ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಜಾಕ್ಕೆ ಡಿ.ಕೆ. ಶಿವಕುಮಾರ್ ಆಗ್ರಹ

Last Updated 26 ಮೇ 2020, 10:59 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಪ್ರದೇಶದ ಕಾರ್ಮಿಕರು ಅನ್ಯ ರಾಜ್ಯಗಳಿಗೆ ಹೋಗಿ ಕೆಲಸ ಮಾಡುವಂತಿಲ್ಲ ಎಂದು ನಿರ್ದೇಶಿಸುವ ಮೂಲಕ ಈ ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಿರುವ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಮ್ಮ ಸಂವಿಧಾನದ ಪರಿಚ್ಛೇದ 19(1) (ಡಿ) ಮತ್ತು (ಈ) ಪ್ರಕಾರ ದೇಶದ ಪ್ರತಿಯೊಬ್ಬ ನಾಗರಿಕ ಯಾವುದೇ ಜಾಗದಲ್ಲಿ ಹೋಗಿ, ಅಲ್ಲಿ ನೆಲೆಸಿ, ಅಲ್ಲಿ ಕೆಲಸ ಮಾಡುವ ಹಕ್ಕನ್ನು ನೀಡಲಾಗಿದೆ. ಆದರೆ ಹೊರ ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ವಾಪಸ್ಸಾಗುತ್ತಿರುವ ಕಾರ್ಮಿಕರನ್ನು ಸ್ವಾಗತಿಸಿ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ವಿಫಲವಾಗಿರುವ ಯೋಗಿ ಆದಿತ್ಯನಾಥ್ ಈ ರೀತಿಯ ಉದ್ಧಟತನದ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅವರು ಮಂಗಳವಾರ ಮಾಧ್ಯಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಯೋಗಿ ಆದಿತ್ಯನಾಥ್ ಅವರಿಗೆ ಈ ದೇಶದ ಸಂವಿಧಾನದ ಬಗ್ಗೆ ಕಿಂಚಿತ್ತೂ ಪರಿಜ್ಞಾನವಿಲ್ಲ. ಇದ್ದಿದ್ದರೆ ಈ ರೀತಿ ಪ್ರಜಾದ್ರೋಹದ ಮಾತುಗಳನ್ನು ಆಡುತ್ತಿರಲಿಲ್ಲ. ಯಾರು ಬೇಕಾದರೂ ಎಲ್ಲಿಗೆ ಬೇಕಾದರೂ ಹೋಗಿ ಕೆಲಸ ಮಾಡುವ ಮೂಲಭೂತ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಿ ಕೆಲಸ ಮಾಡಲು ಯಾರೂ ಪಾಸ್‌ಪೋರ್ಟ್ ತೆಗೆದುಕೊಳ್ಳಬೇಕಿಲ್ಲ. ಯೋಗಿ ಆದಿತ್ಯನಾಥ ಅವರ ನಡೆ ಸರ್ವಾಧಿಕಾರಿ ಧೋರಣೆಯದ್ದಾಗಿದ್ದು, ಪ್ರಜಾತಂತ್ರ ವ್ಯವಸ್ಥೆಯ ಭದ್ರಬುನಾದಿಯನ್ನು ಅಲ್ಲಾಡಿಸುವಂಥದ್ದಾಗಿದೆ ಎಂದು ಕಿಡಿ ಕಾರಿದ್ದಾರೆ.

ಉತ್ತರ ಪ್ರದೇಶ ಕಾರ್ಮಿಕರು ದೇಶದ ಎಲ್ಲೆಡೆ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ಕಡೆ ಕೆಲಸ ಮಾಡಿದ್ದಾರೆ. ಅದೇ ರೀತಿ ನಮ್ಮ ಕನ್ನಡಿಗರು ಕೂಡ ಮುಂಬೈ, ದಿಲ್ಲಿ, ಹೈದರಾಬಾದ್, ಉತ್ತರ ಪ್ರದೇಶ ಮತ್ತಿತರ ಕಡೆ ಕೆಲಸ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಅವರನ್ನು ಯೋಗಿ ಆದಿತ್ಯನಾಥ್ ಅವರಂತೆ ಕಟ್ಟಿಹಾಕಲು ಸಾಧ್ಯವೇ. ಹಾಗೆ ನಿರ್ಬಂಧ ಹೇರಲು ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ಆದಿತ್ಯನಾಥ ಅವರು ಕಾರ್ಮಿಕರನ್ನು ಗುಲಾಮರೆಂದು ಭಾವಿಸಿದ್ದಾರೆಯೇ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.

'ಭಾರತ ಒಕ್ಕೂಟ ವ್ಯವಸ್ಥೆಯಾಗಿದ್ದು, ಅದು ಯಾರಪ್ಪನ ಆಸ್ತಿಯೂ ಅಲ್ಲ. ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ನಮ್ಮ ಸಂವಿಧಾನ ಒಂದಷ್ಟು ಹಕ್ಕುಗಳನ್ನು ನೀಡಿದೆ ಅದನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಆದರೆ ದುರಾದೃಷ್ಟವಶಾತ್ ಕೇಂದ್ರದಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಸರ್ವಾಧಿಕಾರಿ ಧೋರಣೆ ತೋರುತ್ತಾ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರುತ್ತಿವೆ. ಇದಕ್ಕೆ ಸಣ್ಣ ಉದಾಹರಣೆ ಕಾರ್ಮಿಕರ ವಿಚಾರದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ. ಇಂತಹ ಅಸಂವಿಧಾನಿಕ ನಿರ್ಧಾರಗಳನ್ನು ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳು ಖಂಡಿಸಿ, ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಬೇಕು' ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಆದಿತ್ಯನಾಥ್ ಅವರನ್ನು ಸಿಎಂ ಸ್ಥಾನದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಇಡೀ ದೇಶದಾದ್ಯಂತ ಉಗ್ರ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT