ಶುಕ್ರವಾರ, ಫೆಬ್ರವರಿ 26, 2021
29 °C

ಕೆಪಿಎಸ್‌ಸಿ: 140 ಅಧಿಕಾರಿಗಳ ‘ಸ್ಥಾನ’ ಪಲ್ಲಟ, ಸರ್ಕಾರದ ನಡೆ ಅನುಮಾನಕ್ಕೆ ಎಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 1998ನೇ ಸಾಲಿನ 383 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾದವರ ಪರಿಷ್ಕೃತ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ರಾಜ್ಯ ಪತ್ರದಲ್ಲಿ ಪ್ರಕಟಿಸಿದ ಬಳಿಕವೂ ಅನರ್ಹರೆಂದು ಗುರುತಿಸಲಾದ 28 ಅಧಿಕಾರಿಗಳನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿರುವ ರಾಜ್ಯ ಸರ್ಕಾರದ ನಡೆ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅಷ್ಟೇ ಅಲ್ಲ, ಪರಿಷ್ಕೃತ ಪಟ್ಟಿಯ ಪ್ರಕಾರ, 140 ಅಧಿಕಾರಿಗಳ ಹುದ್ದೆಗಳಲ್ಲಿ ಸ್ಥಾನ ಪಲ್ಲಟ ಆಗಲಿದೆ. ಹೀಗೆ ಸ್ಥಾನ ಪಲ್ಲಟಗೊಳ್ಳುವವರಲ್ಲಿ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಹೊಂದಿದ ಏಳು ಅಧಿಕಾರಿಗಳೂ ಸೇರಿದ್ದಾರೆ. ಹುದ್ದೆಗಳ ಸ್ಥಾನ ಪಲ್ಲಟದಿಂದ ಈ ಏಳೂ ಅಧಿಕಾರಿಗಳು ಐಎಎಸ್‌ ಶ್ರೇಣಿ ಕಳೆದುಕೊಳ್ಳುವುದು ಖಚಿತ.

ಸ್ಥಾನ ಪಲ್ಲಟಗೊಳ್ಳುವ ಅಧಿಕಾರಿಗಳು ಸೇವಾ ಜ್ಯೇಷ್ಠತೆ ಸಹಿತ ತಾವು ‘ಅರ್ಹತೆ’ ಹೊಂದಿದ ಹುದ್ದೆಯನ್ನು ವಹಿಸಿಕೊಳ್ಳಬೇಕಿದೆ. ಅಲ್ಲದೆ ಹೊಸತಾಗಿ ಸೇರಿಕೊಳ್ಳುವ ಅಭ್ಯರ್ಥಿಗಳಿಗೆ 2006ರಿಂದಲೇ (ನೇಮಕಗೊಳ್ಳಬೇಕಾದ ಅವಧಿ) ಸೇವಾ ಜ್ಯೇಷ್ಠತೆ ನೀಡಬೇಕಿದೆ.

ಆದರೆ, ಕೆಪಿಎಸ್‌ಸಿ ಗೆಜೆಟ್‌ನಲ್ಲಿ ಪ್ರಕಟಿಸಿದ ಪರಿಷ್ಕೃತ ಪಟ್ಟಿಯನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ. ಆದರೆ, ಸರ್ಕಾರ ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಮತ್ತು ಪರ್ಯಾಯ ಮಾರ್ಗದ ಹುಡುಕಾಟ ನಡೆಸುತ್ತಿರುವುದು ಅಧಿಕಾರಿಗಳ ವಲಯದಲ್ಲೇ ಚರ್ಚೆಗೆ ಗ್ರಾಸವಾಗಿದೆ.

ಅನರ್ಹರನ್ನು ಉದ್ಯೋಗದಲ್ಲೇ ಉಳಸಿಕೊಳ್ಳಲು ಮುಂದಾಗಿರುವ ಸರ್ಕಾರ, ಅವರಿಗಾಗಿ ‘ಸೂಪರ್‌ ನ್ಯೂಮರರಿ’ ಹುದ್ದೆ ಸೃಷ್ಟಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಆದರೆ, ಹೀಗೆ ಹುದ್ದೆ ಸೃಷ್ಟಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಸರ್ಕಾರ ಈ ಉದ್ದೇಶದಿಂದ ಹೊಸ ಕಾಯ್ದೆ ರಚಿಸಲು ಮುಂದಾಗಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

1998, 1999, 2004 ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಅಸಾಂವಿಧಾನಿಕವೆಂದು ಘೋಷಿಸಿದ್ದ ಹೈಕೋರ್ಟ್, ಅನರ್ಹರನ್ನು ಹೊರಗಿಟ್ಟು ಅರ್ಹರನ್ನು ನೇಮಿಸಿಕೊಳ್ಳುವಂತೆ ತೀರ್ಪು ನೀಡಿತ್ತು. ಈ ತೀರ್ಪು ಅನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಆದರೆ, ತೀರ್ಪು ಪಾಲನೆ ಆಗಿಲ್ಲ ಎಂದು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದೆ.

ಇದೇ ಜ. 18ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ‘ತೀರ್ಪು ಪಾಲನೆಯಾದ ಕುರಿತು ಅನುಪಾಲನಾ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ಎದುರಿಸಲು ಸಿದ್ಧರಾಗಬೇಕು’ ಎಂದು ಕೆಪಿಎಸ್‌ಸಿ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಜ. 28ಕ್ಕೆ ಮುಂದೂಡಿತ್ತು. ತಕ್ಷಣ ಎಚ್ಚೆತ್ತುಕೊಂಡಿದ್ದ ಕೆಪಿಎಸ್‌ಸಿ, ಜ. 25ರಂದೇ 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗೆ ಆಯ್ಕೆಯಾದವರ ಪರಿಷ್ಕೃತ ಪಟ್ಟಿಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿ ಅದೇ ದಿನ ವಿಚಾರಣೆ ವೇಳೆ ಹೈಕೋರ್ಟ್‌ ಗಮನಕ್ಕೆ ತಂದಿತ್ತು.

‘ಸುಪ್ರೀಂ ಕೋರ್ಟ್‌ನಲ್ಲಿ ಫೆ. 4ರಂದು ಈ ಪ್ರಕರಣದ ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಅಲ್ಲೇ ಇತ್ಯರ್ಥ ಮಾಡಿಕೊಳ್ಳುತ್ತೇವೆ ಮತ್ತು ಮರು ಪರಿಶೀಲನಾ ಅರ್ಜಿಯೂ ಸಲ್ಲಿಕೆಯಾಗಿದೆ’ ಎಂದು ಹೈಕೋರ್ಟ್‌ಗೆ ಸರ್ಕಾರ ತಿಳಿಸಿತ್ತು. ಉನ್ನತ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಹೈಕೋರ್ಟ್‌ ಮೌಖಿಕವಾಗಿ ಅದಕ್ಕೆ ಒಪ್ಪಿಗೆ ನೀಡಿತ್ತು.

ಈ ಮಧ್ಯೆ, ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿರುವ ಸರ್ಕಾರ, 10 ವರ್ಷಕ್ಕೂ ಹೆಚ್ಚು ಅವಧಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಸ್ಥಾನಪಲ್ಲಟ ಮಾಡಿದರೆ ಅಥವಾ ಕೈಬಿಟ್ಟರೆ ಆಡಳಿತಾತ್ಮಕ ಸಮಸ್ಯೆ ಉಂಟಾಗಲಿದೆ ಎಂದು ಹೇಳಿತ್ತು. ಇದಕ್ಕೆ ಪ್ರತಿಯಾಗಿ ದೂರುದಾರರು, ‘ಅಕ್ರಮವಾಗಿ ನೇಮಕಗೊಂಡು, ಅನರ್ಹರೆಂದು ಗುರುತಿಸಿದ ಬಳಿಕವೂ ಉದ್ಯೋಗದಲ್ಲಿ ಮುಂದುವರಿದವರನ್ನು 17 ವರ್ಷಗಳ ಬಳಿಕ ಕೈಬಿಟ್ಟ ನಿದರ್ಶನ ಸಮೇತ ಸುಪ್ರೀಂ ಕೋರ್ಟ್‌ಗೆ ವಿವರಿಸಿದ್ದಾರೆ. ಸೋಮವಾರ (ಫೆ. 4) ನಡೆಯಬೇಕಿದ್ದ ವಿಚಾರಣೆಯನ್ನು ಫೆ. 25ಕ್ಕೆ ಸುಪ್ರೀಂ ಕೋರ್ಟ್‌ ಮುಂದೂಡಿದೆ.

ಐಎಎಸ್‌ನಿಂದ ಹಿಂಬಡ್ತಿ: ‘ಡಿಒಪಿಟಿ’ ಅಂಗಳಕ್ಕೆ?

1998, 1999 ಮತ್ತು 2004ನೇ ಸಾಲಿನಲ್ಲಿ ಕೆಎಎಸ್‌ ಅಧಿಕಾರಿಗಳ ಸೇವಾ ಹಿರಿತನವನ್ನು ಪರಿಗಣಿಸಿ 33 ಅಧಿಕಾರಿಗಳಿಗೆ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಐಎಎಸ್‌ ಹುದ್ದೆಗೆ ಬಡ್ತಿ ನೀಡಿತ್ತು. ಈ ಪಟ್ಟಿಯಲ್ಲಿ 1998ನೇ ಸಾಲಿನ ಏಳು ಅಧಿಕಾರಿಗಳು ಇದ್ದರು. ಬಡ್ತಿ ನೀಡಿದ ವೇಳೆ ಈ ಸಾಲಿನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವುದರಿಂದ, ತನ್ನ ಆದೇಶವು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿದೆ ಎಂಬ ಷರತ್ತು ಅನ್ನು ಡಿಒಪಿಟಿ ವಿಧಿಸಿತ್ತು.

ಕೆಪಿಎಸ್‌ಸಿ ಪರಿಷ್ಕೃತ ಪಟ್ಟಿ ಅನುಷ್ಠಾನಕ್ಕೆ ಬಂದರೆ, ಈ ಏಳು ಅಧಿಕಾರಿಗಳ ಸ್ಥಾನಪಲ್ಲಟ ಆಗಲಿದ್ದಾರೆ. ಹೀಗಾಗಿ, ಕೆಪಿಎಸ್‌ಸಿ ಪ್ರಕಟಿಸಿದ ರಾಜ್ಯಪತ್ರವನ್ನು ರಾಜ್ಯ ಸರ್ಕಾರ ಒಪ್ಪಲೇ ಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಒಪ್ಪಿದರೆ, ಡಿಒಪಿಟಿ ಮತ್ತು ಯುಪಿಎಸ್‌ಸಿ ಈ ಬಗ್ಗೆ ರಾಜ್ಯ ಸರ್ಕಾರದಿಂದ ವರದಿ ಕೇಳುವುದಂತೂ ಖಚಿತ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

* ಅನರ್ಹರನ್ನು ಹೊರಗಿಟ್ಟು ಅರ್ಹರಿಗೆ ಮಣೆ ಹಾಕಬೇಕಾದ ರಾಜ್ಯ ಸರ್ಕಾರ, ಕಾನೂನು ತಮ್ಮ ಪರವಾಗಿದ್ದರೆ ಪಾಲನೆ ಮಾಡುತ್ತದೆ. ವಿರುದ್ಧವಾಗಿದ್ದರೆ ಉಲ್ಲಂಘನೆ ಮಾಡುತ್ತಿರುವುದು ವಿಪರ್ಯಾಸ

-ಎಸ್‌. ಶ್ರೀನಿವಾಸ, ಹೈಕೋರ್ಟ್‌ನಲ್ಲಿ ‘ನ್ಯಾಯಾಂಗ ನಿಂದನೆ’ ದೂರುದಾರ

* ರಾಜ್ಯ ಸರ್ಕಾರ, ಕಾನೂನು ತಮ್ಮ ಪರವಾಗಿದ್ದರೆ ಪಾಲನೆ ಮಾಡುತ್ತದೆ. ವಿರುದ್ಧವಾಗಿದ್ದರೆ ಉಲ್ಲಂಘನೆ ಮಾಡುತ್ತಿರುವುದು ವಿಪರ್ಯಾಸ
-ಎಸ್‌. ಶ್ರೀನಿವಾಸ, ಹೈಕೋರ್ಟ್‌ನಲ್ಲಿ ‘ನ್ಯಾಯಾಂಗ ನಿಂದನೆ’ ದೂರುದಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು