ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳದ ಮಮತಾ ಬ್ಯಾನರ್ಜಿ ಹಾದಿಗೆ ಜಾರುತ್ತಿದ್ದಾರೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ

Last Updated 27 ಜೂನ್ 2019, 7:11 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆಯಲ್ಲಿ ಬಸ್‌ ಬಾಗಿಲಿಗೆ ಬಂದಪ್ರತಿಭಟನಾಕಾರರ ಮೇಲೆ ಕೂಗಾಡಿರುವುದನ್ನು (ಜೂನ್ 27) ನೋಡಿದ ಹಲವರಿಗೆ ಸುಮಾರು ಒಂದು ತಿಂಗಳ ಹಿಂದೆ ನೈನಿತಾಲ್‌ಗೆ ಹೊರಟಿದ್ದ (ಮೇ 30) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾರಿನಿಂದ ಕೆಳಗಿಳಿದು ಅಬ್ಬರಿಸಿದ ಸನ್ನಿವೇಶ ನೆನಪಾಗುತ್ತಿದೆ.

ಅಂದು ಮಮತಾ ಬ್ಯಾನರ್ಜಿ ಅವರ ಕಾರು ಕಂಡ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಘೋಷಣೆಗಳನ್ನು ಮೊಳಗಿಸಿದ್ದರು. ಆವೇಶದಲ್ಲಿ ಕಾರಿನಿಂದ ಕೆಳಗಿಳಿದ ಮಮತಾ, ‘ಘೋಷಣೆ ಕೂಗುವವರು ಹೆಸರು ಕೊಡಿ ನನಗೆ’ ಎಂದು ಪೊಲೀಸರ ಮೇಲೆ ಹರಿಹಾಯ್ದಿದ್ದರು. ಈಗ ಕುಮಾರಸ್ವಾಮಿಯೂ ಹೆಚ್ಚು ಕಡಿಮೆಅದೇ ರೀತಿ ನಡೆದುಕೊಂಡಿದ್ದಾರೆ.

‘ಒಂದು ಪ್ರತಿಭಟನೆ ನಿಯಂತ್ರಿಸುವುದಕ್ಕೆ ನಿಮಗೆ ಸಾಧ್ಯವಾಗುವುದಿಲ್ಲವೇನ್ರಿ. ಇಷ್ಟೊಂದು ಅಧಿಕಾರಿಗಳನ್ನು ಇಟ್ಟುಕೊಂಡು ಏನು ಮಾಡ್ತಿದ್ದೀರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರ ಮೇಲೆ ಕುಮಾರಸ್ವಾಮಿ ರೇಗಿದ್ದರು.

‘ಚುನಾವಣೆಯಲ್ಲಿ ಮೋದಿಗೆ ವೋಟು ಹಾಕ್ತೀರಿ, ಸಮಸ್ಯೆ ಪರಿಹಾರಕ್ಕೆ ನಮ್ಮ ಹತ್ರ ಬರುತ್ತೀರಾ. ಈಗ ಬಸ್‌ಗೆ ದಾರಿ ಬಿಡದಿದ್ದರೆ ಲಾಠಿ ಚಾರ್ಜ್‌ ಮಾಡಿಸುತ್ತೇನೆ’ ಎನ್ನುವುದು ಸಿಟ್ಟಿನಲ್ಲಿ ಕುಮಾರಸ್ವಾಮಿ ಆಡಿದ ಮಾತು. ‘ಘಟನೆ ಸಂಬಂಧ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಅಂಥ ಯಾವ ಪದಗಳನ್ನೂ ನಾನು ಬಳಸಿಲ್ಲ’ ಎನ್ನುವುದು ಕುಮಾರಸ್ವಾಮಿ ನಂತರ ನೀಡಿದ ಸಮಜಾಯಿಷಿ.

ಅಂದು ಮಮತಾ ಬ್ಯಾನರ್ಜಿ ಅವರ ಸಿಟ್ಟಿನ ವರ್ತನೆಯಂತೆಯೇ ಇಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮಾತುಗಳೂ ಇದೀಗ ದೇಶದ ಗಮನ ಸೆಳೆದಿವೆ.‘ಜೆಡಿಎಸ್‌ಗೆ ವೋಟ್ ಹಾಕಿದವರಿಗೆ ಮಾತ್ರ ನೀವು ಮುಖ್ಯಮಂತ್ರಿಯಾಗಿದ್ದೀರಾ? ಚುನಾವಣೆ ನಂತರ ರಾಜಕೀಯ ಮಾಡಲ್ಲ ಅಂತ ನೀವೇ ಎಷ್ಟೋ ಸಲ ಹೇಳಿದ್ದೀರಿ. ಇಷ್ಟು ಬೇಗ ಅದನ್ನೆಲ್ಲಾ ಮರೆತುಬಿಟ್ರಾ?’ ಎಂದು ಕೇವಲ ಬಿಜೆಪಿಯವರಷ್ಟೇ ಅಲ್ಲ, ಉಳಿದ ಜನರೂ ಕುಮಾರಸ್ವಾಮಿ ಅವರನ್ನು ಪ್ರಶ್ನಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಇದು ರಾಜ್ಯದ ಜಗಲಿಕಟ್ಟೆ ರಾಜಕೀಯ ಚರ್ಚೆಯ ವಿಷಯವಾಗಿದೆ.

ಕುಮಾರಸ್ವಾಮಿ ಅವರ ಸಿಟ್ಟಿನ ಹಿನ್ನೆಲೆಯನ್ನು ತುಸು ಪರಿಶೀಲಿಸೋಣ. ಮಾನ್ವಿ ತಾಲ್ಲೂಕಿನ ಕರೇಗುಡ್ಡದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯಕ್ಕಾಗಿ ಕುಮಾರಸ್ವಾಮಿ ಅವರು ಸಚಿವರು ಮತ್ತು ಅಧಿಕಾರಿಗಳೊಂದಿಗೆ ಬಸ್‌ನಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಯರಮರಸ್‌ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್‌) ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಿಢೀರನೇ ಅಡ್ಡಗಟ್ಟಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಇಳಿದರು. ಮೇಲ್ನೋಟಕ್ಕೆ ಮುಖ್ಯಮಂತ್ರಿಗೆ ಸಿಟ್ಟು ಬರಲು ಇದು ಕಾರಣ.

ಆದರೆ, ಕುಮಾರಸ್ವಾಮಿ ಅವರ ನಡವಳಿಕೆ, ಸಿಟ್ಟಿನಲ್ಲಿ ಅವರು ಆಡಿದ ಮಾತುಗಳು ಮತ್ತು ಅದಕ್ಕೆ ಕಾರಣವಾದ ಅಂಶಗಳನ್ನು ದೇಶದ ಒಟ್ಟಾರೆ ರಾಜಕೀಯ ವಿದ್ಯಮಾನಗಳು ಮತ್ತು ಬಿಜೆಪಿ ತಂತ್ರಗಾರಿಕೆಯೊಂದಿಗೆ ಹೋಲಿಸಿ ವಿಶ್ಲೇಷಿಸಿದಾಗ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತವೆ.

ಕೆರಳಿಸಿದರೆ ದಾರಿಗೆ ಬರ್ತಾರೆ

ಇದೀಗಪಶ್ಚಿಮ ಬಂಗಾಳದಲ್ಲಿ ನೆಲೆ ಭದ್ರಪಡಿಸಿಕೊಳ್ಳುತ್ತಿರುವ ಬಿಜೆಪಿಗೆ ದಕ್ಷಿಣ ಭಾರತದಲ್ಲಿರುವ ಏಕೈಕ ಆಶಾಕಿರಣ ಕರ್ನಾಟಕ. ಅಲ್ಲಿ ಯಶಸ್ವಿಯಾಗಿರುವ ಈ ರಾಜಕೀಯ ತಂತ್ರವನ್ನೇ ಕುಮಾರಸ್ವಾಮಿ ವಿರುದ್ಧ ಕರ್ನಾಟಕದಲ್ಲಿಯೂ ಬಿಜೆಪಿ ಪ್ರಯೋಗಿಸುತ್ತಿದೆ ಎಂದು ಯಾರಿಗಾದರೂ ಮೇಲ್ನೋಟಕ್ಕೆ ಅನ್ನಿಸುತ್ತದೆ.

ದೇವೇಗೌಡರು ಏಕಾಏಕಿ ಮಧ್ಯಂತರ ಚುನಾವಣೆಯ ಬಾಂಬ್ ಹಾಕಿದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಡಕಾಡಿದ್ದ ಬಿಜೆಪಿ ಇದೀಗ ‘ಮೋದಿ ಮೋದಿ’ ಘೋಷಣೆಗಳು ಮತ್ತು ಮುಖ್ಯಮಂತ್ರಿ ಹಾದಿ ಅಡ್ಡಗಟ್ಟಿದ ಪ್ರತಿಭಟನಾಕಾರರ ಬಳಿ ಬಿಜೆಪಿ ಬಾವುಟಗಳು ಎದ್ದು ಕಾಣುವಂತೆ ಮಾಡಿ ಕುಮಾರಸ್ವಾಮಿ ಅವರನ್ನು ಕೆರಳಿಸುವಲ್ಲಿ ಯಶಸ್ವಿಯಾಗಿದೆ. ನಿರೀಕ್ಷೆಯಂತೆ ಸಿಟ್ಟಿಗೆದ್ದ ಕುಮಾರಸ್ವಾಮಿ ಮಾಧ್ಯಮಗಳ ಬಾಯಿಗೆ ಆಹಾರವಾಗಿದ್ದಾರೆ. ಅವರ ಮೊದಲ ಗ್ರಾಮ ವಾಸ್ತವ್ಯವನ್ನು ದೇವೇಗೌಡರ ಮಧ್ಯಂತರ ಚುನಾವಣೆ ಬಾಂಬ್ ನುಂಗಿ ಹಾಕಿದರೆ, ಎರಡನೇ ಗ್ರಾಮ ವಾಸ್ತವ್ಯವನ್ನು ಸಿಟ್ಟಿನ ಮಾತುಗಳು ನುಂಗಿ ಹಾಕಿದವು.

ದೇಶದ ವಿವಿಧ ರಾಜ್ಯಗಳಲ್ಲಿ ‘ಹಳ್ಳಿ ಜನರ ಪರ, ಬಡವರೊಂದಿಗೆ ಸುಲಭವಾಗಿ ಬೆರೆಯಬಲ್ಲ ಮುಖ್ಯಮಂತ್ರಿ’ ಎನ್ನುವ ಶ್ರೇಯವಿದ್ದ ಕುಮಾರಸ್ವಾಮಿ ಅವರ ಇಮೇಜನ್ನು ಈ ಬೆಳವಣಿಗೆ ಹಾಳು ಮಾಡಿದೆ.

ಮೈತ್ರಿಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಈಗ ಬಹಿರಂಗ ಸತ್ಯ. ಜೆಡಿಎಸ್ ವರಿಷ್ಠ ದೇವೇಗೌಡರೇ ‘ಮಧ್ಯಂತರ ಚುನಾವಣೆ ಆಗಬಹುದು. ಈ ಸರ್ಕಾರ ಎಷ್ಟ್ ದಿನ ಇರುತ್ತೋ ಗೊತ್ತಿಲ್ಲ’ ಎಂದು ಕಳೆದ ವಾರವಷ್ಟೇ (ಜೂನ್ 21) ಹೇಳಿದ್ದರು. ಅಂದು ಕುಮಾರಸ್ವಾಮಿ ತಮ್ಮ ಗ್ರಾಮ ವಾಸ್ತವ್ಯಕ್ಕಾಗಿ ಯಾದಗಿರಿಯಲ್ಲಿದ್ದರು ಎನ್ನುವುದು ಉಲ್ಲೇಖಾರ್ಹ ಅಂಶ. ಮಧ್ಯಂತರ ಚುನಾವಣೆಯಿಂದ ಜೆಡಿಎಸ್‌ಗೆ ಮಾತ್ರ ಲಾಭ. ಹಾಗೂಹೀಗೂ ಅಧಿಕಾರದಲ್ಲಿರಬೇಕು ಎಂದುಕೊಳ್ಳುವ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬರುವ ಕನಸಿನಲ್ಲಿರುವ ಬಿಜೆಪಿಗೆ ಮಧ್ಯಂತರ ಚುನಾವಣೆ ಬೇಕಿಲ್ಲ. ಈ ಮರ್ಮ ಅರಿತೇ ದೇವೇಗೌಡರು ಮಧ್ಯಂತರ ಚುನಾವಣೆಯ ದಾಳ ಉರುಳಿಸಿದ್ದರು. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ತರಾತುರಿ ಪ್ರಯತ್ನಗಳ ಹಿನ್ನೆಲೆಯಲ್ಲಿಯೂ ಚುನಾವಣೆ ಸಿದ್ಧತೆಯ ವಾಸನೆಯನ್ನು ರಾಜಕೀಯ ವಿಶ್ಲೇಷಕರು ಗುರುತಿಸುತ್ತಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT