ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಚ್ಯುತಿ ಮಂಡನೆಗೆ ಜಟಾಪಟಿ: ಎರಡನೇ ದಿನವೂ ಕಲಾಪ ಬಲಿ

ಡಾ.ಕೆ.ಸುಧಾಕರ್– ಕೆ.ಆರ್.ರಮೇಶ್‌ ಕುಮಾರ್ ನಡುವಿನ ಬೈಗುಳ ವಿಚಾರ
Last Updated 11 ಮಾರ್ಚ್ 2020, 19:34 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಕಾಂಗ್ರೆಸ್‌ನ ಕೆ.ಆರ್.ರಮೇಶ್‌ ಕುಮಾರ್ ನಡುವಿನ ಕೀಳುಮಟ್ಟದ ಬೈಗುಳ ವಿಚಾರ ವಿಧಾನಸಭೆಯಲ್ಲಿ ಬುಧವಾರವೂ ಪ್ರತಿಧ್ವನಿಸಿ ಇಡೀ ದಿನದ ಕಲಾಪ ಬಲಿಯಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಇಬ್ಬರು ಸದಸ್ಯರ ಹಕ್ಕುಚ್ಯುತಿ ವಿಚಾರವು ನನಗೆ ತಲುಪಿದೆ. ‍ಪ್ರಶ್ನೋತ್ತರ ಅವಧಿಯ ನಂತರ ಹಕ್ಕುಚ್ಯುತಿಯ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ’ ಎಂದರು. ಆಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ‘ರಮೇಶ್‌ ಕುಮಾರ್ ಕೀಳು ಪದ ಬಳಕೆ ಮಾಡಿದ್ದಾರೆ. ಅವರನ್ನು ಸಸ್ಪೆಂಡ್‌ ಮಾಡಬೇಕು’ ಎಂದು ಆಗ್ರಹಿಸಿದರು. ಸಚಿವರು ಹಾಗೂ ಬಿಜೆಪಿ ಸದಸ್ಯರು ಎದ್ದು ನಿಂತು ಜೋರಾಗಿ ಘೋಷಣೆ ಕೂಗಿದರು. ಪ್ರತಿಯಾಗಿ ಕಾಂಗ್ರೆಸ್‌ ಸದಸ್ಯರು ಘೋಷಣೆ ಕೂಗಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಹಕ್ಕುಚ್ಯುತಿಯ ಮೊದಲು ನೋಟಿಸ್‌ ನೀಡಿದ್ದು ನಾನು. ನನಗೆ ಮೊದಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು. ಆಗ ಸದನದಲ್ಲಿ ಕೆ.ಆರ್.ರಮೇಶ್‌ ಕುಮಾರ್ ಇರಲಿಲ್ಲ. ‘ರಮೇಶ್ ಕುಮಾರ್‌ ಪಲಾಯನವಾದಿ’ ಎಂದು ಬಿಜೆಪಿ ಸದಸ್ಯರು ಛೇಡಿಸಿದರು. ‘ಸಚಿವರೆಲ್ಲ ನಿಂತು ಗಲಾಟೆ ಮಾಡುತ್ತಿದ್ದಾರೆ. ಇವರು ಸರ್ಕಾರ ನಡೆಸುವವರಾ. ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆಯಾ’ ಎಂದು ‍ಪ್ರಶ್ನಿಸಿದರು. ‘ಇಂತಹ ಪರಿಸ್ಥಿತಿಯಲ್ಲಿ ಸದನ ನಡೆಸಲು ಸಾಧ್ಯವಿಲ್ಲ’ ಎಂದು ಹೇಳಿ ಕಾಗೇರಿ ಅವರು ಕಲಾ‍ಪವನ್ನು 15 ನಿಮಿಷ ಮುಂದೂಡಿದರು.

ಮಧ್ಯಾಹ್ನ 12.50ಕ್ಕೆ ಕಲಾಪ ಮತ್ತೆ ಆರಂಭವಾಯಿತು. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಲು ಆರಂಭಿಸಿದರು. ಅದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ‘ಮೊದಲು ಅರ್ಜಿ ಕೊಟ್ಟಿದ್ದು ನಾನು. ಮೊದಲು ನನಗೆ ಮಾತನಾಡಲು ಅವಕಾಶ ನೀಡಬೇಕಿತ್ತು. ಆಡಳಿತ ಪಕ್ಷದ ಸದಸ್ಯರು ಮನಸ್ಸಿಗೆ ಬಂದಂತೆ ಎದ್ದು ನಿಂತು ಮಾತನಾಡುವುದು ಸರಿಯಲ್ಲ’ ಎಂದರು. ಕಾಗೇರಿ ಸಮರ್ಥಿಸಿಕೊಳ್ಳಲು ಮುಂದಾದರು. ಸಿದ್ದರಾಮಯ್ಯ, ‘ಬಿಜೆಪಿಯವರಿಗೆ ಸದನ ನಡೆಸಲು ಮನಸ್ಸಿಲ್ಲ. ಬಜೆಟ್‌ ಮೇಲಿನ ಚರ್ಚೆ ನಡೆಯುವುದು ಅವರಿಗೆ ಬೇಕಿಲ್ಲ. ಅದಕ್ಕಾಗಿ ಗಲಾಟೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು. ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತಲೇ ಇದ್ದರು. ಕಾಂಗ್ರೆಸ್ ಸದಸ್ಯರು ಸಹ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಲಾಪವನ್ನು ಮಧ್ಯಾಹ್ನ 3ಕ್ಕೆ ಸಭಾಧ್ಯಕ್ಷರು ಮುಂದೂಡಿದರು.

ಮಧ್ಯಾಹ್ನ ಕಲಾಪ ಸೇರಿದಾಗ ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಅವಕಾಶ ನೀಡುತ್ತೇನೆ’ ಎಂದು ಸಭಾಧ್ಯಕ್ಷ ಕಾಗೇರಿ ಹೇಳಿದರು. ಸಚಿವ ಸುಧಾಕರ್‌ ಮತ್ತು ಬಿಜೆಪಿ ಸದಸ್ಯರು ಇದನ್ನು ಆಕ್ಷೇಪಿಸಿದರು.

‘ನನ್ನ ಭಾಷಣವೇ ಪೂರ್ಣಗೊಳಿಸಿಲ್ಲ. ಮೊದಲು ಭಾಷಣ ಪೂರ್ಣಗೊಳಿಸಲು ಅವಕಾಶ ನೀಡಿ. ಆ ಮೇಲೆ ಬೇಕಿದ್ದರೆ ಅವರು ಹಕ್ಕುಚ್ಯುತಿ ಮಂಡಿಸಲಿ. ನಾವು ಕೂಡ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ಎರಡು ನೋಟಿಸ್‌ಗಳನ್ನು ನೀಡಿದ್ದೇವೆ’ ಎಂದು ಸುಧಾಕರ್‌ ಹೇಳಿದರು.

ಅಗ ಮಧ್ಯಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ,‘ ಸುಧಾಕರ್‌ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದರಿಂದಲೇ ಗಲಾಟೆ ಆಗಿ ಕಲಾಪ ಮುಂದೂಡಿಕೆ ಆಯಿತು. ಮೊದಲು ಭಾಷಣ ಪೂರ್ಣಗೊಳಿಸಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು. ಬಿಜೆಪಿ ಸದಸ್ಯರು ಒಕ್ಕೊರಲಿನಿಂದ ಭಾಷಣಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಕಲಾಪವನ್ನು ನಿಯಂತ್ರಣಕ್ಕೆ ತರಲಾಗದೇ ಮುಂದೂಡಿದರು. ಮತ್ತೆ ಕಲಾಪ ಸೇರಿದಾಗ ಉಭಯ ಪಕ್ಷಗಳ ಸದಸ್ಯರು ತಮ್ಮ ನಿಲುವಿಗೇ ಅಂಟಿಕೊಂಡವು. ಇದರಿಂದ ಪೇಚಿಗೆ ಸಿಲುಕಿದ ಸಭಾಧ್ಯಕ್ಷ ಕಾಗೇರಿ, ‘ಚಿಕ್ಕವರಾದ ಸುಧಾಕರ್‌ ಅವರಿಗೆ ಭಾಷಣ ಪೂರ್ಣಗೊಳಿಸಲು ಅವಕಾಶ ನೀಡಿ’ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಆದರೆ ಅವರು ಒಪ್ಪಕೊಳ್ಳಲಿಲ್ಲ. ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.

*
ರಮೇಶ್‌ ಕುಮಾರ್‌ ಅವರ ಮಾತುಗಳಿಂದ ಇಡೀ ಸದನದ ಸದಸ್ಯರ ಗೌರವ ಹೋಗಿದೆ. ವಾಕ್‌ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವ ಯತ್ನ ಆಗಿದೆ.
-ಡಾ.ಕೆ.ಸುಧಾಕರ್‌, ವೈದ್ಯ ಶಿಕ್ಷಣ ಸಚಿವ

*
ಬಿಜೆಪಿಯವರು ಸಭಾಧ್ಯಕ್ಷರ ಮಾತಿಗೆ ಬೆಲೆ ಕೊಡುತ್ತಿಲ್ಲ. ಪೀಠಕ್ಕೆ ಗೌರವ ಕೊಡುತ್ತಿಲ್ಲ. ಇಡೀ ರಾಜ್ಯದ ಜನತೆಗೆ ಇವರ ಯೋಗ್ಯತೆ ಗೊತ್ತಾಗಿದೆ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT