ಬುಧವಾರ, ಏಪ್ರಿಲ್ 21, 2021
25 °C
ಕೃಷ್ಣ ಬೈರೇಗೌಡ ಟೀಕೆ

‘ಬಿಜೆಪಿ ಕೈಯಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯ ರಕ್ತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಆಪರೇಷನ್‌ ಕಮಲ ನಡೆಸುತ್ತಿರುವ ಬಿಜೆಪಿಯ ಕೈಗೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ರಕ್ತ ಅಂಟಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಟೀಕಾ‍ಪ್ರಹಾರ ನಡೆಸಿದರು.

ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಪ್ರಸ್ತಾವ ಮಂಡನೆಯ ಚರ್ಚೆ ವೇಳೆ ಮಾತನಾಡಿ, ‘ಬಿಜೆಪಿಯ ಗುರಿ ಕಾಂಗ್ರೆಸ್‌ ಮುಕ್ತ ಭಾರತ ಅಲ್ಲ, ವಿರೋಧ ಪಕ್ಷ ಮುಕ್ತ ಭಾರತ. ಕರ್ನಾಟಕ, ಗುಜರಾತ್‌, ಗೋವಾ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪಕ್ಷಗಳ ಹಲವು ನಾಯಕರನ್ನು ಸೆಳೆದಿದ್ದಾರೆ. ಈ ಪ್ರಯತ್ನ ಇನ್ನೂ ಮುಂದುವರಿದಿದೆ. ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಮೂಲಕ ರಷ್ಯಾದಲ್ಲಿ ಜಾರಿಯಲ್ಲಿರುವಂತಹ ವ್ಯವಸ್ಥೆ ಜಾರಿಗೆ ಪ್ರಯತ್ನ ನಡೆಸಿದ್ದಾರೆ’ ಎಂದು ಆರೋಪಿಸಿದರು.  

‘ಬಿಜೆಪಿಯವರು ಪ್ರಜಾಪ್ರಭುತ್ವದ ಅಣಕ ನಡೆಸುತ್ತಿದ್ದಾರೆ. ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡುತ್ತಿಲ್ಲ. ಬಿಜೆಪಿಯಿಂದ ದೇಶದಾದ್ಯಂತ ನಡೆಯುತ್ತಿರುವ ಆಪರೇಷನ್ ಕಮಲದ, ಪ್ರಜಾಪ್ರಭುತ್ವವನ್ನು ಕೊನೆಗಾಣಿಸುವ ಅವರ ನಡೆಯ ವಿರುದ್ಧ ನಾವು ಸೈದ್ಧಾಂತಿಕ ಹೋರಾಟ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದರು.

‘ಸರ್ಕಾರ ಹಾಗೂ ಸಚಿವ ಸ್ಥಾನ ಹೋಗುತ್ತದೆ ಎಂಬುದಕ್ಕೆ ಚಿಂತೆ ಇಲ್ಲ.‌ ನಾನು ಸಚಿವ ಸ್ಥಾನದ ಅಪೇಕ್ಷೆ ಪಟ್ಟಿದ್ದವನೂ ಅಲ್ಲ. ಆದರೆ, ಈ ದೇಶದ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹಾಗೂ ಬಹುತ್ವವನ್ನು ಹತ್ತಿಕ್ಕಲು ಮಾಡುತ್ತಿರುವ ದಮನಕಾರಿ ಚಟುವಟಿಕೆಗಳ ವಿರುದ್ಧ ನಾವು ಸೆಟೆದು ನಿಂತು ಹೋರಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

‘ಅತೃಪ್ತ ಶಾಸಕರು ಈಗಾಗಲೇ ಪಕ್ಷಾಂತರ ಮಾಡಿದ್ದಾರೆ. ಶಾಸಕರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆಯೇ, ಇಲ್ಲವೇ ಎಂಬುದು ಗೊತ್ತಾಗಬೇಕು. ರಾಜೀನಾಮೆ ಬಗ್ಗೆ ಸಭಾಧ್ಯಕ್ಷರು ನಿರ್ಧಾರ ಕೈಗೊಳ್ಳಬೇಕು. ಅದು ತೀರ್ಮಾನ ಆಗದಿದ್ದರೆ ಈ ವಿಶ್ವಾಸಮತಕ್ಕೆ ಪ್ರಾವಿತ್ರ್ಯ ಇರುವುದಿಲ್ಲ’ ಎಂದು ಅವರು ವ್ಯಾಖ್ಯಾನಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು