ಮಂಗಳವಾರ, ಮಾರ್ಚ್ 2, 2021
29 °C
ಬರಪೀಡಿತ ಪ್ರದೇಶಗಳಲ್ಲಿ ಮತ್ತಷ್ಟು ‘ಬೆಳ್ಳಂದೂರು’ ಕೆರೆಗಳನ್ನು ಸೃಷ್ಟಿಸುತ್ತಿದೆ ಕೆ.ಸಿ. ವ್ಯಾಲಿ ಯೋಜನೆ

ಕೆ.ಸಿ.ವ್ಯಾಲಿ ಯೋಜನೆ: ನೀರಿನ ಬದಲು ಹರಿದ ವಿಷ

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ನದಿಮೂಲಗಳಿಂದ ದೂರವಿರುವ ಅವರೆಲ್ಲ ಸತತ ಏಳು ಬರಗಾಲಗಳನ್ನು ಕಂಡಿರುವ, ಅಂತರ್ಜಲವನ್ನೂ ಬರಿದು ಮಾಡಿಕೊಂಡಿರುವ ಜನ. ‘ನಿಮ್‌ ದಮ್ಮಯ್ಯ, ವಸಿ ನೀರು ಕೊಡ್ತೀರಾ’ ಎಂದು ಅವರು ಗೋಗರೆದರೆ, ರಾಜ್ಯ ಸರ್ಕಾರ ಅವರಿಗೆ ಕೊಟ್ಟಿದ್ದೇನು ಗೊತ್ತೆ? ನೀರಿನ ರೂಪದ ನಿಧಾನ ವಿಷವನ್ನು!

ಬಿಕ್ಕುತ್ತಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ದಾಹವನ್ನು ತಣಿಸುವ ಸಲುವಾಗಿ ಅಲ್ಲಿನ ಕೆರೆಗಳಿಗೆ (ಕೃಷಿ ಬಳಕೆ ಹಾಗೂ ಅಂತರ್ಜಲ ವೃದ್ಧಿಗಾಗಿ) ಬೆಂಗಳೂರಿನ ಚರಂಡಿ ನೀರನ್ನು ಸಂಸ್ಕರಿಸಿ ಹರಿಸಲು ರೂಪುಗೊಂಡಿದ್ದೇ ಕೆ.ಸಿ. ವ್ಯಾಲಿ (ಕೋರಮಂಗಲ–ಚಲ್ಲಘಟ್ಟ ಕಣಿವೆ) ಯೋಜನೆ. ಇಡೀ ದೇಶದಲ್ಲಿ ಜಾರಿಗೆ ತರಲಾದ ಈ ರೀತಿಯ ಮೊದಲ ಹಾಗೂ ಏಕೈಕ ಯೋಜನೆ ಎಂಬ ತುರಾಯಿ ಬೇರೆ ಅದರ ಕಿರೀಟದಲ್ಲಿದೆ.

ಅನುಷ್ಠಾನದ ಹೊಣೆ ಹೊತ್ತವರ ಹೊಣೆಗೇಡಿತನದಿಂದ ಎರಡೂ ಜಿಲ್ಲೆಗಳ 134 ಜಲಮೂಲಗಳು ಪುಟ್ಟ ಪುಟ್ಟ ‘ಬೆಳ್ಳಂದೂರು ಕೆರೆ’ಗಳಾಗಿ ರೂಪಾಂತರ ಹೊಂದುವ ಭೀತಿ ವ್ಯಕ್ತವಾಗಿದೆ. ಈಗಾಗಲೇ ಚರಂಡಿ ನೀರನ್ನು ಪಡೆದ ಅಲ್ಲಿನ ಕೆರೆಗಳಲ್ಲೂ ಅದೇ ನೊರೆ, ಅದೇ ದುರ್ವಾಸನೆ, ಅದೇ ಅಪಾಯಕಾರಿ ರಾಸಾಯನಿಕಗಳ ದರ್ಬಾರು!

ಲಕ್ಷ್ಮಿಸಾಗರ ಕೆರೆಯಲ್ಲಿ 2018ರ ಜೂನ್‌ 2ರಂದು ಮೊದಲ ಸಲ ಪೈಪಿನಿಂದ ನೀರು ಚಿಮ್ಮಿದಾಗ, ಅದು ಹಿಮಾಲಯದಿಂದ ಇಳಿದು ಬಂದಿರುವ ಗಂಗೆಯೇ ಎನ್ನುವಂತೆ ಹಳ್ಳಿಗರು ಸಂಭ್ರಮದಿಂದ ನೀರಿನ ಹನಿಗಳನ್ನು ಕಣ್ಣಿಗೆ ಒತ್ತಿಕೊಂಡರು. ತಲೆಯ ಮೇಲೆ ಹಾಕಿಕೊಂಡರು. ಬೊಗಸೆಯಲ್ಲಿ ಹಿಡಿದು ಕುಡಿದೂಬಿಟ್ಟರು. ಪಾಪ, ಅವರಿಗೇನು ಗೊತ್ತು? ತಾವು ಕುಡಿಯುತ್ತಿರುವುದು ನೀರನ್ನಲ್ಲ; ರಾಸಾಯನಿಕಗಳ ‘ಕಾಕ್‌ಟೇಲ್‌’ಅನ್ನು ಎಂಬುದು.

ಆರಂಭದ ‘ಫಲಾನುಭವಿ’ಗಳಲ್ಲಿ ಒಂದಾದ ಲಕ್ಷ್ಮಿಸಾಗರ ಕೆರೆಯ ನೀರನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ತಜ್ಞರು ಕೆಲವು ವಾರಗಳ ಹಿಂದೆ ಪರೀಕ್ಷಿಸಿದಾಗ ಅದರಲ್ಲಿ ಕ್ರೋಮಿಯಂ, ಕೋಬಾಲ್ಟ್‌, ಕ್ಯಾಡ್ಮಿಯಂ, ತಾಮ್ರ, ಸತು ಮತ್ತು ಸೀಸ ಲೋಹಗಳು ಅತ್ಯಧಿಕ ಪ್ರಮಾಣದಲ್ಲಿ ಇರುವುದು ಪತ್ತೆಯಾಗಿದೆ.

ಕೆರೆಯಲ್ಲಿದ್ದ ಮೀನು, ಹಾವು, ಏಡಿಗಳಂತಹ ಜಲಚರಗಳೆಲ್ಲ ‘ರಾಸಾಯನಿಕಗಳ ಕಾಕ್‌ಟೇಲ್‌’ ಹೊಡೆತ ತಾಳಲಾರದೆ ಸತ್ತುಬಿದ್ದಿವೆ. ಬಾಯಾರಿಕೆಯಿಂದ ಬಳಲಿದ ಹಸುಗಳನ್ನು ಕೆರೆಗಳತ್ತ ಕರೆತಂದರೆ, ದಾಹ ಕಾಡುತ್ತಿದ್ದರೂ ಅವುಗಳು ಅಲ್ಲಿನ ನೀರು ಕುಡಿಯಲು ಹಿಂದೇಟು ಹಾಕುತ್ತಿವೆ. ಕೆರೆ ಆಸುಪಾಸಿನ ಕೊಳವೆ ಬಾವಿಗಳ ನೀರಿನಲ್ಲಿ ರಾಸಾಯನಿಕಗಳು ಹೆಜ್ಜೆ ಗುರುತು ಮೂಡಿಸಿದ್ದರಿಂದ ನರಸಾಪುರ ಗ್ರಾಮ ಪಂಚಾಯಿತಿ, ತಾನು ಅದೇ ಪ್ರದೇಶದಿಂದ ಪೂರೈಸುತ್ತಿರುವ ನೀರನ್ನು ಕುಡಿಯಲು ಬಳಸಬಾರದು ಎಂದು ಕರಪತ್ರ ಹಂಚಿದೆ.

ಕೋಲಾರದ ಹಳ್ಳಿಗಳ ತೋಟಗಳಿಗೂ ಅದೇ ನೀರು ಹರಿದಿದ್ದರಿಂದ ತರಕಾರಿಗಳ ಒಡಲು ಸೇರಿರುವ ಅದರಲ್ಲಿನ ಅಪಾಯಕಾರಿ ಲೋಹ ಧಾತುಗಳೆಲ್ಲ ತಮ್ಮನ್ನು ಕಳುಹಿಸಿದ್ದ ಬೆಂಗಳೂರಿನತ್ತಲೇ ತಿರುಗಿ ಪ್ರಯಾಣ ಬೆಳೆಸಿವೆ. ‘ನಾವು ವಾಪಸ್‌ ಬಂದಿದ್ದೇವೆ’ ಎಂದು ಮನೆ–ಮನೆಗಳ ಕದಗಳನ್ನು ತಟ್ಟುತ್ತಿವೆ. ಅಲ್ಲಿಗೆ ಒಂದು ವರ್ತುಲ ಸಂಪೂರ್ಣ ಆದಂತಾಯಿತು. ಇನ್ನು ಈ ‘ವಿಷ ವರ್ತುಲ’ದ ಪುನರಾವರ್ತನೆಗೆ ಕೊನೆ ಎಂಬುದೇ ಇರುವುದಿಲ್ಲ.

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ (ಸಿಎಂ ಆಗಿದ್ದಾಗ ಯೋಜನೆ ಚಾಲನೆ ಪಡೆಯಿತು), ‘ಈ ಯೋಜನೆಯನ್ನು ವಿರೋಧಿಸುವುದು ಪಾಪದ ಕೆಲಸ’ ಎಂದಿದ್ದಾರೆ.

‘ಸ್ವಾಮಿ, ನಾವು ವಿರೋಧಿಸುತ್ತಿರುವುದು ಈ ಯೋಜನೆಯನ್ನಲ್ಲ; ಸರಿಯಾಗಿ ಸಂಸ್ಕರಿಸದೆ ವಿಷಮಿಶ್ರಿತ ನೀರು ಹರಿಸುತ್ತಿರುವ ಕ್ರಮವನ್ನು. ನೀರು ಕೊಡುವ ಹೆಸರಿನಲ್ಲಿ ವಿಷ ಹರಿಸುವುದೇನು ಪುಣ್ಯದ ಕೆಲಸವೇ’ ಎಂದು ಅಲ್ಲಿನ ಜನ ಪ್ರಶ್ನಿಸುತ್ತಿದ್ದಾರೆ.

ತ್ಯಾಜ್ಯ ನೀರನ್ನು ಸರಿಯಾಗಿ ಸಂಸ್ಕರಿಸಬೇಕಿದ್ದ ಜಲಮಂಡಳಿ, ಶುದ್ಧ ನೀರನ್ನಷ್ಟೇ ಪೂರೈಕೆ ಮಾಡಬೇಕಿದ್ದ ಸಣ್ಣ ನೀರಾವರಿ ಇಲಾಖೆ, ಗುಣಮಟ್ಟದ ಮೇಲೆ ಹದ್ದುಗಣ್ಣು ಇಡಬೇಕಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ, ಯೋಜನೆಯ ಪ್ರದೇಶದಲ್ಲಿ ಎಂತಹ ನೀರು ಮರುಪೂರಣ ಆಗುತ್ತಿದೆ ಎಂಬುದನ್ನು ಗಮನಿಸಬೇಕಿದ್ದ ಕೇಂದ್ರ ಅಂತರ್ಜಲ ಮಂಡಳಿ... ಹೀಗೆ ಸಾಲು, ಸಾಲು ಸರ್ಕಾರಿ ಸಂಸ್ಥೆಗಳೆಲ್ಲ ತಮ್ಮ ಹೊಣೆ ಮರೆತು ಕುಳಿತಿವೆ.

ಕೋಲಾರದ ಹಳ್ಳಿಗರು ಈ ಒಡಲ ಉರಿಯಲ್ಲಿ ಎಷ್ಟೊಂದು ಬೆಂದಿದ್ದಾರೆಂದರೆ ‘ಶುದ್ಧ ನೀರು ಕೊಟ್ಟು, ಭಗೀರಥರಾಗಿ ಹೊರಹೊಮ್ಮಬೇಕಾದ ಆಡಳಿತಗಾರರು ನಮ್ಮ ಪಾಲಿಗೆ ವಿಷ ಉಣಿಸುವ ಹೃದಯಹೀನರಂತೆ ಕಾಣಿಸುತ್ತಿದ್ದಾರೆ’ ಎನ್ನುತ್ತಿದ್ದಾರೆ.

ಎಂತಹ ವಿಷ?: ಬೆಂಗಳೂರು ಒಂದು ಕಾಸ್ಮೋಪಾಲಿಟನ್ ನಗರ. ಇಲ್ಲಿ ಬಿಡುಗಡೆಯಾಗುವ ದ್ರವತ್ಯಾಜ್ಯ ಬೇರೆ ಪ್ರದೇಶಗಳಂತೆ ಸಾಮಾನ್ಯ ಸ್ವರೂಪದ್ದಲ್ಲ. ಕೋರಮಂಗಲ–ಚಲ್ಲಘಟ್ಟ ಕಣಿವೆ ಪ್ರದೇಶದ ಒಟ್ಟು ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ 50 ಲಕ್ಷ ದಾಟುತ್ತದೆ. ಅದರಲ್ಲಿ ನಿತ್ಯ ಶೇ 20ರಷ್ಟು ಮಂದಿಯಷ್ಟೇ ಬಟ್ಟೆ ತೊಳೆಯುತ್ತಾರೆ ಎಂದುಕೊಂಡರೂ ಹತ್ತಾರು ಟನ್‌ಗಳಷ್ಟು ಥರಾವರಿ ಮಾರ್ಜಕ ಚರಂಡಿಗೆ ಸೇರುತ್ತದೆ.

ಅಂದಹಾಗೆ, ದ್ರವತ್ಯಾಜ್ಯ ಕೂಡ ಊಸರವಳ್ಳಿಯಂತೆ ಬಣ್ಣ ಬದಲಿಸುವುದು ನಿಮಗೆ ಗೊತ್ತೆ? ಮಧ್ಯರಾತ್ರಿಯ ಹೊತ್ತು ನೀವು ಬೆಳ್ಳಂದೂರು ಕೆರೆ ಹಿಂಭಾಗದ ಚರಂಡಿ ಬಳಿ ಬಂದರೆ ಡಾಂಬರಿನಂತೆ ಕಪ್ಪು ಬಣ್ಣಕ್ಕೆ ತಿರುಗಿದ ಮಂದದ್ರವ ಅದರಲ್ಲಿ ಹರಿಯುವುದು ಕಾಣುತ್ತದೆ. ಕೈಗಾರಿಕೆ ಘಟಕಗಳು ತ್ಯಾಜ್ಯ ಹರಿಸುವ ಸಮಯ ಅದು. ಅದರಲ್ಲಿ ಪಾದರಸ, ಸೀಸದಂತಹ ಅಪಾಯಕಾರಿ ರಾಸಾಯನಿಕಗಳು ‘ಶಸ್ತ್ರ ಸನ್ನದ್ಧ’ವಾಗಿ ಪರಿಸರದ ಮೇಲೆ ದಾಳಿ ಮಾಡಲು ಹೊರಟಿರುತ್ತವೆ.

* ಇದನ್ನೂ ಓದಿ: ಕೆರೆ ಸೇರುವ ನೀರಿಗೆ ವಿಷ ಸೇರಿದ್ದು ಎಲ್ಲಿ?

ಬೆಳಗಾಗುತ್ತಾ ಬಂದಂತೆ ಚರಂಡಿ ನೀರಿನ ಗಾಢ ಕಪ್ಪುಬಣ್ಣ, ತಿಳಿಯಾಗಲು ಶುರುವಾಗುತ್ತದೆ. ಅದು ಮನೆ–ಮನೆಗಳಲ್ಲಿ ನಿತ್ಯದ ಕರ್ಮಗಳು ಶುರುವಾದ ದ್ಯೋತಕ. ಬಟ್ಟೆ ತೊಳೆಯುವ ಪ್ರಕ್ರಿಯೆ ಆರಂಭವಾದ ಮೇಲೆ ನೀರು ಬಿಳಿಬಣ್ಣಕ್ಕೆ ತಿರುಗುತ್ತದೆ. ಕೃತಕ ಹೊಳೆಯ ಮೂಲಕ ಕೆರೆಗಳಿಗೆ ಹರಿಯುವ ಚರಂಡಿ ನೀರು ಘನತ್ಯಾಜ್ಯದಿಂದ ಮುಕ್ತವಾಗಿರುತ್ತದೆ ಅಷ್ಟೆ. ನೀರಿನೊಟ್ಟಿಗೆ ಒಂದಾಗಿ ಬೆರೆತ ಭಾರಿ ಪ್ರಮಾಣದ ರಾಸಾಯನಿಕ ಹಾಗೇ ಉಳಿದಿರುತ್ತದೆ. ಪರಿಸರವಾದಿಗಳು, ಜಲತಜ್ಞರು ಹಾಗೂ ಹೋರಾಟಗಾರರು ಧ್ವನಿ ಎತ್ತಿರುವುದು ಈ ಬಹುದೊಡ್ಡ ಲೋಪದ ಕಾರಣಕ್ಕಾಗಿಯೇ.

ಮೂರನೇ ಹಂತದ ಸಂಸ್ಕರಣೆಗೆ ವ್ಯವಸ್ಥೆ ಮಾಡಿದರೆ ರಾಸಾಯನಿಕಗಳಿಗೆ ತಕ್ಕಮಟ್ಟಿಗೆ ಬಲೆಹಾಕುವ ಕೆಲಸ ಆಗುತ್ತದೆ. ಆದರೆ, ಆ ಘಟಕ ಸ್ಥಾಪನೆಗೆ ಭಾರಿ ಮೊತ್ತದ ಹೂಡಿಕೆ ಆಗಬೇಕು. ಪ್ರತಿ ಲೀಟರ್‌ ನೀರು ಸಂಸ್ಕರಣೆಗೆ 50 ಪೈಸೆ ವ್ಯಯಿಸಬೇಕು. ಅಂದರೆ ಪ್ರತಿದಿನದ ಸಂಸ್ಕರಣೆ ಕಾರ್ಯಕ್ಕಾಗಿಯೇ ₹ 22 ಕೋಟಿ ಬೇಕು.

‘ಸರ್ಕಾರ ಅಷ್ಟೊಂದು ಹಣ ವ್ಯಯಿಸಿ ಮೂರನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನಷ್ಟೇ ಹರಿಸುವುದು ಈಗ ಅನಿವಾರ್ಯ. ಪರಿಸರದ ಮೇಲಾಗುವ ಪರಿಣಾಮಗಳನ್ನು ಮುಂಗಾಣದೆ, ಯಾವುದೇ ಮಾದರಿಗಳನ್ನು ನೋಡದೆ, ಪ್ರತಿಕ್ಷಣ ನಿಗಾ ಇಡಲು ವ್ಯವಸ್ಥೆ ರೂಪಿಸದೆ, ನೀರಿನ ಗುಣಮಟ್ಟ ಖಾತ್ರಿಪಡಿಸಿಕೊಳ್ಳಲು ಸೌಲಭ್ಯ ಸೃಷ್ಟಿಸದೆ ಮಾಡಿರುವ ತಪ್ಪಿಗಾಗಿ ತೆರಬೇಕಾದ ಬೆಲೆ ಇದು’ ಎಂದು ಯೋಜನೆಯ ಭವಿಷ್ಯದ ಮೇಲೆ ಬೆಳಕು ಚೆಲ್ಲುತ್ತಾರೆ ಹೈಕೋರ್ಟ್ ವಕೀಲ ಪ್ರಿನ್ಸ್‌ ಐಸಾಕ್‌.

‘ಮೂರನೇ ಹಂತದ ಸಂಸ್ಕರಣೆಗೆ ವ್ಯವಸ್ಥೆ ಆಗದಿದ್ದರೆ ಇದುವರೆಗೆ ನಿರ್ಮಿಸಿದ ಘಟಕಗಳೆಲ್ಲ ಹಂಪಿಯ ಭಗ್ನಾವಶೇಷಗಳಂತೆ ಸ್ಮಾರಕವಾಗಿ ಉಳಿಯುತ್ತವೆ ಅಷ್ಟೆ’ ಎಂದು ಅವರು ಖಚಿತವಾಗಿ ಹೇಳುತ್ತಾರೆ.

ಯಥಾಸ್ಥಿತಿಯಲ್ಲಿ ಈ ನೀರು ಯಾವ, ಯಾವ ಭೂ ಪ್ರದೇಶಕ್ಕೆ ನುಗ್ಗುವುದೋ ಆ ಪ್ರದೇಶವೆಲ್ಲ ಮಾಲಿನ್ಯವಾಗಲಿದ್ದು, ಅಲ್ಲಿ ಬೆಳೆಯುವ ಬೆಳೆಯೂ ವಿಷಕಾರಿ ಆಗಿರುತ್ತದೆ. ಅದು ಬಳಕೆಗೆ ಸಂಪೂರ್ಣ ಅಯೋಗ್ಯ’ ಎಂದು ಐಐಎಸ್ಸಿ ವಿಜ್ಞಾನಿಗಳಾದ ಟಿ.ವಿ. ರಾಮಚಂದ್ರ ಹಾಗೂ ಜೆ.ಆರ್‌. ಮುದಕವಿ ವಿವರಿಸುತ್ತಾರೆ. ‘ವಿಷದ ನೀರಿನಿಂದ ಯೋಜನಾ ಪ್ರದೇಶದ ಜೀವಸಂಕುಲವೇ ಅಪಾಯಕ್ಕೆ ಸಿಲುಕಲಿದೆ’ ಎಂದೂ ಅವರು ವಿಶ್ಲೇಷಿಸುತ್ತಾರೆ.

ನೀರಿನ ರೂಪದ ನಿಧಾನ ವಿಷವನ್ನು ಕೆರೆಗಳಿಗೆ ಯಥಾಸ್ಥಿತಿಯಲ್ಲಿ ಹರಿಯಬಿಟ್ಟರೆ ಎಂಡೋಸಲ್ಫಾನ್‌ ಬಾಧಿತ ಪ್ರದೇಶಗಳಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳೂ ಮುಂದಿನ ದಶಕದಲ್ಲಿ ನರಳುವುದು ಖಚಿತ ಎನ್ನುವುದು ವಿಜ್ಞಾನಿಗಳು ವ್ಯಕ್ತಪಡಿಸುತ್ತಿರುವ ಆತಂಕ. ಅವರ ಈ ಮಾತು ಎಚ್ಚರಿಕೆ ಗಂಟೆಯಾಗಿ ಮೊಳಗಿ ಗಾಢನಿದ್ರೆಗೆ ಜಾರಿರುವ ಸರ್ಕಾರವನ್ನು ಬಡಿದೆಬ್ಬಿಸೀತೇ?

ಯೋಜನೆ ಹಿಂದಿನ ಹಕೀಕತ್ತು

ಬೆಂಗಳೂರಿನ ಕೊಳಚೆ ನೀರಿನಿಂದ ತೆನ್ಪೆನ್ಯಾರ್ ನದಿ ಕಲುಷಿತಗೊಳ್ಳುತ್ತಿದೆ ಎಂದು ತಮಿಳುನಾಡು, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಹೊತ್ತಿನಲ್ಲೇ (2015) ಕೋಲಾರ ಭಾಗದಲ್ಲಿ ನೀರಿಗಾಗಿ ಹೋರಾಟ ತೀವ್ರಗೊಂಡಿತ್ತು. ತಮಿಳುನಾಡು ಬೀಸಿದ ದೊಣ್ಣೆಯಿಂದ ಪಾರಾಗುವ ಜತೆಗೆ ಕೋಲಾರದ ದಾಹ ವನ್ನೂ ನೀಗಿಸಲು ರಾಜ್ಯ ಸರ್ಕಾರಕ್ಕೆ ಅಪ್ಯಾಯಮಾನವಾಗಿ ಕಂಡಿದ್ದು ಚರಂಡಿ ನೀರನ್ನು ತಿರುಗಿಸುವಂತಹ ಈ ಯೋಜನೆ.

ವಿಧಾನಸಭೆ ಚುನಾವಣೆ ಎರಡು ವರ್ಷಗಳಷ್ಟು ಹತ್ತಿರ ದಲ್ಲೇ ಇದ್ದಾಗ ‘ಸರ್ಕಾರಿ ಯೋಜನೆಗಳು ಇಷ್ಟು ವೇಗದಲ್ಲಿ ಜಾರಿಯಾಗುತ್ತವೆಯೇ’ ಎಂದು ಎಲ್ಲರಿಗೂ ಸೋಜಿಗ ಉಂಟು ಮಾಡುವಷ್ಟು ತರಾತುರಿಯಲ್ಲಿ ಕಾಮಗಾರಿಗಳು ನಡೆದವು. ಯಾವ ಪಕ್ಷದವರೂ ಈ ಯೋಜನೆಯನ್ನು ವಿರೋಧಿಸುವ ಗೊಡವೆಗೆ ಹೋಗಲಿಲ್ಲ.

ಗುತ್ತಿಗೆದಾರರಿಗೆ ರಾವಣನಂತೆ 20 ಕೈಗಳಿರುವುವೇನೋ. ಏಕೆಂದರೆ, ಅವರ ಕೈಗಳು ಎಲ್ಲ ಪಕ್ಷಗಳ ನಾಯಕರ ಕಿಸೆಯಲ್ಲೂ ಇವೆ ಎನ್ನುವುದು ಹೋರಾಟಗಾರರ ಮುಖ್ಯ ಆರೋಪ. ಯೋಜನೆ ಕುರಿತ ಎಲ್ಲ ಪಕ್ಷಗಳ ಮುಖಂಡರು ಮೌನ ವಹಿಸಿರುವುದು ಈ ಆರೋಪಕ್ಕೆ ಪುಷ್ಟಿ ನೀಡುತ್ತದೆ. ಕೋಲಾರ ಭಾಗದ ಅತ್ಯಂತ ಪ್ರಭಾವಿ ರಾಜಕಾರಣಿಯೊಬ್ಬರ ಸಂಬಂಧಿಗಳು ಸಹ ಈ ಯೋಜನೆಯಲ್ಲಿ ಉಪಗುತ್ತಿಗೆ ಪಡೆದಿರುವ ಮಾಹಿತಿ ಇದೆ. ಚರಂಡಿ ನೀರಿಗಾಗಿ ಪಟ್ಟು ಹಿಡಿಯುವ ಹೋರಾಟಗಳ ಹಿಂದೆ ಯಾವ, ಯಾವ ಲಾಬಿಗಳು ಕೆಲಸ ಮಾಡುತ್ತಿವೆಯೋ ಬಲ್ಲವರು ಯಾರು?

* ಯೋಜನೆ ಅನುಷ್ಠಾನಗೊಂಡು ಕೇವಲ 46 ದಿನಗಳಲ್ಲಿಯೇ ಸ್ಥಗಿತಗೊಂಡ ಕುಖ್ಯಾತಿ ಸಹ ಇದಕ್ಕಿದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು