ಶನಿವಾರ, ಡಿಸೆಂಬರ್ 14, 2019
21 °C

ನಮ್ಮ ಪರವೇ ತೀರ್ಪು: ಅನರ್ಹರ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ವಿಧಾನಸಭೆ ಸ್ಪೀಕರ್‌, ಸೋ ಕಾಲ್ಡ್‌ ಬುದ್ಧಿಜೀವಿ ರಮೇಶಕುಮಾರ್‌ ಅವರು ನೀಡಿರುವ ಆದೇಶದ ಸಿಂಧುತ್ವ ಪ್ರಶ್ನಿಸಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಮ್ಮ ಪರ ತೀರ್ಪು ನೀಡಲಿದೆ ಎಂಬುದೇ ನಿರೀಕ್ಷೆ’ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದರು.

ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಬುಧವಾರ ಅನರ್ಹ ಶಾಸಕರ ಪ್ರಕರಣದ ತೀರ್ಪು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಇತರ ಅನರ್ಹರೊಂದಿಗೆ ಇಲ್ಲಿಗೆ ಬಂದಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಶಾಸಕರ ಹಿತ ಕಾಪಾಡಬೇಕಿದ್ದ ಸ್ಪೀಕರ್‌ ತಪ್ಪು ಆದೇಶ ನೀಡಿದರು. ಆದರೆ, ನಮಗೆ ನ್ಯಾಯ ದೊರೆಯಲಿದೆ. ಜನರೂ ನಮ್ಮ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ಇದೆ’ ಎಂದು ಅವರು ಹೇಳಿದರು.

‘ಇನ್ನೂ ಕೆಲವು ಶಾಸಕರು ಜೆಡಿಎಸ್ ಬಿಟ್ಟು ಬರಲಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದ ಅವರು, ‘ಹುಣಸೂರು ವಿಧಾನಸಭೆ ಕ್ಷೇತ್ರದಿಂದ ಗೆದ್ದು ಬಂದಿದ್ದ ನಾನೇ ಮತ್ತೆ ಗೆಲ್ಲುತ್ತೇನೆ. ಗೆಲ್ಲಬೇಕು’ ಎಂದು ತಿಳಿಸಿದರು.

‘ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಅಥವಾ ಬೇರೆಯವರಿಗೆ ಅವಕಾಶ ನೀಡಬೇಕೋ ಎಂಬುದನ್ನು ತೀರ್ಪು ಪ್ರಕಟವಾದ ನಂತರ ನಿರ್ಧರಿಸುವೆ’ ಎಂದು ಅವರು ವಿವರಿಸಿದರು.

ಅನರ್ಹತೆ ರದ್ದಾಗಲಿ: ‘ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶವನ್ನು ಸ್ಪೀಕರ್ ಉಲ್ಲಂಘಿಸಿದ್ದಾರೆ. ಹಾಗಾಗಿ ತೀರ್ಪು ನಮ್ಮ ಪರ ಬರುತ್ತದೆ ಎಂಬ ಭರವಸೆ ಇದೆ’ ಎಂದು ಅನರ್ಹ ಶಾಸಕ, ಹಿರೇಕೆರೂರಿನ ಬಿ.ಸಿ. ಪಾಟೀಲ್‌ ಹೇಳಿದರು.

‘ನಮ್ಮ ರಾಜೀನಾಮೆ ಅಂಗೀಕರಿಸದೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ಸ್ಪೀಕರ್‌ ಆದೇಶವನ್ನು ಪ್ರಶ್ನಿಸಿದ್ದೇವೆ. ಅನರ್ಹತೆ ರದ್ದಾಗಲಿದೆ ಎಂಬುದೇ ನಮ್ಮ ನಿರೀಕ್ಷೆ. ಚುನಾವಣೆಯಲ್ಲಿ ಸ್ವರ್ಧಿಸಲು ಅವಕಾಶ ನೀಡಿದರೆ ಸಾಲದು. ಅನರ್ಹತೆ ರದ್ದಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

‘ಚುನಾವಣಾ ಆಯೋಗವು ಅನರ್ಹಗೊಂಡವರಿಗೆ ಆ ಅವಧಿಯಲ್ಲೇ ಸ್ವರ್ಧೆಗೆ ಅವಕಾಶ ಇದೆ ಎಂದು ಈ ಮೊದಲು ಹೇಳಿದೆ. ನ್ಯಾಯಯುತವಾಗಿ ನಮ್ಮ ಅನರ್ಹತೆ ರದ್ದಾಗಬೇಕು ಎಂಬುದೇ ನಮ್ಮ ವಾದ’ ಎಂದು ಅವರು ಹೇಳಿದರು.

ಅನರ್ಹಗೊಂಡಿರುವ ಬಹುತೇಕರು ಹಾಗೂ ಅವರ ಬೆಂಬಲಿಗರು ನವದೆಹಲಿಗೆ ಬಂದಿದ್ದು, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರೂ ರಾತ್ರಿ ಆಗಮಿಸಲಿದ್ದಾರೆ. ತೀರ್ಪಿನ ಮೊದಲು ಮತ್ತು ನಂತರ ಅನರ್ಹರೊಂದಿಗೆ ಅವರು ಸಭೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು