ಮಡಿಕೇರಿ: ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಬುಧವಾರ ರಾತ್ರಿ ಕಾವೇರಿಯ ತವರಿನಲ್ಲಿ ‘ಸಿರಿ ಹಬ್ಬ’ವನ್ನು ಆಚರಿಸಲಾಯಿತು.
ಚಳಿಯಲ್ಲಿ ರಾತ್ರಿಯೇ ಗದ್ದೆಗಳಿಗೆ ತೆರಳಿದ ಕೃಷಿಕರು, ಭತ್ತದ ಕದಿರು ಕೊಯ್ಲು ಮಾಡಿ ಧಾನ್ಯಲಕ್ಷ್ಮಿಯನ್ನು ಮೆರವಣಿಗೆ ಮೂಲಕ ಮನೆ ತುಂಬಿಸಿಕೊಂಡರು. ವ್ಯವಸಾಯವನ್ನೇ ನಂಬಿ ಬದುಕುವ ರೈತರು, ಭತ್ತದ ಪೈರು ಬೆಳೆದಾಗ ಅದನ್ನು ಶಾಸ್ತ್ರೋಕ್ತವಾಗಿ ಕಟಾವು ಮಾಡಿ ಮನೆ ತುಂಬಿಸಿಕೊಳ್ಳುವುದೇ ಹುತ್ತರಿ ಹಬ್ಬದ ವಿಶೇಷ.
ಇಗ್ಗುತಪ್ಪ ದೇವಾಲಯದಲ್ಲಿ ಕದಿರು ತೆಗೆದ ಮೇಲೆ ಜಿಲ್ಲೆಯಾದ್ಯಂತ ಹಬ್ಬವನ್ನು ಆಚರಿಸಲಾಯಿತು. ಅರಳಿ, ಮಾವು, ಹಲಸು, ಕುಂಬಳಿ ಹಾಗೂ ಗೇರು ಮರದ ಎಲೆಗಳಿಂದ ನೆರೆ ಕಟ್ಟಲಾಗಿತ್ತು. ಪ್ರಥಮ ಕೊಯ್ಲಿಗೆಂದು ನಿಗದಿಪಡಿಸಿದ್ದ ಗದ್ದೆಯಲ್ಲಿ ಕುಟುಂಬದ ಹಿರಿಯರು, ಪೈರಿಗೆ ಪೂಜೆ ಸಲ್ಲಿಸಿ ಹಾಲು–ಜೇನು ಸಮರ್ಪಿಸಿದರು.
ಕುಟುಂಬದ ಮುಖ್ಯಸ್ಥರು, ಮೂರು ಸುತ್ತು ಗುಂಡು ಹಾರಿಸಿದ ಮೇಲೆ ಕದಿರು ತೆಗೆಯಲಾಯಿತು. ‘ಪೊಲಿ ಪೊಲಿ ದೇವಾ ಪೊಲಿಯೇ ಬಾ...’ ಎಂದು ಘೋಷಣೆ ಕೂಗುತ್ತಾ ಪ್ರಾರ್ಥನೆ ಸಲ್ಲಿಸಿದರು. ನಂತರ, ಕದಿರನ್ನು ಮೂಲಮನೆಗೆ ತರಲಾಯಿತು.
ಬಾಳೆಹಣ್ಣಿನಿಂದ ತಯಾರಿಸಿದ್ದ ತಂಬಿಟ್ಟು, ಏಲಕ್ಕಿ ಪುಟ್, ಗದ್ದೆಯಿಂದ ಕೊಯ್ಲು ಮಾಡಿ ತಂದ ಭತ್ತದ ಅಕ್ಕಿಯ ಪಾಯಸವನ್ನು ಸವಿದ ಕೊಡವರು, ಕೊಡವ ವಾಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅವರ ಕೋಲಾಟ, ಕತ್ತಿಯಾಟ್ ಹಬ್ಬಕ್ಕೆ ಮೆರುಗು ತುಂಬಿದವು.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯಿಂದ ಕುಶಾಲನಗರ ಸಮೀಪದ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ 26ನೇ ಸಾರ್ವತ್ರಿಕ ‘ಪುತ್ತರಿ ನಮ್ಮೆ’ಯು, ಹಬ್ಬದ ಸಡಗರ ಹೆಚ್ಚಿಸಿತ್ತು.
ಇಂದು ಕೋಲಾಟ: ಹುತ್ತರಿ ಹಬ್ಬದ ಬಳಿಕ ಒಂದುವಾರ ಜಿಲ್ಲೆಯಲ್ಲಿ ಕೋಲಾಟ, ಕ್ರೀಡಾಕೂಟಗಳು ನಡೆಯಲಿವೆ. ಮಡಿಕೇರಿಯ ಹಳೆಯ ಕೋಟೆ ಆವರಣದಲ್ಲಿ ಗುರುವಾರ ಮಧ್ಯಾಹ್ನ ಪಾಂಡಿರ ಕುಟುಂಬದ ಸಹಯೋಗದಲ್ಲಿ ಹುತ್ತರಿ ಕೋಲಾಟ ಜರುಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.