ಶುಕ್ರವಾರ, ಆಗಸ್ಟ್ 6, 2021
21 °C

ಲೈಫ್‌ಡೌನ್ ಕಥೆಗಳು | ಸ್ವಸ್ಥ ಪರಿಸರದಲ್ಲಿ ಬದುಕು ಅಸ್ತವ್ಯಸ್ತ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಗೊಂಬೆಗಲ್ಲು (ಚಾಮರಾಜನಗರ): ‘ನಮ್ಮ ಹಾಡಿಗೆ ಸರಿಯಾದ ರಸ್ತೆ ಇಲ್ಲ, ಬಸ್‌ ಸೌಕರ್ಯ ಇಲ್ಲ. ವೈದ್ಯರು ನಿಯಮಿತವಾಗಿ ಬರುವುದಿಲ್ಲ. ಹೆರಿಗೆ ಅಥವಾ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ಐದಾರು ಸಾವಿರ ರೂಪಾಯಿ ಸಾಲ ಮಾಡಿ ವಾಹನಗಳನ್ನು ಬಾಡಿಗೆಗೆ ಹಿಡಿದು ಹೋಗಬೇಕು...’

ಹೆಂಚು, ಸಿಮೆಂಟ್‌ ಶೀಟಿನ ‌ಕಿರಿದಾದ ಮನೆಯ ಹಿತ್ತಿಲಿನಲ್ಲಿ ರಾಗಿ ಕೇರುತ್ತಾ ಕುಳಿತಿದ್ದ ಗೊಂಬೆಗಲ್ಲು ಹಾಡಿಯ ಸೋಲಿಗ ಮಹಿಳೆ ಮಾದೇವಿ, ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟ ಪರಿ ಇದು.

ಗೊಂಬೆಗಲ್ಲು ಹಾಡಿಯ ಜನರದ್ದು ಮಾತ್ರವಲ್ಲ, ಇದಕ್ಕೆ ಹೊಂದಿಕೊಂಡಂತೆಯೇ ಇರುವ ಕೆರೆದಿಂಬ, ನಾಲ್ಕೈದು ಕಿ.ಮೀ ವ್ಯಾಪ್ತಿಯಲ್ಲಿರುವ ಕಡಕಲಕಂಡಿ, ನೆಲ್ಲಿಕತ್ರಿ ಪೋಡುಗಳ ನಿವಾಸಿಗಳ ವ್ಯಥೆಯೂ ಭಿನ್ನವಾಗಿಲ್ಲ. ಅರಣ್ಯದ ಮೂಲನಿವಾಸಿಗಳಾದ ಇವರು ಸ್ವಾತಂತ್ರ್ಯಪೂರ್ವದಲ್ಲೂ, ನಂತರದಲ್ಲೂ ಸಮಸ್ಯೆಗಳ ಸರಮಾಲೆಗಳ ನಡುವೆಯೇ ಜೀವನ ಸವೆಸುತ್ತಿದ್ದಾರೆ. 

ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ದಟ್ಟ ಕಾನನದ ನಡುವೆ ಇರುವ ಈ ಹಾಡಿಗಳು ಸಮುದ್ರದಲ್ಲಿನ ದ್ವೀಪದಂತೆ. ಇಲ್ಲಿಗೆ ತೆರಳುವುದೇ ಒಂದು ಸಾಹಸ. ಬಿಳಿಗಿರಿರಂಗನ ಬೆಟ್ಟದಿಂದ 20ರಿಂದ 30 ಕಿ.ಮೀ ದೂರದಲ್ಲಿ ಈ ಹಾಡಿಗಳಿವೆ. ಚಾಮರಾಜನಗರ ತಾಲ್ಲೂಕಿನ ಪುಣಜನೂರು ಮೂಲಕ ಇಲ್ಲವೆ ಹನೂರು ತಾಲ್ಲೂಕಿನ ಒಡೆಯರ್‌ ಪಾಳ್ಯದ ಮೂಲಕ ಇಲ್ಲಿಗೆ ತೆರಳಬಹುದು.

ಕಲ್ಲು, ಹಳ್ಳ ದಿಣ್ಣೆಗಳ ಕಚ್ಚಾ ರಸ್ತೆಯೇ ಆದಿವಾಸಿಗಳ ಪೋಡುಗಳನ್ನು ಸಂಪರ್ಕಿಸುವ ಸೇತು. ದುರ್ಗಮ ರಸ್ತೆಯಲ್ಲಿ ಸಂಚರಿಸುವುದಕ್ಕೆ ಜೀಪು, ಎಸ್‌ಯುವಿಗಳೇ ಆಗಬೇಕು. ಸಂರಕ್ಷಿತ ಪ್ರದೇಶದಲ್ಲಿ ಇರುವುದರಿಂದ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ
ಹೊರಗಿನವರು ಪ್ರವೇಶಿಸುವಂತಿಲ್ಲ. ‌ಗೊಂಬೆಗಲ್ಲಿನಲ್ಲಿ 30 ಕುಟುಂಬಗಳು ಇದ್ದರೆ, ಕೆರೆದಿಂಬದಲ್ಲಿ 56, ಕಡಕಲಕಂಡಿಯಲ್ಲಿ 14 ಮತ್ತು ನೆಲ್ಲಿಕತ್ರಿಯಲ್ಲಿ 66 ಕುಟುಂಬಗಳು ವಾಸ ಇವೆ.

ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್‌.ಆಂಜನೇಯ, 2014ರ ಡಿಸೆಂಬರ್‌31ರಂದು ಗೊಂಬೆಗಲ್ಲು ಹಾಡಿಯ ಮನೆಯೊಂದರಲ್ಲಿ ವಾಸ್ತವ್ಯ ಹೂಡಿ ಹೊಸ ವರ್ಷ ಆಚರಿಸಿದ್ದರು. ಮನೆಗಳ ನಿರ್ಮಾಣ, ಸೋಲಾರ್‌ ವಿದ್ಯುತ್‌ ಸಂಪರ್ಕ, ಶೌಚಾಲಯ ವ್ಯವಸ್ಥೆ, ಶಾಲಾ ಕಟ್ಟಡದ ದುರಸ್ತಿ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರು. ಆ ಸಮಸ್ಯೆಗಳು ಇನ್ನೂ ಜೀವಂತವಾಗಿವೆ.

ಸೌಲಭ್ಯ ತಲುಪಿದೆ, ಆದರೆ...: ಕಾಡಿನ ಮೂಲನಿವಾಸಿಗಳಾದ ಇಲ್ಲಿನ ಸೋಲಿಗರಿಗೆ ಸರ್ಕಾರದ ಸೌಲಭ್ಯಗಳು ತಲುಪಿಲ್ಲ ಎಂದಲ್ಲ. ಕಡಕಲಕಂಡಿ ಹಾಡಿ ಬಿಟ್ಟು (ಈ ಹಾಡಿಯು ಖಾಸಗಿ ಕಾಫಿ ಎಸ್ಟೇಟ್‌ನಲ್ಲಿದೆ) ಉಳಿದ ಮೂರೂ ಪೋಡುಗಳಲ್ಲಿ ಪ್ರತಿ ಕುಟುಂಬಕ್ಕೂ ಅರಣ್ಯ ಹಕ್ಕು ಕಾಯ್ದೆ ಅಡಿ ನಿರ್ದಿಷ್ಟ ವಿಸ್ತೀರ್ಣದ ಜಮೀನನ್ನು ನೀಡಲಾಗಿದೆ. ಅದರಲ್ಲಿ ಅವರು ಕಾಫಿ ಬೆಳೆದಿದ್ದಾರೆ. ಕೆಲವು ಕುಟುಂಬಗಳಿಗೆ ಹೊಸ ಮನೆಯ ಭಾಗ್ಯ ಸಿಕ್ಕಿದೆ. ನೀರಿನ ವ್ಯವಸ್ಥೆಗಾಗಿ ಕೊಳವೆ ಬಾವಿ ಕೊರೆಸಲಾಗಿದೆ. ಕೆಲವೆಡೆ ಸೋಲಾರ್‌ ವಿದ್ಯುತ್‌ ವ್ಯವಸ್ಥೆ ಮಾಡಲಾಗಿದೆ. ‌ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪೌಷ್ಟಿಕ ಆಹಾರವನ್ನೂ ಪೂರೈಸಲಾಗುತ್ತಿದೆ. ಹಾಗಿದ್ದರೂ, ಸೋಲಿಗರ ಜೀವನಮಟ್ಟ ಸುಧಾರಣೆಯಾಗಿಲ್ಲ.

ಟಾರು ಸಹಿತ ಉತ್ತಮ ರಸ್ತೆ ಸಂಪರ್ಕ ಇವರ ಪಾಲಿಗೆ ಕನಸು. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿಗೆ ಅವಕಾಶ ಇಲ್ಲ. ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ನಿರ್ಮಿಸಿರುವ ಕಚ್ಚಾ ರಸ್ತೆಯಲ್ಲೇ ಅವರು ಓಡಾಡಬೇಕು.

ಈ ನಾಲ್ಕೂ ಹಾಡಿಗಳ ಜನರನ್ನು ಬಹುವಾಗಿ ಕಾಡುತ್ತಿರುವುದು ಶಿಕ್ಷಣ ಹಾಗೂ ಆರೋಗ್ಯ ಸೇವೆಯ ಕೊರತೆ. ಯಾವುದೇ ಸಮುದಾಯಕ್ಕೆ ಅತ್ಯಂತ ಅಗತ್ಯವಾಗಿರುವ ಈ ಸೇವೆಗಳು ಇವರನ್ನು ಇನ್ನೂ ಪರಿಣಾಮಕಾರಿಯಾಗಿ ತಲುಪಿಲ್ಲ.

ಬಾರದ ವೈದ್ಯರು: ಈ ನಾಲ್ಕು ಹಾಡಿಗಳವ್ಯಾಪ್ತಿಯಲ್ಲಿ ಸರ್ಕಾರಿ ಆರೋಗ್ಯ ಕೇಂದ್ರ ಇಲ್ಲ. ವೈದ್ಯರು, ವೈದ್ಯಕೀಯ ಸಿಬ್ಬಂದಿ
ಇಲ್ಲ. ತಾಲ್ಲೂಕು ವ್ಯಾಪ್ತಿಯ ವೈದ್ಯರು ನಿಯಮಿತವಾಗಿ ಭೇಟಿ ನೀಡಬೇಕು ಎಂದಿದ್ದರೂ ಅವರು ಬರುವುದು ಅಪರೂಪ. ಹೆರಿಗೆ ಹಾಗೂ ತುರ್ತು ಸಂದರ್ಭದಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿರುವ ವಿಜಿಕೆಕೆ ಗಿರಿಜನ ಕಲ್ಯಾಣ ಆರೋಗ್ಯ ಕೇಂದ್ರ ಅಥವಾ ಒಡೆಯರ ಪಾಳ್ಯದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ಗರ್ಭಿಣಿಯರು, ಬಾಣಂತಿಯರು ಹಾಗೂ ವೃದ್ಧರಾದರೆ ಬಾಡಿಗೆ ವಾಹನ ಮಾಡಲೇಬೇಕು. ‌

ಕಡಕಲಕಂಡಿ ಪೋಡಿನ ಬಳಿಯ ಅತ್ತಿಖಾನೆಯಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ. ನಾಲ್ಕು ಮಕ್ಕಳು ಮಾತ್ರ ಇಲ್ಲಿ ಓದುತ್ತಿದ್ದಾರೆ. ಒಬ್ಬರು ಶಿಕ್ಷಕರಿದ್ದು, ಅಲ್ಲೇ ಉಳಿಯುತ್ತಾರೆ, ಶನಿವಾರ ತಮ್ಮ ಊರಿಗೆ ಹೋಗುತ್ತಾರೆ. ಕೆರೆದಿಂಬ, ಗೊಂಬೆಗಲ್ಲಿನಲ್ಲಿ ಶಾಲೆಯೇ ಇಲ್ಲ. ಅಂಗನವಾಡಿಯೂ ಇಲ್ಲ.

‘ಶಾಲೆ ಇಲ್ಲದಿರುವುದರಿಂದ ಸಣ್ಣ ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸುತ್ತಿಲ್ಲ. ಬಿಳಿಗಿರಿರಂಗನಬೆಟ್ಟಕ್ಕೆ ಪ್ರತಿದಿನ ಹೋಗಿ ಬರಲು ಸಾಧ್ಯವಿಲ್ಲ. ಆನೆ ಹಾಗೂ ಇತರ ಪ್ರಾಣಿಗಳ ಕಾಟದಿಂದ ಕಳುಹಿಸಲು ಭಯವಾಗುತ್ತದೆ’ ಎಂದು ಮಾದೇವಿ ಹೇಳಿದರು. 

ನೆಲ್ಲಿಕತ್ರಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ. 25 ಮಕ್ಕಳು, ಇಬ್ಬರು ಶಿಕ್ಷಕರು ಇದ್ದಾರೆ. ಸ್ವಂತ ಕಟ್ಟಡ ಇಲ್ಲ. ಸೋಲಿಗ ಅಭಿವೃದ್ಧಿ ಸಂಘದ ಕಟ್ಟಡವೊಂದರಲ್ಲಿ ಪಾಠ ನಡೆಸಲಾಗುತ್ತದೆ. ಪೀಠೋಪಕರಣಗಳು ಇಲ್ಲ. ಕಟ್ಟಡಕ್ಕೆ ಎರಡು ಎಕರೆ ಜಾಗ ಬೇಕು. ಅರಣ್ಯ ಇಲಾಖೆ ಇನ್ನೂ ಜಾಗ ನೀಡಿಲ್ಲ.

ನಿರ್ವಹಣೆಯೇ ಸಮಸ್ಯೆ: ವಿದ್ಯುತ್‌ ಬದಲಿಗೆ ಕೆಲವು ಮನೆಗಳಿಗೆ ಸೋಲಾರ್‌ ಸಂಪರ್ಕ ಕಲ್ಪಿಸಲಾಗಿದೆ. ಪೋಡುಗಳು ಕಾಡಿನಲ್ಲಿ ಇರುವುದರಿಂದ ಸೂರ್ಯನ ಬೆಳಕು ಹೆಚ್ಚು ಪ್ರಖರವಾಗಿ ಬೀಳುವುದಿಲ್ಲ. ಬೇಸಿಗೆ ಕಾಲದಲ್ಲಿ ತೊಂದರೆ ಇಲ್ಲ. ಆದರೆ, ಮಳೆಗಾಲದಲ್ಲಿ ಬ್ಯಾಟರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್‌ ಆಗುವುದಿಲ್ಲ. ಎರಡು ಮೂರು ಗಂಟೆಯೂ ಬೆಳಕು ಬರುವುದಿಲ್ಲ. ಸೋಲಾರ್‌ ವ್ಯವಸ್ಥೆ ನಿರ್ವಹಣೆಯೂ ಕಷ್ಟ. ಒಮ್ಮೆ ದುರಸ್ತಿಗೆ ಬಂದರೆ, ಗುತ್ತಿಗೆ ಪಡೆದ ಕಂಪನಿಗಳು ಸರಿಯಾಗಿ ಸೇವೆ ನೀಡುವುದಿಲ್ಲ. 

ಅತ್ತಿಖಾನೆಯಲ್ಲಿ ಒಂದು ಅಂಗಡಿ ಇದೆ. ಉಳಿದ ಮೂರು ಪೋಡುಗಳಲ್ಲಿ ಅಂಗಡಿಗಳಿಲ್ಲ. ಪಡಿತರ ವಸ್ತುಗಳನ್ನು ತಿಂಗಳಿಗೊಮ್ಮೆ ವಾಹನದಲ್ಲಿಬಂದು ವಿತರಿಸಲಾಗುತ್ತಿದೆ. ಉಳಿದ ಸಾಮಗ್ರಿಗಳನ್ನು ದೂರದಲ್ಲಿರುವ ಊರುಗಳಿಂದಲೇ ತರಬೇಕು.

ಪುಟ್ಟ ಗುಡಿಸಲುಗಳಲ್ಲಿ ವಾಸ

ನೂರಾರು ವರ್ಷಗಳಿಂದ ಕಾಡಿನಲ್ಲೇ ನೆಲೆ ಕಂಡುಕೊಂಡಿರುವ ಸೋಲಿಗರು ಈಗೀಗ ಆಧುನಿಕ ಜಗತ್ತಿಗೆ ತೆರೆದುಕೊಂಡಿದ್ದಾರೆ. ‌‌

ಕೆಲವು ಪೋಡುಗಳಲ್ಲಿ ಅಲ್ಲೊಂದು, ಇಲ್ಲೊಂದು ಆಧುನಿಕ ಮನೆ ಕಾಣಿಸಿಕೊಳ್ಳುತ್ತಿದೆ. ಈಗಿನ ಯುವಕರು ಬೈಕ್‌ಗಳನ್ನು ಹೊಂದಿದ್ದಾರೆ. ಮನೆಗಳಿಗೆ ಡಿಟಿಎಚ್‌ ಸಂಪರ್ಕವನ್ನೂ ಪಡೆದಿದ್ದಾರೆ. ಸ್ಮಾರ್ಟ್‌ಫೋನ್‌ಗಳನ್ನೂ ಬಳಸುತ್ತಾರೆ. ಆದರೆ, ಆರ್ಥಿಕವಾಗಿ ಹೆಚ್ಚು ಸಬಲರಾಗಿಲ್ಲದವರು, ಕಿರಿದಾದ ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ. ಕನಿಷ್ಠ ಸೌಕರ್ಯಗಳೂ ಅವರಿಗೆ ಸಿಕ್ಕಿಲ್ಲ.

ಕಾಡು ಪ್ರಾಣಿಗಳ ಕಾಟ: ಜೀವನದುದ್ದಕ್ಕೂ ವನ್ಯಪ್ರಾಣಿಗಳೊಂದಿಗೆ ಜೀವನ ನಡೆಸುವ ಸೋಲಿಗರ ಪ್ರಾಣಕ್ಕೆ ಅವು ಎರವಾಗದಿದ್ದರೂ, ಕೃಷಿಗೆ ತೊಂದರೆ ಕೊಡುತ್ತವೆ. 

ಪ್ರಾಣಿಗಳಿಗೆ ಹೆದರಿ ಮಕ್ಕಳನ್ನೂ ಅವರು ದೂರದ ಶಾಲೆಗೆ ಕಳುಹಿಸುವುದಿಲ್ಲ. ಕಾಡಿನಿಂದ ಅವರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿಲ್ಲ. ಆದರೆ, ಸ್ಥಳಾಂತರಗೊಳ್ಳಲು ಅವರು ಸ್ವಯಂಪ್ರೇರಿತರಾಗಿ ಬಂದರೆ, ಪುನರ್‌ವಸತಿ ಕಲ್ಪಿಸಲು ಸಿದ್ಧವಿದೆ. ಆದರೆ, ಸೋಲಿಗರೇ ಕಾಡು ತೊರೆಯಲು ಮನಸ್ಸು ಮಾಡುತ್ತಿಲ್ಲ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು