ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೇಠಿ: ಸಚಿವೆ ಸ್ಮೃತಿ ಇರಾನಿ ಆಪ್ತನ ಹತ್ಯೆ

ಸಂಯಮ ಕಾಯ್ದುಕೊಳ್ಳಲು ಕಾರ್ಯಕರ್ತರಿಗೆ ಮನವಿ: ಏಳು ಮಂದಿ ವಶಕ್ಕೆ
Last Updated 26 ಮೇ 2019, 20:17 IST
ಅಕ್ಷರ ಗಾತ್ರ

ಲಖನೌ: ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರ ಆಪ‍್ತ, ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಅವರ ಗೆಲುವಿಗಾಗಿ ಶ್ರಮಿಸಿದ್ದ ಸುರೇಂದ್ರ ಸಿಂಗ್‌ (50) ಅವರನ್ನು ಶನಿವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಸುರೇಂದ್ರ ಸಿಂಗ್‌ ಅವರು ಬರೌಲಿಯಾ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದು, ಶನಿವಾರ ರಾತ್ರಿ 11.30ರ ಸುಮಾರಿಗೆ ಎರಡು ಬೈಕ್‌ಗಳಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅವರನ್ನು ಕೂಡಲೇ ಕೆ.ಜಿ. ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ದಯಾ ರಾಮ್‌ ತಿಳಿಸಿದ್ದಾರೆ.

‘ಎರಡು ಬೈಕ್‌ಗಳಲ್ಲಿ ಬಂದಿದ್ದ ಯುವಕರು ನನ್ನ ತಂದೆಯನ್ನು ಹೊರಗೆ ಕರೆದಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಗುಂಡಿನ ಸದ್ದು ಕೇಳಿಸಿತು. ಹೊರಗೆ ಬಂದು ನೋಡಿದಾಗ ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬೈಕ್‌ ಸವಾರರು ವೇಗವಾಗಿ ಮರೆಯಾದರು’ ಎಂದು ಸುರೇಂದ್ರ ಸಿಂಗ್‌ ಅವರ ಪುತ್ರ ಅಭಯ್‌ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಹಳೆಯ ದ್ವೇಷವೇ ಹತ್ಯೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ‘ಸ್ಮೃತಿಯ ಪರವಾಗಿ ಪ್ರಚಾರ ಮಾಡಿದ್ದಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರು ಹತ್ಯೆ ಮಾಡಿರಬಹುದು’ ಎಂದು ಸಿಂಗ್‌ ಅವರ ಕುಟುಂಬದವರು ಆರೋಪಿಸಿದ್ದಾರೆ.

‘ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನನ್ನ ತಂದೆ ಸ್ಮೃತಿ ಇರಾನಿ ಪರವಾಗಿ ವ್ಯಾಪಕ ಪ್ರಚಾರ ನಡೆಸಿದ್ದರು. ನಮ್ಮ ಗ್ರಾಮದ ಮತಗಟ್ಟೆಯಲ್ಲಿ ಸ್ಮೃತಿ ಅವರಿಗೆ ಹೆಚ್ಚಿನ ಮತಗಳು ಸಹ ಬಂದಿದ್ದವು. ಇದು ಸ್ಥಳೀಯ ಕೆಲವು ಕಾಂಗ್ರೆಸ್‌ ನಾಯಕರಿಗೆ ಇಷ್ಟವಾಗಿರಲಿಲ್ಲ’ ಎಂದು ಅಭಯ್‌ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೂ ಕೆಲವು ದಿನಗಳ ಹಿಂದೆ ಸುರೇಂದ್ರ ಸಿಂಗ್‌ ಅವರು ಗ್ರಾಮದ ಬಡವರಿಗೆ ಚಪ್ಪಲಿಗಳನ್ನು ವಿತರಿಸುವ ಮೂಲಕ ಗಮನ ಸೆಳೆದಿದ್ದರು. ಇದು ಮಾಧ್ಯಮಗಳಲ್ಲೂ ದೊಡ್ಡ ಸುದ್ದಿಯಾಗಿತ್ತು. ಇದನ್ನು ಟೀಕಿಸಿದ್ದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ , ‘ಬಿಜೆಪಿಯವರು ಮತದಾರರನ್ನು ಖರೀದಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.

‘ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ. ಈಗಾಗಲೇ ಏಳು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ತಪ್ಪಿತಸ್ಥರನ್ನು ಪತ್ತೆಮಾಡಲು ಸಹಾಯವಾಗುವಂಥ ಕೆಲವು ಸಾಕ್ಷ್ಯಗಳೂ ನಮಗೆ ಲಭಿಸಿವೆ. ಮುಂದಿನ 12 ಗಂಟೆಗಳೊಳಗೆ ಆರೋಪಿಗಳನ್ನು ಪತ್ತೆ ಮಾಡುತ್ತೇವೆ’ ಎಂದು ಡಿಜಿಪಿ ಓಂಪ್ರಕಾಶ್‌ ಸಿಂಗ್‌ ಹೇಳಿದ್ದಾರೆ.

ಶವಯಾತ್ರೆಗೆ ಹೆಗಲುಕೊಟ್ಟ ಸಚಿವೆ
ಸುರೇಂದ್ರ ಸಿಂಗ್‌ ಅವರು ಹತ್ಯೆಯಾಗಿರುವ ಸುದ್ದಿ ತಿಳಿದು ಸಂಜೆ ಅಮೇಠಿಗೆ ಬಂದ ಸ್ಮೃತಿ ಇರಾನಿ, ಸಿಂಗ್‌ ಅವರ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳಿದರು. ಸಂಯಮ ಕಾಯ್ದುಕೊಳ್ಳುವಂತೆ ಅಲ್ಲಿ ಸೇರಿದ್ದ ಕಾರ್ಯಕರ್ತರಿಗೆ ಸಲಹೆ ನೀಡಿದರು. ಬಳಿಕ ನಡೆದ ಶವವಯಾತ್ರೆಯಲ್ಲಿ ಕಾರ್ಯಕರ್ತನ ಶವ ಸಾಗಿಸಲು ತಾವೇ ಹೆಗಲುಕೊಟ್ಟರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಸ್ಮೃತಿ, ‘ಅಮೇಠಿಯನ್ನು ಪ್ರೀತಿಯಿಂದ ನೋಡಿಕೊಳ್ಳಿ’ ಎಂದು ಚುನಾವಣಾ ಫಲಿತಾಂಶ ಪ್ರಕಟವಾದ ದಿನ ನನಗೆ ಸಂದೇಶ ನೀಡಲಾಗಿತ್ತು. ಆ ಸಂದೇಶದ ಅರ್ಥ ಈಗ ಸ್ಪಷ್ಟವಾಗುತ್ತಿದೆ. ಅಮೇಠಿಯ ಜನರಲ್ಲಿ ಭಯ ಹುಟ್ಟಿಸುವ, ಜನರನ್ನು ಒಡೆಯುವ ಮತ್ತು ಅವರ ವಿಶ್ವಾಸವನ್ನು ಕುಗ್ಗಿಸುವ ಪ್ರಯತ್ನ ನಡೆದಿದೆ. ಕಾರ್ಯಕರ್ತರು ಧೃತಿಗೆಡಬಾರದು’ ಎಂದರು.

‘ಸ್ಮೃತಿ ಅವರು ಅಮೇಠಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ. ಅಮೇಠಿಯ ಜನರು ಅವರ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವರು ಎಂದು ಭಾವಿಸುತ್ತೇನೆ’ ಎಂದು ಚುನಾವಣಾ ಫಲಿತಾಂಶ ಹೊರಬಂದ ದಿನ ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT