ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live: ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಕುಮಾರಸ್ವಾಮಿ

ಗುರುವಾರದಿಂದ ಬಿಜೆಪಿ ಸರ್ಕಾರ – ಮುರುಗೇಶ್ ನಿರಾಣಿ ಹೇಳಿಕೆ
Last Updated 23 ಜುಲೈ 2019, 17:54 IST
ಅಕ್ಷರ ಗಾತ್ರ

ಬೆಂಗಳೂರು:ಮುಖ್ಯಮಂತ್ರಿಎಚ್‌.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತಕ್ಕೆ ಸೋಲಾಗಿದೆ. ವಿಶ್ವಾಸಮತದಪರ99 ಹಾಗೂ ವಿರುದ್ಧ 105 ಮತಗಳು ಚಲಾವಣೆಯಾಗಿವೆ.20 ಶಾಸಕರು ಗೈರಾಗಿದ್ದಾರೆ. ತನ್ಮೂಲಕಬಹುಮತ ಕಳೆದುಕೊಂಡ ಮೈತ್ರಿ ಸರ್ಕಾರ ಪತನಗೊಂಡಿದೆ.

08.50–ವಿಶ್ವಾಸಮತ ನಿರ್ಣಯದ ವಿರುದ್ಧ ಮತ ಚಲಾಯಿಸಿ ಪಕ್ಷದ ಸೂಚನೆ ಉಲ್ಲಂಘಿಸಿದ ಕೊಳ್ಳೇಗಾಲದ ಶಾಸಕ ಎನ್‌.ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಟ್ವೀಟ್ ಮಾಡಿದ್ದಾರೆ.

08.45–‘ಇದು ಕರ್ನಾಟಕದ ಗೆಲುವು. ಭ್ರಷ್ಟ, ಅಪವಿತ್ರ ಮೈತ್ರಿಯ ಯುಗಾಂತ್ಯ. ಸ್ಥಿರ ಸರ್ಕಾರದ ಭರವಸೆಯನ್ನು ನಾವು ನೀಡುತ್ತಿದ್ದೇವೆ. ನಾವು ಒಟ್ಟಾಗಿ ಸಮೃದ್ಧ ಕರ್ನಾಟಕ ನಿರ್ಮಿಸೋಣ’ – ಬಿಜೆಪಿ ಕರ್ನಾಟಕ ಟ್ವೀಟ್

08.40–‘ಪ್ರಜಾಪ್ರಭುತ್ವಕ್ಕೆ ತಾತ್ಕಾಲಿಕ ಸೋಲು. ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಆರ್ ಎಸ್ಎಸ್/ಬಿಜೆಪಿಯವರ ಸಂಚಿನಿಂದ ಕರ್ನಾಟಕದಲ್ಲಿ ಸೋಲು’ – ಕರ್ನಾಟಕ ಕಾಂಗ್ರೆಸ್ ಟ್ವೀಟ್

08.35–ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಕುಮಾರಸ್ವಾಮಿ.ಮುಂದಿನ ಸರ್ಕಾರ ಅಸ್ಥಿತ್ವಕ್ಕೆ ಬರುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮುಂದುವರಿಯಲಿದ್ದಾರೆ

08.30– ‘ಬಿಜೆಪಿಯವರು ಪಕ್ಷಾಂತರಕ್ಕೆ ಮುಂದಾದರು. ನಾಗೇಂದ್ರ ಹೊರತುಪಡಿಸಿ (ಅವರು ನಮ್ಮ ಪಕ್ಷದಿಂದ ಅನುಮತಿ ತೆಗೆದುಕೊಂಡಿದ್ದರು) ಯಾರ್‍ಯಾರು ಸದನಕ್ಕೆ ಬಂದಿಲ್ಲವೋಅವರೆಲ್ಲರೂ ಇವರ ಚಿತಾವಣೆ ಮೇಲೆಯೇ ಪಕ್ಷಾಂತರಿಗಳಾಗಿರುವುದು. ಅವರು ಬರದೇ ಇರುವ ರೀತಿಯಲ್ಲಿ ಬಂಧನದಲ್ಲಿ ಇಟ್ಟಿದ್ದರು. ಅವರು ಸದನಕ್ಕೆ ಬಾರದಂತೆ ಮಾಡಿದ್ದಾರೆ. ಇದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ದ್ರೋಹ. ಈ ರೀತಿ ವಾಮಮಾರ್ಗದ ಮೂಲಕ ಹಿಂಬಾಗಲಿನಿಂದ ಅಧಿಕಾರ ಹಿಡಿಯುವ ಷಡ್ಯಂತ್ರವನ್ನು ಬಿಜೆಪಿ ಮಾಡಿದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಭಿಕೆ ಇಲ್ಲ. ಪಕ್ಷಂಆತರ ಕಾಯ್ದೆಯನ್ನು ಪಕ್ಷಾಂತರವನ್ನು ಪ್ರಚೋದಿಸಿ, ಆಸೆ ಆಮಿಷ ತೋರಿಸಿ ಕುದುರೆ ವ್ಯಾಪಾರ ಮಾಡಿ ಇವತ್ತ ವಿಶ್ವಾಸಮತವನ್ನು ಬಿದ್ದುಹೋಗಲು ಕಾರಣಕರ್ತರಾಗಿದ್ದಾರೆ – ಸಿದ್ದರಾಮಯ್ಯ

08.27–14 ತಿಂಗಳ ನನ್ನ ಮೈತ್ರಿ ಸರ್ಕಾರದ ಆಡಳಿತಕ್ಕೆ ಮಾಧ್ಯಮದವರು ನೀಡಿರುವ ಸಹಕಾರಕ್ಕೆ ಹೃದಯ ತುಂಬಿದ ಅಭಿನಂದನೆಗಳು – ಕುಮಾರಸ್ವಾಮಿ

08.26–ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿಯಾಗಲಿರುವ ಯಡಿಯೂರಪ್ಪ

08.25–ಸಚಿವರ ಜತೆ ರಾಜಭವನದ ಕಡೆ ತೆರಳುತ್ತಿರುವ ಕುಮಾರಸ್ವಾಮಿ

08.23–ಗುರುವಾರ ಬಿಜೆಪಿ ಸರ್ಕಾರ ಬಹುಮತ ಸಾಬೀತು. ಸಚಿವ ಸಂಪುಟ ರಚನೆ– ಮುರುಗೇಶ್ ನಿರಾಣಿ ಹೇಳಿಕೆ

08.15–ಅತೃಪ್ತ ಶಾಸಕರು ನಾಳೆ ಬೆಂಗಳೂರಿಗೆ ಮರಳುವ ಸಾಧ್ಯತೆ

08.05–ನಾವು ಅತೃಪ್ತ ಶಾಸಕರನ್ನು ಕೈ ಬಿಡಲ್ಲ. ಜೊತೆಯಲ್ಲಿಟ್ಟುಕೊಂಡು ಹೋಗ್ತೀವಿ. ಶಾಸಕರು ಯಾರೂ ಗುಲಾಮರಲ್ಲ. ರಾಜೀನಾಮೆ ಕೊಟ್ಟು ಚುನಾವಣೆಗೆ ಸ್ಪರ್ಧೆ ಮಾಡಬಹುದು. ಬೇರೆ ಪಕ್ಷಕ್ಕೂ ಹೋಗಬಹುದು. ನಮಗೆ ಸಹಕರಿಸಿದ ಯಾರನ್ನೂ ಕೈಬಿಡುವ ಪ್ರಶ್ನೆ ಇಲ್ಲ. –ಬಿಜೆಪಿ ಶಾಸಕ ಮಾಧುಸ್ವಾಮಿ

08.00–14 ತಿಂಗಳ‌ ಮೈತ್ರಿ ‌ಸರ್ಕಾರದ ಬಗ್ಗೆ ‌ಜನ ಬೇಸತ್ತಿದ್ದರು.ಇದು ಪ್ರಜಾಪ್ರಭುತ್ವದ ಗೆಲುವು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪರ್ವ ರಾಜ್ಯದಲ್ಲಿ ಆರಂಭವಾಗಲಿದೆ ಎಂದು ನಾಡಿನ ಜನತೆಗೆ ಭರವಸೆ ನೀಡುತ್ತಿದ್ದೇನೆ. ರೈತ ಸಮುದಾಯದ ಬಗ್ಗೆ ಹೆಚ್ಚು ಗಮನ ಕೊಡುವುದಾಗಿಭರವಸೆ ನೀಡುತ್ತಿದ್ದೇನೆ. ಅಭಿವೃದ್ಧಿಯ ಹೊಸ ಪರ್ವ ರಾಜ್ಯದಲ್ಲಿ ಆರಂಭವಾಗಲಿದೆ – ಬಿ.ಎಸ್.ಯಡಿಯೂರಪ್ಪ

07.57–ರಾಜೀನಾಮೆ ಪತ್ರ ಸಿದ್ಧಪಡಿಸುತ್ತಿರುವಕುಮಾರಸ್ವಾಮಿ

07.55–ರಾಜ್ಯಪಾಲರ ಭೇಟಿಗೆ ಸಮಯ ಕೇಳಿದಎಚ್.ಡಿ. ಕುಮಾರಸ್ವಾಮಿ

07.50–ಸ್ಪೀಕರ್ ಕಚೇರಿಗೆ ತೆರಳಿದ ಕುಮಾರಸ್ವಾಮಿ

07.47–ಕೆಲವೇ ಕ್ಷಣಗಳಲ್ಲಿ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಲಿರುವ ಕುಮಾರಸ್ವಾಮಿ

07.43–ಬಹುಮತ ಕಳೆದುಕೊಂಡು ಅಧಿಕಾರದಿಂದ ನಿರ್ಗಮಿಸಿದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ

07.42–ವಿಶ್ವಾಸಮತ ನಿರ್ಣಯದ ಪರ 99 ವಿರುದ್ಧ 105 ಮತಗಳು.20 ಶಾಸಕರು ಗೈರು

07.40–ಮತ ಎಣಿಕೆ ಸಂಪೂರ್ಣ

07.37–ಬಿಜೆಪಿ ಸದಸ್ಯರ 6ನೇ ಸಾಲಿನ ಮತ ಎಣಿಕೆ. ಬೆಳ್ಳಿಪ್ರಕಾಶ್‌ದು ಒಂದೇ ಅಂತ ಕೌಂಟ್ ಮಾಡು ಎಂದು ಮತ್ತೊಂದು ನಗೆಚಟಾಕಿ ಹಾರಿಸಿದ ಸ್ಪೀಕರ್.ಕಡೂರು ಕ್ಷೇತ್ರದ ಶಾಸಕ ಬೆಳ್ಳಿಪ್ರಕಾಶ್ ದಪ್ಪ ಇರುವುದಕ್ಕೆ ಹಾಸ್ಯ. ನಂದು ಎರಡು ವೋಟ್ ಎಂದು ಬೆಳ್ಳಿ ಮುಗುಳ್ನಗೆ

07.35–ಬಿಜೆಪಿ ಕಡೆಯ ಎರಡನೇ ಸಾಲಿನ ಮತಗಣನೆ ಆರಂಭ.ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಯಡಿಯೂರಪ್ಪ ಸೇರಿ ಹಲವು ನಾಯಕರಿಂದ ಪ್ರಸ್ತಾವದ ವಿರುದ್ಧ ಮತ

07.32–ಉಪ ಸಭಾಧ್ಯಕ್ಷರು ಪರ ಇದ್ದೇನೆ ಎಂದು ಹೇಳಿದರು.ಸ್ಪೀಕರ್ ತಮ್ಮ ಮತವನ್ನು ಸಮಸಮ ಆದಾಗ ಮಾತ್ರ ಚಲಾಯಿಸಬೇಕಾಗುತ್ತದೆ. ಅಲ್ಲಿಯವರೆಗೆ ನಾನು ಮತ ಚಲಾಯಿಸುವ ಆಗತ್ಯವಿಲ್ಲ. ಸ್ಪೀಕರ್ ಸ್ಥಾನದ ಘನತೆ ಕಾಪಾಡುವ ದೃಷ್ಟಿಯಿಂದ ನಾನು ಈಗ ಮತ ಚಲಾಯಿಸುವುದಿಲ್ಲ –ರಮೇಶ್‌ ಕುಮಾರ್

07.30–ಶಂಕರಣ್ಣ ನೀವು ಕೂತ್ಕೊಳಿ, ನಾವು ಕೌಂಟ್ ಮಾಡ್ತೀವಿ ಎಂದ ಸ್ಪೀಕರ್. ‘ನಮ್ಮ ಬ್ಯಾಚ್‌ಮೆಟ್‌’ ಎಂದಾಗ ಬಿಗು ವಾತಾವರಣದಲ್ಲಿ ನಗೆ ಹರಡಿತು.4ನೇ ಸಾಲಿನಲ್ಲಿದ್ದ ಸಿದ್ದರಾಮಯ್ಯ ಎದ್ದು ನಿಂತು ನಿರ್ಣಯದ ಪರ ಇರುವುದಾಗಿ ಸೂಚಿಸಿದರು.

07.27–ನಿರ್ಣಯದ ಪರ ಇರುವವರು ಎದ್ದು ನಿಂತು ನಮಗೆ ಸಹಕರಿಸಿ ಎಂದು ಕೋರಿದ ರಮೇಶ್‌ಕುಮಾರ್.ಎದ್ದು ನಿಂತ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ ಸೇರಿದಂತೆ ಹಲವು ಸಚಿವರು, ಕಾಂಗ್ರೆಸ್ ಶಾಸಕರು.ಮೊದಲ ಸಾಲಿನ ಎಣಿಕೆ ಮುಗಿಯಿತು. ಎರಡನೇ ಸಾಲಿನ ಎಣಿಗೆ ಆರಂಭ. ಗುಬ್ಬಿ ಶ್ರೀನಿವಾಸ್ ಸೇರಿ ಹಲವು ಪ್ರಮುಖರು ಎದ್ದು ನಿಂತರು

07.25–ವಿಧಾನಸಭೆಯ ಎಲ್ಲ ಬಾಗಿಲುಗಳನ್ನೂ ಮುಚ್ಚಿಸಿದ ಸ್ಪೀಕರ್ ರಮೇಶ್‌ಕುಮಾರ್.ಎಲ್ಲ ಸದಸ್ಯರೂ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳಬೇಕು ಎಂದು ಸ್ಪೀಕರ್ ಸೂಚನೆ

07.20–ವಿಶ್ವಾಸಮತ ಪ್ರಸ್ತಾಪ ಮಂಡಿಸಿದ ಕುಮಾರಸ್ವಾಮಿ. ಪ್ರಸ್ತಾಪವನ್ನು ಮತಕ್ಕೆ ಹಾಕಿದ ಸ್ಪೀಕರ್ ರಮೇಶ ಕುಮಾರ್. ಧ್ವನಿಮತದ ಮೂಲಕ ವಿಶ್ವಾಸಮತ ಪ್ರಕ್ರಿಯೆ.ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ವಿನಂತಿ ಮೇರೆಗೆ ಮತಕ್ಕೆ ಹಾಕಲಾಯಿತು.

07.18–ನನಗೆ ನೀವು ಈಗ ದೇವರಾಜ್‌ ಅರಸ್‌ ಥರ ಕಾಣಿಸ್ತಿದ್ದೀರಿ:ರಮೇಶ್‌ಕುಮಾರ್ ಶ್ಲಾಘನೆ

07.17–ಯಾರು ಇವತ್ತು ಬಿಜೆಪಿ ಆಮಿಷಕ್ಕೆ ಬಲಿಯಾಗಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಜಗತ್ತೇ ಪ್ರಳಯ ಆದ್ರೂ ಅವರನ್ನು ನಾವು ವಾಪಸ್ ತಗೊಳ್ಳಲ್ಲ.ಅತೃಪ್ತರು ವಾಪಸ್ ಬಂದ್ರೆ ಅಡ್ಮಿಟ್ ಮಾಡಲ್ಲ. ಅವರ ಪರಿಸ್ಥಿತಿ ತ್ರಿಶಂಕು ಸ್ಥಿತಿ ಆಗುತ್ತೆ.ಬಿಜೆಪಿಯದ್ದು ಗರ್ಭಗುಡಿ ಸಂಸ್ಕೃತಿ. ಅದು ಬೇರೆಯವರಿಗೆ ಸೆಟ್ ಆಗಲ್ಲ. ಈ ಹಿಂದೆ ಹೋಗಿದ್ದವರು ಅನುಭವಿಸಿ, ಬೈಕೊಂಡು ವಾಪಸ್ ಬಂದಿದ್ದಾರೆ –ಸಿದ್ದರಾಮಯ್ಯ

07.16–ಅಷ್ಟು ಸುಲಭವಾಗಿ ಸರ್ಕಾರ ಉಳಿಸಿಕೊಳ್ಳುವುದು ನಿಮ್ಮಿಂದಲೂ ಸಾಧ್ಯವಿಲ್ಲ, ನೋಡ್ತಿರಿ. ನೀವು ಸರ್ಕಾರ ರಚಿಸಿ ಒಂದು ವಾರವಾದ ಕೂಡಲೇ ಶುರುವಾಗಲಿದೆ ಸಮಸ್ಯೆ– ಕುಮಾರಸ್ವಾಮಿ

07.15–ಪಕ್ಷಾಂತರ ಒಳ್ಳೆಯದಲ್ಲ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ಪಕ್ಷಾಂತರ ಮಾಡುವವರನ್ನು ನಿಷೇಧಿಸಬೇಕು ಎಂದೂ ಅವರೇ ಹೇಳಿದ್ದಾರೆ– ಕುಮಾರಸ್ವಾಮಿ

07.14–ಬೆಂಗಳೂರು ನಗರದ ಅಭಿವೃದ್ಧಿಗೆ ₹1.3 ಲಕ್ಷ ಕೋಟಿ ಕ್ರಿಯಾಯೋಜನೆ ಕೊಟ್ಟಿದ್ದೇನೆ

07.12–2008ರಲ್ಲಿ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಮೇಲೆ ಆಪರೇಷನ್ ಕಮಲ ಆರಂಭವಾಯಿತು. ನಾವಲ್ಲ ಆಪರೇಷನ್ ಆರಂಭ ಮಾಡಿದ್ದು, ನೀವೇ (ಬಿಜೆಪಿ). ಅದಾದ ಬಳಿಕ ಅಧಿಕಾರದಿಂದ ನಿರ್ಗಮಿಸಿದಿರಿ. ಆಮೇಲೆ ಸದಾನಂದ ಗೌಡರನ್ನು ನೀವೇ ಮುಖ್ಯಮಂತ್ರಿ ಮಾಡಿದಿರಿ. ಅವರನ್ನು ಹುದ್ದೆಯಿಂದ ಇಳಿಸಲೂ ನೀವೇ ಯತ್ನಿಸಿದಿರಿ– ಕುಮಾರಸ್ವಾಮಿ

07.09–ಮಗನನ್ನು ಚುನಾವಣೆಗೆ ನಿಲ್ಲಿಸಿದಾಗ ಜನ ತಿರಸ್ಕರಿಸಿದರು. ಒಪ್ಪಿಕೊಂಡಿದ್ದೇನೆ– ಕುಮಾರಸ್ವಾಮಿ

07.06–ರಾಮನಗರ ಜಿಲ್ಲೆಗೆ ಸ್ವಲ್ಪ ಹೆಚ್ಚು ಅನುದಾನ ಕೊಟ್ಟಿದ್ದು ನಿಜ– ಕುಮಾರಸ್ವಾಮಿ

07.05–ರೈತ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಿದ್ದಕ್ಕೆ ಸರ್ಕಾರವೇ ಹಣ ನೀಡಬೇಕು ಎಂಬ ಯೋಜನೆಯಿತ್ತು. ಬಹುಶಃ ಮುಂದಿನ ಐದಾರು ತಿಂಗಳಲ್ಲಿ ಇದೆಲ್ಲದರ ಪ್ರಯೋಜನ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬರಗಾಲಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದೇವೆ.ಪ್ರತಿಪಕ್ಷದವರು ಬರ ಅಧ್ಯಯನ ಪ್ರವಾಸ ಮಾಡಿದರು. ನಮ್ಮ ಕೆಲಸದಲ್ಲಿ ಏನು ಲೋಪ ಇದೆ ಎಂದು ತಿಳಿಸಬೇಕಿತ್ತು – ಕುಮಾರಸ್ವಾಮಿ

07.03–ನನ್ನ ಇನ್ನೊಂದು ಪ್ರಮುಖ ಯೋಜನೆ ಇಸ್ರೇಲ್ ಮಾದರಿ ಕೃಷಿ ಜಾರಿಗೆ ತರಬೇಕು ಎಂದು. ಅದಕ್ಕಾಗಿ ಸಮಿತಿ ರಚಿಸಿದ್ದೇನೆ. ರೈತರಿಗೆ ನೀರು ಒದಗಿಸಬೇಕು ಎಂಬುದು ನನ್ನಾಸೆ. ರೈತ ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಢನಾಗಬೇಕು– ಕುಮಾರಸ್ವಾಮಿ

07.00–ಬಡ ಮಕ್ಕಳಿಗಾಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದ್ದೇವೆ. ₹1200 ಕೋಟಿ ಕಟ್ಟಡಗಳನ್ನು ನೀಡಿದ್ದೇವೆ. ಹಿಂದಿನ ಯಾವ ಸರ್ಕಾರ ಈ ರೀತಿ ಕೆಲಸ ಮಾಡಿದೆ? – ಕುಮಾರಸ್ವಾಮಿ

07.00–ಎಸ್‌.ಟಿ.ಸೋಮಶೇಖರ್ ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ಮಾಡಿದೆ. ಸುಧಾಕರ್ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದೆ– ಕುಮಾರಸ್ವಾಮಿ

06.55–ಅತೃಪ್ತ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿಗೆನೀಡಿದ ಅನುದಾನದ ವಿವರ ಬಹಿರಂಗಪಡಿಸಿದಕುಮಾರಸ್ವಾಮಿ

06.53–ನಾರಾಯಣ ಗೌಡ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ. ಸ್ಪೀಕರ್‌ರಿಂದಸಾಂತ್ವನ

06.50–‘ರಾಜಕೀಯ ಜೀವನದಲ್ಲಿರುವ ನಮಗೆ ಜೈಲು, ಬೇಲು ಎಲ್ಲಾ ಮಾಮೂಲು. ಮುಂದೊಂದು ದಿನ ಜೈಲಿಗೆ ಹೋದ್ರೆ ನೀವಾದ್ರೂ ನೋಡೊಕೆ ಬರ್ತಿರಲ್ಲ?’ – ಸ್ಪೀಕರ್‌ಗೆ ಡಿ.ಕೆ. ಶಿವಕುಮಾರ್ ಪ್ರಶ್ನೆ.

‘ನಿಮಗೆ ಆ ಪರಿಸ್ಥಿತಿ ಬರದಿರಲಿ. ಒಂದು ವೇಳೆ ಹಂಗಾದ್ರ ನಿಮ್ಮ ಸ್ನೇಹಿತರು ಯಾರು ಬರದಿದ್ದರೂ ನಾನಂತೂ ದಿನಾ ನೋಡೊಕೆ ಬರ್ತಿನಿ ಎಂದ ರಮೇಶ್‌ ಕುಮಾರ್

06.47–ಐಎಂಎ ಮನ್ಸೂರ್‌ಖಾನ್‌ನನ್ನು ದುಬೈನಿಂದ ಕರೆದು ತಂದಿದ್ದು ನಮ್ಮ ರಾಜ್ಯ ಸರ್ಕಾರದ ಅಧಿಕಾರಿಗಳು. ಅವನನ್ನು ರಾಜತಾಂತ್ರಿಕ ಅನುಮತಿ ಮೇರೆಗೆ ಕರೆತರಲಾಯಿತು. ದೆಹಲಿಯಲ್ಲಿ ಲ್ಯಾಂಡ್ ಆದ ತಕ್ಷಣ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕರೆದೊಯ್ದರು. ಏಕೆ ಕರೆದೊಯ್ದರು? ಯಾರ್ಯಾರನ್ನು ಹೊಸದಾಗಿ ಫಿಕ್ಸ್ ಮಾಡ್ತೀರಿ ಸ್ವಾಮಿ?– ಕುಮಾರಸ್ವಾಮಿ

06.45–‘ಐಎಂಎ ಪ್ರಕರಣದಲ್ಲಿ ಸಿಲುಕಿರುವ ಶಾಸಕರು ಇವರನ್ನು ಮುಖ್ಯಮಂತ್ರಿ ಮಾಡಲು ಮುಂದೆ ಬಂದಿದ್ದಾರೆ. ಬಡವರ ಹಣ ಲೂಟಿ ಮಾಡಿದ್ದು ಬಿಟ್ಟುಬಿಟ್ರು. ಈ ಸರ್ಕಾರದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಅರೆಸ್ಟ್ ಮಾಡಿಸ ಹೋದರು ಅಂತ ಹೇಳಿಕೆ ಕೊಟ್ಟಿದ್ದಾರೆ’ ಇದು ಸರಿಯಾ?– ಕುಮಾರಸ್ವಾಮಿ

06.42–‘ಗೋಪಾಲಯ್ಯ ಅವರ ತಮ್ಮ ಹಳೆ ಕೊಲೆ ಪ್ರಕರಣದ ಆರೋಪಿ. ಈ ವಿಚಾರದಲ್ಲಿ ಸಹಾಯ ಮಾಡಿಲ್ಲ ಎಂಬುದು ಗೋಪಾಲಯ್ಯ ಅವರ ಅಸಮಾಧಾನಕ್ಕೆ ಮತ್ತೊಂದು ಕಾರಣ’ ಎಂಬ ಪ್ರಜಾವಾಣಿ ವರದಿ ಉಲ್ಲೇಖಿಸಿದ ಕುಮಾರಸ್ವಾಮಿ

06.40–ಗೋಪಾಲಯ್ಯ ಎರಡನೇ ಬಾರಿ ನಾಮ ಹಾಕಿದರು. ಅವರ ಕುಟುಂಬದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ನಾನು ಅವರಿಗೆ ರಕ್ಷಣೆ ನೀಡಬೇಕಾ? ಅದಕ್ಕಾಗಿ ಸಿಎಂ ಸ್ಥಾನದಲ್ಲಿರಬೇಕಾ? ನಾನು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ– ಕುಮಾರಸ್ವಾಮಿ

06.35–ವಿಶ್ವನಾಥ್ ರಾಜೀನಾಮೆ ಪತ್ರದ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರಿಂದಲೂ ತೀವ್ರ ಅಸಮಾಧಾನ. ರಾಜೀನಾಮೆ ಪತ್ರ ಯಾವ ರೀತಿ ಇರಬೇಕು ಆ ರೀತಿಯಲ್ಲಿ ಕೊಡಲಾಗದವರು ಸ್ಪೀಕರ್ ನಡವಳಿಕೆ ಬಗ್ಗೆ ಮಾತನಾಡುತ್ತಾರೆ. ಅವರದ್ದು ಸಭಾ ನಿಂದನೆ. ನೀವು ಯಾರೂ ಹಾಗೆ ಮಾತನಾಡುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದ ರಮೇಶ ಕುಮಾರ್. ರಾಜೀನಾಮೆ ಪತ್ರವನ್ನು ಸದನಕ್ಕೆ ಪ್ರದರ್ಶಿಸಿದ ಸ್ಪೀಕರ್. ತಾವು ಮೊದಲು ರಾಜೀನಾಮೆ ನೀಡಿದ ಸಂದರ್ಭ ಉಲ್ಲೇಖಿಸಿ ಉದಾಹರಣೆ ನೀಡಿದ ರಮೇಶ ಕುಮಾರ್

06.30–ಎಚ್.ವಿಶ್ವನಾಥ್ ಅವರ ಆರೋಪಗಳಿಂದ ತೀವ್ರ ಬೇಸರವಾಗಿದೆ. ರಾಕ್ಷಸ ರಾಜಕಾರಣದ ಆರೋಪ ಮಾಡಿದ್ದಾರೆ. ವಿಶ್ವಾಸಮತ ಮುಗಿಯದೆ ಬೆಂಗಳೂರಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಈ ರೀತಿ ಎಲ್ಲನನ್ನ ವಿರುದ್ಧ ಆರೋಪ ಮಾಡಿದ ವಿಶ್ವನಾಥ್ ಅವರನ್ನು ಸಂಸದೀಯ ಪಟು ಅಂತ ಕರೆಯಬೇಕಾ? ಅವರಿಂದ ಅಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ– ಕುಮಾರಸ್ವಾಮಿ

06.27–ಉತ್ತಮ ಕಾಲುಸಂಕ ನಿರ್ಮಾಣಕ್ಕೆ ₹187 ಕೋಟಿ ಅನುದಾನ ಇಟ್ಟಿದ್ದೇವೆ. ಇದು ತಪ್ಪೇ?ಪಲಾಯನವಾದ ಮಾಡಲ್ಲ. ಸರ್ಕಾರದ ಸಾಧನೆಗಳ ಬಗ್ಗೆ ಹೇಳುತ್ತೇನೆ. ಜನ ತಿಳಿದುಕೊಳ್ಳಲಿ. ಯಾವ ಕಾರಣಕ್ಕೆ ಕುಮಾರಸ್ವಾಮಿಯನ್ನು ಅಧಿಕಾರದಿಂದ ಇಳಿಸಿದರು ಎಂಬುದು ಜನರಿಗೆ ತಿಳಿಯಲಿ– ಕುಮಾರಸ್ವಾಮಿ

06.25–ಬಜೆಟ್ ಮಂಡನೆ ವೇಳೆಯೂ ನನಗೆ ತೀವ್ರ ತೊಂದರೆ ಕೊಡಲಾಯಿತು– ಕುಮಾರಸ್ವಾಮಿ

06.24–ಕಳೆದ ವರ್ಷ ಕೊಡಗಿನಲ್ಲಿ ಪ್ರವಾಹ, ಭೂಕುಸಿತವಾಗಿದ್ದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದೇವೆ. ಅಲ್ಲಿನ ಜನ ನಮಗೆ ಮತ ನೀಡಿಲ್ಲವೆಂದು ನಾವು ಸಹಾಯ ಮಾಡದೇ ಉಳಿಯಲಿಲ್ಲ. ಈ ಸರ್ಕಾರ ಜನಪರ ಎಂಬ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ– ಕುಮಾರಸ್ವಾಮಿ

06.23–ತಪ್ಪು ಮಾಡಿದ್ದರೆ ಟೀಕಿಸಿ, ತೊಂದರೆಯಿಲ್ಲ. ಒಳ್ಳೆ ಕೆಲಸ ಮಾಡಿದರೆ ಗುರುತಿಸಿ. ನಮ್ಮ ಸರ್ಕಾರ ನಿರ್ಲಜ್ಜ ಸರ್ಕಾರ ಅಲ್ಲ. ಅಂತಹ ಕೆಲಸ ನಾವೇನು ಮಾಡಿದ್ದೇವೆ– ಕುಮಾರಸ್ವಾಮಿ

06.20–ಕಿಸಾನ್ ಸಮ್ಮಾನ್ ಯೋಜನೆಗೆ ಸಹಕಾರ ಕೊಟ್ಟಿಲ್ಲ ಎಂಬ ಕೇಂದ್ರದ ಆರೋಪ ನಿರಾಧಾರ. 35 ಲಕ್ಷ ರೈತ ಕುಟುಂಬದ ಮಾಹಿತಿ ಕೊಟ್ಟಿದ್ದೇವೆ– ಕುಮಾರಸ್ವಾಮಿ

06.15–ತಾಜ್ ವೆಸ್ಟ್‌ಎಂಡ್ಹೋಟೆಲ್‌ನ ಆ ಕೊಠಡಿಯಲ್ಲಿ ಕುಳಿತಿದ್ದಾಗಲೇ ಸರ್ಕಾರ ರಚಿಸುವಂತೆ ಕಾಂಗ್ರೆಸ್ ಹೈಕಮಾಂಡ್‌ನಿಂದ ದೂರವಾಣಿ ಕರೆ ಬಂತು. ಆ ಕಾರಣಕ್ಕೆ ಅದು ಅದೃಷ್ಟದ ಕೊಠಡಿ ಎಂಬ ಭಾವನೆಯಿಂದ ಅಲ್ಲಿಂದಲೇ ಆಡಳಿತ ನಡೆಸುತ್ತಿದ್ದೆ. ಅಲ್ಲಿದ್ದುಕೊಂಡು ಒಂದೇ ಒಂದು ಅವ್ಯವಹಾರ ನಡೆಸಿದ್ದರೆ ದಾಖಲೆ ಸಮೇತ ನೀಡಿ, ಎದುರಿಸಲು ಸಿದ್ಧನಿದ್ದೇನೆ.ಸರ್ಕಾರಿ ಕಾರನ್ನೂ ನಾನು ಬಳಸುತ್ತಿಲ್ಲ. ಸರ್ಕಾರದ ಬಂಗ್ಲೆಯನ್ನೂ ಪಡೆದಿಲ್ಲ – ಕುಮಾರಸ್ವಾಮಿ

06.10–ಬಿಜೆಪಿ ಆರೋಪಗಳಿಗೆ ಕುಮಾರಸ್ವಾಮಿ ತಿರುಗೇಟು. ತಾಜ್ ವೆಸ್ಟ್‌ಎಂಡ್ ಹೋಟೆಲ್ ವಾಸದ ಬಗ್ಗೆ ಕುಮಾರಸ್ವಾಮಿ ಸಮರ್ಥನೆ

06.07–₹25 ಸಾವಿರ ಕೋಟಿ ಹಣವನ್ನು ರೈತರ ಸಾಲಮನ್ನಾಕ್ಕೆ ತೆಗೆದಿಟ್ಟಿದ್ದೇವೆ. ರೈತರ ವಿಚಾರದಲ್ಲಿ ನಾನು ಮೋಸ ಮಾಡಲಾರೆ.ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಹಮ್ಮಿಕೊಂಡಿದ್ದ ಎಲ್ಲ ಯೋಜನೆ ಮುಂದುವರಿಸಿದ್ದೇನೆ.ಆಧಾರ್, ಪಡಿತರ ಕಾರ್ಡ್ ಮಾಹಿತಿ ನೀಡುವಂತೆ ರೈತರಿಗೆ ಕೇಳಿದ್ದೇವೆ. ಅದನ್ನು ನೀಡಿದವರ ಸಾಲ ಮನ್ನಾ ಮಾಡಿದ್ದೇವೆ. ಸುಳ್ಳು ಹೇಳುವ ಅಗತ್ಯ ನನಗಿಲ್ಲ. ಸಿದ್ದರಾಮಯ್ಯನವರು ಘೋಷಿಸಿದ್ದ ಸಾಲಮನ್ನಾವನ್ನೂ ನಾವು ತೀರಿಸಿದ್ದೇವೆ. ಯಾವುದೋ ಸಮಸ್ಯೆಗಳಿಗೆ ನಾನು ಹೊಣೆಯೇ? ಮನೆಕಟ್ಟಿದ ಸಾಲ ಸೇರಿದಂತೆ ಇತರ ಎಲ್ಲ ಸಾಲಗಳನ್ನೂ ನಾನೇ ತೀರಿಸಬೇಕು ಎಂದು ಹೇಳಲಾಯಿತು – ಕುಮಾರಸ್ವಾಮಿ

06.07–ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಸಾಲಮನ್ನಾ ವಿಚಾರವಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರು–ಕುಮಾರಸ್ವಾಮಿ

06.06–ಇಂತಹ ಪರಿಸ್ಥಿತಿಯಲ್ಲೂ ಉತ್ತಮ ಆಡಳಿತ ನೀಡಲು ಪ್ರಯತ್ನಿಸಿದೆ. ನನ್ನ ಕಾರ್ಯವೈಖರಿ ನೋಡಿ ಅಧಿಕಾರಿಗಳೂ ಉತ್ತಮವಾಗಿ ಕೆಲಸ ಮಾಡಿದರು–ಕುಮಾರಸ್ವಾಮಿ

06.05–ಮೈತ್ರಿ ಸರ್ಕಾರ ರಚನೆ ಮಾಡಿದ ಮೊದಲ ದಿನದಿಂದಲೂ ಅಭದ್ರ ಸರ್ಕಾರ ಎಂದೇ ಮಾಧ್ಯಮಗಳು ಬಿಂಬಿಸುತ್ತಾ ಬಂದವು–ಕುಮಾರಸ್ವಾಮಿ

06.02–ಪದೇಪದೇ ನನ್ನನ್ನು ವಚನ ಭ್ರಷ್ಟ ಎಂದು ಹೇಳಬೇಡಿ. ಕೈಮುಗಿದು ಕೇಳಿಕೊಳ್ಳುತ್ತೇನೆ. ನಾನು ವಚನ ಭ್ರಷ್ಟತೆ ಮಾಡಿಲ್ಲ. ಪದೇಪದೇ ಟ್ವೀಟ್ ಸೇರಿದಂತೆ ಇತರ ಸಂದೇಶಗಳಲ್ಲಿ ಈ ರೀತಿ ಟೀಕಿಸಲಾಗುತ್ತಿದೆ. ನನ್ನಿಂದ ವಚನ ಭ್ರಷ್ಟತೆ ಆಗಿಲ್ಲ. ನಾನು ಹಾಗೆ ಮಾಡಿಲ್ಲ–ಕುಮಾರಸ್ವಾಮಿ

06.00–ಇವತ್ತು ಅತ್ಯಂತ ಸಂತೋಷದಿಂದ ನಾನು ಈ ಸ್ಥಾನ ತ್ಯಜಿಸುತ್ತಿದ್ದೇನೆ. ಯಾವುದೂ ಬೇಕಾಗಿಲ್ಲ ನನಗೆ. ಅಂದು ಹೇಳಿದಂತೆಯೇ ಇಂದೂ ನನ್ನನ್ನು ವಚನ ಭ್ರಷ್ಟ ಎಂದು ಹೇಳಿದ್ದೀರಿ. ನಿಮ್ಮ ಆತ್ಮವನ್ನು (ಬಿಜೆಪಿ ನಾಯಕರನ್ನು ಉದ್ದೇಶಿಸಿ) ನೀವು ಪ್ರಶ್ನಿಸಿಕೊಳ್ಳಿ–ಕುಮಾರಸ್ವಾಮಿ

05.59–ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ. ಮುದ್ರಣ ಮಾಧ್ಯಮ ಸ್ವಲ್ಪ ಮಟ್ಟಿಗೆ ನೈತಿಕತೆ ಉಳಿಸಿಕೊಂಡಿದೆ. ಈ ಸುದ್ದಿವಾಹಿನಿಗಳ ವರದಿಯಿಂದ ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ–ಕುಮಾರಸ್ವಾಮಿ

ಬಿಜೆಪಿ ಕಾರ್ಯಕರ್ತರ ವಿರುದ್ಧ ಕುಮಾರಸ್ವಾಮಿ ಆಕ್ರೋಶ

05.58–ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮತ್ತು ಕೆಟ್ಟ ಸಂದೇಶ ಕಳುಹಿಸುವ ಯೋಗ್ಯತೆಯೇ ನಿಮಗೆ ಬೇಕಿರುವುದಾ? ಸಿ.ಟಿ. ರವಿಗೆ ಕುಮಾರಸ್ವಾಮಿ ಪ್ರಶ್ನೆ

05.57–ವಿಶ್ವನಾಥ್ ಅವರು ಸಾ.ರಾ.ಮಹೇಶ್ ಬಗ್ಗೆ ಬಳಸಿರುವ ಪದ ಬಳಕೆ ಬಗ್ಗೆ ಕುಮಾರಸ್ವಾಮಿ ಬೇಸರ. ಮಹೇಶ್ ಏನೆಂಬುದು ನನಗೆ ಗೊತ್ತು ಎಂದ ಸಿಎಂ

05.55–ದೇಶದ ಸಂಸ್ಕೃತಿಯನ್ನು ನಾಶ ಮಾಡುವ ಸಲುವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಸಂದೇಶ ಕಳುಹಿಸುತ್ತಿದ್ದಾರೆ. ಇದನ್ನು ನಿಲ್ಲಿಸಲು ಹೇಳಿ. ಇದುವಾ ದೇಶೋದ್ಧಾರದ ಕೆಲಸ?–ಕುಮಾರಸ್ವಾಮಿ

05.50–1999ರಲ್ಲಿ ನನಗೆ ಅಲ್ಲಿಯ ಕಾರ್ಯಕರ್ತರು ಒತ್ತಡ ಹಾಕಿದರು. ಅದರಂತೆ ಶಿವಕುಮಾರ್ ಎದುರು ಸ್ಪರ್ಧಿಸಿ ಸೋತೆ. ಅದಾದ ಬಳಿಕ ರೇವಣ್ಣ ಮಂತ್ರಿಯಾಗಿ ಸೋತಿದ್ದರು. ದೇವೇಗೌಡರು ಮುಖ್ಯಮಂತ್ರಿಯಾಗಿ ಸೋತಿದ್ದರು. ನಾನೂ ಸೋತಿದ್ದೆ. ಆಗಲೇ ರಾಜಕೀಯದಿಂದ ದೂರ ಸರಿಯಬೇಕು ಎಂದುಕೊಂಡಿದ್ದೆ. ಆದರೆ ಕಾರ್ಯಕರ್ತರ ಒತ್ತಾಸೆಗೆ ಮಣಿದು ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕಾಯಿತು–ಕುಮಾರಸ್ವಾಮಿ

05.46–ನಾನು ರಾಜಕೀಯಕ್ಕೆ ಬರುವುದಕ್ಕೆ ತಂದೆಯವರಿಂದಲೂ ವಿರೋಧವಿತ್ತು. ಆದರೆ ರೇವಣ್ಣ ಅವರ ರಾಜಕೀಯ ಜೀವನಕ್ಕೆ ಆಶೀರ್ವಾದವಿತ್ತು. ರೇವಣ್ಣ ತುರ್ತು ಪರಿಸ್ಥಿತಿ ಸಮಯದಿಂದಲೂ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದರು.ಆದರೆ, ಇತರನಾಯಕರ ಒತ್ತಾಯದ ಮೇರೆಗೆ ಲೋಕಸಭೆ ಚುನಾವಣೆ ಸ್ಪರ್ಧಿಸುವಂತಾಯಿತು. ಅಲ್ಲಿಂದ ನನ್ನ ರಾಜಕೀಯ ಜೀವನ ಆರಂಭವಾಯಿತು –ಕುಮಾರಸ್ವಾಮಿ

05.45–ಸರ್ಕಾರ ಉರುಳಿಸುವ ಪಿತಾಮಹ ಎಂದು ದೇವೇಗೌಡರನ್ನು ಟೀಕಿಸಲಾಗುತ್ತಿದೆ. ನಮ್ಮ ಬಗ್ಗೆ ಏನು ಬೇಕಾದರೂ ಹೇಳಿ. ಆದರೆ ಅವರ ಬಗ್ಗೆ ಅಷ್ಟು ಹಗುರವಾಗಿ ಮಾತನಾಡಬೇಡಿ–ಕುಮಾರಸ್ವಾಮಿ

05.43–ಪ್ರಜಾವಾಣಿ ವರದಿ ಉಲ್ಲೇಖಿಸಿದ ಕುಮಾರಸ್ವಾಮಿ. ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ರೈತ ಎಂದು ಹೇಳಿಕೊಳ್ಳುತ್ತಿದ್ದರು. ಈ ಕುರಿತು ಪ್ರಜಾವಾಣಿ ವರದಿಯಲ್ಲಿ ಉಲ್ಲೇಖಿಸಿರುವುದು ಇಂದು ಬೆಳಿಗ್ಗೆ ನೋಡಿದೆ. ದೇವೇಗೌಡರ ರೈತ ಪರ ಹೋರಾಟ ನಮಗೆ ಮಾದರಿ–ಕುಮಾರಸ್ವಾಮಿ

05.40–ದೇವರಾಜ ಆರಸು ಮುಖ್ಯಮಂತ್ರಿಯಾಗಿ, ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದಾಗ ನಡೆದ ಚರ್ಚೆ, ಸದನ ನಡೆದ ರೀತಿಯನ್ನು ಮುಂದಿನ ಪೀಳಿಗೆ ಮಾದರಿಯಾಗಿ ಸ್ವೀಕರಿಸಬಹುದು ಎಂದು ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರು ಲೇಖನದಲ್ಲಿ ಉಲ್ಲೇಖಿಸಿದ್ದರು.–ಕುಮಾರಸ್ವಾಮಿ

05.37–ರಾಜಕೀಯದಿಂದಲೇ ಹಿಂದೆ ಸರಿಯಬೇಕು ಎಂದು ಆಗ ಭಾವಿಸಿದ್ದೆ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ನಾನೆಂದೂ ರಾಜಕೀಯಕ್ಕೆ ಬರಬೇಕು ಎಂದು ಆಸೆಪಟ್ಟವನಲ್ಲ–ಕುಮಾರಸ್ವಾಮಿ

05.35–ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮರ ಬರಲಿಲ್ಲ. ಹೀಗಾಗಿ 2018 ಮೇ 23ರಂದು ಮೈತ್ರಿ ಸರ್ಕಾರ ರಚನೆಯಾಯಿತು.ಇದು ಅಪವಿತ್ರ ಮೈತ್ರಿ ಎಂದು ಅನೇಕ ಬಾರಿ ಪ್ರತಿಪಕ್ಷದ ನಾಯಕರು ಟೀಕಿಸಿದ್ದರು –ಕುಮಾರಸ್ವಾಮಿ

05.32–ಸದನದಲ್ಲಿ ನಾಲ್ಕು ದಿನ ತೆಗೆದುಕೊಂಡಿದ್ದರ ಹಿಂದೆ ನಮ್ಮ ಸ್ವಾರ್ಥ ಇರಬಹುದು. ಸ್ವಾರ್ಥ ಅನ್ನೋದಕ್ಕಿಂತಲೂ ಅತೃಪ್ತರಿಗೆ ಜ್ಞಾನೋದಯ ಆಗಬಹುದೆಂಬ ನಿರೀಕ್ಷೆ ಇತ್ತು –ಕುಮಾರಸ್ವಾಮಿ

05.30–ನಿನ್ನೆ ನಿಮ್ಮ (ಸಭಾಧ್ಯಕ್ಷರ) ಮನಸಿಗೆ ಆಗಿರುವ ನೋವಿಗಾಗಿ ಎಲ್ಲರ ಪರವಾಗಿ ಕ್ಷಮೆ ಯಾಚಿಸುತ್ತೇನೆ. ರಾಜ್ಯದ ಆರೂವರೆ ಕೋಟಿ ಜನರ ಕ್ಷಮೆಯನ್ನೂ ಯಾಚಿಸುತ್ತೇನೆ.ಕಳೆದ 10 ದಿನಗಳಿಂದ ನಡೆದ ಘಟನೆಯ ಬಗ್ಗೆ ಮತ್ತೆ ಚರ್ಚೆ ಮಾಡುವುದಿಲ್ಲ - ಕುಮಾರಸ್ವಾಮಿ

ಸಿಎಂ ಕುಮಾರಸ್ವಾಮಿ ಭಾಷಣ ಆರಂಭ

05.30–ನಾಡಿನ ಜನತೆ ನಮ್ಮನ್ನು ಕ್ಷಮಿಸಲಾರರು. ಕುಮಾರಸ್ವಾಮಿ ಕುರ್ಚಿಗೆ ಅಂಟಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಅನೇಕ ಜನ ಅಂದುಕೊಂಡಿದ್ದಾರೆ - ಕುಮಾರಸ್ವಾಮಿ

05.28–ವಿರೋಧ ಪಕ್ಷದ ಸಾಲಿನಿಂದ ಒಬ್ಬರೂ ಚರ್ಚೆಯಲ್ಲಿ ಭಾಗಿಯಾಗದೇ ಇರುವುದು ಕರ್ನಾಟಕ ವಿಧಾನಸಭೆ ಇತಿಹಾಸದಲ್ಲಿ ಇದೇ ಮೊದಲು ಇರಬಹುದು - ಕುಮಾರಸ್ವಾಮಿ

05.25–ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸದನದಲ್ಲಿ ಭಾಷಣ ಆರಂಭಿಸಿದ್ದಾರೆ.

ಬಿಜೆಪಿ ವಿರುದ್ಧ ರೇವಣ್ಣ ಆಕ್ರೋಶ

04.50–ನಮ್ಮ ಕುಟುಂಬ (ದೇವೇಗೌಡರ) ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ಶಾಸಕರನ್ನು ಬಿಜೆಪಿಯವರು ಮುಂಬೈನಲ್ಲಿ ಕೂಡಿಹಾಕಿದ್ದಾರೆ – ಸಚಿವ ರೇವಣ್ಣ

04.35–ಪಕ್ಷಾಂತರದ ಹಿಂದೆ ಬಿಜೆಪಿ ಕೈವಾಡವಿದೆ: ಸಿದ್ದರಾಮಯ್ಯ ಆರೋಪ

04.30–ಪಕ್ಷಾಂತರ ಮಾಡುವವರಿಗೆ ಮುಂಬೈನಲ್ಲಿ ಪೊಲೀಸ್ ರಕ್ಷಣೆ ನೀಡಲಾಗುತ್ತಿದೆ. ಇದು ಯಾವ ಪ್ರಜಾಪ್ರಭುತ್ವ? ನಮ್ಮ ಪಕ್ಷದ ಶಾಸಕರ ಜತೆ ನಾವೇ ಮಾತನಾಡುವಂತಿಲ್ಲ, ಇದು ಯಾವ ಪ್ರಜಾಪ್ರಭುತ್ವ? – ಸಿದ್ದರಾಮಯ್ಯ

ಬಿಜೆಪಿಯಿಂದಲೇ ಕುದುರೆ ವ್ಯಾಪಾರ: ಸಿದ್ದರಾಮಯ್ಯ

04.25–ನಮಗೂ ಇದಕ್ಕೂ ಸಂಬಂಧ ಇಲ್ಲ ಎಂದು ಬಿಜೆಪಿ ಮತ್ತು ಯಡಿಯೂರಪ್ಪ ಹೇಳುತ್ತಿದ್ದಾರೆ. ಯಾಕೆ ಹೀಗೆ ಸುಳ್ಳು ಹೇಳುತ್ತೀರಿ? ನಾವೇ ಇದನ್ನು ಮಾಡುತ್ತಿದ್ದೇವೆ ಎಂದು ಬಹಿರಂಗವಾಗಿ ಹೇಳಿಬಿಡಿ. ಬಿಜೆಪಿಯವರೇ ಕುದುರೆ ವ್ಯಾಪಾರ ಮಾಡಿಸುತ್ತಿದ್ದಾರೆ ಎಂಬುದು ರಾಜ್ಯದ ಶೇ 99ರಷ್ಟು ಜನರಿಗೆ ಗೊತ್ತಿದೆ.– ಸಿದ್ದರಾಮಯ್ಯ

04.20–ಸರ್ಕಾರ ಬರುತ್ತೆ, ಹೋಗುತ್ತೆ. ಆದರೆ ಇದು ಪ್ರಜಾಪ್ರಭುತ್ವದ ಅಳಿವು–ಉಳಿವಿನ ಪ್ರಶ್ನೆ. ಈ ಕುರಿತು ಚರ್ಚೆಯಾಗಬೇಕು. ಪ್ರಜಾಪ್ರಭುತ್ವವನ್ನು ಕೊಲೆ ಮಾಡಿ ಅಧಿಕಾರಕ್ಕೆ ಬರುತ್ತೇವೆ, ಅಧಿಕಾರದಲ್ಲಿರುತ್ತೇವೆ ಎಂದರೆ ಅದು ದೀರ್ಘ ಕಾಲ ನಡೆಯದು. ಒಂದು ವೇಳೆ ಯಡಿಯೂರಪ್ಪ ಸರ್ಕಾರ ರಚಿಸಿದರೂ ಆರು ತಿಂಗಳೋ ಒಂದು ವರ್ಷವೋ ಬಾಳಿಕೆ ಬರಲಿದೆ ಅಷ್ಟೆ – ಸಿದ್ದರಾಮಯ್ಯ

04.15–ಪಕ್ಷಾಂತರ ನಿಷೇಧ ಕಾಯ್ದೆ ದುರ್ಬಲಗೊಳಿಸುವ ಯತ್ನ ಮಾಡಲಾಗುತ್ತಿದೆ. ಈ ಕುರಿತು ಚರ್ಚೆಯಾಗಬೇಕಿದೆ– ಸಿದ್ದರಾಮಯ್ಯ

04.10–‘ಪಕ್ಷಾಂತರ ನಿಷೇಧ ಕಾಯ್ದೆ ರೂಪಿಸಿದ್ದು ಕಾಂಗ್ರೆಸ್ ಮಾತ್ರವಲ್ಲ. ಎಲ್ಲ ಪಕ್ಷಗಳೂ ಅದನ್ನು ಸ್ವಾಗತಿಸಿದ್ದವು. ಎಲ್ಲ ಪಕ್ಷಗಳ ಆಶಯದಂತೆಯೇ ಕಾಯ್ದೆ ರೂಪಿಸಲಾಗಿತ್ತು.’ – ಸಿದ್ದರಾಮಯ್ಯ

04.05–‘ಶಾಸಕರ ರಾಜೀನಾಮೆ ಸ್ವಯಂಪ್ರೇರಿತವೋ ಅಥವಾ ಒತ್ತಡದಿಂದಲೋ ಎಂಬುದನ್ನು ಸಭಾಧ್ಯಕ್ಷರೇ ವಿಚಾರಣೆಯಿಂದ ತೀರ್ಮಾನಿಸಬೇಕು. ಶಾಸಕರ ಅನರ್ಹತೆ ವಿಚಾರದಲ್ಲಿ ಯಾವ ನ್ಯಾಯಾಲಯವೂ ಮಧ್ಯಪ್ರವೇಶಿಸದು. ಹಾಗಾಗಿಯೇ ಮೊನ್ನೆ ಸುಪ್ರೀಂ ಕೋರ್ಟ್‌ ಆ ವಿಚಾರವನ್ನು ಸಭಾಧ್ಯಕ್ಷರಿಗೇ ಬಿಟ್ಟುಬಿಟ್ಟಿದೆ’ – ಸಿದ್ದರಾಮಯ್ಯ

ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ:ಸಿದ್ದರಾಮಯ್ಯ

04.00–‘104 ಜನ ಇದ್ದೀರಿ ನೀವು (ಬಿಜೆಪಿ). ಪ್ರಬಲ ವಿರೋಧ ಪಕ್ಷವಾಗಿ ನೀವು ಕಾರ್ಯನಿರ್ವಹಿಸಬಹುದಾಗಿತ್ತು. ಆದರೆ ಸಂವಿಧಾನ ವಿರೋಧಿ ಮಾರ್ಗದ ಮೂಲಕ ಸರ್ಕಾರ ರಚನೆಗೆ ಮುಂದಾಗಿದ್ದೀರಿ’– ಸಿದ್ದರಾಮಯ್ಯ

03.55–‘ಗೋವಾದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಇತ್ತು. ಆದರೆ, ನಮ್ಮನ್ನೇಕೆ ಸರ್ಕಾರ ರಚನೆಗೆ ಆಹ್ವಾನಿಸಲಿಲ್ಲ? ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ’ – ಸಿದ್ದರಾಮಯ್ಯ

03.52–‘2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಅವರಿಗೆ ಬಹುಮತ ಇರಲಿಲ್ಲ. ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚಿಸಿದರು. ಆಪರೇಷನ್ ಕಮಲ ಮಾಡಿದರು’ – ಸಿದ್ದರಾಮಯ್ಯ

03.50–‘ಕರ್ನಾಟಕದಲ್ಲಿ ಈ ಹಿಂದೆಯೂ ಮೂರ್ನಾಲ್ಕು ಬಾರಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಕೇಂದ್ರದಲ್ಲಿಯೂ ಆಗಿದೆ’ – ಸಿದ್ದರಾಮಯ್ಯ

03.45– ‘ರಾಜಕೀಯಕ್ಕೆ ಬನ್ನಿ ಎಂದು ನಮ್ಮನ್ನು ಯಾರೂ ಕರೆದಿಲ್ಲ. ನಾವಾಗಿಯೇ ರಾಜಕೀಯಕ್ಕೆ ಬಂದೆವು. ಇದೊಂದು ವೃತ್ತಿಯೂ ಅಲ್ಲ. ರಾಜಕೀಯ ಎಂಬುದು ಪ್ರವೃತ್ತಿ. ನಾನು ವೃತ್ತಿಯಲ್ಲಿ ವಕೀಲ. ಹಾಗೆಂದು ರಾಜಕೀಯಕ್ಕೆ ಬಂದ ಮೇಲೆ ತತ್ವ, ಸಿದ್ಧಾಂತ ಇರಬೇಕು. ಅದಕ್ಕೆ ಬದ್ಧರಾಗಿರಬೇಕು. ನಾನು ಸಂವಿಧಾನವನ್ನು ನಂಬುತ್ತೇನೆ. ಎಲ್ಲ ಜನರಿಗೂ ಸಾಮಾಜಿಕ ನ್ಯಾಯ ದೊರೆಯಬೇಕು ಎಂಬುದು ನನ್ನ ಆಶಯ’ – ಸಿದ್ದರಾಮಯ್ಯ

ಮತ ಹಂಚಿಕೆ ಪ್ರಮಾಣ ನಮಗೇ ಹೆಚ್ಚಿತ್ತು: ಸಿದ್ದರಾಮಯ್ಯ

03.40–ಬಿ.ಎಸ್‌.ಯಡಿಯೂರಪ್ಪನವರಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕೊಟ್ಟರು. ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶವನ್ನೂ ಕೊಟ್ಟರು. ಆದರೆ, ಒಂದೇ ದಿನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು– ಸಿದ್ದರಾಮಯ್ಯ

03.35–ವಿಪರ್ಯಾಸವೆಂದರೆ ನಮಗೆ ಮತಹಂಚಿಕೆ ಪ್ರಮಾಣ ಹೆಚ್ಚಿತ್ತು, ಸ್ಥಾನ ಕಡಿಮೆ ಇತ್ತು. ಆದರೆ ಬಿಜೆಪಿಗೆಮತಹಂಚಿಕೆ ಪ್ರಮಾಣ ಕಡಿಮೆ ಇತ್ತು, ಸ್ಥಾನ ಹೆಚ್ಚಿತ್ತು – ಸಿದ್ದರಾಮಯ್ಯ

03.32–ಅತಂತ್ರ ಫಲಿತಾಂಶ ಬಂದ ಕಾರಣ ಹೈಕಮಾಂಡ್ ಸೂಚನೆ ಮೇರೆಗೆ ಜೆಡಿಎಸ್‌ ಜತೆ ಸರ್ಕಾರ ರಚಿಸುವ ತೀರ್ಮಾನ ಕೈಗೊಂಡಿದ್ದೆವು – ಸಿದ್ದರಾಮಯ್ಯ

03.30–‘2018ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಜನ ಬಹುಮತ ಕೊಟ್ಟಿರಲಿಲ್ಲ. ನಮಗೆ ಬಿಜೆಪಿಗಿಂತ ಕಡಿಮೆ ಸ್ಥಾನ ಬಂದಿತ್ತು. ಆದರೆ ಮತ ಹಂಚಿಕೆ ಪ್ರಮಾಣ ನಮಗೆ ಶೇ 38.14ರಷ್ಟಿತ್ತು. ಇದು 2013ಕ್ಕಿಂತ (ಶೇ 36.6) ಹೆಚ್ಚು. ಬಿಜೆಪಿ ಶೇ 36ರಷ್ಟು ಮತ್ತು ಜೆಡಿಎಸ್‌ ಶೇ 18ರಷ್ಟು ಮತ ಪಡೆದಿದ್ದವು’ – ಸಿದ್ದರಾಮಯ್ಯ

03.27–ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂತು –ಸಿದ್ದರಾಮಯ್ಯ

03.25–ಸದನ ಉದ್ದೇಶಿಸಿ ಮಾತಿಗೆ ಆರಂಭಿಸಿದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ

03.20– ‘ಪಕ್ಷೇತರ ಶಾಸಕರು ಹೇಗೆ ನಮ್ಮ ವಿರುದ್ಧ ಕೈ ಎತ್ತುತ್ತಾರೋ ನೋಡ್ತೀವಿ, 5–6 ಗಂಟೆ ವೇಳೆಗೆ ಎಲ್ಲ ಮುಕ್ತಾಯವಾಗಲಿದೆ’: ಡಿ.ಕೆ. ಶಿವಕುಮಾರ್

03.17–ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

03.10–ವಿಶ್ವಾಸಮತ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿದೆ,ವಿಷಯಾಂತರ ಮಾಡಬೇಡಿ ಎಂದು ಸಭಾಧ್ಯಕ್ಷರಿಂದ ಶಾಸಕರಿಗೆ ಸೂಚನೆ

03.00–ಅತೃಪ್ತ ಶಾಸಕರು ತಂಗಿರುವ ಮುಂಬೈನ ಹೋಟೆಲ್ ಎದುರು ಮಹಾರಾಷ್ಟ್ರ ಯುವ ಕಾಂಗ್ರೆಸ್‌ನಿಂದ ಧರಣಿ, ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

02.50–‘ಕುಮಾರಸ್ವಾಮಿಯವರು ಅಧಿಕಾರ ಸ್ವೀಕರಿಸಿದಂದಿನಿಂದಲೂ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ’:ಸಾ.ರಾ.ಮಹೇಶ್ ಆರೋಪ

02.45–ಅಡಗೂರು ಎಚ್. ವಿಶ್ವನಾಥ್ ಅವರು ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಸುದ್ದಿ ಉಲ್ಲೇಖಿಸಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿದ ಸಾ.ರಾ.ಮಹೇಶ್

02.40–ಅತೃಪ್ತ ಶಾಸಕರ ವಿರುದ್ಧ ಸಚಿವ ಸಾ.ರಾ.ಮಹೇಶ್ ಆಕ್ರೋಶ. ‘ನೀನೇ ಸಾಕಿದಾ ಗಿಣಿ’ ಪದ್ಯ ಉಲ್ಲೇಖಿಸಿ ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆಟಾಂಗ್

02.35–‘ರಾಜ್ಯಕ್ಕೆ ಕೆಟ್ಟ ನಿರ್ದೇಶನವನ್ನು ನೀವು ಕೊಡುತ್ತಿದ್ದೀರಿ. ಇಂದು ನಮಗಾದ ಪರಿಸ್ಥಿತಿ ನಾಳೆ ನಿಮಗೂ ಬರಲಿದೆ’, ಬಿಜೆಪಿಯನ್ನು ಉದ್ದೇಶಿಸಿಡಿ.ಕೆ.ಶಿವಕುಮಾರ್ ಹೇಳಿಕೆ

02.30–‘ಹೂಡಿಕೆ ಮಾಡಲು ಯಾರ್‍ಯಾರು ಬರುತ್ತಾರೋ ಅವರಿಗೆಲ್ಲ ನಮ್ಮ ಸರ್ಕಾರ ಅವಕಾಶ ಮಾಡಿಕೊಡಲಿದೆ. ಹೂಡಿಕೆ ಸೆಳೆಯುವುದು, ಉದ್ಯೋಗ ಸೃಷ್ಟಿಯೇ ನಮ್ಮ ಆದ್ಯತೆ’–ಡಿ.ಕೆ.ಶಿವಕುಮಾರ್

02.25–‘ಜಿಂದಾಲ್ ವಿಚಾರದಲ್ಲಿ ನನ್ನದೇನೂ ಇಲ್ಲ. ಹೂಡಿಕೆ ಸೆಳೆಯುವ ಉದ್ದೇಶದಿಂದ ಒಪ್ಪಿಗೆ ಸೂಚಿಸಿದ್ದೆ ಅಷ್ಟೆ. ಆದರೂ ಲಂಚ ಪಡೆದಿದ್ದಾರೆ ಎಂದು ಸುಳ್ಳು ಆರೋಪ ಮಾಡಲಾಯಿತು’: ಡಿ.ಕೆ.ಶಿವಕುಮಾರ್ ಅಳಲು

02.20–‘ನನ್ನನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಬೇಕು ಎಂದು ಬಿಜೆಪಿ ಸಂಚು ಹೂಡುತ್ತಿದೆ’: ಸದನದಲ್ಲಿ ಡಿ.ಕೆ.ಶಿವಕುಮಾರ್ ಆರೋಪ

02.15–ಸದನದಲ್ಲಿ ಮಾತು ಮುಂದುವರಿಸಿದ ಸಚಿವ ಡಿ.ಕೆ.ಶಿವಕುಮಾರ್

01.45–15 ಜನರಿಗೆ ವಿಪ್‌ ಕೊಡಬೇಡಿ ಎಂದು ಸುಪ್ರೀಂ ಕೋರ್ಟ್‌ ಎಲ್ಲಿಯೂ ಹೇಳಿಲ್ಲ. ಆದರೆ, ಒತ್ತಡ ಹೇರಬೇಡಿಎಂದಿದ್ದಾರೆ. – ಸಿದ್ದರಾಮಯ್ಯ.

01.40–ಯಡಿಯೂರಪ್ಪ ಅವರೇ ನೀವು ಮುಖ್ಯಮಂತ್ರಿ ಆಗಲು ನಮ್ಮ ತಕರಾರು ಇಲ್ಲ. ಆದರೆ, ನಮ್ಮ ನೋವಿದೆ ಅದನ್ನು ಕೇಳಿಸಿಕೊಳ್ಳಿ ಎಂದು –ಸಚಿವ ಕೃಷ್ಣ ಭೈರೇಗೌಡ.

ಯಡಿಯೂರಪ್ಪನವರೇ ಅವಸರ ಮಾಡಬೇಡಿ. ನಮ್ಮ ಶಾಸಕರನ್ನು ಸೆಳೆದುಕೊಂಡು, ಆಮಿಷ ತೋರಿಸಿದ್ದೀರಿ.
–ಸಚಿವ ಕೃಷ್ಣ ಭೈರೇಗೌಡ ಆರೋಪ.

* ಯಡಿಯೂರಪ್ಪನವರ ಛಲ ಮೆಚ್ಚುವಂತದ್ದು -ಡಿಕೆಶಿ

01.25–​ಸದ್ಯದ ಪರಿಸ್ಥಿತಿಯಲ್ಲಿ ವಿಶ್ವಾಸಮತಕ್ಕೆ ಬೇಕಿರುವಅಂಕಿ–ಅಂಶಗಳಲ್ಲಿ ಏರುಪೇರಾಗಬಹುದು ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

01.10–ಮಂಕುತಿಮ್ಮನ ಕಗ್ಗ ಉಲ್ಲೇಖಿಸಿ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಮಾಧ್ಯಮದವರು ನಮ್ಮನ್ನು ಕಳ್ಳರು ಕಳ್ಳರು ಎಂದು ಕರೆದು ತಲೆ ಎತ್ತಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ.

01.05–‘ಡಿಯರ್‌ ಬಾಂಬೆ ಫ್ರೆಂಡ್ಸ್‌’ ನಿಮ್ಮ ಕನಸು ಈಡೇರಲ್ಲ. ಹನುಮಂತನೇ ಹಗ್ಗ ಕಡಿಯುವಾಗ ಶಾವಿಗೆ ಕೇಳಿದ ಎಂಬಂತೆ ಸಂದಿಗ್ಧತೆ.. ಹೀಗೆ ಬರೆದ ಚೀಟಿಯೊಂದು ಸದನಲದಲ್ಲಿ ಶಾಸಕರೊಬ್ಬರಟೇಬಲ್‌ ಮೇಲಿತ್ತು.

ಸದನಲ್ಲಿ ಸದಸ್ಯರೊಬ್ಬರ ಟೇಬಲ್ ಮೇಲೆ ಇದ್ದ ಬರಹ ಹೀಗಿತ್ತು.
ಸದನಲ್ಲಿ ಸದಸ್ಯರೊಬ್ಬರ ಟೇಬಲ್ ಮೇಲೆ ಇದ್ದ ಬರಹ ಹೀಗಿತ್ತು.

01.05ಉಪ ಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಅವರು ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಕಲಾಪ ನಡೆಸುತ್ತಿದ್ದಾರೆ.

01.00ಸಂಜೆ ಆಗುತ್ತಲೇ, ಮನೆಗೆ ಹೋಗ್ಬೇಕು(ಕಂಪ್ಲಿ ಗಣೇಶ್ ಬಿಟ್ಟು 😂) ಎಂದು ಟ್ವೀಟ್‌ ಮಾಡುವ ಮೂಲಕಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪಮೈತ್ರಿ ಪಕ್ಷವನ್ನು ವ್ಯಂಗ್ಯ ಮಾಡಿದ್ದಾರೆ.

12.55ಕಲಾಪ ಆರಂಭವಾಗಿದೆ. ಆದರೆ, ಸಿಎಂ ಕುಮಾರಸ್ವಾಮಿ ಸದನಕ್ಕೆ ಬರದೆ ತಾಜ್‌ ವೆಸ್ಟೆಂಡ್‌ನಲ್ಲಿ ಇದ್ದಾರೆ. ಈ ಮೂಲಕ ಜನರ ತೆರಿಗೆ ಹಣದ ಲೂಟಿ ಮಾಡುವ ಮತ್ತು ಪೋಲು ಮಾಡುವ ಸಂದೇಶವನ್ನು ಸಿಎಂ ರವಾನಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮಾಡಿದೆ.

ಮುಂಬೈನಿಂದ ವಾಪಸ್‌ ಬನ್ನಿ,ವಿಶ್ವಾಸ ತೋರಿಸೋಣ:ಮಾನ್ವಿ ಶಾಸಕ

12.50–ಕುಮಾರಸ್ವಾಮಿ ಗ್ರಾಮವಾಸ್ತ್ರವ್ಯದ ಹರಿಕಾರ. ಅವರು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಕೆರೆಗೋಡು ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದರು. ಸಾವಿರಾರು ಜನ ಅರ್ಜಿ ತಂದು ಪರಿಹಾರ ಕಂಡುಕೊಂಡಿದ್ದಾರೆ. ರೈತರ ಸಾಲಮನ್ನಾ ಮಾಡುವ ಕಾರ್ಯ ಆಗಿದೆ. ನಾವೆಲ್ಲಾ ಶಾಸಕರು ಬೆಂಬಲ ನೀಡಬೇಕು. ಮುಂಬೈನಲ್ಲಿರುವ ಶಾಸಕರಲ್ಲಿ ಕೈಮುಗಿದು ಕೇಳುತ್ತೇನೆ. ಜೆಡಿಎಸ್‌ ಕಾಂಗ್ರೆಸ್‌ ಶಾಸಕರು ಒಂದು ಕುಟುಂಬದಲ್ಲಿದ್ದೇವೆ. ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ವಾಪಸ್‌ ಬನ್ನಿ. ವಿಶ್ವಾಸ ತೋರಿಸೋಣ. 5 ವರ್ಷ ಉತ್ತಮ ಆಡಳಿತ ನೀಡಿ ಜನರ ಸೇವೆ ಮಾಡೋಣ. ಬೆಂಬಲ ಕೊಡಿ ಎಂದು ಸದನದ ಮೂಲಕ ತಮ್ಮಲ್ಲಿ ಕೈಮುಗಿದು ಕೋರುವೆ. –ಮಾನ್ವಿ ಶಾಸಕ.

12.40–ಇಂದೇ ವಿಶ್ವಾಸ ಪ್ರಕ್ರಿಯೆನ್ನು ಸ್ಪೀಕರ್‌ ಪೂರ್ಣಗೊಳಿಸಲಿದ್ದಾರೆ ಎಂದು ಅತೃಪ್ತ ಶಾಸಕರ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಆದ್ದರಿಂದ, ಇಂದು ಸ್ಪಷ್ಟ ತೀರ್ಮಾನ ವಿಧಾನಸಭೆಯಲ್ಲಿ ನಡೆಯಲಿದೆ ಎಂಬ ವಿಶ್ವಾಸವಿದೆ. –ಬಿಜೆಪಿ ಶಾಸಕ ಆರ್‌.ಅಶೋಕ್‌.

ಸದನಕ್ಕೆ ಹಾಜರಾಗದ ಸಿಎಂತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ‌ ಮೊಕ್ಕಾಂ

12–ಇದುವರೆಗೂ ವಿಧಾನಸಭೆಗೆ ಹಾಜರಾಗದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ‌ ಮೊಕ್ಕಾಂ ಮಾಡಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ಸಿಎಂ ಭೇಟಿಯಾಗಿದ್ದಾರೆ.

11.48-ವಿಧಾನ ಪರಿಷತ್‌ನಲ್ಲಿ ಮುಂದುವರಿದ ಗದ್ದಲ. ಸಂಜೆ 6.30 ಗಂಟೆಗೆ ಸದಸ ಮುಂದೂಡಿಕೆ.

11.45-ಸ್ಪೀಕರ್‌ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ.

11.42-ಸ್ಪೀಕರ್‌ ಕಚೇರಿಗೆ ತೆರಳಿ ರಮೇಶ್‌ಕುಮಾರ್‌ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್‌ ಶಾಸಕಾಂಗ‍ಪಕ್ಷದ ನಾಯಕ ಸಿದ್ದರಾಮಯ್ಯ.

11.40-ಆಡಳಿತ ಪಕ್ಷದವರೇ ಗಲಾಟೆ ಮಾಡುತ್ತಿದ್ದಾರೆ. ನಾವು ಮೌನವಾಗಿದ್ದೇವೆ ಎಂದರೆ ಅದರ ಅರ್ಥ ವಿಜಯದೆಡೆಗೆ– ಬಿಜೆಪಿ ಶಾಸಕ ಆರ್‌.ಅಶೋಕ್‌.

11.28–ಸಭಾಧ್ಯಕ್ಷರ ಕೊಠಡಿಯಲ್ಲಿ ಇದೀಗ ಅತೃಪ್ತ ಶಾಸಕರ ಪರ ಹಾಗೂ ಕಾಂಗ್ರೆಸ್ ಪರ ವಕೀಲರು ಇದ್ದು, ಚರ್ಚೆ ನಡೆಸುತ್ತಿದ್ದಾರೆ

11.25-ಪಾಕ್‌ ಪ್ರಧಾನಿ ಜತೆ ಬಿರಿಯಾನಿ ತಿನ್ನುತ್ತೀರಿ – ಖಾದರ್

ಬಿಜೆಪಿಗೆ ದೇಶ ಪ್ರೇಮ, ಜನರ ಮೇಲೆ ಹಾಗೂ ಸಂವಿಧಾನದ ಮೇಲೆ ವಿಶ್ವಾಸ ಇದ್ದರೆ ರಾಜೀನಾಮೆ ನೀಡಿದ ಶಾಸಕರಿಗೆ ಯಾವುದೇ ಸ್ಥಾನ ನೀಡಬೇಡಿ. ನಮ್ಮ ಶಾಸಕರನ್ನು ಕೋಟೆಯಲ್ಲಿ ಕೂಡಿ ಹಾಕಿದ್ದೀರಿ. ನಮ್ಮ ಸಚಿವರು ಅಲ್ಲಿಗೆ ಹೋದಾಗ ಪೊಲಿಸ್‌ ಬಳಸಿ ತಡೆಯುತ್ತೀರಿ. ಪಾಕ್‌ ಪ್ರಧಾನಿ ಕರೆದುಕೊಂಡು ಬಿರಿಯಾನಿ ಊಟ ಮಾಡುತ್ತೀರಿ. ನಮ್ಮ ಮೇಲೆ ದಾಳಿ ಮಾಡಿದವರನ್ನು ಕರೆಸಿಕೊಂಡು ರೆಡ್‌ ಕಾರ್ಪೆಟ್‌ ಹಾಸುತ್ತಿದ್ದೀರಿ. ನಮ್ಮವರ ಜತೆ ಮತನಾಡು ಅವಕಾಶ ಕೊಡದೆ ತಡೆಯುತ್ತೀರಿ. ಅಧಿಕಾರಕ್ಕಾಗಿ ಏನೆಲ್ಲಾ ಮಾಡುತ್ತಿದ್ದೀರಿ. ಇದು ಆತ್ಮ ಸಾಕ್ಷಿಯಾಗಿ ಕೇಳಿಕೊಳ್ಳಿ. –ಯು.ಟಿ. ಖಾದರ್‌.

11.25-ಮುಂಬೈನಲ್ಲಿರುವವರು ಅತೃಪ್ತರು ಎಂದು ಮಾಧ್ಯಮದವರು ಬಿಂಬಿಸಬೇಡಿ. ಅವರೆಲ್ಲ ತೃಪ್ತರು. ಅವರು ಬಂದ ಮೇಲೆ ಎಲ್ಲವೂ ಬಯಲಾಗುತ್ತದೆ ಎಂದು ಖಾದರ್ ಛೇಡಿಸಿದರು.

11.16-ಈಗ ನಡೆದಿರುವುದು ನಿಮ್ಮ ಪಾರ್ಟಿಯ ಒಳ ಪ್ಯಾಪಾರಬಿಜೆಪಿ ಶಾಸಕ ಮಾಧುಸ್ವಾಮಿ.

11.14-ನಮ್ಮ ಪಕ್ಷದ ಅಡಿ ಗೆದ್ದವರನ್ನು ವಾಮ ಮಾರ್ಗದಲ್ಲಿ ಅಪಹರಿಸಿದ್ದೀರಿ. ರಾಜೀನಾಮೆ ನೀಡಿದವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ಅವರಿಗೆ ಮಂತ್ರಿ ಸ್ಥಾನ ನೀಡುವುದಿಲ್ಲ ಎಂದು ನಿಮ್ಮ ರಾಜ್ಯ, ರಾಷ್ಟ್ರ ನಾಯಕರಿಂದ ಹೇಳಿಸಿ. ಈಗಲೇ, ಈ ಕ್ಷಣಕ್ಕೆ ಸಿಎಂ ಕರೆತಂದು ವಿಶ್ವಾಸ ಯಾಚಿಸುತ್ತೇವೆ, ನಿರ್ಣಯ ಮಾಡುತ್ತೇವೆ. ಯಾಕೆ ಗುಟ್ಟು ಮುಚ್ಚಿಡುತ್ತಿದ್ದೀರಿ. ಯಾಕೆ ನಾಟಕ ಮಾಡುತ್ತಿದ್ದೀರಿ –ಶಾಸಕ ಶಿವಲಿಂಗೇ ಗೌಡ.

11.10-ಶಾಸಕರ ಮೇಲೆ ಗುಂಡಿಟ್ಟು ಬೆದರಿಸುತ್ತಿದ್ದೀರಿ. ನಮ್ಮ ಶಾಸಕರನ್ನು ನೀವೇ ಕಳುಹಿಸಿದ್ದು. ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರು ಸೇರಿ ಕಳುಹಿಸಿದ್ದೀರಿ, ಅನುಭವಿ ವಕೀಲರಿಂದ ಅವರಿಗೆ ಮಾರ್ಗದರ್ಶನ ನೀಡಿ, ಆಮಿಷ ಒಡ್ಡಿ ಕಳುಹಿಸಿದ್ದೀರಿ ಎಂದು ಕಾಂಗ್ರೆಸ್‌ನ ಯು.ಟಿ. ಖಾದರ್ ಆಪಾದಿಸಿದರು.

11.07-ಸುಪ್ರೀಂ ಕೋರ್ಟ್‌ ವಿಚಾರವನ್ನು ಇಲ್ಲಿ ಚರ್ಚಿಸಬೇಡಿ. ಶಾಸಕರನ್ನು ಕರೆತರುವುದು, ಇಟ್ಟುಕೊಳ್ಳುವುದು ನಿಮಗೆ ಬಿಟ್ಟದ್ದು. ಕಲಾಪವನ್ನು ಏಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ಬಿಜೆಪಿ ಶಾಸಕಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿದರು.

11.05-ಕಲಾಪ ಆರಂಭವಾಗಿ 1 ಗಂಟೆ 5 ನಿಮಿಷ ತಡವಾದರೂ ಜೆಡಿಎಸ್‌ ಶಾಸಕರು ಸದನಕ್ಕೆ ಬಂದಿಲ್ಲ.

10.55-ಅತೃಪ್ತ ಶಾಸಕರ ಪರ ವಕೀಲರು ಕಚೇರಿಗೆ ಬಂದಿರುವುದರಿಂದ ಸಭಾಧ್ಯಕ್ಷರು ಸದನದಿಂದತೆರಳಿದರು. ಉಪಾಧ್ಯಕ್ಷರು ಇಲ್ಲದ ಕಾರಣಸಭಾಧ್ಯಕ್ಷ ಸ್ಥಾನದಲ್ಲಿ ಎ.ಟಿ.ರಾಮಸ್ವಾಮಿ ಕುಳಿತು ಕಲಾಪ ನಡೆಸುತ್ತಿದ್ದಾರೆ.

ಯಾರು ಏನೇ ಚರ್ಚೆ ಮಾಡಿ, ನಿಗದಿಪಡಿಸಿದ ಸಮಯಕ್ಕೆ ವಿಶ್ವಾಸಮತ ನಡೆಯಲಿದೆ ಎಂದು ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಹೊರಗಡೆ ಹೇಳಿದರು.

ಪ್ರತಿಪಕ್ಷದ ಎಮರ್ಜನ್ಸಿ ನನಗೆ ಅರ್ಥವಾಗುತ್ತದೆಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌.

10.36-ಪಕ್ಷದ ಶಾಸಕರು ರಾಜೀನಾಮೆ ನೀಡಿದಾಗ, ಸಿಎಂ ಗೊದಲ ಇದ್ದಾಗ ವಿಶ್ವಾಸ ಯಾಚಿಸುವುದಾಗಿ ಹೇಳಿದ್ದರು. ಪ್ರತಿಪಕ್ಷದ ಎಮರ್ಜನ್ಸಿ ನನಗೆ ಅರ್ಥವಾಗುತ್ತದೆ. ವಿಶ್ವಾಸ ಯಾಚನೆ ವಿಷಯ ಕುರಿತು ವಿಸ್ತೃತ ಚರ್ಚೆ ಆಗಬೇಕು. –ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌.

ಚರ್ಚೆ ಆರಂಭಿಸಿದ ಖಾದರ್‌, ರಾಜ್ಯ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ. ಕೊಡಗು ಹಾಗೂ ಮಳೆ ಹಾನಿ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡಿದೆಎಂದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯರು, ಸಂತ್ರಸ್ತರಿಗೆ ಸರ್ಕಾರದಿಂದ ಎಷ್ಟು ಅನುದಾನ ಕೊಟ್ಟಿದ್ದೀರಿ ಎಂಬ ಲೆಕ್ಕ ಹೇಳಿ ಎಂದು ಪ್ರಶ್ನಿಸಿದರು.

ಪೊಲೀಸ್‌ ಇಲಾಖೆ ಮೇಲಿನ ವಿಶ್ವಾಸದಿಂದ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ. ಸಿಎಂ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಜನರ ಸಮಸ್ಯೆಗೆ ಸಂಬಂಧಿಸಿ ಬರುವ ಬೇಡಿಕೆಗಳನ್ನು ಪಕ್ಷಾತೀತವಾಗಿ ಈಡೇರಿಸುತ್ತಿದ್ದೇವೆ.ನೋಟುಗಳ ಅಪ ಮೌಲ್ಯದಿಂದಾಗಿ ಬ್ಯಾಂಕ್‌ಗಳ ಮುಂದೆ ಕ್ಯೂ ನಿಂತು 150 ಜನ ಸತ್ತಿರುವುದು ಭಾರತದಲ್ಲಿ ಮಾತ್ರ. ಹವಾಲ ನಿಂತಿದೆಯಾ ಎಂಬ ಪ್ರಶ್ನೆ ಬರುತ್ತದೆ ಎಂದು ಖಾದರ್‌ ಹೇಳಿದರು.

ನೋಟ್‌ ಬ್ಯಾನ್‌ ಬಗ್ಗೆ ಮಾಹಿತಿಯನ್ನು ಆರ್‌ಬಿಐನಿಂದ ತರಿಸಿಕೊಳ್ಳಿ. ಅದರ ಉದ್ದೇಶದಂತೆ ನಕಲಿ ನೋಟು ಮುದ್ರಣವಾಗಿ ಉಗ್ರರಿಗೆ ಪೂರೈಕೆಯಾಗುವುದುನ್ನು ತಪ್ಪಿಸಲು. ನಿಮ್ಮ ಆಲೋಚನೆ ತಪ್ಪು ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪಿಸಿದರು.

*ನೋಟ್‌ ಬ್ಯಾನ್‌ ಸಮರ್ಥಿಸಿಕೊಳ್ಳುವುದು ಸರಿಯಲ್ಲ – ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ.​

10.34–ಮೈತ್ರಿ ನಾಯಕರು ಮತ್ತು ಶಾಸಕರು ಸದನಕ್ಕೆ ಬರುವುದು ತಡವಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. –ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌.

10.32–ಕಲಾಪ ಆರಂಭವಾಗಿ ಅರ್ಥಗಂಟೆ ಆದರೂ ಮೈತ್ರಿ ನಾಯಕರು ಮತ್ತು ಶಾಸಕರು ಸದನಕ್ಕೆ ಬಂದಿಲ್ಲ.

10.25–ಕಲಾಪ ಆರಂಭ 10ಗಂಟೆಗೆ ಎಂದು ಗೊತ್ತಿಲ್ಲದೆ, 11ಗಂಟೆಗೆ ಎಂದು ತಿಳಿದುಕೊಂಡು ಮೈತ್ರಿಯ ನಾಯಕರು ಮತ್ತು ಶಾಸಕರು ಬರುವುದು ತಡವಾಗಿದೆ –ಶಾಸಕ ಶಿವಲಿಂಗೇ ಗೌಡ.

10.10–ವಿಶ್ವಾಸಮತ ಯಾಚಿಸಿದ ಮುಖ್ಯಮಂತ್ರಿ ಸದನದಿಂದ ನಾಪತ್ತೆಯಾಗಿರುವುದು ಏಕೆ? –ಯಡಿಯೂರಪ್ಪ ಪ್ರಶ್ನೆ

10.15– ಆಡಳಿತ ಪಕ್ಷ ವಿಶ್ವಾಸಮತ ಯಾಚನೆಯನ್ನು ಎಷ್ಟು ಲಘುವಾಗಿ ತೆಗೆದುಕೊಂಡಿದೆ- ಬಿಜೆಪಿ ಶಾಸಕಜಗದೀಶ್ ಶೆಟ್ಟರ್ ಆಕ್ಷೇಪ

10.10–ಸದನಕ್ಕೆ ಬಾರದ ಮೈತ್ರಿ ನಾಯಕರು: ಸ್ಪೀಕರ್ಅಸಮಾಧಾನ

ಮೈತ್ರಿ ನಾಯಕರು ಮತ್ತು ಶಾಸಕರು ಸದನಕ್ಕೆ ಬಾರದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್, ‘ನಾನು ಮನೆಗೆ ನಿಮ್ಮ ಜತೆಗೇ ತಡವಾಗಿ ಹೋಗಿದ್ದೇನೆ. ನಾನೂ ಯುವಕನಲ್ಲ, ನನಗೂ 70–72 ವರ್ಷ ವಯಸ್ಸಾಗಿದೆ. ಸದನಕ್ಕೆ ಬೇಗ ಬರಬೇಕಿತ್ತು ಎಂದರು.ಎ.ಟಿ.ರಾಮಸ್ವಾಮಿ ಮಾತ್ರ ಮೈತ್ರಿ ಪಡೆಯಲ್ಲಿ ಸದನಲ್ಲಿದ್ದಾರೆ.

* 15 ನಿಮಿಷ ತಡವಾಗಿ ಬರುತ್ತಾರೆ ಅವಕಾಶಕೊಡಿ ಎಂದು ಸಭಾಧ್ಯಕ್ಷರಿಗೆ ಶಾಸಕ ಪ್ರಿಯಾಂಕ್‌ ಎಂ.ಖರ್ಗೆ ಮನವಿ ಮಾಡಿದರು.
ಇದಕ್ಕೆ ಬಿಜೆಪಿಯ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

* ಪ್ರಜಾತಂತ್ರ ವ್ಯವಸ್ಥೆಯನ್ನು ಅಣಕವಾಡುತ್ತಿದ್ದೀರಿ. ಸದನದಲ್ಲಿ ಖಾಲಿ ಕುರ್ಚಿಗಳನ್ನು ಬಿಟ್ಟು, ನಿಮ್ಮ ಬೆತ್ತೆಲೆ ಪ್ರದರ್ಶನವನ್ನು ಯಾಕೆ ಮಾಡುತ್ತಿದ್ದೀರಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದರು.

10.5–ವಿಧಾನಸಭೆ ಕಲಾಪ 10.5ಕ್ಕೆ ಆರಂಭವಾಯಿತು.

09.55–ಶಾಸಕರನ್ನು ಬೆದರಿಸಲು ಸದನ, ಅಧ್ಯಕ್ಷರ ದುರ್ಬಳಕೆ: ಮಾಧುಸ್ವಾಮಿ

ಸದನ ಮತ್ತು ಅಧ್ಯಕ್ಷರನ್ನು ಬಳಸಿಕೊಂಡು ಆಡಳಿತ ಪಕ್ಷಗಳು ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸುವ ಬೆದರಿಕೆಯೊಡ್ಡುತ್ತಿದ್ದಾರೆ. ಈ ಮೂಲಕ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇವರು ಏನೇ ಮಾಡಿದರೂ ಫಲಿತಾಂಶ ಎಲ್ಲರಿಗೂ ಗೊತ್ತಿದೆ. ಯಾರದೋ ಶಾಸ್ತ್ರ ನಂಬಿಕೊಂಡು ಕಲಾಪ ಮುಂದೂಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಪ್ರತಿಕ್ರಿಯಿಸಿದರು.

9.45–ವಿಧಾನಸೌಧಕ್ಕೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಬಂದರು.

9.20–ರೆಸಾರ್ಟ್‌ನಿಂದ ವಿಧಾನಸೌಧಕ್ಕೆ ಬಿಜೆಪಿ ಶಾಸಕರು

ಯಲಹಂಕದಲ್ಲಿನ ರಮಡಾ ರೆಸಾರ್ಟ್‌ನಲ್ಲಿ ತಂಗಿದ್ದ ಬಿಜೆಪಿ ಶಾಸಕರು ಸದನಕ್ಕೆ ಹಾಜರಾಗಲು ಬೆಳಿಗ್ಗೆ ಬಸ್‌ನಲ್ಲಿ ಹಾಗೂ ಖಾಸಗಿ ವಾಹನಗಳಲ್ಲಿ ವಿಧಾನಸೌಧಕ್ಕೆ ಹೊರಟಿದ್ದಾರೆ.

9.15–ಕುಮಾರಸ್ವಾಮಿ ಮನೆಗೆ, ಯಡಿಯೂರಪ್ಪ ಸಿಎಂ: ಬಿಜೆಪಿಯ ರವಿಕುಮಾರ್

ಯಡಿಯೂರಪ್ಪ ಸಿಎಂ ಆರವು ವಾತಾವರಣ ಇಂದು ನಿರ್ಮಾಣವಾಗಿದೆ. ಕುಮಾರಸ್ವಾಮಿ ಅವರು ಮನೆಗೆ ಹೋಗೇ ಹೋಗುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದರು.

9.10–ತಿಳಿವಳಿಕೆ ಕೊರತೆಗೆ ನಾನೇನು ಮಾಡಲಿ: ಸ್ಪೀಕರ್‌

ಶಾಸಕರು ಬರೋದು ಬಿಡೋಡು ಅವರಗೆ ಬಿಟ್ಟದ್ದು, ನನ್ನ ಕರ್ತವ್ಯ ನಾನು ಮಾಡುವೆ. ತಿಳಿವಕೆ ಕೊರತೆಗೆ ನಾನೇನು ಮಾಡಲಾಗುವುದಿಲ್ಲ. ರಾಜೀನಾಮೆ ಹೇಗೆ ಕೊಡಬೇಕು ಎಂಬುದು, ಸ್ಪೀಕರ್‌ ನೋಟಿಸ್‌ ಯಾಕರೆ ಕೊಡುತ್ತಾರೆ ಎಂಬ ತಿಳಿವಳಿಕೆ ಇಲ್ಲ. ಶಾಸಕರಾಗಿ ಮೇರೆಯೋಕೆ ಬರ್ತೀರಾ' ಎಂದು ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಪ್ರಶ್ನಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT