ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆಗೆ ಪಟ್ಟು: ವಿಸ್ತರಣೆಗೆ ಕುತ್ತು

ರಾಜ್ಯ ಸಚಿವ ಸಂಪುಟ: ಗೊಂದಲ ನಿವಾರಣೆಯಾದರೆ ಹಸಿರು ನಿಶಾನೆ?
Last Updated 16 ಜನವರಿ 2020, 2:24 IST
ಅಕ್ಷರ ಗಾತ್ರ

ನವದೆಹಲಿ: ನೂತನ ಶಾಸಕರು ನಿರ್ದಿಷ್ಟ ಖಾತೆಗಾಗಿ ಪಟ್ಟು ಹಿಡಿದಿರುವುದೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ವಿಳಂಬಕ್ಕೆ ಕಾರಣವಾಗಿದ್ದು, ಈ ಗೊಂದಲ ನಿವಾರಣೆಯಾಗದ ಹೊರತು ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರುವ ಸಾಧ್ಯತೆ ಕಡಿಮೆ.

ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಂದು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದವರು ‘ನಿರ್ದಿಷ್ಟ ಖಾತೆ’ಯನ್ನೇ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈಗಾಗಲೇ ಕೆಲವರಿಗೆ ಹಂಚಿಕೆ ಮಾಡಿರುವ ಖಾತೆಗಳನ್ನು ಕಿತ್ತುಕೊಳ್ಳದೆ ವಿಧಿಯಿಲ್ಲ ಎನ್ನುವ ಸಂದಿಗ್ಧ ಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಇದ್ದಾರೆ. ಇದು ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಎಂದು ಹೈಕಮಾಂಡ್‌ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಸಂಪುಟಕ್ಕೆ ಹೊಸಬರನ್ನು ಸೇರ್ಪಡೆ ಯಿಂದ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಕೆಲವರು, ವರಿಷ್ಠರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ತಮ್ಮನ್ನು ಕೈಬಿಡಕೂಡದು ಎಂಬ ಮನವಿ ಸಲ್ಲಿಸಿದ್ದಾರೆ.

ಆಂತರಿಕವಾಗಿ ತಲೆದೋರಿರುವ ಈ ಗೊಂದಲ ನಿವಾರಣೆಯಾದ ಬಳಿಕವೇ ಸಂಪುಟಕ್ಕೆ ಸೇರ್ಪಡೆ ಆಗಲಿರುವವರ ಪಟ್ಟಿ ಸಿದ್ಧಪಡಿಸಿಕೊಂಡು ದೆಹಲಿಗೆ ಬರುವಂತೆ ವರಿಷ್ಠರು ಯಡಿಯೂರಪ್ಪ ಅವರಿಗೆ ತಾಕೀತು ಮಾಡಿದ್ದಾರೆ. ಆದರೆ, ಸಂಪುಟದಿಂದ ಕೆಲವರನ್ನು ಕೈಬಿಡದೆ, ಇನ್ನು ಕೆಲವರಿಂದ ಖಾತೆ ಕಿತ್ತುಕೊಳ್ಳದೆ ಗೊಂದಲ ನಿವಾರಣೆ ಅಸಾಧ್ಯ ಎಂಬ ಸ್ಥಿತಿ ಸೃಷ್ಟಿಯಾಗಿರುವುದು ಮುಖ್ಯಮಂತ್ರಿಗೆ ನುಂಗಲಾರದ ತುತ್ತಾಗಿದೆ.

‘ಜಲಸಂಪನ್ಮೂಲ, ಇಂಧನ, ಗೃಹ, ಸಮಾಜ ಕಲ್ಯಾಣ, ಲೋಕೋಪಯೋಗಿ, ಕೃಷಿ, ಸಾರಿಗೆ, ನಗರಾಭಿವೃದ್ಧಿ, ಗಣಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳಿಗೆ ಹೊಸಬರು ಪಟ್ಟು ಹಿಡಿದಿದ್ದಾರೆ. ಆದರೆ, ನಿರ್ದಿಷ್ಟ ಖಾತೆ ನೀಡುವುದಾಗಿ ಪಕ್ಷವು ಉಪ ಚುನಾವಣೆಗೆ ಮೊದಲು ಅವರಿಗೆ ಭರವಸೆ ನೀಡಿರಲಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ಸಂಪುಟದಿಂದ ಯಾರನ್ನೂ ಕೈಬಿಡದೆ, ಅವರಿಂದ ಯಾವುದೇ ಖಾತೆ ಕಿತ್ತುಕೊಳ್ಳದೆ ಹೊಸಬರ ಸೇರ್ಪಡೆಯಾಗಬೇಕು. ಖಾತೆ ಹಂಚಿಕೆ ನಂತರ ಹೊಸಬರಿಂದ ಗೊಂದಲ ಸೃಷ್ಟಿಯಾಗಬಾರದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೂಚಿಸಿದ್ದು, ಯಡಿಯೂರಪ್ಪ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನೂತನ ಶಾಸಕರು ಖಾತೆಗೆ ಹಿಡಿದ ಪಟ್ಟನ್ನು ಸಡಿಲಿಸಿದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT