ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಂದಾವನ ಧ್ವಂಸ ಪ್ರಕರಣ: ಆನೆಗೊಂದಿಗೆ ಯತಿಗಳ ದೌಡು

Last Updated 18 ಜುಲೈ 2019, 19:45 IST
ಅಕ್ಷರ ಗಾತ್ರ

ಗಂಗಾವತಿ(ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಆನೆಗೊಂದಿ ಬಳಿಯ ನವವೃಂದಾವನ ಗಡ್ಡೆಯಲ್ಲಿರುವ ವ್ಯಾಸರಾಜ ತೀರ್ಥರ ಧ್ವಂಸಗೊಂಡ ವೃಂದಾವನ ಸ್ಥಳಕ್ಕೆ ಯತಿಗಳು ಹಾಗೂ ಭಕ್ತರು ದೌಡಾಯಿಸಿದರು.

ಮಂತ್ರಾಲಯದ ಸುಬುಧೇಂದ್ರ ತೀರ್ಥರು, ಉತ್ತಾರಾದಿ ಮಠದ ಸತ್ಯಾತ್ಮ ತೀರ್ಥರು, ಮೈಸೂರು ಸೋಸಲೆ ಮಠದ ವಿದ್ಯಾಶ್ರೀಶ ತೀರ್ಥರುಆನೆಗೊಂದಿ ರಾಜವಂಶಸ್ಥ ಶ್ರೀ ಕೃಷ್ಣದೇವರಾಯ ಅವರಿಂದ ಘಟನೆಯ ಕುರಿತು ಮಾಹಿತಿ ಪಡೆದರು. ಪುಣೆಯ ವಾಸ್ತು ತಜ್ಞರ ತಂಡದೊಂದಿಗೆ ಚರ್ಚಿಸಿದರು. ಅರ್ಚಕರು ಹೋಮ–ಹವನ ನೆರವೇರಿದ ನಂತರ ಪುನರ್‌ ನಿರ್ಮಾಣ ಆರಂಭಗೊಂಡಿತು.

ನಿಧಿಗಳ್ಳರು ವೃಂದಾವನ ಧ್ವಂಸಗೊಳಿಸಿದಸುದ್ದಿ ತಿಳಿಯುತ್ತಿದ್ದಂತೆರಾಜ್ಯದ ವಿವಿಧೆಡೆಯಿಂದ ಭಕ್ತರು ಬೆಳಿಗ್ಗೆಯಿಂದಲೇ ಆನೆಗೊಂದಿಯತ್ತ ಬರುತ್ತಿದ್ದರು. ನದಿ ಮಧ್ಯದಲ್ಲಿ ಗಡ್ಡೆ ಇರುವುದರಿಂದ ಬೋಟ್ ಮತ್ತು ತೆಪ್ಪಗಳಲ್ಲಿ ಬಂದರು. ಹೀಗಾಗಿ ಈ ಪ್ರದೇಶದಲ್ಲಿ ಜನದಟ್ಟಣೆ ಉಂಟಾಗಿತ್ತು.

ಸೋಸಲೆ ಮಠದ ಯತಿಗಳು,ವೃಂದಾವನ ಸುತ್ತ ಪ್ರದಕ್ಷಿಣೆ ಹಾಕಿ ವ್ಯಾಸರಾಜ ತೀರ್ಥರ ಸಮಾಧಿಗೆ ದೀರ್ಘದಂಡ ನಮಸ್ಕಾರ ಮಾಡಿದರು. ಐತಿಹಾಸಿಕ ಮಹತ್ವದ ಈ ಸ್ಮಾರಕಕ್ಕೆ ಬಂದ ದುರ್ಗತಿ ಕಂಡು ಭಾವುಕರಾದರು.

ಪೇಜಾವರ ಶ್ರೀ ಖಂಡನೆ
ಉಡುಪಿ:
ವ್ಯಾಸರಾಜರ ವೃಂದಾವನದ ಮೇಲಿನ ದಾಳಿಯಿಂದ ಸಮಸ್ತ ಮಾಧ್ವ ಸಮಾಜ ಹಾಗೂ ಹಿಂದೂ ಸಮಾಜಕ್ಕೆ ಆಘಾತವಾಗಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶ್ರೀಗಳು, ‘ವಿಜಯನಗರ ಸಾಮ್ರಾಜ್ಯದ ಅರಸರಿಗೆ ಆಪತ್ತು ಬಂದಾಗ ಪರಿಹಾರ ಮಾಡಿದವರು ವ್ಯಾಸರಾಜರು. ದಾಸ ಸಾಹಿತ್ಯದ ಪ್ರವರ್ತಕರಾದ, ಮಾಧ್ವ ಸಮಾಜದ ಗುರುಗಳಾದ ವ್ಯಾಸರಾಜರ ವೃಂದಾವನವನ್ನು ಧ್ವಂಸ ಮಾಡಿರುವುದು ಹಿಂದೂ ಸಮಾಜಕ್ಕೆ ಅವಮಾನಕರ ವಿಚಾರ’ ಎಂದರು.

‘ದಾಳಿ ನಡೆದಿರುವ ಕಾರಣದಿಂದ ವೈಯಕ್ತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ನವ ವೃಂದಾವನ ಸ್ಥಳಕ್ಕೆ ತೆರಳುತ್ತಿದ್ದೇನೆ. ಅಲ್ಲಿ ಎಲ್ಲ ಯತಿಗಳು ಒಂದೆಡೆ ಸೇರಿ ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದು ತಿಳಿಸಿದರು.

ಇದೇ ವೇಳೆ ಪುತ್ತಿಗೆ ಮಠದ ಸುಗಣೇಂದ್ರ ಶ್ರೀಗಳು ಹಾಗೂ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ವ್ಯಾಸರಾಜರ ವೃಂದಾವನ ಧ್ವಂಸಕ್ಕೆ ಆಘಾತ ವ್ಯಕ್ತಪಡಿಸಿದ್ದು, ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.


*
ಈ ಘಟನೆಯು ನೋವು ತಂದಿದೆ. ವೃಂದಾವನದ ಫುನರ್‌ ನಿರ್ಮಾಣಕ್ಕೆ ವ್ಯಾಸರಾಜ ಮಠಾಧೀಶರು ನಿರ್ಧರಿಸಿದ್ದು, ಅಗತ್ಯ ನೆರವು ನೀಡುತ್ತೇವೆ.
–ಸತ್ಯಾತ್ಮತೀರ್ಥ ಸ್ವಾಮೀಜಿ, ಉತ್ತರಾದಿಮಠ


*
ಮಠಗಳ ಮಧ್ಯೆ ಭಿನ್ನಾಭಿಪ್ರಾಯಗಳಿಲ್ಲ. ವೃಂದಾವನಗಳ ಭಧ್ರತೆಗೆ ಮಂತ್ರಾಲಯ ಮಠದಿಂದ ನೆರವು, ಸಹಕಾರ ನೀಡಲಾಗುವುದು.
– ಸುಬುಧೇಂದ್ರ ತೀರ್ಥ ಸ್ವಾಮೀಜಿ, ಮಂತ್ರಾಲಯ ರಾಘವೇಂದ್ರ ಮಠ

ಇನ್ನಷ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT