ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಡಿಲಿಕೆ: ರಾಜ್ಯದ ಎಲ್ಲೆಡೆ ಮದ್ಯಕ್ಕಾಗಿ ಸಾಲು ಸಾಲು

Last Updated 4 ಮೇ 2020, 5:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದೆಲ್ಲೆಡೆ ಇಂದಿನಿಂದ ಲಾಕ್​ಡೌನ್​ ಸಡಿಲಗೊಳಿಸಲಾಗಿದ್ದು, ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಇದರಿಂದ ಬೆಂಗಳೂರು, ಮೈಸೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಮದ್ಯದಂಗಡಿಗಳು ತೆರೆಯುತ್ತಿದ್ದು, ಗ್ರಾಹಕರು ಕೆಲವೆಡೆ ರಾತ್ರಿಯಿಂದಲೇ ಸರದಿಯಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿವೆ.

ಮದ್ಯದ ಅಂಗಡಿಗಳ ಮುಂದೆ ಜನರ ಸಾಲು

ಸೋಮವಾರದಿಂದ ರಾಮನಗರ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಆರಂಭ ಆಗಲಿದ್ದು, ಮುಂಜಾನೆಯಿಂದಲೇ ಜನರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಸದ್ಯ ಅಂಗಡಿಗಳ ಮಾಲೀಕರು ಬಾಗಿಲು ತೆರೆಯಲು ಸಿದ್ಧತೆ ನಡೆಸಿದ್ದಾರೆ. ಮೊದಲಿಗೆ ಅಬಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಸೀಲ್ ತೆರೆದು ದಾಸ್ತಾನು ಸಂಗ್ರಹದ ಲೆಕ್ಕ ಪಡೆಯಲಾಗುತ್ತದೆ. ನಂತರವಷ್ಟೇ ಮಾರಾಟಕ್ಕೆ ಅವಕಾಶ ಸಿಗಲಿದೆ. ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳಲು ಕೆಲವು ಅಂಗಡಿಗಳ ಮುಂದೆ ಬ್ಯಾರಿಕೇಡ್ ಹಾಗೂ ಕಂಬಿಗಳನ್ನು ಕಟ್ಟಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದರಿಂದ ಚಾಮರಾಜನಗರದ ವಿವಿಧ ಮದ್ಯದ ಅಂಗಡಿಗಳ ಮುಂದೆ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅಬಕಾರಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳದಲ್ಲಿದ್ದು, ಜನ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ.

ಮದ್ಯದಂಗಡಿಗಳ ಮುಂದೆ ಜನರ ಸಾಲು

ಮೈಸೂರು ನಗರದಲ್ಲಿ ಮದ್ಯದಂಗಡಿಗಳು ತೆರೆಯಲು ಅನುಮತಿ ನೀಡಲಾಗಿದ್ದು, ಹಲವು ಮದ್ಯದಂಗಡಿಗಳ ಮುಂದೆ ಜನರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ಇಲ್ಲಿನ ಹೂಟಗಳ್ಳಿಯ ಮದ್ಯದಂಗಡಿಯೊಂದರ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಸೋಮವಾರ ಬೆಳಿಗ್ಗೆ ಕಂಡು ಬಂತು. ಜಿಲ್ಲೆಯಲ್ಲಿ ಒಟ್ಟು 301 ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿದೆ.

ಮೈಸೂರು ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಬೆಳಿಗ್ಗೆಯಿಂದಲೇ ಮದ್ಯಕ್ಕಾಗಿ ಸರತಿ ಸಾಲು ಆರಂಭವಾಗಿದೆ. ಹಲವೆಡೆ ಅಂತರ ಕಾಪಾಡಿಕೊಳ್ಳುವುದು ಕಣ್ಮರೆಯಾಗಿದೆ. ಮದ್ಯ ಖರೀದಿಯ ಸಂಭ್ರಮ ಮದ್ಯ ವ್ಯಸನಿಗಳದ್ದಾಗಿದೆ. ಮೈಸೂರಿನ ಹೊರ ವಲಯದಲ್ಲಿ ಬಾರ್‌ಗೆ ಪೂಜೆ ಮಾಡಲಾಗಿದೆ. ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಲಾಗಿದೆ. ಹಲವರು ಜೈಕಾರ ಸಹ ಮೊಳಗಿಸಿದ್ದು ಗೋಚರಿಸಿತು.

ಮಂಗಳೂರಿನಲ್ಲಿ ಮದ್ಯ ಮಾರಾಟ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯ 22 ಎಂಎಸ್ಐಎಲ್ ಹಾಗೂ 152 ಮದ್ಯದಂಗಡಿ (ಸಿಎಲ್-2) ಸೇರಿದಂತೆ 174 ಮದ್ಯದ ಅಂಗಡಿಗಳಲ್ಲಿ ಸೋಮವಾರ ಬೆಳಿಗ್ಗೆ ಪಾರ್ಸೆಲ್ ನೀಡಲು ಆರಂಭಿಸಿದ್ದು, ಬೆಳಿಗ್ಗೆಯೇ ಜನ ಸರದಿಯಲ್ಲಿ ನಿಂತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರೂ ಅಂತರ ಕಾಯಲು ವ್ಯವಸ್ಥೆ ಮಾಡಿದ ಕಾರಣ ನೂಕುನುಗ್ಗಲು ಕಂಡುಬರಲಿಲ್ಲ.

ಮದ್ಯದಂಗಡಿ ಮುಂದೆ ಸಾಲು

ಬಳ್ಳಾರಿ ಜಿಲ್ಲೆಯ ಮದ್ಯದ ಅಂಗಡಿಗಳ ಮುಂದೆ‌ ಸೋಮವಾರ ಬೆಳಿಗ್ಗೆಯಿಂದಲೇ ಜನ ಸಾಲುಗಟ್ಟಿದ್ದರು. ನಗರದಲ್ಲಿರುವ ಐದು ಎಂಎಸೈಎಲ್ ಮಳಿಗೆಗಳು,‌ ಕುರುಗೋಡು, ಕುಡಿತಿನಿ, ಎಮ್ಮಿಗನೂರು ಸೇರಿದಂತೆ ಎಲ್ಲೆಡೆ ಮಳಿಗೆಗಳ ಮುಂದೆ ಉದ್ದನೆ ಸಾಲಿತ್ತು. ಒಬ್ಬ ವ್ಯಕ್ತಿಗೆ ಆರು ಬಾಟಲ್‌ಗಳನ್ನು ನಿಗದಿಪಡಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಮಾರಾಟ ಮಾಡಲಾಗುವುದು ಎಂದು ಮಳಿಗೆಯ ಸಿಬ್ಬಂದಿ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಸೋಮವಾರ ವೈನ್ ಶಾಪ್‌ವೊಂದರ ಎದುರು ಅಂತರ ಕಾಯ್ದುಕೊಳ್ಳದೆ ಗ್ರಾಹಕರು ಮದ್ಯ ಖರೀದಿಗೆ ನಿಂತಿದ್ದರು.

ಬೆಳಗಾವಿಯ ಬಾರ್‌ವೊಂದರ ಎದುರು ಮದ್ಯ ಖರೀದಿಸಲು ಜನರುಸಾಲುಗಟ್ಟಿ ನಿಂತಿದ್ದರು.

ಇನ್ನೊಂದೆಡೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಇಂದು ಆರಂಭವಾದ ಮದ್ಯ ಮಳಿಗೆಗಳ ಮುಂದೆ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದ ಮದ್ಯಪ್ರಿಯರು. ಸರಿ ಸುಮಾರು ಅರ್ಧ ಕಿಲೋಮೀಟರ್ ನಷ್ಟು ಸಾಲಿನಲ್ಲಿ ಜನರು ನಿಂತಿದ್ದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT