ಮಂಗಳವಾರ, ನವೆಂಬರ್ 19, 2019
22 °C

ಹೆದ್ದಾರಿಯನ್ನೇ ನುಂಗಿದ ಪ್ರವಾಹ

Published:
Updated:
Prajavani

ಈಚೆಗೆ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ ನದಿಗಳು ಉಕ್ಕಿ ಭಾರಿ ಪ್ರವಾಹವನ್ನು ತಂದೊಡ್ಡಿದ್ದವು. ಬಹಳಷ್ಟು ಕಡೆಗಳಲ್ಲಿ ರಸ್ತೆ, ಸೇತುವೆಗಳು ಕೊಚ್ಚಿಹೋಗಿ ಸಂಪರ್ಕವೇ ಸಂಕಟವಾಗಿದೆ. ಅವುಗಳ ಚಿತ್ರಣ ಇಲ್ಲಿದೆ.

                                                      **

ಬಾಗಲಕೋಟೆ: ನೆರೆ ಆರ್ಭಟಕ್ಕೆ ಕರ್ನಾಟಕ–ಮಹಾರಾಷ್ಟ್ರದೊಂದಿಗೆ ಸಂಪರ್ಕ ಕೊಂಡಿ ಎನಿಸಿದ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ, ಬಾದಾಮಿ ತಾಲ್ಲೂಕಿನ ಗೋವಿನಕೊಪ್ಪ–ಕೊಣ್ಣೂರು ಹಾಗೂ ಕಾಗವಾಡ–ಕಲಾದಗಿ ರಾಜ್ಯ ಹೆದ್ದಾರಿಯಲ್ಲಿನ ಸೇತುವೆಗಳಿಗೆ ಹಾನಿಯಾಗಿದೆ.

ಕಾಗವಾಡ–ಕಲಾದಗಿ ರಾಜ್ಯ ಹೆದ್ದಾರಿಯಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಆಸುಪಾಸಿನ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಕೇವಲ ಸೇತುವೆ ಮಾತ್ರ ಉಳಿದಿದೆ. ತಿಂಗಳು ಕಳೆದರೂ ಅಲ್ಲಿ ಇನ್ನೂ ಸಂಪರ್ಕ ಸಾಧ್ಯವಾಗಿಲ್ಲ. ವಾಹನ ಸವಾರರು ಬೀಳಗಿ ಮೂಲಕ 40 ಕಿಲೊಮೀಟರ್‌ ಬಳಸಿಕೊಂಡು ಹೋಗುತ್ತಿದ್ದಾರೆ.

ಮಲಪ್ರಭಾ ನದಿಗೆ ಕಟ್ಟಲಾದ ಹೊಸ ಸೇತುವೆ ಮೇಲೆ ನೀರು ಹರಿದು ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲೂ 15 ದಿನಕ್ಕೂ ಹೆಚ್ಚು ಕಾಲ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ಈಗ ಅಲ್ಲಿ ತಾತ್ಕಾಲಿಕ ದುರಸ್ತಿ ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಬ್ರಿಟಿಷರ ಕಾಲದ ಸೇತುವೆ: ಧಾರವಾಡ–ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಚಿಕ್ಕಪಡಸಲಗಿ ಸೇತುವೆ ಮೇಲೆ ಇನ್ನೂ ಸಂಚಾರ ಆರಂಭವಾಗಿಲ್ಲ. ಕೃಷ್ಣಾ ನದಿಗೆ ಅಡ್ಡಲಾಗಿ ಚಿಕ್ಕಪಡಸಲಗಿ ಸೇತುವೆಯನ್ನು ಬ್ರಿಟಿಷರ ಅವಧಿಯಲ್ಲಿ ಕಟ್ಟಲಾಗಿದೆ. ಪ್ರವಾಹದ ಆರ್ಭಟಕ್ಕೆ ಸೇತುವೆಯ ತಡೆಗೋಡೆ ಹಾಗೂ ರಸ್ತೆ ಮೇಲ್ಪದರ ಸಂಪೂರ್ಣ ಕೊಚ್ಚಿ ಹೋಗಿದೆ. ಅದರ ದುರಸ್ತಿಗೆ ₹1.6 ಕೋಟಿ ಬೇಕಿದೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲು ಇನ್ನೂ ಒಂದು ತಿಂಗಳು ಬೇಕು' ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಸದ್ಯ ವಾಹನ ಸವಾರರು 30 ಕಿಲೊಮೀಟರ್‌ ಸುತ್ತಿಕೊಂಡು ಸಾವಳಗಿ ಮೂಲಕ ವಿಜಯಪುರಕ್ಕೆ ತೆರಳುತ್ತಿದ್ದಾರೆ.

ಎನ್‌ಎಚ್‌ಎಐ ಸೇತುವೆಗೆ ಹಾನಿ: ‘ಕೊಣ್ಣೂರು–ಗೋವಿನಕೊಪ್ಪ ನಡುವೆ ಮಲಪ್ರಭಾ ಸೇತುವೆ ಬಳಿ 400 ಮೀಟರ್‌ನಷ್ಟು ಹೆದ್ದಾರಿ ಕೊಚ್ಚಿ ಹೋಗಿದೆ. ಅದರ ದುರಸ್ತಿಗೆ ₹1.25 ಕೋಟಿ ಬೇಕಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನರಗುಂದ ವಿಭಾಗದ ಎಂಜಿನಿಯರ್ ಪಿ.ರಾಜೇಂದ್ರ ಹೇಳುತ್ತಾರೆ.

‘ಈಗ ಕಟ್ಟಿರುವ ಹೊಸ ಸೇತುವೆ ಬಳಿ ನೀರು ಕೊಣ್ಣೂರಿನತ್ತ ತಿರುವು ಪಡೆಯುತ್ತಿದೆ. ಇದರಿಂದ ಗ್ರಾಮದೊಳಗೆ ನೀರು ನುಗ್ಗಿ ಅಪಾರ ಹಾನಿ ಆಗಿದೆ. ಅಲ್ಲಿ ₹5 ಕೋಟಿ ವೆಚ್ಚದಲ್ಲಿ ಮತ್ತೊಂದು ಪೂರಕ ಸೇತುವೆ ನಿರ್ಮಾಣಕ್ಕೆ ಯೋಜಿಸಲಾಗಿದೆ’ ಎನ್ನುತ್ತಾರೆ. ಸದ್ಯ ತಾತ್ಕಾಲಿಕವಾಗಿ ರಸ್ತೆ ದುರಸ್ತಿಪಡಿಸಿದ್ದು, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ರಾಮದುರ್ಗ–ಹುನಗುಂದ ನಡುವಿನ ರಾಜ್ಯ ಹೆದ್ದಾರಿಯ ಸೇತುವೆ ಪಟ್ಟದಕಲ್ಲು ಬಳಿ ಹಾನಿಗೀಡಾಗಿದೆ. ಪಟ್ಟದಕಲ್ಲು ದೇವಸ್ಥಾನ ಸಮುಚ್ಚಯ ಎದುರಿನ ರಾಮದುರ್ಗ–ಹುನಗುಂದ ರಾಜ್ಯ ಹೆದ್ದಾರಿಯ ಸೇತುವೆ ಹಾಗೂ ಅದರ ಸಂಪರ್ಕ ರಸ್ತೆಗೆ ಹಾನಿಯಾಗಿದೆ. ಅದರ ದುರಸ್ತಿಗೆ ₹1.5 ಕೋಟಿ ವೆಚ್ಚವಾಗಲಿದೆ. ಅಲ್ಲಿನ್ನೂ ಸಂಚಾರ ಆರಂಭವಾಗಿಲ್ಲ. ವಾಹನಗಳು ಪಟ್ಟದಕಲ್ಲು ಒಳರಸ್ತೆ, ಕಾಟಾಪುರದ ಮೂಲಕ ಐಹೊಳೆಗೆ ಹೋಗುತ್ತಿವೆ.

*

ನೆರೆಯಿಂದಾಗಿ ಪಿಡಬ್ಲ್ಯುಡಿ ವ್ಯಾಪ್ತಿಯ ಸೇತುವೆಗಳು ಒಳಗೊಂಡಂತೆ ಜಿಲ್ಲೆಯಲ್ಲಿ 60 ಕಿ.ಮೀ ನಷ್ಟು ರಾಜ್ಯ ಹೆದ್ದಾರಿ ಹಾಗೂ 58 ಕಿ.ಮೀನಷ್ಟು ಜಿಲ್ಲಾ ಮುಖ್ಯ ರಸ್ತೆ ಹಾಳಾಗಿದೆ. ಪ್ರಾಥಮಿಕ ಅಂದಾಜಿನಂತೆ ₹94.5 ಕೋಟಿ ಹಾನಿಯಾಗಿದೆ.
– ಪ್ರಶಾಂತ ಗಿಡದಾನಪ್ಪಗೋಳ, ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ

**

ಕೊಚ್ಚಿಹೋದ ಸೇತುವೆ; 60 ಕಿ.ಮೀ ಸುತ್ತಾಟ

ರಾಯಚೂರು/ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ರಾಯಚೂರು ಜಿಲ್ಲೆಯ ನಾಲ್ಕು ಸೇತುವೆಗಳ ಸಂಪರ್ಕ ರಸ್ತೆಗಳಿಗೆ ಮತ್ತು ಯಾದಗಿರಿ ಜಿಲ್ಲೆಯ ಎರಡು ಸೇತುವೆಗಳಿಗೆ ಹಾನಿಯಾಗಿದೆ. ಅವುಗಳ ರಿಪೇರಿ ಇನ್ನೂ ಆಗಿಲ್ಲ.

ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮತ್ತು ಜಲದುರ್ಗ ಸೇತುವೆಗೆ ಹಾನಿಯಾಗಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ನಡುಗಡ್ಡೆವಾಸಿಗಳು ಗುಂಟಗೋಳಕ್ಕೆ ತಲುಪಲು ಜಲದುರ್ಗ ಮತ್ತು ಲಿಂಗಸುಗೂರು ಮೂಲಕ ಹೋಗಬೇಕಿದೆ. ಇದರಿಂದ ಅವರು 60 ಕಿಲೊಮೀಟರ್ ದೂರ ಕ್ರಮಿಸಬೇಕಿದೆ.

ದೇವದುರ್ಗ ತಾಲ್ಲೂಕಿನ ಗೂಗಲ್‌ ಬ್ರಿಡ್ಜ್‌ ಕಂ ಬ್ಯಾರೇಜ್‌ ಸಂಪರ್ಕ ರಸ್ತೆ ಕೊಚ್ಚಿ ಹೋಗಿದ್ದರಿಂದ ಗೂಗಲ್‌ ಗ್ರಾಮಸ್ಥರು ಯಾದಗಿರಿ ಜಿಲ್ಲೆಯ ಶಹಾಪುರಕ್ಕೆ ದೇವದುರ್ಗದ ಮೂಲಕ ಹೋಗಬೇಕಿದೆ. ಗೂಗಲ್‌ನಿಂದ ಶಹಾಪುರಕ್ಕೆ 30 ಕಿಲೊಮೀಟರ್ ಅಂತರವಿದ್ದು, ಗ್ರಾಮಸ್ಥರು ದೇವದುರ್ಗದ ಮೂಲಕ ಹೆಚ್ಚುವರಿಯಾಗಿ 30 ಕಿಲೊಮೀಟರ್ ಕ್ರಮಿಸಬೇಕಿದೆ.

ಗುರುವಾರ ರಾತ್ರಿ ಸುರಿದ ಮಳೆಗೆ ಮುಷ್ಟೂರು ಗ್ರಾಮದ ಹಳ್ಳದ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಅಪೂರ್ಣವಾಗಿದ್ದ ನಿರ್ಮಾಣ ಹಂತದ ಸೇತುವೆ ಜತೆಗೆ ಪಕ್ಕದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಸಹ ಕೊಚ್ಚಿಕೊಂಡು ಹೋಗಿದೆ.

ಯಾದಗಿರಿ ಜಿಲ್ಲೆಯ ನೀಲಕಂಠರಾಯನಗಡ್ಡಿಯ ಸೇತುವೆಯ ಕೆಲ ಭಾಗ ಕೊಚ್ಚಿ ಹೋಗಿರುವುದರಿಂದ ನಡುಗಡ್ಡೆ ಜನ ಇನ್ನೂ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ವಡಗೇರಾ ತಾಲ್ಲೂಕಿನ ಜೋಳದಡಗಿ ಬಳಿ ಭೀಮಾ ನದಿಗೆ ನಿರ್ಮಿಸಿರುವ ಬ್ರಿಡ್ಜ್‌ ಕಂ ಬ್ಯಾರೇಜ್‌ಗೆ ಕೊಂಚ ಹಾನಿಯಾಗಿದೆ. ರಸ್ತೆಗೆ ಮುರುಮ್‌ ಹಾಕಿ, ವಾರದಿಂದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಗೋಕಾಕ: ಶಿಥಿಲಗೊಂಡ ಶಿಂಗಳಾಪುರ ಬ್ಯಾರೇಜ್‌

ಪ್ರತಿಕ್ರಿಯಿಸಿ (+)