ಚಿತ್ರದುರ್ಗ: ಚಿರತೆ ಹೊಡೆದು ಕೊಂದ ಗುಂಪು

ಗುರುವಾರ , ಜೂಲೈ 18, 2019
22 °C

ಚಿತ್ರದುರ್ಗ: ಚಿರತೆ ಹೊಡೆದು ಕೊಂದ ಗುಂಪು

Published:
Updated:
Prajavani

ಶ್ರೀರಾಂಪುರ (ಚಿತ್ರದುರ್ಗ): ದಾಳಿಂಬೆ ತೋಟಕ್ಕೆ ನುಗ್ಗಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳ ಸಮ್ಮುಖದಲ್ಲೇ ಗ್ರಾಮಸ್ಥರು ದೊಣ್ಣೆ, ಕಲ್ಲುಗಳಿಂದ ಹೊಡೆದು ಕೊಂದು ಹಾಕಿದ ಘಟನೆ ಹೊಸದುರ್ಗ ತಾಲ್ಲೂಕಿನ ಕುರುಬರಹಳ್ಳಿಯಲ್ಲಿ ಬುಧವಾರ ನಡೆದಿದೆ.

ಅರಣ್ಯ ಇಲಾಖೆ ಬಲೆ ಹಾಕಿ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಕುಪಿತಗೊಂಡ ಜನರು ಚಿರತೆ ಮೇಲೆ ಮುಗಿಬಿದ್ದು ಸಾಯಿಸಿದ್ದಾರೆ. ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಅಸಹಾಯಕರಾಗಿದ್ದಾರೆ.

ಶ್ರೀರಾಂಪುರ ಹೋಬಳಿಯ ಕುರುಬರಹಳ್ಳಿಯ ದಿನೇಶ್‌ ಎಂಬುವರ ದಾಳಿಂಬೆ ತೋಟದಲ್ಲಿ ಬುಧವಾರ ನಸುಕಿನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಜಮೀನಿಗೆ ಬಂದಿದ್ದ ಮಹಿಳೆ ಸೇರಿ ಮೂವರ ಮೇಲೆ ದಾಳಿ ನಡೆಸಿತ್ತು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಕಾರ್ಯಾಚರಣೆ ಆರಂಭಿಸಿದ್ದರು.

ಪೊದೆಯಲ್ಲಿ ಅವಿತು ಕುಳಿತಿದ್ದ ಚಿರತೆ ಪರಾರಿಯಾಗಲು ಪ್ರಯತ್ನಿಸಿ ಮಾವಿನ ಮರವೇರಿತು. ಆಗ ಆಕ್ರೋಶಗೊಂಡ ಸುಮಾರು 50ಕ್ಕೂ ಹೆಚ್ಚು ಜನರ ಗುಂಪು, ಕಲ್ಲುಗಳಿಂದ ಹೊಡೆದು ಚಿರತೆಯನ್ನು ನೆಲಕ್ಕೆ ಉರುಳಿಸಿತು. ತಪ್ಪಿಸಿಕೊಳ್ಳುವ ಭರದಲ್ಲಿದ್ದ ಚಿರತೆಯು ಬಲೆಗೆ ಬಿದ್ದಿತು.

ಸ್ಥಳದಲ್ಲಿ ಜಮಾಯಿಸಿದ ಜನರು ದೊಣ್ಣೆಗಳಿಂದ ಹೊಡೆದರು. ಇದನ್ನು ತಡೆಯಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಜನರ ನಡುವೆ ವಾಗ್ವಾದ ನಡೆಯಿತು. ಗಂಭೀರವಾಗಿ ಗಾಯಗೊಂಡಿದ್ದ ಚಿರತೆಯನ್ನು ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿಸಂಗ್ರಹಾಲಯಕ್ಕೆ ಸಾಗಿಸಲಾಯಿತು. ಆದರೆ, ಅದು ಮಾರ್ಗ ಮಧ್ಯದಲ್ಲೇ ಮೃತಪಟ್ಟಿತು.

ಉರುಳಿಗೆ ಸಿಲುಕಿದ್ದರಿಂದ ಚಿರತೆ ಕಾಲೊಂದನ್ನು ಕಳೆದುಕೊಂಡಿತ್ತು. ಮೂರು ಕಾಲಿನಲ್ಲಿ ಓಡಾಡುತ್ತಿದ್ದ ಇದು ಜನರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !