ಸೋಮವಾರ, ಜೂನ್ 27, 2022
28 °C
ಅಭ್ಯರ್ಥಿಗಳಿಂದ ಕೊನೆ ಗಳಿಗೆ ಕಸರತ್ತು

ಬಹಿರಂಗಕ್ಕೆ ತೆರೆ, ಓಲೈಕೆ ಖರೆ: 15 ಕ್ಷೇತ್ರಗಳ ಮತದಾನಕ್ಕೆ ಕ್ಷಣಗಣನೆ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಭವಿಷ್ಯ ನಿರ್ಧರಿಸುವ 15 ಕ್ಷೇತ್ರಗಳ ಉಪಚುನಾ ವಣೆಯ ಬಹಿರಂಗ ಪ್ರಚಾರ ತೆರೆ ಕಂಡಿದ್ದು, ಮತದಾರರನ್ನು ಓಲೈಸುವ ಕೊನೆಗಳಿಗೆ ‘ಕಸರತ್ತು’ಗಳನ್ನು ಅಭ್ಯರ್ಥಿಗಳು ಆರಂಭಿಸಿದ್ದಾರೆ.

ಚುನಾವಣಾ ಆಯೋಗದ ಕಣ್ಗಾವಲು ತಪ್ಪಿಸಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಹಾಗಿದ್ದರೂ ಜಯಿಸ ಲೇಬೇಕೆಂದು ಪಣತೊಟ್ಟಿರುವ ಅಭ್ಯರ್ಥಿ ಗಳು ಅಂತಿಮ ಹಂತದಲ್ಲಿ ‘ಓಲೈಕೆ’ಗೆ ಬೇಕಾದ ಸಿದ್ಧತೆ ಮಾಡಿಕೊಂಡಿರುವ ಮಾತುಗಳು ರಾಜಕೀಯ ವಲಯ ದಿಂದಲೇ ಕೇಳಿಬರುತ್ತಿವೆ. ಮತದಾರ ರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಚಿನ್ನದುಂಗುರ, ಬೆಳ್ಳಿ ಬಟ್ಟಲು, ಮತಚೀಟಿಯ ಜತೆ ₹500 ನೋಟು ನೀಡುವ ತಂತ್ರಗಾರಿಕೆಯನ್ನು ಅಭ್ಯರ್ಥಿ ಗಳು ಪ್ರಯೋಗಿಸುತ್ತಿದ್ದಾರೆ.

ಕ್ಷೇತ್ರವ್ಯಾಪ್ತಿಯ ನಿರ್ಣಾಯಕ ಮತದಾರರ ಜಾತಿ ಲೆಕ್ಕಾಚಾರದ ಮೇಲೆ ಆಯಾ ಮಠಾಧೀಶರೂ ಸೇರಿಕೊಂಡಂತೆ ಸಮುದಾಯಗಳ ನಾಯಕರನ್ನು ಸೆಳೆದು ಗೆಲುವನ್ನು ಭದ್ರ ಮಾಡಿಕೊಳ್ಳುವ ಯತ್ನವನ್ನೂ ನಡೆಸಿದ್ದಾರೆ. 

ಅಳಿವು ಉಳಿವಿನ ಪ್ರಶ್ನೆ: 17 ಶಾಸಕರು ರಾಜೀನಾಮೆ ಕೊಟ್ಟ ರಾಜಕೀಯ ಬೆಳವಣಿಗೆಯಿಂದಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯಕ್ಕೆ ಸಿಲುಕಿದ ಬಿಜೆಪಿ ನಾಯಕರು ಈ ಚುನಾವಣೆಯಲ್ಲಿ ಭಿನ್ನ ಭೇದಗಳನ್ನು ಬದಿಗೊತ್ತಿ ಒಗ್ಗಟ್ಟು ಮೆರೆದರು.

15 ನೇ ವಿಧಾನಸಭೆ ಅವಧಿಯಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿರುವ ಯಡಿಯೂರಪ್ಪ, ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅನಿವಾರ್ಯಕ್ಕೆ ಕಟ್ಟು ಬಿದ್ದಿದ್ದಾರೆ.

‌ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಕನಿಷ್ಠ 7 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾಗಿರುವುದರಿಂದಾಗಿ ಯಡಿಯೂರಪ್ಪ ಅವರು ಎಲ್ಲ ಕ್ಷೇತ್ರಗಳಲ್ಲಿ ತಲಾ ಎರಡು ಬಾರಿ ಸುತ್ತಾಟ ನಡೆಸಿ, ಮತಯಾಚನೆ ಮಾಡಿದರು. ಅದೃಷ್ಟವೆಂಬಂತೆ ಸಿಕ್ಕಿದ ಸಚಿವ ಸ್ಥಾನ ಉಳಿಸಿಕೊಳ್ಳಲು ಮುಂದಾದ ಮೂವರು ಉಪಮುಖ್ಯಮಂತ್ರಿಗಳು, ಎಲ್ಲ ಸಚಿವರೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರಗಳಲ್ಲಿ ಓಡಾಡಿ ಪ್ರಚಾರ ನಡೆಸಿದರು. 

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಹಾಗೂ ಬಳ್ಳಾರಿಯ ವಿಜಯನಗರದಲ್ಲಿ ಕವಿರಾಜ ಅರಸ್‌ ಬಂಡಾಯ ಎದ್ದು ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದು, ಉಳಿದ ಕಡೆ ಬಹಿರಂಗ ಬಂಡಾಯವನ್ನು ಶಮನಗೊಳಿಸಲು ನಾಯಕರು ಮೇಲ್ನೋಟಕ್ಕೆ ಯಶಸ್ವಿಯಾಗಿದ್ದಾರೆ. ಗೋಕಾಕದಲ್ಲಿ ಬಂಡಾಯ ಎದ್ದಿದ್ದ ಅಶೋಕ್ ಪೂಜಾರಿ ಜೆಡಿಎಸ್‌ ಅಭ್ಯರ್ಥಿಯಾಗಿ ಸವಾಲು ಒಡ್ಡಿದ್ದಾರೆ. ಬಂಡಾಯ–ಭಿನ್ನಮತವನ್ನು ಶಮನ ಮಾಡಿದ್ದೇವೆ, ಗೆಲುವು ಸಲೀಸು ಎಂಬ ಭಾವನೆ ಬಿಜೆಪಿಯವರಲ್ಲಿದೆ. ಆದರೆ, ಫಲಿತಾಂಶ ಬಂದ ಬಳಿಕವಷ್ಟೇ ಪಕ್ಷದ ನಾಯಕರು–ಕಾರ್ಯಕರ್ತರ ಒಳಮರ್ಮ ಬಹಿರಂಗವಾಗಲಿದೆ.

ಸೋಲಿಸುವ ಸವಾಲು: ಪಕ್ಷಕ್ಕೆ ಕೈಕೊಟ್ಟು ಸರ್ಕಾರ ಉಳಿಸಲು ಕಾರಣರಾಗಿ ಅನರ್ಹಗೊಂಡಿರುವ ಶಾಸಕರನ್ನು ಸೋಲಿಸುವುದನ್ನೇ ಕಾಂಗ್ರೆಸ್–ಜೆಡಿಎಸ್ ನಾಯಕರು ಸವಾಲಾಗಿ ಸ್ವೀಕರಿಸಿದ್ದಾರೆ.

ತಮ್ಮ ಅಭ್ಯರ್ಥಿ ಗೆಲ್ಲಿಸುವುದಕ್ಕಿಂತ ‘ದ್ರೋಹ’ ಎಸಗಿದವರನ್ನು ಮಟ್ಟ ಹಾಕುವುದೇ ಗುರಿ ಎಂಬಂತೆ ಪ್ರಚಾರದುದ್ದಕ್ಕೂ ಈ ಎರಡೂ ಪಕ್ಷಗಳ ನಾಯಕರು ನಡೆದುಕೊಂಡರು. 

ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಒಂಟಿ ಸಲಗದಂತೆ ಪ್ರಚಾರದ ಮುಂಚೂಣಿ ಯಲ್ಲಿ ನಿಂತು, 15 ದಿನಗಳಿಂದ ಸುದ್ದಿಯ ಅಗ್ರಸ್ಥಾನದಲ್ಲೇ ಇದ್ದರು. ಡಿ.ಕೆ. ಶಿವಕುಮಾರ್, ದಿನೇಶ್‌ ಗುಂಡೂರಾವ್, ಜಿ. ಪರಮೇಶ್ವರ, ಈಶ್ವರ ಖಂಡ್ರೆ ಅವರಿಗೆ ಸಾಥ್‌ ನೀಡಿದರು. ಮಹಾರಾಷ್ಟ್ರ ಚುನಾವಣೆ ಉಸ್ತುವಾರಿ ಹೊತ್ತಿದ್ದ ಮಲ್ಲಿಕಾರ್ಜುನ ಖರ್ಗೆ, ಅಲ್ಲಿ ‘ಮೈತ್ರಿ’ ಸರ್ಕಾರ ರಚಿಸಿದ ಬಳಿಕವೇ ಕರ್ನಾಟಕದ ರಾಜಕಾರಣಕ್ಕೆ ಧುಮುಕಿ, ಕೊನೆಗಳಿಗೆಯಲ್ಲಿ ಪ್ರಚಾರಕ್ಕೆ ಹುರುಪು ತಂದರು.

ಅಭಿವೃದ್ಧಿ ಜತೆ ಜಾತಿ ದಾಳ

ಸರ್ಕಾರ ಉಳಿಸಿಕೊಳ್ಳುವ ಉದ್ದೇಶದಿಂದ ತನ್ನ ಬತ್ತಳಿಕೆಯಲ್ಲಿದ್ದ ಎಲ್ಲ ‘ರಣತಂತ್ರ’ಗಳ ಅಸ್ತ್ರಗಳನ್ನೂ ಬಿಜೆಪಿ ಬಳಸಿದೆ. ಜಾತಿ ಅಸ್ತ್ರ ಪ್ರಯೋಗಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೀರಶೈವ ಲಿಂಗಾಯತರು ಬಿಜೆಪಿ ಅಭ್ಯರ್ಥಿಗಳಿಗೇ ತಪ್ಪದೇ ಮತ ಹಾಕಬೇಕು ಎಂದು ಹೇಳಿದರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ  ಅನ್ಯ ಅಭ್ಯರ್ಥಿಗಳಿಗೆ ಲಿಂಗಾಯತರು ಮತ ಹಾಕಿದರೆ ಯಡಿಯೂರಪ್ಪ ಅವರ ಕೆನ್ನೆಗೆ ಹೊಡೆದಂತೆ ಎಂಬ ದಾಳ ಉರುಳಿಸಿದ್ದಾರೆ.

ಅನರ್ಹರ ಸೋಲಿಸುವುದೇ ಗುರಿ

ಅನರ್ಹ ಶಾಸಕರನ್ನು ಸೋಲಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಪಣ ತೊಟ್ಟು ಅಖಾಡಕ್ಕೆ ಇಳಿದರು. ಇದಕ್ಕೆ ಪೂರಕವಾಗಿ ರಣತಂತ್ರ ಹೆಣೆದು ಪ್ರಚಾರ ನಡೆಸಿದ ಉಭಯ ಪಕ್ಷಗಳ ನಾಯಕರು ಅನರ್ಹ ಶಾಸಕರನ್ನು ವೈಯಕ್ತಿಕ ಟೀಕೆಗೆ ಗುರಿ ಮಾಡಿದರು. ‘ರಾಜ್ಯ ಪ್ರವಾಹ ಪೀಡಿತವಾಗಿ ಜನ ಬೀದಿಯಲ್ಲಿ ಬಿದ್ದಿದ್ದರೂ ಅನರ್ಹ ಶಾಸಕರಿಗೆ ಜನರ ಕಾಳಜಿ ಮುಖ್ಯವಾಗಲಿಲ್ಲ. ಅವರಿಗೆ ಜನರ ಅಥವಾ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ. ಇವರಿಗೆ ಮತ ಹಾಕಬೇಡಿ, ತಿರಸ್ಕರಿಸಿ ಎಂದು ಕರೆ ನೀಡಿದರು. ಇದರಿಂದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತದಾರರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು.

ಮತ್ತೆ ಮೈತ್ರಿ ಸರ್ಕಾರದ ಜಪ

ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿ ಸಖ್ಯ ತೊರೆದು ಎನ್‌ಸಿಪಿ, ಕಾಂಗ್ರೆಸ್‌ ಜತೆ ಸೇರಿ ಸರ್ಕಾರ ರಚಿಸಿದ ಬೆನ್ನಲ್ಲೇ, ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಪುನಃ ಮೈತ್ರಿ ಸರ್ಕಾರ ರಚಿಸುವ ದಾಳ ಉರುಳಿಸಿದ್ದಾರೆ. ಸಿದ್ದರಾಮಯ್ಯ ಅವರು ತಾವೇ ಮುಖ್ಯಮಂತ್ರಿ ಆಗುವುದಾಗಿ ಹೇಳಿಕೊಂಡಿದ್ದಾರೆ. ಸೋನಿಯಾಗಾಂಧಿ ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು ಎಂದು ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. ಡಿ.9 ರ ಬಳಿಕ ಸಿಹಿ ಸುದ್ದಿ ನೀಡುವುದಾಗಿ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿಪಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು