ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿಯಿಂದ ‘ಇ–ಮೇಲ್‌ ನೀತಿ’ ಉಲ್ಲಂಘನೆ

2015ರ ನೇಮಕಾತಿ: ಕಾನೂನು ಸಲಹಾ ಸಂಸ್ಥೆಯ ವರದಿಯಲ್ಲಿ ಉಲ್ಲೇಖ
Last Updated 18 ಜೂನ್ 2020, 2:15 IST
ಅಕ್ಷರ ಗಾತ್ರ

ಬೆಂಗಳೂರು: ‘2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 428 ಹುದ್ದೆಗಳಿಗೆ ಮುಖ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅಂಕಗಳನ್ನು ಕಳುಹಿಸುವ ಸಂದರ್ಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇ–ಮೇಲ್‌ ನೀತಿ ಉಲ್ಲಂಘಿಸಿದೆ’ ಎಂದು ಸೈಬರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಐಸಿಐ) ತನ್ನ ವರದಿಯಲ್ಲಿ ಹೇಳಿದೆ.

ಕೇಂದ್ರ ಸರ್ಕಾರದ ಇ– ಮೇಲ್‌ ನೀತಿ ಪ್ರಕಾರ, ಎನ್‌ಐಸಿ (ನ್ಯಾಷನಲ್‌ ಇನ್‌ಫಾರ್ಮೆಟಿಕ್ಸ್‌ ಸೆಂಟರ್‌) ಒದಗಿಸುವ ಇ– ಮೇಲ್‌ ಸೇವೆಗಳನ್ನು ಸರ್ಕಾರದ ಅಧಿಕೃತ ಸಂಪರ್ಕಕ್ಕೆ ಮಾತ್ರ ಬಳಸಬೇಕು. ಇತರ ಕಂಪನಿಗಳು ಒದಗಿಸುವ ಇ–ಮೇಲ್‌ ಸೇವೆಗಳನ್ನು ಅಧಿಕೃತ ಸಂಪರ್ಕಕ್ಕೆ ಬಳಕೆ ಮಾಡಲು ಅವಕಾಶ ಇಲ್ಲ.

‘ಆದರೆ, ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಕಳುಹಿಸಲು ಕೆಪಿಎಸ್‌ಸಿ ಅನಧಿಕೃತ ಸರ್ವರ್‌ (ಜಿಮೇಲ್) ಬಳಸಿದೆ. ಕೆಪಿಎಸ್‌ಸಿಯ ಅಧಿಕೃತ ಇ– ಮೇಲ್‌ ಸರ್ವರ್‌ kpsc-ka@nic.in ಡಿಜಿಟಲ್‌ ಮೌಲ್ಯಮಾಪನ ತಂತ್ರಾಂಶದೊಂದಿಗೆ ಮತ್ತು ಅಭ್ಯರ್ಥಿಗಳ ಅಂಕಗಳನ್ನು ಸಂಗ್ರಹಿಸಿದ್ದ ಡಾಟಾಬೇಸ್‌ ಜೊತೆ ನೇರವಾಗಿ ಸಂಪರ್ಕ ಹೊಂದಿತ್ತು. ಆ ಮೂಲಕ, ಕೆಪಿಎಸ್‌ಸಿ ನಿಯಮ ಉಲ್ಲಂಘಿಸಿದೆ’ ಎಂದು ಐಸಿಐ ತನ್ನ ವರದಿಯಲ್ಲಿ ಹೇಳಿದೆ.

ಅಲ್ಲದೆ, ಅಭ್ಯರ್ಥಿಗಳಿಗೆ ಕಳುಹಿಸಿದ ಅಂಕಗಳು ಪಠ್ಯ (ಟೆಕ್ಸ್ಟ್‌) ಮಾದರಿಯಲ್ಲಿದೆ. ಅಂದರೆ, ಸಾಫ್ಟ್‌ವೇರ್‌ ಅಪ್ಲಿಕೇಷನ್‌ ಮೂಲಕ ಹೊರ ಬರಬೇಕಿದ್ದ ಅಂಕಗಳನ್ನು ನೋಟ್‌ ಪ್ಯಾಡ್‌ಗೆ ಹಾಕಿ, ಮ್ಯಾನುವಲ್‌ ಆಗಿ ಪರಿವರ್ತಿಸಲಾಗಿದೆ ಎಂದು ಡಿಜಿಟಲ್‌ ಫಾರೆನ್ಸಿಕ್‌ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇ– ಮೇಲ್‌ ನೀತಿ ಪ್ರಕಾರ, ಹೀಗೆ ಹೊರಬರುವ ಯಾವುದೇ ಸೂಕ್ಷ್ಮ ಮಾಹಿತಿಗೆ ಡಿಜಿಟಲ್‌ ಸಹಿ ಅತೀ ಅಗತ್ಯ. ಆದರೆ, ಕೆಪಿಎಸ್‌ಸಿ ಕಾರ್ಯದರ್ಶಿಯ ಸಹಿಯಾಗಲಿ, ಕೆಪಿಎಸ್‌ಸಿ ಮೊಹರೆಯಾಗಲಿ, ಲೋಗೊ ಆಗಲಿ ಇಲ್ಲ. ಸಾಮಾನ್ಯ ಪುಟದಲ್ಲಿ ಅಂಕಗಳನ್ನು ನೀಡಲಾಗಿದೆ. ಮೂರು ದಿನಗಳ ಅಂತರದಲ್ಲಿ, ಬೇರೆ ಬೇರೆ ಸಮಯಗಳಲ್ಲಿ ಅಭ್ಯರ್ಥಿಗಳಿಗೆ ಇ– ಮೇಲ್‌ ಕಳುಹಿಸಲಾಗಿದೆ.

ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳ ಅಂಕಗಳನ್ನು ಪ್ರೊಸೆಸ್‌ ಮಾಡಿ ವಿಷಯವಾರು ಅಂಕಗಳ ಸಮೇತ ಒಂದೇ ದಿನದಲ್ಲಿ ನೀಡಬಹುದು ಎಂದು ಟಿಸಿಎಸ್‌ ತನ್ನ ದಾಖಲೆಗಳಲ್ಲಿ ತಿಳಿಸಿದೆ. ಅದಕ್ಕೆ ತಗಲುವ ಸಮಯ ಕೇವಲ 10 ನಿಮಿಷ ಎಂದೂ ಸ್ಪಷ್ಟವಾಗಿ ಹೇಳಿದೆ. ಆದರೆ, ಕೆಪಿಎಸ್‌ಸಿ ಅಭ್ಯರ್ಥಿಗಳ ವಿಷಯವಾರು ಅಂಕಗಳನ್ನು 67 ದಿನಗಳ ನಂತರ, ಅದೂ ಬೇರೆಯದೇ ಡೊಮೈನ್‌ ಆದ kpscreults.karnataka.gov.in/gp2015ರ ಮೂಲಕ ಕಳುಹಿಸಿದೆ. ಹೀಗೆ, ಪರೀಕ್ಷೆಯ ಅಂಕಗಳನ್ನು ಬೇರೆ ಬೇರೆ ಮೂಲಗಳಿಂದ ಕಳುಹಿಸುವುದು ಅಂಕಗಳ ತಿರುಚುವಿಕೆ ಸಾಧ್ಯತೆಗಳ ಅನುಮಾನಕ್ಕೆ ಕಾರಣವಾಗುತ್ತದೆ ಎಂದೂ ಐಸಿಐ ಹೇಳಿದೆ.

ಆಕ್ಷೇಪಣೆ ಸಲ್ಲಿಸದ ಕೆಪಿಎಸ್‌ಸಿ!
ಅಭ್ಯರ್ಥಿಗಳ ರಿಟ್‌ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಹೈಕೋರ್ಟ್‌, 15 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಕೆಪಿಎಸ್‌ಸಿ ಮತ್ತು ರಾಜ್ಯ ಸರ್ಕಾರಕ್ಕೆ ಮಾರ್ಚ್‌ 20ರಂದು ನೋಟಿಸ್‌ ಜಾರಿ ಮಾಡಿತ್ತು. ಕೊರೊನಾ ಕಾರಣದಿಂದ ಎರಡು ತಿಂಗಳು ಅರ್ಜಿ ವಿಚಾರಣೆ ನಡೆದಿರಲಿಲ್ಲ. ಈ ಮಧ್ಯೆ, ‘ಕರ್ನಾಟಕ ನಾಗರಿಕ ಸೇವಾ ನಿಯಮಗಳ ಕಾಯ್ದೆ– 2018’ ಪ್ರಕಾರ ಆಯ್ಕೆ ಪಟ್ಟಿ ತಯಾರಿಸಿಲ್ಲ ಮತ್ತು ಐಸಿಐ ವರದಿ ಸೇರಿದಂತೆ ಮತ್ತಷ್ಟು ದಾಖಲೆಗಳನ್ನು ಅಭ್ಯರ್ಥಿಗಳು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಜೂನ್‌ 10ರಂದು ನಡೆದ ವಿಚಾರಣೆ ವೇಳೆ, ಆಕ್ಷೇಪಣೆ ಸಲ್ಲಿಸಲು ಕೆಪಿಎಸ್‌ಸಿಗೆ ಹೈಕೋರ್ಟ್‌ ಒಂದು ವಾರದ ಅವಧಿ ನೀಡಿತ್ತು. ಪ್ರಕರಣದ ವಿಚಾರಣೆ ಬುಧವಾರ ನಡೆದಿದ್ದು, ಆಕ್ಷೇಪಣೆ ಸಲ್ಲಿಸಲು ಕೆಪಿಎಸ್‌ಸಿ ಮತ್ತೆ 15 ದಿನಗಳ ಕಾಲಾವಕಾಶ ಕೇಳಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT