ಸೋಮವಾರ, ಆಗಸ್ಟ್ 26, 2019
22 °C

ಕೃಷ್ಣಾನದಿ ಪ್ರವಾಹ: ನದಿತೀರದಲ್ಲಿ ನಿಗಾ

Published:
Updated:

ರಾಯಚೂರು: ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ನಿರಂತರವಾಗಿ ನೀರು ಹೊರಬಿಡಲಾಗುತ್ತಿದ್ದು, ಗುರುವಾರ 1.97 ಲಕ್ಷ ಕ್ಯುಸೆಕ್‌ ಹೊರಹರಿವು ಪ್ರಮಾಣವಿತ್ತು. ಲಿಂಗಸುಗೂರು ತಾಲ್ಲೂಕಿನ ಕೃಷ್ಣಾ ನದಿ ತೀರ ಪ್ರದೇಶಗಳಲ್ಲಿ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ಕಡದರಗಡ್ಡಿ, ಶೀಲಹಳ್ಳಿ, ತವಗ ಸೇರಿದಂತೆ ನಡುಗಡ್ಡೆ ಪ್ರದೇಶಗಳಲ್ಲಿ ವಾಸವಿರುವ ಜನರು ನದಿಗೆ ಇಳಿಯದಂತೆ ಮತ್ತು ಜಾನುವಾರುಗಳನ್ನು ತೆಗೆದುಕೊಂಡು ನದಿಗೆ ತೆರಳದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿರುವ ಕಾರಣ ನದಿಪ್ರವಾಹ ಹೆಚ್ಚಾಗಲಿದೆ. ಯಾವುದೇ ಕಾರಣಕ್ಕೂ ನದಿ ತೀರಕ್ಕೆ ಹೋಗಬಾರದು ಎಂದು ಜನರಿಗೆ ತಿಳಿಸಿದ್ದಾರೆ. 

ಕಲಬುರ್ಗಿ, ಬೀದರ್‌ನಲ್ಲಿ ಮಳೆ: ಜಿಲ್ಲೆಯಲ್ಲಿ ಗುರುವಾರ ಉತ್ತಮ ಮಳೆಯಾಯಿತು. ಕಲಬುರ್ಗಿ ನಗರದಲ್ಲಿ ಮಧ್ಯಾಹ್ನ 3ರ ಸುಮಾರಿಗೆ ಆರಂಭವಾದ ಮಳೆ ರಾತ್ರಿಯವರೆಗೆ ಮುಂದುವರೆಯಿತು. 

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ, ಕಾಳಗಿ, ಚಿಂಚೋಳಿ ಮತ್ತು ಸೇಡಂನಲ್ಲಿ ಸಾಧಾರಣ ಮಳೆಯಾಯಿತು. ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಹುಮನಾಬಾದ್‌ನಲ್ಲೂ ಮಳೆಯಾಯಿತು.

ಶಿವಮೊಗ್ಗದಲ್ಲಿ ಸಾಧಾರಣ ಮಳೆ: ಜಿಲ್ಲೆಯ ಹಲವೆಡೆ ಗುರುವಾರ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ, ಭದ್ರಾವತಿ ಭಾಗದಲ್ಲಿ ಬಿಸಿಲಿನ ವಾತಾವರಣವಿದ್ದು, ತೀರ್ಥಹಳ್ಳಿ, ಹೊಸನಗರ, ಸಾಗರ, ಶಿಕಾರಿಪುರ, ಮಾಸ್ತಿಕಟ್ಟೆ, ರಿಪ್ಪನ್‌ಪೇಟೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಸೊರಬದಲ್ಲಿ ತುಂತುರು ಮಳೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕ್ಷೀಣಿಸಿರುವುದರಿಂದ ಲಿಂಗನಮಕ್ಕಿ, ಭದ್ರಾ, ತುಂಗಾ, ಚಕ್ರಾ, ಸಾವೇಹಕ್ಲು, ಮಾಣಿ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ.

Post Comments (+)