‘ಕೈ’ಗೆ ಸಿಗದವರು ಬಿಜೆಪಿಗೆ?

7
ಮೂವರು ಶಾಸಕರು ಮುಂಬೈಗೆ: ಸಚಿವ ಡಿ.ಕೆ. ಶಿವಕುಮಾರ್‌

‘ಕೈ’ಗೆ ಸಿಗದವರು ಬಿಜೆಪಿಗೆ?

Published:
Updated:

ಬೆಂಗಳೂರು: ಸೂಕ್ತ ಸ್ಥಾನಮಾನ ಸಿಕ್ಕಿಲ್ಲವೆಂದು ಮುನಿಸಿಕೊಂಡಿರುವ ಕಾಂಗ್ರೆಸ್ಸಿನ ಅತೃಪ್ತ ಶಾಸಕರು ‘ಕೈ’ಗೆ ಸಿಗದಿರುವುದು, ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಹೆಣೆಯುತ್ತಿರುವ ಕಾರ್ಯತಂತ್ರದ ಭಾಗ ಎಂಬ ಸಂದೇಹ ರಾಜಕೀಯ ವಲಯದಲ್ಲಿ ಮೂಡತೊಡಗಿದೆ.

ಅದಕ್ಕೆ ಪೂರಕ ಎಂಬಂತೆ, ‘ಮೂರು ಜನ ಶಾಸಕರು ಮುಂಬೈಗೆ ಹೋಗಿದ್ದಾರೆ. ಅವರು ಯಾವ ಹೋಟೆಲ್‌ನಲ್ಲಿದ್ದಾರೆ ಎಂಬುದು ಗೊತ್ತು. ಆದರೆ, ಯಾರನ್ನು ಭೇಟಿ ಮಾಡಲು ಹೋಗಿದ್ದಾರೆಂದು ಗೊತ್ತಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಭಾನುವಾರ ಹೇಳಿರುವುದು ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ತೊರೆಯುವುದಿಲ್ಲ ಎಂದ ಗಣೇಶ ಹುಕ್ಕೇರಿ

‘ಆ ಮೂವರು ಯಾರು’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಶಿವಕುಮಾರ್‌, ‘ಅವರ ಬಗ್ಗೆ ಹೇಳಲು‌ ನನಗೆ ಇಷ್ಟವಿಲ್ಲ. ಅವರು ಬಿಜೆಪಿಯವರೋ ಕಾಂಗ್ರೆಸ್‌ನವರೋ ಎಂದು ಆ ಮೇಲೆ ಮಾತಾಡೋಣ’ ಎಂದಿದ್ದಾರೆ.

ಸಂಪುಟದಿಂದ ಕೈಬಿಟ್ಟ ಕಾರಣಕ್ಕೆ ಪಕ್ಷದ ವಿರುದ್ಧ ತಿರುಗಿಬಿದ್ದಿರುವ ರಮೇಶ ಜಾರಕಿಹೊಳಿ, ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ, ಅಥಣಿಯ ಮಹೇಶ್ ಕುಮಟಳ್ಳಿ ಅವರನ್ನು ಉದ್ದೇಶಿಸಿ ಶಿವಕುಮಾರ್ ಈ ಮಾತು ಹೇಳಿದ್ದಾರೆ ಎಂದೂ ಹೇಳಲಾಗಿದೆ.

ಪಕ್ಷದ ಶಾಸಕರಿಗೆ ಬಿಜೆಪಿ ಆಮಿಷ ಒಡ್ಡುತ್ತಿರುವುದನ್ನು ಖಚಿತಪಡಿಸಿ ರುವ ಶಿವಕುಮಾರ್‌, ‘ಆಮಿಷ ಒಡ್ಡಿದ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡಿರುವ ಶಾಸಕರು, ಮುಖ್ಯಮಂತ್ರಿ ಮತ್ತು ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಬಿಜೆಪಿಯವರ ಬಗ್ಗೆ ಸಹನಾಶೀಲರಾಗಿದ್ದಾರೆ. ನಾನಾಗುತ್ತಿದ್ದರೆ 24 ಗಂಟೆಗಳಲ್ಲಿ ಎಲ್ಲವನ್ನೂ ಬಯಲು ಮಾಡುತ್ತಿದ್ದೆ’ ಎಂದಿದ್ದಾರೆ.

ಷಾ ಭೇಟಿಗೆ ಯತ್ನ: ದೆಹಲಿಯಲ್ಲಿ ಬೀಡುಬಿಟ್ಟಿರುವ ಕೆಲವು ಅತೃಪ್ತ ಶಾಸಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ. ಬಿಜೆಪಿ ರಾಷ್ಟ್ರೀಯ ಪರಿಷತ್ ಸಭೆ ನಡೆಯತ್ತಿರುವುದರಿಂದ ಷಾ ಭೇಟಿ ಸಾಧ್ಯವಾಗಿಲ್ಲ ಎಂಬ ಮಾಹಿತಿ ಇದೆ.

ಪಕ್ಷದಿಂದ ದೂರ ಸರಿಯುತ್ತಿರುವ ಶಾಸಕರನ್ನು ಸಂಪರ್ಕಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಯತ್ನಿಸುತ್ತಿದ್ದಾರೆ. ಆದರೆ, ಯಾರೊಬ್ಬರು ದೂರವಾಣಿ ಕರೆ ಸ್ವೀಕರಿಸದಿರುವುದು, ಅತೃಪ್ತರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆಯೇ ಎಂಬ ಗುಮಾನಿಗೆ ಕಾರಣವಾಗಿದೆ.

ಮೈತ್ರಿ ಸರ್ಕಾರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು, ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ, ಕ್ಷೇತ್ರದಲ್ಲಿ ಯಾವುದೇ ಕೆಲಸ ಆಗದಿರುವುದು, ಅನುದಾನ ಬಿಡುಗಡೆಯಲ್ಲಿ ತಾರತಮ್ಯ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ವಿಷಯಗಳಲ್ಲಿ ಕಾಂಗ್ರೆಸ್‌ನ ಹಲವು ಶಾಸಕರು ಅತೃಪ್ತಿ ಹೊಂದಿದ್ದಾರೆ.‌

ಅತೃಪ್ತರನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿರುವ ಮಧ್ಯೆಯೇ ಸಂಕ್ರಾಂತಿ ನಂತರ ಸಮ್ಮಿಶ್ರ ಸರ್ಕಾರ ಪತನಗೊಳಿಸುವುದಾಗಿ ಬಿಜೆಪಿಯ ರಾಜ್ಯ ನಾಯಕರು ಹೇಳುತ್ತಿದ್ದಾರೆ. ಕೆಲವು ದಿನಗಳಿಂದ ಸದ್ದಿಲ್ಲದೆ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿ ನಾಯಕರ ಹೇಳಿಕೆಗಳಿಗೆ ಇಂಬು ಕೊಡುತ್ತಿವೆ. ಕಾಂಗ್ರೆಸ್‍ಗೆ ಕೈ ಕೊಡಲು ಮುಂದಾಗುವವರನ್ನು ಸೆಳೆಯಲು ಬಿಜೆಪಿ ಸಿದ್ಧವಾಗಿದೆ. ಜೊತೆಗೆ ಜೆಡಿಎಸ್ ಶಾಸಕರನ್ನು ಸೆಳೆಯುವ ಬಗ್ಗೆಯೂ ಬಿಜೆಪಿಯಲ್ಲಿ ಚರ್ಚೆ ನಡೆದಿದೆ. ಬರುವವರಿಗೆ ಸಂಪುಟದಲ್ಲಿ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಶ್ವಾಸನೆ ನೀಡುತ್ತಿರುವ ಬಗ್ಗೆಯೂ ವದಂತಿ ಹರಡಿದೆ.

‘ಕೈ’ ಕೊಡಲಿದ್ದಾರೆ ಜಾಧವ್‌?

ಸಚಿವ ಸ್ಥಾನ ಸಿಗದೆ ಬೇಸರಗೊಂಡಿರುವ ಕಲ್ಬುರ್ಗಿ ಜಿಲ್ಲೆ ಚಿಂಚೋಳಿಯ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ವದಂತಿ ಇದೆ. ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಕೊಟ್ಟರೂ ಜಾಧವ್‌ ಅಧಿಕಾರ ಸ್ವೀಕರಿಸದಿರುವುದು ಅವರು ಪಕ್ಷ ತ್ಯಜಿಸಲಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಏಳು ತಿಂಗಳಾದರೂ ಕ್ಷೇತ್ರದಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಆಪ್ತರ ಬಳಿ ಬೇಸರ ವ್ಯಕ್ತಪಡಿಸಿರುವ ಅವರು ಕೆಲವು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಜಾಧವ್‌ ಪ್ರಭಾವಿ ಲಂಬಾಣಿ ಸಮುದಾಯದ ಮುಖಂಡ. ಜಿಲ್ಲೆಯಲ್ಲಿ ಅವರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಅವರನ್ನು ಪಕ್ಷಕ್ಕೆ ಸೆಳೆದು ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಸಲು ಕಮಲ ನಾಯಕರು ಲೆಕ್ಕಾಚಾರ ಹಾಕಿದ್ದಾರೆ ಎಂಬ ಮಾಹಿತಿ ಇದೆ.

**

ಕೆಲವರು ವೈಯಕ್ತಿಕ ಕೆಲಸಗಳಿಗಾಗಿ ನವದೆಹಲಿಗೆ ಹೋಗುತ್ತಾರೆ. ಹಾಗೆಂದ ಮಾತ್ರಕ್ಕೆ ಬಿಜೆಪಿ ಸೇರ್ಪಡೆಗೆ ಹೋಗಿದ್ದಾರೆ ಎನ್ನುವುದು ಸರಿಯಲ್ಲ.

– ಸತೀಶ ಜಾರಕಿಹೊಳಿ, ಅರಣ್ಯ ಸಚಿವ

ಸರ್ಕಾರ ಪತನಗೊಳಿಸುವ ಉದ್ದೇಶದಿಂದ ಅತೃಪ್ತ ಶಾಸಕರ ಜೊತೆ ಬಿಜೆಪಿ ಸಂಪರ್ಕದಲ್ಲಿ ಇಲ್ಲ. ಅವರು ಯಾರೂ ದೆಹಲಿಗೆ ಬಂದಿಲ್ಲ.

– ಯಡಿಯೂರಪ್ಪ, ಬಿಜೆಪಿ ರಾಜ್ಯ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 20

  Happy
 • 3

  Amused
 • 3

  Sad
 • 2

  Frustrated
 • 2

  Angry

Comments:

0 comments

Write the first review for this !