ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ದಲಿತ–ಬಂಜಾರ ‘ಮತ ಸಂಘರ್ಷ’

‘ಹೊಂದಾಣಿಕೆ’ ನೆಲದಲ್ಲಿ ನೇರ ಹಣಾಹಣಿ
Last Updated 30 ಏಪ್ರಿಲ್ 2019, 15:59 IST
ಅಕ್ಷರ ಗಾತ್ರ

ವಿಜಯಪುರ: ‘ಹೊಂದಾಣಿಕೆ’ ರಾಜ ಕಾರಣಕ್ಕೆ ಹೆಸರಾಗಿರುವ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಈ ಕ್ಷೇತ್ರದ ಇತಿಹಾಸದಲ್ಲಿ ಕಾಂಗ್ರೆಸ್‌, ಸ್ವತಂತ್ರ ಪಕ್ಷ, ಜನತಾಪಕ್ಷ, ಜನತಾದಳ, ಬಿಜೆಪಿ ಗೆಲುವು ಸಾಧಿಸಿವೆ. ಪಕ್ಷೇತರರೂ ಒಮ್ಮೆ (1957) ವಿಜಯಶಾಲಿಯಾಗಿದ್ದಾರೆ. ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆ. 2009ರಲ್ಲಿ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿ ಬದಲಾದ ಬಳಿಕ, ದಲಿತ– ಬಂಜಾರ ಸಮುದಾಯದ ಅಭ್ಯರ್ಥಿಗಳ ನಡುವೆಯೇ ‘ಮತ ಸಂಘರ್ಷ’ ನಡೆದಿದೆ.

2009, 2014ರಲ್ಲಿ ಬಿಜೆಪಿಯ ರಮೇಶ ಜಿಗಜಿಣಗಿ (ದಲಿತ ಎಡಗೈ), ಕಾಂಗ್ರೆಸ್‌ನ ಪ್ರಕಾಶ ರಾಠೋಡ (ಬಂಜಾರಾ) ನಡುವೆ ಸ್ಪರ್ಧೆ ನಡೆದಿತ್ತು. ಈಗಲೂ ರಮೇಶ ಜಿಗಜಿಣಗಿ ಹಾಗೂ ಜೆಡಿಎಸ್‌ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚವ್ಹಾಣ (ಬಂಜಾರಾ) ನಡುವೆಯೇ ನೇರ ಪೈಪೋಟಿಯಿದೆ.

ಮಾಜಿ ಸಂಸದ ಬಿ.ಕೆ.ಗುಡದಿನ್ನಿ ಪತ್ನಿ ಲಕ್ಷ್ಮೀಬಾಯಿ ಗುಡದಿನ್ನಿ 1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೊದಲ ಮಹಿಳಾ ಪ್ರಬಲ ಸ್ಪರ್ಧಿ. ಇವರನ್ನು ಬಿಟ್ಟರೆ, ಅಖಾಡದಲ್ಲಿರುವ ನಾಗಠಾಣ ಶಾಸಕ ಚವ್ಹಾಣ ಪತ್ನಿ ಸುನೀತಾ ಅವರೇ ಮತ್ತೊಬ್ಬ ಪ್ರಬಲ ಸ್ಪರ್ಧಿ.

ದಲಿತ ಬಲಗೈ, ಎಡಗೈ, ಬಂಜಾರಾ ಸಮಾಜದ ಮತಗಳು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಂಜಾರಾ ನಾಯಕರು ಗೆಲುವಿಗಾಗಿ ಒಗ್ಗಟ್ಟಾಗಿದ್ದಾರೆ. ಶಾಸಕ ಚವ್ಹಾಣ ಕುಟುಂಬ ರಾಜಕಾರಣಕ್ಕೆ ಆರಂಭದ ದಿನಗಳಲ್ಲಿ ಸಮುದಾಯದೊಳಗಿದ್ದ ಆಕ್ರೋಶ, ಇದೀಗ ತಣ್ಣಗಾಗಿದೆ.

ಬಂಜಾರಾ ಸಮುದಾಯ ಒಗ್ಗೂಡುತ್ತಿದ್ದಂತೆ; ಕಾಂಗ್ರೆಸ್‌ನೊಟ್ಟಿಗೆ ಗುರುತಿ ಸಿಕೊಂಡಿದ್ದ ದಲಿತ ಬಲಗೈ ಸಮಾಜ, ‘ಮೂಲ ಅಸ್ಪೃಶ್ಯ’ ಹೆಸರಿನಲ್ಲಿ ಸಂಘಟನೆಗೊಂಡು ಜಿಗಜಿಣಗಿ ಬೆನ್ನಿಗೆ ನಿಂತಿದೆ. ಬಲಗೈ ಮುಖಂಡರು ಜಿಗಜಿಣಗಿಗೆ ಆಶೀರ್ವದಿಸಲು ಮನಸ್ಸು ಮಾಡಿದ್ದಾರೆ. ಇದರಿಂದ ಬಿಎಸ್‌ಪಿ ಆನೆ ನಡಿಗೆ ಕುಂಟಿದೆ.

ದಲಿತ ಎಡಗೈ ಸಮುದಾಯದ ರಮೇಶ ಜಿಗಜಿಣಗಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಚುನಾವಣಾ ಪೂರ್ವದಲ್ಲೇ ನಿರ್ಧರಿಸಿಕೊಂಡಿದ್ದ ಕಾಂಗ್ರೆಸ್ಸಿಗರು, ದಲಿತ ಬಲಗೈ ಸಮು ದಾಯದ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದರು. ಇದಕ್ಕಾಗಿಯೇ ಬಂಜಾರಾ ಸಮಾಜದ ಪ್ರಕಾಶ ರಾಠೋಡರನ್ನು ವಿಧಾನ ಪರಿಷತ್‌ಗೆ ಕಳುಹಿಸಿಕೊಟ್ಟಿದ್ದರು.

ಬದಲಾದ ಕಾಲಘಟ್ಟದಲ್ಲಿ ಏರ್ಪಟ್ಟ ಹೊಂದಾಣಿಕೆಯಲ್ಲಿ ಕ್ಷೇತ್ರ ಜೆಡಿಎಸ್ ಪಾಲಾಯಿತು. ಆರಂಭದಲ್ಲಿ ಅಸಮಾಧಾನವಿದ್ದರೂ; ಇದೀಗ ಒಗ್ಗಟ್ಟಿನ ಬಲ ಪ್ರದರ್ಶನಗೊಂಡಿದೆ. ಸಚಿವರ ರಹಸ್ಯ ಸಭೆಗಳು ನಡೆದಿದ್ದು, ತಂತ್ರಗಾರಿಕೆ ರೂಪುಗೊಂಡಿವೆ. ಸಹಸ್ರ, ಸಹಸ್ರ ಸಂಖ್ಯೆಯಲ್ಲಿರುವ ಗುಳೆ ಮತದಾರರನ್ನು ಮತಗಟ್ಟೆಗೆ ಕರೆತರುವ ಕಾರ್ಯ ಯೋಜನೆಯೂ ಸಿದ್ಧಗೊಂಡಿದೆ.

ಮೈತ್ರಿಯ ಪ್ರಚಾರ ಸಭೆ, ಸಮಾವೇಶಗಳಲ್ಲಿ ಜಿಗಜಿಣಗಿಯೇ ವಿರೋಧಿ ಪಾಳೆಯದ ಪ್ರಮುಖ ಗುರಿಯಾಗಿದ್ದಾರೆ. ಗೃಹ ಸಚಿವ ಎಂ.ಬಿ.ಪಾಟೀಲ ಸಾರಥ್ಯಕ್ಕೆ ಉಳಿದವರ ಸಾಥ್‌ ಸಿಕ್ಕಿದೆ. ಸಚಿವರಾದ ಶಿವಾನಂದ ಪಾಟೀಲ, ಎಂ.ಸಿ.ಮನಗೂಳಿ, ಬಂಡೆಪ್ಪ ಕಾಶೆಂಪುರ, ವೆಂಕಟರಾವ ನಾಡಗೌಡ ಕ್ಷೇತ್ರದಲ್ಲಿ ದೋಸ್ತಿ ಅಭ್ಯರ್ಥಿ ಪರ ತಂತ್ರಗಾರಿಕೆ ರೂಪಿಸುವಲ್ಲಿ ನಿಷ್ಣಾತರಾಗಿದ್ದಾರೆ.

ನಮೋ ನಾಮಬಲ; ಚಾಣಾಕ್ಷ ನಡೆ: ಜಿಗಜಿಣಗಿ ‘ನಮೋ’ ನಾಮಬಲವನ್ನೇ ನಂಬಿಕೊಂಡಿದ್ದಾರೆ. ಎದುರಾಳಿಗಳ ಟೀಕಾಸ್ತ್ರಕ್ಕೆ ಯಾವುದೇ ಖಾರವಾದ ಪ್ರತಿಕ್ರಿಯೆ ನೀಡದೆ; ತಮ್ಮ ಅವಧಿಯಲ್ಲಿನ ಸಾಧನೆಯ ಹೊತ್ತಿಗೆಯನ್ನು ಮನೆ ಮನೆಗೂ ತಲುಪಿಸುವುದರಲ್ಲಿ ನಿರತ ರಾಗಿದ್ದಾರೆ. ಜತೆಗೆ ಮೋದಿ ಸಾಧನೆ, ಕೇಂದ್ರದ ಯೋಜನೆಗಳ ಕರಪತ್ರವನ್ನೂ ಹಂಚುತ್ತಿದ್ದಾರೆ.

ಚುನಾವಣೆ ಪೂರ್ವ ದಲ್ಲಿ ತಮ್ಮ ವಿರುದ್ಧ ಅಸಮಾಧಾನಗೊಂಡಿದ್ದವರನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ಮನವೊಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಪರ ಕೆಲಸ ಮಾಡುವಂತೆ ಹುರಿದುಂಬಿಸುವಲ್ಲಿ ಚಾಣಾಕ್ಷ ನಡೆ ಅನುಸರಿಸಿದ್ದಾರೆ.

ದಶಕಗಳಿಂದಲೂ ಜಿಲ್ಲೆಯಾದ್ಯಂತ ಹೊಂದಿರುವ ತಮ್ಮದೇ ಸಂಪರ್ಕ ಜಾಲದ ಮೂಲಕವೂ ‘ಮತ ಬೇಟೆ’ ನಡೆಸಿದ್ದಾರೆ. ತಮ್ಮೂರುಗಳಲ್ಲಿ ಇಂದಿಗೂ ಪ್ರಭಾವ ಹೊಂದಿರುವ ಗೌಡರಿಗೆ ಕೈ ಮುಗಿದಿದ್ದಾರೆ. ಎಂದಿನ ಶೈಲಿಯಲ್ಲೇ ಅಣ್ಣಾವ್ರೇ, ಅಕ್ಕಾವ್ರೇ, ಕಾಕಾ, ಮಾಮಾ... ಎನ್ನುತ್ತಲೇ ಮತ ಯಾಚನೆಯ ಜಾಣ್ಮೆಯ ನಡೆ ಅನುಸರಿಸಿದ್ದಾರೆ.

ಯತ್ನಾಳ ದೂರ; ಬಲಗೈ ಮುನಿಸು..!
ಶಾಸಕ ಬಸನಗೌಡ ಪಾಟೀಲ ಯತ್ನಾಳ ಕ್ಷೇತ್ರದಿಂದಲೇ ದೂರ ಉಳಿದಿದ್ದಾರೆ. ವಿಜಯಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಇದೂವರೆಗೂ ಜಿಗಜಿಣಗಿ ಪರ ಪ್ರಚಾರ ನಡೆಸಿಲ್ಲ.

ದಶಕಗಳಿಂದಲೂ ಕಾಂಗ್ರೆಸ್‌ ನಿಷ್ಠರಾಗಿದ್ದ ದಲಿತ ಬಲಗೈ ಸಮುದಾಯದ ಮುನಿಸು ಈ ಬಾರಿ ಹೆಚ್ಚಿದೆ. ಪ್ರಬಲ ಹಕ್ಕೊತ್ತಾಯಕ್ಕೂ ಮನ್ನಣೆ ನೀಡದಿರುವುದು ಸಮಾಜದಲ್ಲಿ ಅಸಮಾಧಾನ ಮೂಡಿಸಿದೆ.

ಐದು ವರ್ಷಗಳ ಅವಧಿಯಲ್ಲಿ 1,74,395 ಹೊಸ ಮತದಾರರು ಸೇರ್ಪಡೆಯಾಗಿದ್ದು, ಚುನಾವಣಾ ಫಲಿತಾಂಶದಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸಲಿದ್ದಾರೆ.

**
ಸಂಸದರು ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ನೋವು ಕ್ಷೇತ್ರದ ಮತದಾರರಲ್ಲಿದೆ. ಶಿಕ್ಷಣವಂತ ಮಹಿಳೆಗೆ ಅವಕಾಶ ಕೊಡಲು ಇಚ್ಚಿಸಿದ್ದಾರೆ.
–ಡಾ.ಸುನೀತಾ ದೇವಾನಂದ ಚವ್ಹಾಣ, ಮೈತ್ರಿ ಅಭ್ಯರ್ಥಿ

**
ನಾನು ಪ್ರಚಾರಪ್ರಿಯನಿಲ್ಲ. ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿರುವೆ. ಕೆಲಸ ಮಾಡಿರುವೆ. ಯುವಕರಲ್ಲಿ ಉತ್ಸಾಹ ಹೆಚ್ಚಿದೆ. ತಾಂಡಾಗಳಲ್ಲಿನ ಯುವಕರು ಮೋದಿಗಾಗಿ ನನಗೆ ಮತ ಹಾಕ್ತಾರೆ.
–ರಮೇಶ ಜಿಗಜಿಣಗಿ, ಬಿಜೆಪಿ ಅಭ್ಯರ್ಥಿ

**

ಮೊದಲ ಬಾರಿಗೆ ಮತ ಚಲಾಯಿಸುವ ಖುಷಿ ನನ್ನದು. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವವರಿಗೆ ನನ್ನ ಮೊದಲ ಆದ್ಯತೆ.
ರಾಜೇಂದ್ರ ಗೋಪಾಲ ಕರಮಳಕರ, ಬಸವನಬಾಗೇವಾಡಿ

**
ದೇಶದ ಬಹು ದೊಡ್ಡ ಶಕ್ತಿಯಾದ ಯುವ ಸಮೂಹಕ್ಕೆ ಉತ್ತಮ ಭವಿಷ್ಯ ನಿರ್ಮಿಸಿಕೊಡುವ ಜವಾಬ್ದಾರಿಯುತ ಸರ್ಕಾರದ ಅಗತ್ಯವಿದೆ. ಅದಕ್ಕಾಗಿ ಸುಶಿಕ್ಷಿತರ ಆಯ್ಕೆ ಆಗಬೇಕು.
–ಸುಕೃತಾ ಪಟ್ಟಣಶೆಟ್ಟಿ, ಸಿಂದಗಿ

–––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT