸ್ಯರು ಚಕಾರ ಎತ್ತಲಿಲ್ಲ.

‘ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುವಾಗ ನನಗೆ ಅನಿಸಿದ್ದು ಒಂದೇ. ನಾವು ಏನೇ ಮಾಡಿದರೂ, ಹೇಗೆ ನಡೆದುಕೊಂಡರೂ ಅಂತಿಮವಾಗಿ ಒಬ್ಬನಿಗೆ ಉತ್ತರ ಹೇಳಬೇಕು’ ಎಂದು ಕುಮಾರಸ್ವಾಮಿ ಹೇಳಿದರು.

‘ಧರಂ ಸಿಂಗ್‌ ಅವರ ಬೆನ್ನಿಗೆ ಚೂರಿ ಹಾಕಿದ್ದೆ. ಅವರ ಸಾವಿಗೆ ನಾನೇ ಕಾರಣ ಎಂದು ಯಡಿಯೂರಪ್ಪ ಅವರು ಈ ಹಿಂದೆ ಆರೋಪ ಮಾಡಿದ್ದರು. ಸಿಂಗ್‌ ಅವರು ತಂದೆ ಸಮಾನರು. ಅವರ ಸಾವಿಗೆ ನಾನು ಕಾರಣ ಅಲ್ಲ’ ಎಂದೂ ಅವರು ತಿರುಗೇಟು ನೀಡಿದರು.

‘ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ಮೊದಲ ದಿನದಿಂದಲೇ ಅತಂತ್ರಗೊಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯಿತು. ಸರ್ಕಾರ ಇವತ್ತು ಪತನಗೊಳ್ಳಲಿದೆ, ನಾಳೆ ಪತನಗೊಳ್ಳಲಿದೆ ಎಂದು ಸುದ್ದಿ ಹಬ್ಬಿಸಲಾಯಿತು. ಈ ಸರ್ಕಾರ ಈಗ ಅಂತಿಮ ಹಂತಕ್ಕೆ ತಲುಪಿದೆ. ನಾನು ಅಧಿಕಾರಕ್ಕೆ ಅಂಟಿ ಕುಳಿತವನು ಅಲ್ಲ. ಬಿಜೆಪಿಯವರು ಅಧಿಕಾರದ ಚುಕ್ಕಾಣಿ ಹಿಡಿಯುವ ಆತುರದಲ್ಲಿದ್ದಾರೆ. ನಮಗೆ ಬಿಟ್ಟ ಬಾಣ ಮುಂದಿನ ದಿನಗಳಲ್ಲಿ ಅವರಿಗೇ ತಿರುಗಿ ನಾಟಲಿದೆ’ ಎಂದು ಅವರು ಹೇಳಿದರು.

‘2008ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. ಬಿಜೆಪಿಯವರು ಯಾಮಾರಿಸಿದ್ದಾರೆ ಎಂದು ಆರೋಪಿಸಿ ಆರು ಪಕ್ಷೇತರ ಶಾಸಕರು ನನ್ನ ಬಳಿಗೆ ಬಂದರು. ನಾನು ಇಂತಹ ಚಟುವಟಿಕೆಗೆ ಬರುವುದಿಲ್ಲ ಎಂದೆ. ಬಳಿಕ ಬಿಜೆಪಿಯ ಸಚಿವರು ಹಾಗೂ ಶಾಸಕರು ರೆಸಾರ್ಟ್‌ಗೆ ಹೋದರು. ಆ ಶಾಸಕರು ನನ್ನನ್ನು ಬಳಸಿಕೊಂಡರು. ಆಗ ಸರ್ಕಾರವನ್ನು ಅತಂತ್ರಗೊಳಿಸಲು ಯತ್ನಿಸಿದ ಎಂ.ಪಿ.ರೇಣುಕಾಚಾರ್ಯ ಅವರು ಈಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ನಾಯಕತ್ವ ವಹಿಸಿಕೊಂಡಿದ್ದಾರೆ. ಬಾಗಿಲು ಕಾಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಛೇಡಿಸಿದರು.

‘ಅತೃಪ್ತ ಶಾಸಕರನ್ನು ಒಲಿಸಿಕೊಳ್ಳಲು ಯಡಿಯೂರಪ್ಪ ಅವರು, ತಪ್ಪಾಗಿದೆ, ತಿದ್ದಿಕೊಳ್ಳುವೆ ಎಂದರು. ನಾನು ಆ ರೀತಿ ಅಂಗಲಾಚುವುದಿಲ್ಲ. ಅಧಿಕಾರ ಶಾಶ್ವತ ಅಲ್ಲ. ನನಗೆ ಯಾವ ಆತಂಕವೂ ಇಲ್ಲ. ನಾನು ಸಾಂದರ್ಭಿಕ ಶಿಶು ಅಷ್ಟೇ. ದೇವರ ಆಶೀರ್ವಾದ ಇರುವವರೆಗೆ ಈ ಸರ್ಕಾರ ಇರುತ್ತದೆ’ ಎಂದು ತಿಳಿಸಿದರು.

‘ಆಟೊದಂತೆ ವಿಶೇಷ ವಿಮಾನ ಓಡುತ್ತದೆ’
*ನಮ್ಮ ಶಾಸಕರನ್ನು ಕೂಡಿ ಹಾಕಲು ಬಿಜೆಪಿಯವರು ಮುಂಬೈಯಲ್ಲಿ ಶಾಶ್ವತವಾಗಿ ಹೋಟೆಲ್‌ ಒಂದನ್ನು ಇಟ್ಟುಕೊಂಡಿದ್ದಾರೆ.

ಶಾಸಕರ ನೋಡಿಕೊಳ್ಳಲು ಯಾರೋ ಲಾಡ್ ಎಂಬುವರನ್ನು ಇಟ್ಟಿದ್ದಾರೆ. ಶಾಸಕರ ಕಾಯಲು ಬೌನ್ಸರ್‌ಗಳನ್ನು ಇಟ್ಟಿದ್ದಾರೆ. ಈ ಚಟುವಟಿಕೆಗಳನ್ನು ಎಷ್ಟು ದಿನ ನಡೆಸುತ್ತೀರಿ. ಶಾಸಕರು ಶಾಶ್ವತವಾಗಿ ಅಲ್ಲೇ ಇರಲು ಸಾಧ್ಯವಿಲ್ಲ ಅಲ್ಲವೇ. ಅವರು ಇಲ್ಲಿಗೆ ಬರಲೇಬೇಕಲ್ಲ.

*ನಮ್ಮ ಶಾಸಕರನ್ನು ಮುಂಬೈ, ಪುಣೆಗೆ ಕರೆದುಕೊಂಡು ಹೋಗಲು ಬಿಜೆಪಿಯವರು ವಿಶೇಷ ವಿಮಾನ ಇಟ್ಟುಕೊಂಡಿದ್ದಾರೆ. ನಗರದಲ್ಲಿ ಆಟೊ ಸಂಚಾರ ಮಾಡಿದಂತೆ ಆ ವಿಮಾನ ಬೆಂಗಳೂರಿನಿಂದ ಮುಂಬೈಗೆ ಓಡಾಡುತ್ತದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT