ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಣಿದ ವರುಣ: ಚುರುಕುಗೊಂಡ ಪರಿಹಾರ; ಹಂಪಿ, ನಂಜನಗೂಡು,ತಲಕಾಡಿನಲ್ಲಿ ಪ್ರವಾಹದ ಆರ್ಭಟ

₹3000 ಕೋಟಿ ತಕ್ಷಣ ಪರಿಹಾರಕ್ಕೆ ಕೇಂದ್ರಕ್ಕೆ ಬೇಡಿಕೆ l ಸಾವಿನ ಸಂಖ್ಯೆ 47ಕ್ಕೆ ಏರಿಕೆ
Last Updated 11 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಯ ಆರ್ಭಟ ಮತ್ತು ನದಿಗಳಲ್ಲಿ ಪ್ರವಾಹದ ರೌದ್ರತೆ ಕಡಿಮೆ ಆಗಿದ್ದರೂ, ಐತಿಹಾಸಿಕ ತಾಣಗಳಾದ ಹಂಪಿ, ಮೈಸೂರು ಜಿಲ್ಲೆಯ ತಲಕಾಡು ಹಾಗೂ ನಂಜನಗೂಡು ಪಟ್ಟಣ ಪ್ರವಾಹದಿಂದ ತತ್ತರಿಸಿವೆ.

ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಪರಿಹಾರ ಕಾರ್ಯಕ್ಕೆ ತಕ್ಷಣವೇ ಕೇಂದ್ರದಿಂದ ₹3,000 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯವೂ ಚುರುಕು ಪಡೆದಿದೆ.

ಪ್ರಮುಖ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡುತ್ತಿರುವುದರಿಂದ, ಜನರ ಆತಂಕ ದೂರವಾಗಿಲ್ಲ. 17 ಜಿಲ್ಲೆಗಳ 2028 ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಆವರಿಸಿರುವ ಪ್ರವಾಹದ ನೀರು ಕಡಿಮೆ ಆಗದ ಕಾರಣ ಪರಿಹಾರ ಸಾಮಗ್ರಿಗಳು ಮತ್ತು ಔಷಧಗಳನ್ನು ತಲುಪಿಸುವುದು ಕಷ್ಟವಾಗಿ ಪರಿಣಮಿಸಿದೆ. ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದೆ. ಮಳೆ ಅವಘಡದಿಂದ ನಾಲ್ವರು ಸಾವನ್ನಪ್ಪಿದ್ದಾರೆ.

ಒಂದು ವಾರದಿಂದ ಅಬ್ಬರಿಸಿ ಹರಿಯುತ್ತಿದ್ದ ನೇತ್ರಾವತಿ, ಫಲ್ಗುಣಿ, ಕುಮಾರಧಾರ,ತುಂಗಾ, ಭದ್ರಾ, ಹೇಮಾವತಿ, ಕಪಿಲಾ ನದಿಗಳಲ್ಲಿ ಪ್ರವಾಹದ ಪ್ರಮಾಣ ತಗ್ಗಿದೆ. ಆದರೆ, ಕಾವೇರಿ ನದಿ ಭೋರ್ಗರೆಯುತ್ತಿದೆ.ಉತ್ತರ ಕರ್ನಾಟಕದಲ್ಲಿ ಕೃಷ್ಣಾ, ಭೀಮಾ, ಘಟ್ಟಪ್ರಭಾ, ಮಲಪ್ರಭಾ ನದಿಗಳಲ್ಲಿ ಪ್ರವಾಹ ಇಳಿಮುಖವಾಗಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳ‌ ಪ್ರವಾಹ ತಗ್ಗಿದೆ. ವರದಾ ನದಿಯ ಪ್ರವಾಹ ಯಥಾಸ್ಥಿತಿಯಲ್ಲಿದೆ. ನಾರಾಯಣಪುರ ಜಲಾಶಯ
ದಿಂದ 6 ಲಕ್ಷ ಕ್ಯುಸೆಕ್‌ ನೀರು ಹೊರಬಿಡುತ್ತಿರುವುದರಿಂದ ರಾಯಚೂರು, ಯಾದಗಿರಿ ಜಿಲ್ಲೆಗಳ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ.

ಹಂಪಿ ಸ್ಮಾರಕಗಳು ಜಲಾವೃತ: ತುಂಗಾಭದ್ರಾ ಜಲಾಶಯದಿಂದ 3 ಲಕ್ಷ‌ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ವಿಶ್ವಪರಂಪರೆ ಹಂಪಿಯ ಬಹುತೇಕ ಸ್ಮಾರಕಗಳು ಜಲಾವೃತವಾಗಿವೆ. ಚಕ್ರತೀರ್ಥ, ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ ಮುಳುಗಡೆಯಾಗಿವೆ. ವಿಜಯ ವಿಠಲ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ತಳವಾರಘಟ್ಟ ರಸ್ತೆ ಮೇಲೆ ನೀರು ಬಂದಿರುವು
ದರಿಂದ ಪ್ರವಾಸಿಗರ ವಾಹನಗಳು ಸಿಲುಕಿಕೊಂಡು ಜನ ಪರದಾಡಿದರು.

ನಡುಗಡ್ಡೆಗಳು ಜಲಾವೃತ: ಮೈಸೂರು ಜಿಲ್ಲೆಯಲ್ಲಿಕಬಿನಿ ನದಿ ಪ್ರವಾಹ ನಿಯಂತ್ರಣಕ್ಕೆ ಬಂದಿದ್ದರೂ, ಕಾವೇರಿ ನದಿ ಮಟ್ಟ ಅಪಾಯದ ಅಂಚು ತಲುಪಿದೆ. ತಲಕಾಡಿನ ನಿಸರ್ಗಧಾಮ ಜಲಾವೃತವಾಗಿದೆ. ರಂಗನತಿಟ್ಟು ಪಕ್ಷಿಧಾಮದ ಸುತ್ತಮುತ್ತಲಿನ ನಡುಗಡ್ಡೆಗಳು ನೀರಿನಿಂದ ಆವೃತವಾಗಿವೆ. ಪಕ್ಷಿಗಳು ಮರವೇರಿ ಕುಳಿತ ದೃಶ್ಯ ಕಂಡು ಬಂದಿತು.

ಬೆಳಗಾವಿಯಲ್ಲಿ ಮಳೆ ಇಳಿಮುಖ: ಭಾರಿ ಮಳೆಯಿಂದ ‘ಜಲಪ್ರಳಯ’ದ ಸ್ಥಿತಿಯನ್ನು ಅನುಭವಿಸಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ, ಚಿಕ್ಕೋಡಿ, ಬೈಲಹೊಂಗಲ ಸೇರಿದಂತೆ ಕಳೆದ ಹಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದಿದ್ದ ಸ್ಥಳಗಳಲ್ಲಿ ಮಳೆ ಬಿಡುವು ನೀಡಿತ್ತು. ಜನತೆ ನೆಮ್ಮದಿ ಉಸಿರು ಬಿಡುವಂತಾಯಿತು. ಮಲಪ್ರಭಾ ಹಾಗೂ ಘಟಪ್ರಭಾ ಒಳಹರಿವು ಕಡಿಮೆಯಾಗಿದ್ದರೂ, ಕೃಷ್ಣಾ ಒಳಹರಿವು ಯಥಾಸ್ಥಿತಿಯಲ್ಲಿದೆ.

ಕಠಿಣವಾದ ಪರಿಹಾರ ಕಾರ್ಯ

ಪ್ರವಾಹ ಪೀಡಿತ ಮತ್ತು ಭೂಕುಸಿತ ಪ್ರದೇಶಗಳಲ್ಲಿ ಸಂತ್ರಸ್ತರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಇನ್ನೊಂದೆಡೆ ಸಂಕಷ್ಟಕ್ಕೆ ಮಿಡಿದಿರುವ ರಾಜ್ಯದ ಜನತೆ ಪರಿಹಾರ ಸಾಮಗ್ರಿಗಳನ್ನು ಸಾಗರೋಪದಿಯಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಕಳುಹಿಸುತ್ತಿದ್ದಾರೆ. ರಸ್ತೆ ಸಂಪರ್ಕ ಮತ್ತು ಸೇತುವೆಗಳು ಕೊಚ್ಚಿ ಹೋಗಿರುವುದರಿಂದ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ವ್ಯಾಪಕವಾಗಿ ಸಂಗ್ರಹವಾಗುತ್ತಿರುವ ಆಹಾರದ ಪೊಟ್ಟಣಗಳು, ಬಟ್ಟೆಗಳು, ಹಾಸಿಗೆ, ಹೊದಿಕೆ, ಔಷಧ ಮುಂತಾದವುಗಳನ್ನು ಸಂತ್ರಸ್ತರಿಗೆ ವ್ಯವಸ್ಥಿತವಾಗಿ ತಲುಪಿಸುವುದು ಕಠಿಣ ಸವಾಲಾಗಿದೆ.

‘₹10,000 ಕೋಟಿ ನಷ್ಟ’

ಬೆಳಗಾವಿ: 'ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ರಾಜ್ಯದಲ್ಲಿ ₹ 10,000 ಕೋಟಿ ನಷ್ಟ ಉಂಟಾಗಿದೆ ಎಂದು ಪ್ರಾಥಮಿಕ ಹಂತದಲ್ಲಿ ಅಂದಾಜಿಸಲಾಗಿದೆ' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಪ್ರವಾಹ ಸ್ಥಿತಿಯನ್ನು ನೋಡಿದರೆ ಅಂದಾಜು ₹30,000 ಕೋಟಿಯಿಂದ ₹40,000 ಕೋಟಿ ರೂಪಾಯಿ ಹಾನಿಯಾಗಿದೆ ಎಂಬುದು ನನ್ನ ಅಭಿಪ್ರಾಯ. ಸಮಗ್ರ ಸಮೀಕ್ಷೆ ಬಳಿಕ ಇದು ಗೊತ್ತಾಗಲಿದೆ’ ಎಂದರು.

ಅಂಕಿ– ಅಂಶ

* 2028–ಗ್ರಾಮಗಳು ಪ್ರವಾಹ ಪೀಡಿತ

* 5,81,702–ಸಂತ್ರಸ್ತರ ರಕ್ಷಣೆ

* 1,168–ಪರಿಹಾರ ಕೇಂದ್ರಗಳು

* 3,27,354–ಆಶ್ರಯ ಪಡೆದ ಸಂತ್ರಸ್ತರು

* 28,325–ಮನೆಗಳ ಹಾನಿ

* 4.20–ಲಕ್ಷ ಹೆಕ್ಟೇರ್‌, ಬೆಳೆ ನಷ್ಟ

* ರಾಷ್ಟ್ರೀಯ ವಿಪತ್ತು ಘೋಷಣೆ ವಿಷಯವನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಪರಿಹಾರ ಒದಗಿಸುವುದು ರಾಜ್ಯ ಸರ್ಕಾರದ ಆದ್ಯತೆ. ಅತ್ತ ಗಮನ ಹರಿಸಿದ್ದೇವೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

* ಬಿ.ಎಸ್‌.ಯಡಿಯೂರಪ್ಪ ಏಕ ಪಾತ್ರಾಭಿನಯ ಮಾಡುತ್ತಿದ್ದಾರೆ. ಇವರೊಬ್ಬರೇ ಎಲ್ಲವನ್ನು ಹೇಗೆ ನಿಭಾಯಿಸುತ್ತಾರೆ. ಹದಿನೈದು ದಿನ ಕಳೆದಿದೆ ಸರ್ಕಾರವೇ ಇಲ್ಲದಂತಾಗಿದೆ.

- ಸಿದ್ದರಾಮಯ್ಯ, ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT