ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ | 75 ಅಧಿಕಾರಿಗಳ ‘ಹಿತರಕ್ಷಣೆ’

ವಿಶೇಷ ನಿಯಮ ರೂಪಿಸಿದ ಡಿಪಿಎಆರ್ l ಮುಖ್ಯಮಂತ್ರಿ ಅನುಮೋದನೆ ಬಾಕಿ
Last Updated 8 ಜೂನ್ 2020, 21:25 IST
ಅಕ್ಷರ ಗಾತ್ರ

ಬೆಂಗಳೂರು: ಹದಿನಾಲ್ಕು ವರ್ಷ ಬೇರೊಂದು ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸಿ ಕೋರ್ಟ್‌ ತೀರ್ಪಿನಂತೆ ಹುದ್ದೆ ಬದಲಿಸಿಕೊಂಡ 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ 75 ಅಧಿಕಾರಿಗಳಿಗೆ ಕೊನೆಗೂ ಸೇವಾ ಜ್ಯೇಷ್ಠತೆ ಮತ್ತು ವೇತನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

‘ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ವಿಶೇಷ ನಿಯಮ ರೂಪಿಸಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕಡತ ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ಒಪ್ಪಿಗೆ ನೀಡಿದ ಬಳಿಕ ಸಚಿವ ಸಂಪುಟ ಸಭೆಗೆ ವಿಷಯ ಮಂಡನೆಯಾಗಲಿದೆ’ ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

‘ಡಿಮ್ಡ್ ಡಿಕ್ಲರೇಷನ್‌ (ಮೊದಲಿದ್ದ ಇಲಾಖೆಯಲ್ಲಿ ಪ್ರೊಬೇಷನರಿ ಮುಗಿಸಿರುವುದರಿಂದ ಮತ್ತೆ ಪ್ರೊಬೇಷನರಿ ಅಗತ್ಯವಿಲ್ಲ) ಮತ್ತು ಈ ಹಿಂದಿನ ಇಲಾಖೆಯ ಜ್ಯೇಷ್ಠತೆ ಪರಿಗಣಿಸಿ ವೇತನ ಮತ್ತು ಹುದ್ದೆ ನೀಡಲು ನಿಯಮ ರೂಪಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.

ಹೈಕೋರ್ಟ್‌ ತೀರ್ಪಿನ ಅನ್ವಯ 1998ರ ಗೆಜೆಟೆಡ್‌ ಪ್ರೊಬೇಷನರಿ 362 ಹುದ್ದೆಗಳ ಅಂತಿಮ ಪರಿಷ್ಕೃತ ಆಯ್ಕೆ ಪಟ್ಟಿಯನ್ನು 2019ರ ಆ. 22ರಂದು ಕೆಪಿಎಸ್‌ಸಿ ಪ್ರಕಟಿಸಿತ್ತು. ಇದರಿಂದಾಗಿ 173 ಅಧಿಕಾರಿಗಳ ಹುದ್ದೆ ಬದಲಾಗಿದೆ. ಅವರಲ್ಲಿ 63 ಅಧಿಕಾರಿಗಳು ಕೆಎಟಿಯಿಂದ ತಡೆಯಾಜ್ಞೆ ತಂದಿದ್ದಾರೆ. ಈ ಅಧಿಕಾರಿಗಳು ಹಳೆ ಹುದ್ದೆಯಲ್ಲೇ ಮುಂದುವರಿಸುವಂತೆ ಮಾಡಿದ ಮನವಿಯನ್ನು ಡಿಪಿಎಆರ್ ತಿರಸ್ಕರಿಸಿದೆ.

ಆದರೆ, ಉಪ ವಿಭಾಗಾಧಿಕಾರಿ 10, ತಹಶೀಲ್ದಾರ್‌ 13, ವಾಣಿಜ್ಯ ತೆರಿಗೆ, ಅಬಕಾರಿ ಸೇರಿದಂತೆ ಆರ್ಥಿಕ ಇಲಾಖೆಗೆ 27, ಲೆಕ್ಕಪತ್ರವೂ ಸೇರಿ ಸಹಕಾರ ಇಲಾಖೆಗೆ 14 ಹೀಗೆ ಹೊಸ ಹುದ್ದೆಗೆ ಬದಲಾದ 75 ಅಧಿಕಾರಿಗಳನ್ನು ಹೊಸಬರಂತೆ ನೇಮಿಸಿಕೊಳ್ಳಲಾಗಿದ್ದು, ಅನೇಕರಿಗೆ ಹುದ್ದೆಯನ್ನೇ ತೋರಿಸಿಲ್ಲ. ಕೆಲವರಿಗೆ ವೇತನವನ್ನೂ ನೀಡಿಲ್ಲ. ಹುದ್ದೆ ಬದಲಿಸಿ, ಐಎಎಸ್‌ ನಿರೀಕ್ಷೆಯಲ್ಲಿದ್ದ ರಾಮಪ್ಪ ಹಟ್ಟಿ ಎಂಬ ಅಧಿಕಾರಿ ಪ್ರೊಬೇಷನರಿ ಅವಧಿಯಲ್ಲೇ ಮೇ 31ರಂದು ನಿವೃತ್ತಿಯಾಗುತ್ತಿರುವ ಬಗ್ಗೆ ‘ಪ್ರಜಾವಾಣಿ’ ಮೇ 26ರಂದು ವಿಶೇಷ ವರದಿ ಪ್ರಕಟಿಸಿತ್ತು. ಆ ಬೆನ್ನಲ್ಲೆ, ಡಿಪಿಎಆರ್‌ ತುರ್ತು ಸಭೆ ನಡೆಸಿ ವಿಶೇಷ ನಿಯಮ ರೂಪಿಸಿದೆ.

ಹುದ್ದೆ ಬದಲಾದರೂ ‘ಜ್ಯೇಷ್ಠತೆ’!
ಕಂದಾಯ ಇಲಾಖೆ 2019ರ ಡಿ. 31ಕ್ಕೆ ಇದ್ದಂತೆ ತಹಶೀಲ್ದಾರ್‌ ಶ್ರೇಣಿ –1 ಅಧಿಕಾರಿಗಳ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಜೂನ್‌ 5ರಂದು ಪ್ರಕಟಿಸಿದೆ. ಆದರೆ, 1998ರ ಅಂತಿಮ ಪರಿಷ್ಕೃತ ಪಟ್ಟಿಯಂತೆ 23 ತಹಶೀಲ್ದಾರ್‌ಗಳ ಹುದ್ದೆ ಬದಲಾದವರ ಹೆಸರು ಈ ಪಟ್ಟಿಯಲ್ಲಿದ್ದು, ಹೊಸದಾಗಿ ತಹಶೀಲ್ದಾರ್‌ ಹುದ್ದೆಗೆ ಬಂದ 13 ಅಧಿಕಾರಿಗಳ ಹೆಸರು ಈ ಪಟ್ಟಿಯಲ್ಲಿ ಇಲ್ಲದಿರುವುದು ತಹಶೀಲ್ದಾರ್‌ಗಳಲ್ಲಿ ಅಚ್ಚರಿ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT