ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂಬೆಹಣ್ಣು ಕೊಟ್ಟು ಚಿನ್ನಾಭರಣ ಕದ್ದೊಯ್ದ ಬಾಬಾ

ಆಭರಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಕೃತ್ಯ * ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ
Last Updated 7 ಜನವರಿ 2020, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವರಿಗೆ ಪೂಜೆ ಮಾಡಿದರೆ ಚಿನ್ನಾಭರಣಗಳು ದ್ವಿಗುಣವಾಗುತ್ತವೆ’ ಎಂದು ಹೇಳಿ ನಗರದ ಮಹಿಳೆಯೊಬ್ಬರನ್ನು ನಂಬಿಸಿದ್ದ ವಂಚಕನೊಬ್ಬ, ಪೂಜೆ ಮಾಡುವ ನೆಪದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಕದ್ದೊಯ್ದಿದ್ದಾನೆ.

ಈ ಸಂಬಂಧ 48 ವರ್ಷದ ಮಹಿಳೆ ಕೆ.ಜಿ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಅಫ್ಸರ್ ಅಲಿಯಾಸ್ ಬಾಬಾ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಕಳೆದ ಡಿ. 5ರಂದು ಮಹಿಳೆಯ ಮನೆಗೆ ಬಂದಿದ್ದ ಆರೋಪಿ, ತನ್ನ ಹೆಸರು ಅಫ್ಸರ್ ಅಲಿಯಾಸ್ ಬಾಬಾ ಎಂದು ಪರಿಚಯಿಸಿಕೊಂಡಿದ್ದ. ಮೈಸೂರಿನಲ್ಲಿ ವಾಸವಿರುವುದಾಗಿ ಹೇಳಿದ್ದ. ಬಾಬಾ ಎಂದಿದ್ದಕ್ಕೆ ಮಹಿಳೆಯು ಆತನನ್ನು ನಂಬಿದ್ದರು’ ಎಂದು ಪೊಲೀಸರು ಹೇಳಿದರು.

‘ದೇವರ ಪೂಜೆ ಮಾಡಿ ಹಲವರಿಗೆ ಚಿನ್ನಾಭರಣ ದ್ವಿಗುಣ ಮಾಡಿಕೊಟ್ಟಿದ್ದೇನೆ. ಇದೀಗ ದೇವರೇ ನನ್ನನ್ನು ನಿಮ್ಮ ಬಳಿ ಕಳುಹಿಸಿದ್ದಾನೆ. ನೀವು ಆಭರಣ ಕೊಟ್ಟರೆ ದ್ವಿಗುಣ ಮಾಡಿಕೊಡುತ್ತೇನೆ’ ಎಂದು ಆರೋಪಿ ಹೇಳಿದ್ದ. ಅದಕ್ಕೆ ಒಪ್ಪಿದ್ದ ಮಹಿಳೆ, ಪೂಜೆಗೆ ಅನುಕೂಲ ಮಾಡಿಕೊಟ್ಟಿದ್ದರು.’

‘ಮಹಿಳೆಯ ಚಿನ್ನಾಭರಣವನ್ನು ಬ್ಯಾಗ್‌ನಲ್ಲಿ ಹಾಕಿದ್ದ ಆರೋಪಿ, ಅದನ್ನೇ ತನ್ನ ಮುಂದಿಟ್ಟುಕೊಂಡು ರಾತ್ರಿಯಿಡಿ ಪೂಜೆ ಮಾಡಿದ್ದ. ನಸುಕಿನಲ್ಲಿ ಪೂಜೆ ಮುಗಿಸಿದ್ದ ಆರೋಪಿ, ‘ಮೂರು ದಿನ ಬಿಟ್ಟು ಬ್ಯಾಗ್ ತೆಗೆದು ನೋಡಿ. ಚಿನ್ನಾಭರಣ ದ್ವಿಗುಣವಾಗಿರುತ್ತದೆ’ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದ. ಈ ಬಗ್ಗೆ ಮಹಿಳೆಯೇ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಡಿ. 8ರಂದು ಮಹಿಳೆಯು ಬ್ಯಾಗ್‌ ತೆಗೆದು ನೋಡಿದ್ದರು. ಅದರಲ್ಲಿ ಆಭರಣಗಳು ಇರಲಿಲ್ಲ. ನಿಂಬೆಹಣ್ಣುಗಳು ಮಾತ್ರ ಇದ್ದವು. ಅವಾಗಲೇ ಅವರಿಗೆ ವಂಚನೆಗೀಡಾಗಿದ್ದು ಗೊತ್ತಾಗಿದೆ. ಬಳಿಕ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT