ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕೆಎಲ್‌ಇ ಆಸ್ಪತ್ರೆ: ಮಕ್ಕಳಿಗೆ ‘ಕ್ಷೀರಭಾಗ್ಯ’

ಕೊರೊನಾ ಸಂಕಷ್ಟದಲ್ಲಿ ವೈದ್ಯರ ಸೇವೆ ಸ್ಮರಣೆ
Last Updated 1 ಜುಲೈ 2020, 15:37 IST
ಅಕ್ಷರ ಗಾತ್ರ

ಬೆಳಗಾವಿ: ‘ಮಾರಕ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲಿ ವೈಯಕ್ತಿಕ ಸಂಗತಿಗಳನ್ನು ಬದಿಗಿಟ್ಟು ಕಾರ್ಯನಿರ್ವಹಿಸುತ್ತಿರುವ ವೈದ್ಯರು ಅಭಿನಂದನಾರ್ಹರು’ ಎಂದು ಕೆಎಲ್‌ಇ ಸಂಸ್ಥೆಯ ಮಹಿಳಾ ಸ್ವಶಕ್ತಿ ಸಬಲೀಕರಣ ಕೋಶದ ಅಧ್ಯಕ್ಷೆ ಆಶಾ ತಾಯಿ ಕೋರೆ ಹೇಳಿದರು.

ಇಲ್ಲಿನ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆಯಲ್ಲಿ ‘ಕ್ಷೀರಭಾಗ್ಯ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಆಸ್ಪತ್ರೆಯ ಚಿಕ್ಕಮಕ್ಕಳ ಒಳ ರೋಗಿಗಳ ವಿಭಾಗದಲ್ಲಿ ಮಕ್ಕಳಿಗೆ ಉಚಿತವಾಗಿ ಹಾಲು ವಿತರಿಸುವ ವಿನೂತನ ಯೋಜನೆ ಇದಾಗಿದೆ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಕನಸಿನ ಕೂಸಾಗಿದೆ. ಸಮಾಜದ ಮಧ್ಯಮ ಹಾಗೂ ಕೆಳವರ್ಗದವರ ಮಕ್ಕಳ ಪೌಷ್ಟಿಕಾಂಶ ಕೊರತೆ ನೀಗಿಸಲು ಸಹಕಾರಿಯಾಗಿದೆ’ ಎಂದರು.

‘ಮಾರ್ಚ್‌ನಿಂದ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಎದೆಗುಂದದೆ ಜಾಣ್ಮೆ, ಕೌಶಲ ಮತ್ತು ತ್ಯಾಗ ಮನೋಭಾವದಿಂದ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

ಸಂಜೀವಿನಿಯಾಗಿದೆ:

ಜೆಎನ್ಎಂಸಿ ಪ್ರಾಂಶುಪಾಲೆ ಡಾ.ಎನ್.ಎಸ್. ಮಹಾಂತಶೆಟ್ಟಿ ಮಾತನಾಡಿ, ‘ಆಧುನಿಕತೆಗೆ ಸಿಲುಕಿ ಜೀವನದ ವಾಸ್ತವ ಮರೆತಿರುವ ಮಾನವ ಕುಲಕ್ಕೆ ಕೊರೊನಾ ಸವಾಲೆಸೆದಿದೆ. ಈ ಸಂದರ್ಭದಲ್ಲಿ ಕೆಎಲ್‌ಇ ಆಸ್ಪತ್ರೆಯು ಪ್ರಶಂಸನೀಯ ಕಾರ್ಯ ಮಾಡುತ್ತಿದೆ. ಅದರಲ್ಲೂ ಆರ್ಥಿಕವಾಗಿ ಹಿಂದಿರುವ ಹಿನ್ನೆಲೆಯಿಂದ ಬರುವ ರೋಗಿಗಳಿಗೆ ಸಂಜೀವಿನಿಯಾಗಿದೆ’ ಎಂದು ಹೇಳಿದರು.

ಯುಎಸ್ಎಂ–ಕೆಎಲ್‌ಇ ನಿರ್ದೇಶಕ ಡಾ.ಎಚ್‌.ಬಿ. ರಾಜಶೇಖರ, ‘ವೈದ್ಯಕೀಯ ಸಿಬ್ಬಂದಿ ತಮ್ಮ ಹಾಗೂ ಕುಟುಂಬದವರ ಆರೋಗ್ಯವನ್ನೂ ಲೆಕ್ಕಿಸದೆ ಉತ್ಸಾಹದಿಂದ ಕೊರೊನಾ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ. ಗೊಂದಲಗಳಿಗೆ ಒಳಗಾಗದೆ ರೋಗಿಗಳನ್ನು ಪರೀಕ್ಷಿಸಿ ಉಪಚರಿಸುತ್ತಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ.ಎಸ್‌.ಸಿ. ಧಾರವಾಡ, ‘ಮಕ್ಕಳ ಪೋಷಣೆಗೆ ಹಾಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಅವರಿಗೆ ಉಚಿತವಾಗಿ ಹಾಲು ನೀಡುವ ಕಾರ್ಯಕ್ರಮ ಸಹಕಾರಿಯಾಗಿದೆ’ ಎಂದು ತಿಳಿಸಿದರು.

ವೈದ್ಯರಿಗೆ ಸನ್ಮಾನ:

ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್. ಕಡ್ಡಿ ಮಾತನಾಡಿದರು.

ಯುವ ವೈದ್ಯರಾದ ಡಾ.ಶ್ರೀಕಾಂತ ಮೇತ್ರಿ ಹಾಗೂ ಶ್ವಾಸಕೋಶ ತಜ್ಞ ಡಾ.ಗುರುರಾಜ ಉಡಚನಕರ ಅವರನ್ನು ಸನ್ಮಾನಿಲಾಯಿತು. ಆರೋಗ್ಯ ಸಹಾಯಕಿಯರ ತರಬೇತಿಯ 3ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿಲಾಯಿತು.

ಕೆಎಲ್‌ಇ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ. ಉಡಚನಕರ, ಕೆಎಲ್ಇ ನರ್ಸಿಂಗ್‌ ವಿಜ್ಞಾನ ಸಂಸ್ಥೆಯ ಪ್ರಾಶುಪಾಲ ವಿಕ್ರಾಂತ ನೇಸರಿ, ಹಿರಿಯ ವೈದ್ಯರಾದ ಡಾ.ಸಿ.ಎನ್. ತುಗಶೆಟ್ಟಿ, ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ರಾಜೇಶ್ವರಿ ಕಡಕೋಳ, ಡಾ.ಸತೀಶ ಧಾಮಣಕರ, ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಅಶೋಕ ಪಾಂಗಿ, ಡಾ.ಅನಂತರೆಡ್ಡಿ ರೆಡ್ಡೇರ, ಎಲುಬು ಕೀಲು ವಿಭಾಗದ ಮುಖ್ಯಸ್ಥ ಡಾ.ಬಿ.ಬಿ. ಪುಟ್ಟಿ, ಚಿಕ್ಕಮಕ್ಕಳ ವಿಭಾಗದ ಡಾ.ಸುರೇಶ ಖಾಕಂಡಕಿ, ಡಾ.ಅನಿತಾ ಮೋದಗೆ, ಡಾ.ಸೌಮ್ಯಾ ವೇರ್ಣೇಕರ, ಡಾ.ಬಸವರಾಜ ಕುಡಸೋಮಣ್ಣವರ ಪಾಲ್ಗೊಂಡಿದ್ದರು.

ಡಾ.ಬಿ.ಎಸ್. ಮಹಾಂತಶೆಟ್ಟಿ ಸ್ವಾಗತಿಸಿದರು. ಅರುಣ ನಾಗಣ್ನವರ ನಿರೂಪಿಸಿದರು. ಡಾ.ಸಂತೋಷಕುಮಾರ ಕರಮಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT