ಸೋಮವಾರ, ಸೆಪ್ಟೆಂಬರ್ 23, 2019
28 °C
ಮನೆ ನಿರ್ಮಾಣಕ್ಕೆ ₹25 ಸಾವಿರ

ಮಳೆ, ಪ್ರವಾಹದಿಂದ ಆದ ನಷ್ಟ ₹38,451 ಕೋಟಿ, ಕೇಳಿದ್ದು 3,818 ಕೋಟಿ

Published:
Updated:

ಬೆಂಗಳೂರು: ಮಳೆ ಹಾಗೂ ಪ್ರವಾಹದಿಂದ ₹ 38,451.11 ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜು ಮಾಡಿದ್ದು, ಕೇಂದ್ರದಿಂದ ₹3,818 ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಿದೆ.

ಎಷ್ಟು ನಷ್ಟ ಉಂಟಾಗಿದೆ ಅಷ್ಟೂ ಪ್ರಮಾಣದ ಪರಿಹಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ ಈಗ ನಷ್ಟಕ್ಕಿಂತ ಕಡಿಮೆ ಹಣವನ್ನು ಪರಿಹಾರವಾಗಿ ನೀಡುವಂತೆ ಮನವಿ ಮಾಡಲಾಗಿದೆ.

‘ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ₹3,818 ಕೋಟಿ ಪರಿಹಾರ ಕೇಳಲಾಗಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ಪ್ರವಾಹ ಹಾಗೂ ಬರ ಪರಿಹಾರ ಕಾಮಗಾರಿ ಬಗ್ಗೆ ಬುಧವಾರ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಳೆ, ನೆರೆಯಿಂದ ಮನೆ ಕಳೆದುಕೊಂಡು ಹೊಸದಾಗಿ ಮನೆಗಳನ್ನು ನಿರ್ಮಿಸಿಕೊಳ್ಳಲು ಮುಂದಾಗುವ ಪ್ರತಿ ಕುಟುಂಬಕ್ಕೆ ತಕ್ಷಣ ₹25 ಸಾವಿರ ಬಿಡುಗಡೆ ಮಾಡಲು ಆದೇಶಿಸಲಾಗಿದೆ’ ಎಂದರು.

ಮನೆ ಕಳೆದುಕೊಂಡವರಿಗೆ ₹5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಸಂತ್ರಸ್ತರೇ ತಮ್ಮ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾದರೆ ತಕ್ಷಣಕ್ಕೆ ತಳಪಾಯ ಹಾಕಿಕೊಳ್ಳಲು ಹಣ ನೀಡಲಾಗುವುದು. ನಂತರ ಹಂತ ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಅವರು ವಿವರಿಸಿದರು.

ಅಗತ್ಯ ವಸ್ತುಗಳ ಖರೀದಿಗಾಗಿ ಸಂತ್ರಸ್ತ ಕುಟುಂಬಕ್ಕೆ ತಲಾ ₹10 ಸಾವಿರ ನೀಡುತ್ತಿದ್ದು, ಈವರೆಗೆ 2 ಲಕ್ಷ ಕುಟುಂಬಗಳಿಗೆ ಕೊಡಲಾಗಿದೆ. ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 1929 ಮಂದಿಗೆ ಪರಿಹಾರ ನೀಡುವುದನ್ನು ತಡೆಹಿಡಿಯಲಾಗಿದೆ. ತನಿಖೆ ನಡೆಸಿ, ಎರಡು ದಿನಗಳಲ್ಲಿ ಇತ್ಯರ್ಥಪಡಿಸುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮಕ್ಕೆ ಆದೇಶಿಸಲಾಗಿದೆ ಎಂದರು.

ಪ್ರವಾಹಪೀಡಿತ ಜಿಲ್ಲೆಗಳಿಗೆ ಕಂದಾಯ ಇಲಾಖೆಯಿಂದ ₹414 ಕೋಟಿ, ಲೋಕೋಪಯೋಗಿ ಇಲಾಖೆಯಿಂದ ₹500 ಕೋಟಿ ಸೇರಿದಂತೆ ₹914 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಇನ್ನೂ ₹380.44 ಕೋಟಿ ಹಣ ಇದೆ ಎಂದು ಹೇಳಿದರು.

ಮುಖ್ಯ ಕಾರ್ಯದರ್ಶಿ ಸಭೆ

ಸೆ. 13ರಂದು ಮುಖ್ಯ ಕಾರ್ಯದರ್ಶಿಯು ಎಲ್ಲ ಜಿಲ್ಲಾಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಲಿದ್ದು, ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರೆ. 

ನಷ್ಟದ ವಿವರ

* 8.88 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಬೆಳೆ ನಷ್ಟ.

* 247628 ಮನೆಗಳಿಗೆ ಹಾನಿ.

* 21,818 ಕಿ.ಮೀ ರಸ್ತೆಗೆ ಹಾನಿ (4,119 ಕಿ.ಮೀ ರಾಜ್ಯ ಹೆದ್ದಾರಿ, 14,921 ಕಿ.ಮೀ ಗ್ರಾಮೀಣ ರಸ್ತೆ, 2,778 ಕಿ.ಮೀ ನಗರ ರಸ್ತೆ).

* 1550 ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗೆಳಿಗೆ ಹಾನಿ.

* 10988 ಸರ್ಕಾರಿ ಕಟ್ಟಡಗಳು (ಅಂಗನವಾಡಿ, ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ) ಹಾನಿ.

* 26 ಪರಿಹಾರ ಕೇಂದ್ರಗಳಲ್ಲಿ 5153 ಮಂದಿಗೆ ಆಶ್ರಯ.

ಟ್ಯಾಂಕರ್ ನೀರು

ಮುಂಗಾರು ಆರಂಭವಾಗಿ ಮಧ್ಯ ಭಾಗಕ್ಕೆ ಕಾಲಿಟ್ಟಿದ್ದರೂ ಇನ್ನೂ 2305 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಪ್ರಸ್ತುತ 185 ಮೇವು ಬ್ಯಾಂಕ್‌, 174 ಗೋ ಶಾಲೆಗಳನ್ನು ತೆರೆಯಲಾಗಿದೆ ಎಂದು ಅಶೋಕ ತಿಳಿಸಿದರು.

 

Post Comments (+)