ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಮತಹಾಕಿದ ಫೋಟೊ ತೆಗೆದು ಸಿಕ್ಕಿಬಿದ್ದವರು

Last Updated 5 ಡಿಸೆಂಬರ್ 2019, 8:59 IST
ಅಕ್ಷರ ಗಾತ್ರ

ಬೆಂಗಳೂರು: ಯಾರಿಗೆ ಮತಹಾಕಿದ್ದೇವೆ ಎನ್ನುವ ಸಾಕ್ಷಿಯನ್ನು ತೋರಿಸುವುದಕ್ಕಾಗಿ ಮತದಾನ ಮಾಡುವಾಗ ಫೋಟೊ ಕ್ಲಿಕ್ಕಿಸಿಕೊಳ್ಳುವ ಪ್ರವೃತ್ತಿ ಈ ಚುನಾವಣೆಯಲ್ಲೂ ಕಂಡುಬಂದಿದೆ.

ಬೆಂಗಳೂರು, ರಾಣೆಬೆನ್ನೂರು, ಶಿರಸಿ, ಮಂಡ್ಯ ಹಾಗೂ ವಿಜಯನಗರದಲ್ಲಿ ಈ ರೀತಿಯ ಘಟನೆಗಳು ನಡೆದಿದ್ದು, ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲಸೂರಿನ ಮತಗಟ್ಟೆಯೊಂದರಲ್ಲಿ ಮೊಬೈಲ್‌ನಲ್ಲಿ ಮತದಾನದ ಫೋಟೊ ತೆಗೆದ ಆರೋಪದ ಮೇಲೆ ಚಂದ್ರಶೇಖರ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಆರೋಪಿ ಮತಗಟ್ಟೆ ಪ್ರವೇಶಿಸುವ ಮುನ್ನ ಮೊಬೈಲ್ ತೆಗೆದುಕೊಂಡು ಹೋಗದಂತೆ ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿ ತಿಳಿಸಿದ್ದಾರೆ. ಮೊಬೈಲ್ ಇಲ್ಲವೆಂದು ಒಳಗೆ ಹೋಗಿದ್ದು, ಮತದಾನದ ಸಮಯದಲ್ಲಿ ಫೋಟೊ ತೆಗೆದಿದ್ದಾರೆ. ಇದನ್ನು ಗಮನಿಸಿದ ಸಿಬ್ಬಂದಿ ಪ್ರಶ್ನಿಸಿದ್ದಾರೆ.

‘ಯಾವ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂಬುದನ್ನು ತೋರಿಸುವ ಸಲುವಾಗಿ ಫೋಟೊ ತೆಗೆದಿದ್ದೇನೆ’ ಎಂದು ವಿವರಣೆ ನೀಡಿದ್ದಾರೆ. ಈ ವಿಚಾರವಾಗಿ ಆರೋಪಿ ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ನಂತರ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿ ಚಲಾಯಿಸಿರುವ ಮತವನ್ನು ಅಸಿಂಧುಗೊಳಿಸಲು ಚುನಾವಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತ ಮಂಜಯ್ಯ ಚಾವಡಿ ಎಂಬುವವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿರುವುದನ್ನು ಖಾತ್ರಿ ಪಡಿಸಲು ಮತದಾನ ಮಾಡುವ ವೇಳೆ ಫೋಟೊ ಕ್ಲಿಕ್ಕಿಸಿಕೊಂಡು ನೀತಿಸಂಹಿತೆ ಉಲ್ಲಂಘಿಸಿದ್ದಾನೆ. ಜೊತೆಗೆ ಆ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ‘ರಾವಣ ರಾಜ್ಯದಿಂದ ರಾಮ ರಾಜ್ಯದೆಡೆಗೆ ಬದಲಾವಣೆ’ ಎಂಬ ಶೀರ್ಷಿಕೆ ಅಡಿ ಪ್ರಕಟಿಸಿಕೊಂಡಿದ್ದಾರೆ.

ಯಲ್ಲಾಪುರದ ವ್ಯಕ್ತಿಯೊಬ್ಬರು ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಅವರಿಗೆ ಮತ ಹಾಕಿರುವ ಚಿತ್ರವೂ ಸಾಮಾಜಿಕ ಮಾಧ್ಯಮದಿಂದ ಬೆಳಕಿಗೆ ಬಂದಿದೆ. ಫೋಟೊ ತೆಗೆದುಕೊಂಡಿರುವ ಮತದಾರನ ಗುರುತು ಪತ್ತೆಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಸಿಇಒ ಎಂ. ರೋಷನ್ ತಿಳಿಸಿದ್ದಾರೆ.

ವಿಜಯನಗರ ಕ್ಷೇತ್ರದಲ್ಲೂ ಮತದಾರರೊಬ್ಬರು ಮತ ಹಾಕಿದ ನಂತರ ಅದರ ಛಾಯಾಚಿತ್ರ ತೆಗೆದುಕೊಂಡಿದ್ದಾರೆ. ಮಂಡ್ಯದಲ್ಲಿಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಗೆ ಮತ ಹಾಕಿದ ವಿವಿ ಪ್ಯಾಟ್ ಮತ ಖಾತ್ರಿ ಮಾಹಿತಿಯನ್ನು ಮತದಾರರೊಬ್ಬರು ಫೋಟೊ ತೆಗೆದುಕೊಂಡುಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT