ನಾನೀಗ ರಾಜಕಾರಣ ಬಿಟ್ಟಿದ್ದೇನೆ: ಡಾ.ಕೆ.ಸುಧಾಕರ್

ಚಾಮರಾಜನಗರ: ‘ನಾನೀಗ ರಾಜಕಾರಣ ಬಿಟ್ಟಿದ್ದೇನೆ. ವೈದ್ಯಕೀಯ ವಿದ್ಯಾರ್ಥಿಗಳ ಬಗ್ಗೆ ಮಾತ್ರ ಗಮನ ನೀಡುತ್ತೀದ್ದೇನೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾನುವಾರ ಇಲ್ಲಿ ಹೇಳಿದರು.
ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಬಾಂಧವ್ಯ ಹಾಗೂ ಸಿ.ಪಿ.ಯೋಗೇಶ್ವರ್ ಅವರು ಯಡಿಯೂರಪ್ಪ ವಿರುದ್ಧ ಹೈಕಮಾಂಡ್‌ಗೆ ದೂರು ನೀಡುತ್ತಿರುವ ವಿಚಾರ ಕುರಿತು, ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂದರು.
ಶಾದಿ ಭಾಗ್ಯ ರದ್ದು ಮಾಡಿರುವ ಬಗ್ಗೆ, ‘ಕಾಂಗ್ರೆಸ್ ಯಾವಾಗಲೂ ತಾರತಮ್ಯ ಮಾಡುವ ಪಕ್ಷ. ಬಿಜೆಪಿ ಎಲ್ಲ ವರ್ಗವನ್ನೂ ಒಂದೇ ರೀತಿ ನೋಡುತ್ತದೆ. ಬಜೆಟ್‌ನಲ್ಲಿ ಎಲ್ಲ ವರ್ಗದವರಿಗೂ ಕೊಡುಗೆ ನೀಡಲಾಗಿದೆ’ ಎಂದು ತಿಳಿಸಿದರು.
**
ಸಚಿವರ ಅಳಿಯನ ವಿರುದ್ಧ ಸ್ವಾಮೀಜಿ ಆರೋಪ
ಗೋಕಾಕ (ಬೆಳಗಾವಿ ಜಿಲ್ಲೆ): ‘ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಅಳಿಯ ಅಂಬಿರಾವ ಪಾಟೀಲ ಹಾಗೂ ಬೆಂಬಲಿಗರು ನನಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಗೋಕಾಕ ತಾಲ್ಲೂಕಿನ ಯೋಗಿಕೊಳ್ಳದ ನಿರ್ವಾಣೇಶ್ವರ ಮಠದ ವೀರಭದ್ರ ಸ್ವಾಮೀಜಿ ಆರೋಪಿಸಿದ್ದಾರೆ.
ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಅವಧೂತ ಪರಂಪರೆಯ ಈ ಮಠದಲ್ಲಿ 15 ವರ್ಷಗಳಿಂದ ಪೀಠಾಧಿಪತಿಯಾಗಿದ್ದೇನೆ. ಆದರೆ, ಮಠದ ಜೀರ್ಣೋದ್ಧಾರ ಆಗಿರಲಿಲ್ಲ. ಇದಕ್ಕಾಗಿ ಪಿತ್ರಾರ್ಜಿತವಾದ 16 ಎಕರೆಯಲ್ಲಿ 5 ಎಕರೆಯನ್ನು ಮಾರಿದ್ದೆ. ಪೂರ್ವಾಶ್ರಮದ ಆಸ್ತಿ ಅದು. ಆ ಹಣದಿಂದ ಅಭಿವೃದ್ಧಿಗೆ ಯೋಜಿಸಿದ್ದೆ. ಆದರೆ, ಜಮೀನು ಮಾರಿದ್ದರ ಹಣ ನನಗೆ ತಲುಪದಂತೆ ಮಾಡಿದ್ದಾರೆ. ಇದರಿಂದ ಬೇಸರವಾಗಿದೆ. ಹಣ ಕೇಳಿದರೆ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದ್ದಾರೆ.
ಪ್ರತಿಕ್ರಿಯೆಗೆ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಲಭ್ಯವಾಗಲಿಲ್ಲ.
**
ಎತ್ತಿನಹೊಳೆ ವರದಿ ಸಲ್ಲಿಸಿ ಜಾರಕಿಹೊಳಿ ಸೂಚನೆ
ಬೆಂಗಳೂರು: ಬಯಲುಸೀಮೆ ಜಿಲ್ಲೆಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ವಿಳಂಬ ಹಾಗೂ ಯೋಜನಾ ಗಾತ್ರ ಹಿಗ್ಗಿರುವ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
‘ದಿಕ್ಕು ತಪ್ಪಿದ ಎತ್ತಿನಹೊಳೆ’ ಯೋಜನೆ ಬಗ್ಗೆ ‘ಪ್ರಜಾವಾಣಿ’ಯ ಭಾನುವಾರದ ‘ಒಳನೋಟ’ದಲ್ಲಿ ಭಾನುವಾರ ವಿವರವಾದ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಒಂದೆರಡು ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
‘ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನ ಮಾಡಬೇಕಿತ್ತು. ಆಗ ಕೆಲವು ಜಿಲ್ಲೆಗಳಿಗೆ ನೀರು ಪೂರೈಕೆ ಆಗುತ್ತಿತ್ತು. ಅದರ ಬದಲು ಬೇಕಾಬಿಟ್ಟಿ ಟೆಂಡರ್ ಕರೆದು ಯೋಜನಾ ಮೊತ್ತವನ್ನು ಹಿಗ್ಗಿಸಲಾಗಿದೆ. ಭೂಸ್ವಾಧೀನ ಮಾಡದೆಯೇ ಟೆಂಡರ್ ಕರೆಯಲಾಗಿದೆ. ಈ ವಿಷಯಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸುವಂತೆ ಸೂಚಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.