ಬುಧವಾರ, ಮೇ 27, 2020
27 °C
ಮೂರು ಕೋಳಿ ತಿಂದ ಚಿರತೆ* ಆರೋಗ್ಯ ತಪಾಸಣೆ ನಡೆಸಿ ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು

ಕೋಳಿಗೂಡಿನಲ್ಲಿ ಬಂಧಿಯಾದ ಚಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಹಾರ ಅರಸಿ ಕೊಂಡು ಬಂದ ಆರು ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ನಗರದ ಹೊರವಲಯದ ಸೂಲಿವಾರದಲ್ಲಿ ಕೋಳಿಗೂಡಿನಲ್ಲಿ ಭಾನುವಾರ ಮುಂಜಾನೆ ಬಂಧಿಯಾಗಿತ್ತು. ಚಿರತೆಯ ಆರೋಗ್ಯ ತಪಾಸಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಜನವಸತಿಯಿಂದ ದೂರವಿರುವ ಕಾಡಿಗೆ ಬಿಟ್ಟರು.

ಸೂಲಿವಾರದ ಜಯಲಕ್ಷ್ಮಮ್ಮ ಅವರ ತೋಟದ ಮನೆಯ ಪಕ್ಕದಲ್ಲಿದ್ದ ಕೋಳಿ ಗೂಡಿಗೆ ಭಾನುವಾರ ಮುಂಜಾನೆ ಚಿರತೆ ಬಂದು ಸೇರಿ ಕೊಂಡಿತ್ತು. ಕೋಳಿಗಳ ಆರ್ಭಟ ಕೇಳಿ ಮನೆಯವರು ಎಚ್ಚರಗೊಂಡಿದ್ದರು. ಕೋಳಿಗೂಡಿನಲ್ಲಿ ಚಿರತೆ ಸೇರಿ ಕೊಂಡಿದ್ದನ್ನು ಕಂಡು ಗಾಬರಿಯಾದ ಅವರು ಗೂಡಿನ ಬಾಗಿಲನ್ನು ಮುಚ್ಚಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್‌ ಹಾಗೂ ವಲಯ ಅರಣ್ಯ ಅಧಿಕಾರಿ ಗೋಪಾಲ್‌ ನೇತೃತ್ವದ ಅರಣ್ಯ ಇಲಾಖೆ ತಂಡ ಬೆಳಿಗ್ಗೆ 8 ಗಂಟೆ ವೇಳೆಗೆ ಸ್ಥಳಕ್ಕೆ ತಲುಪಿತ್ತು. ಬಳಿಕ ಅರಣ್ಯ ಅಧಿಕಾರಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನದ ವನ್ಯಜೀವಿ ತಜ್ಞ ಡಾ.ಉಮಾಶಂಕರ್‌ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು. ಅವರು ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯ ಸ್ಮೃತಿ ತಪ್ಪಿಸಿದರು. 

‘ಚಿರತೆ ಆರೋಗ್ಯವಾಗಿದೆ. ಗೂಡಿನಿಂದ ಹೊರಬರಲಾಗದೇ ಗಾಬರಿಗೊಂಡಿತ್ತು. ಅದನ್ನು ಮತ್ತೆ ಕಾಡಿಗೆ ಬಿಟ್ಟಿದ್ದೇವೆ’ ಎಂದು ವೆಂಕಟೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೂಲಿವಾರ ಪ್ರದೇಶವು ಬಸವನತಾರಾ ಮೀಸಲು ಅರಣ್ಯ, ತಿಪ್ಪಗೊಂಡನಹಳ್ಳಿಯಲ್ಲಿ ಜಲಮಂಡಳಿಯ ಅಧೀನದ ಕಾಡು ಪ್ರದೇಶ ಹಾಗೂ ಸಾವನದುರ್ಗ ಮೀಸಲು ಅರಣ್ಯಕ್ಕೆ ಸಮೀಪದಲ್ಲಿದೆ. ಹಾಗಾಗಿ ಇಲ್ಲಿ ಚಿರತೆಗಳ ಓಡಾಟ ಹೊಸದೇನಲ್ಲ. ಈ ಹಿಂದೆಯೂ ಅನೇಕ ಬಾರಿ ಚಿರತೆಗಳು ಕಾಣಿಸಿಕೊಂಡಿವೆ’ ಎಂದರು.  

3 ಕೋಳಿ ತಿಂದ ಚಿರತೆ

‘ಗೂಡಿನಲ್ಲಿ ಸುಮಾರು 20ಕ್ಕೂ ಅಧಿಕ ಕೋಳಿಗಳಿದ್ದವು. ಅವುಗಳಲ್ಲಿ ಮೂರು ಕೋಳಿಗಳನ್ನು ಚಿರತೆ ತಿಂದಿದೆ. ಉಳಿದ ಕೋಳಿಗಳಿಗೆ ಯಾವುದೇ ಹಾನಿ ಮಾಡಿಲ್ಲ’ ಎಂದರು.

ಚಿರತೆ ನೋಡಲು ಜನಜಂಗುಳಿ: ಚಿರತೆ ಬೋನಿಗೆ ಬಿದ್ದ ಸುದ್ದಿ ತಿಳಿದು ಊರಿನ ಜನ ಕೋಳಿಗೂಡಿನ ಬಳಿ ಸೇರಿದ್ದರು. ಗೂಡಿನಿಂದ ಹೊರಬರಲಾಗದೇ ಚಡಪಡಿಸುತ್ತಿದ್ದ ಚಿರತೆಯ ಆರ್ಭಟ ಜೋರಾಗಿತ್ತು. ಕೋವಿಡ್ –19 ಸೋಂಕು ಹರಡುವ ಭೀತಿ ಇದ್ದುದರಿಂದ ತಾವರೆಕೆರೆ ಠಾಣೆ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಜನ ಗುಂಪುಗೂಡದಂತೆ ತಡೆದೆವು’ ಎಂದು ವೆಂಕಟೇಶ್‌ ತಿಳಿಸಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು