ಗುರುವಾರ , ಮೇ 6, 2021
23 °C
ಹೊಸದುರ್ಗ: ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ

ಒಬಿಸಿಗೆ ಸೇರ್ಪಡೆ: ಪ್ರಕ್ರಿಯೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಹಿಂದುಳಿದಿರುವ ಕುಂಚಿಟಿಗ ಸಮುದಾಯವನ್ನು ಒಬಿಸಿಗೆ ಸೇರಿಸಬೇಕೆಂಬ ನಮ್ಮ ಮನವಿಗೆ ಕೇಂದ್ರದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಸ್ಪಂದಿಸಿದೆ. ಒಬಿಸಿ ಪಟ್ಟಿಗೆ ಸೇರ್ಪಡೆಯ ಮೊದಲ ಹಂತದ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ ಎಂದು ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನದ ಮಠದ ಶಾಂತವೀರ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಸ್ವಾಮೀಜಿ ಮಾತನಾಡಿ, ‘ಒಬಿಸಿ ಪಟ್ಟಿಗೆ ಕುಂಚಿಟಿಗ ಸಮುದಾಯ ಸೇರಿಸಬೇಕೆಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದವು. ಪರಿಶೀಲಿಸಿದ ಆಯೋಗ ಇದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಕಾರಣ ಕೇಂದ್ರ ಸರ್ಕಾರ ಕ್ಯಾಬಿನೆಟ್‌ನಲ್ಲಿ ವಿಷಯ ಮಂಡಿಸಿ ಅನುಮೋದನೆ ನೀಡಬೇಕು. ಇದರಿಂದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿಕೊಳ್ಳಲು ಸಮುದಾಯಕ್ಕೆ ಅವಕಾಶ ನೀಡಿದಂತಾಗುತ್ತದೆ. ಈ ಬಗ್ಗೆ ಶೀಘ್ರದಲ್ಲಿಯೇ ಮತ್ತೊಮ್ಮೆ ನಿಯೋಗ ತೆರಳಿ ಮನವಿ ಮಾಡಲಾಗುವುದು’ ಎಂದು ಹೇಳಿದರು.

ಕೇಂದ್ರ ಕುಂಚಿಟಿಗ ಸಂಘದ ಅಧ್ಯಕ್ಷ ಎಚ್.ಆರ್.ಕಲ್ಲೇಶಣ್ಣ, ‘ಶಾಂತವೀರ ಸ್ವಾಮೀಜಿ ಕುಂಚಿಟಿಗ ಕುಲಗುರುಗಳಾಗಿ 1997ರಲ್ಲಿ ಬಂದ ನಂತರ ಸಮುದಾಯದ ಅಭಿವೃದ್ಧಿಗೆ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಕುಂಚಿಟಿಗ ಎಂದು ಹೇಳಿದರೆ ನಿಮ್ಮನ್ನು ಮುಗಿಸುತ್ತೇವೆ ಎಂದು ಹೆದರಿಸಿದ ಪ್ರಸಂಗಗಳೂ ಇವೆ. ಇಂತಹ ಕ್ಲಿಷ್ಟಕರ ವೇಳೆಯಲ್ಲಿ ಕುಂಚಿಟಿಗ ಮಠ ಸ್ಥಾಪಿಸಿದರು. ರಾಜ್ಯದೆಲ್ಲೆಡೆ ಸಂಚಾರ ಮಾಡಿ ಈ ಜನಾಂಗವನ್ನು ಸಂಘಟನೆ ಮಾಡಿದ್ದಾರೆ. ಇಂದು ಯಾರು ಬೇಕಾದರೂ ನಾವು ಕುಂಚಿಟಿಗ ಎಂದು ಹೇಳಿಕೊಳ್ಳುವಂತಹ ಸೌಹಾರ್ದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಇಂತಹ ಶ್ರೀಗಳಿಗೆ ಸಮುದಾಯ ಯಾವಾಗಲೂ ಅಭಾರಿಯಾಗಿರಬೇಕು’ ಎಂದು ತಿಳಿಸಿದರು.

2015–16ರಲ್ಲಿ ಶಾಂತವೀರ ಸ್ವಾಮೀಜಿ ನೇತೃತ್ವದಲ್ಲಿ 52 ಜನರ ನಿಯೋಗದೊಂದಿಗೆ ದೆಹಲಿಗೆ ತೆರಳಿ ಕುಂಚಿಟಿಗರನ್ನು ಒಬಿಸಿಗೆ ಸೇರ್ಪಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಚೆಗೆ ವಿವಿಧ ಮಠಾಧೀಶರೊಂದಿಗೆ ದೆಹಲಿಗೆ ತೆರಳಿದ್ದ ಶ್ರೀಗಳು ಮತ್ತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ದ್ದರು. ಕುಂಚಿಟಿಗರನ್ನು ಒಬಿಸಿಗೆ ಸೇರ್ಪಡೆ ಮಾಡುವಂತೆ ಒತ್ತಾಯಮಾಡಿ
ದ್ದರು. ಜೊತೆಗೆ ಈ ಬಾರಿ ಸಮುದಾಯದ ಕುಲತಿಲಕ ಬನುಮಯ್ಯ ಜಯಂತಿಯನ್ನು ದೆಹಲಿಯಲ್ಲಿಯೇ ಆಚರಿಸಿದ್ದರು. ಸಮುದಾಯದ ಅಭಿವೃದ್ಧಿಗೆ ಮಾಜಿ ಸಚಿವ ಜಯಚಂದ್ರ, ಡಾ.ಅಂಜನಪ್ಪ, ಮುಖಂಡ ರಾಮಾಂಜನಪ್ಪ ಅವರ ಶ್ರಮವೂ ಇದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು