ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ ಸ್ಥಾನ ತೊರೆದ ವಿಶ್ವನಾಥ್‌

Last Updated 4 ಜೂನ್ 2019, 18:03 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಸಮನ್ವಯ ಸಮಿತಿಯಲ್ಲಿ ಬೆಲೆಯೇ ಸಿಕ್ಕಿಲ್ಲ ಎಂದು ಸಿಡಿಮಿಡಿಗೊಳ್ಳುತ್ತಿದ್ದ ಹಾಗೂ ಪಕ್ಷದ ವರಿಷ್ಠರಿಂದಲೂ ಕಡೆಗಣನೆಗೆ ಒಳಗಾದ ಭಾವ ಅನುಭವಿಸುತ್ತಿದ್ದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ
ಸಲ್ಲಿಸಿದ್ದಾರೆ.

ಮಾಧ್ಯಮಗೋಷ್ಠಿ ನಡೆಸಿ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಅವರು, ಮುಖ್ಯವಾಗಿ ಬೊಟ್ಟುಮಾಡಿ ತೋರಿಸಿದ್ದು ಸಿದ್ದರಾಮಯ್ಯ ಅವರತ್ತ. ಸಮನ್ವಯ ಸಮಿತಿಯಲ್ಲಿ ತಮಗೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎಂದು ಹೇಳುತ್ತಲೇ ಸಿದ್ದರಾಮಯ್ಯ ವಿರುದ್ಧ ಸಿಟ್ಟನ್ನೂ ಹೊರಹಾಕಿದ್ದಾರೆ.

ಈ ಮೊದಲು ಹಲವು ಬಾರಿ ರಾಜೀನಾಮೆ ಸಲ್ಲಿಸುವ ಅವರ ಇಂಗಿತವನ್ನು ತಡೆಗಟ್ಟಿದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು. ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲುಂಟಾದ ತಕ್ಷಣ ಮತ್ತೆ ಅವರು ರಾಜೀನಾಮೆಗೆ ಮುಂದಾಗಿದ್ದರು. ಆಗಲೂ ತಡೆದಿದ್ದು ದೇವೇಗೌಡರೇ. ‘ರಾಜೀನಾಮೆ ಕೊಡುವುದಿಲ್ಲ’ ಎಂದು ಅವರು ಪ್ರತಿಪಾದಿಸುತ್ತಲೇ ಇದ್ದರು.

ಅಂಗೀಕಾರ ಇಲ್ಲ: ವಿಶ್ವನಾಥ್‌ ಅವರ ರಾಜೀನಾಮೆಯನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಅಂಗೀಕರಿಸಲಿಲ್ಲ. ಎಲ್ಲ ಶಾಸಕರೂ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ವಿಶ್ವನಾಥ್‌ ಅವರಿಗೆ ಮನವಿ ಮಾಡಿದರು. ಆದರೆ, ವಿಶ್ವನಾಥ್‌ ಮೌನವಾಗಿಯೇ ಇದ್ದರು ಎಂದು ಮೂಲಗಳು ಹೇಳಿವೆ.

ವಿಡಿಯೊ ನೋಡಿ: ಜೆಡಿಎಸ್‌ ರಾಜ್ಯ ಘಟಕದ ಅಧ‌್ಯಕ್ಷ ಎಚ್‌.ವಿಶ್ವನಾಥ್‌ ಸಂದರ್ಶನ

- ಬಿಜೆಪಿ ಸೇರುವುದಿಲ್ಲ,ಮಂತ್ರಿ ಸ್ಥಾನ ಸಿಕ್ಕಿದರೆ ಬಿಡುವುದಿಲ್ಲ

- ಶ್ರೀನಿವಾಸ ಪ್ರಸಾದ್‌ ಬಹಳ ಕಾಲದ ಆಪ್ತ ಸ್ನೇಹಿತ

- ಪ್ರಾದೇಶಿಕ ಪಕ್ಷಗಳಿಂದಲೇ ಮೋದಿ ಸರ್ವಾಧಿಕಾರಿಧೋರಣೆಗಳಿಗೆ ತಡೆ

ರಾಜೀನಾಮೆಗೆ ಕಾರಣಗಳು:

ವಿಶ್ವನಾಥ್ ಅವರು ತಮ್ಮ ರಾಜೀನಾಮೆಗೆ ನಾನಾ ಕಾರಣಗಳನ್ನು ಹೇಳುತ್ತಿದ್ದರೂ ಅದಕ್ಕಿಂತ ಬೇರೆಯದೇ ಕಾರಣಗಳು ಇವೆ ಎಂದು ಅವರು ಆಪ್ತರು ಹೇಳುವುದು ಉಂಟು.

*ಸಮನ್ವಯ ಸಮಿತಿಯಲ್ಲಿ ಜೆಡಿಎಸ್‌ ಅಧ್ಯಕ್ಷರಾದ ಅವರಿಗೆ ಸ್ಥಾನ ಕೊಡದೇ ಇದ್ದುದು. ಅದಕ್ಕೆ ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಿದ್ದುದು.

*ಸಿದ್ದರಾಮಯ್ಯ ಹಟಕ್ಕೆ ಬಿದ್ದಿದ್ದರೂ ತಮ್ಮ ಪಕ್ಷದ ವರಿಷ್ಠ ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಒಂದು ಮಾತು ಹೇಳಿ ಸಮನ್ವಯ ಸಮಿತಿಯಲ್ಲಿ ಸ್ಥಾನ ಕೊಡಿಸಬಹುದಿತ್ತು. ಅದನ್ನೂ ಗೌಡರು ಮಾಡಿಲ್ಲ ಎಂಬ ಅಸಮಾಧಾನ.

*ವಿಧಾನಪರಿಷತ್ತು, ವಿವಿಧ ನಿಗಮ, ಮಂಡಳಿಗಳ ನೇಮಕಾತಿ, ಟಿಕೆಟ್ ಹಂಚಿಕೆ ಮತ್ತಿತರ ವಿಷಯಗಳಲ್ಲಿ ತಮ್ಮನ್ನು ಕೇಳದೇ ಇದ್ದುದು. ಏಕಪಕ್ಷೀಯವಾಗಿ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ನಿರ್ಧಾರ ತೆಗೆದುಕೊಳ್ಳುತ್ತಿರುವುದು.

*ಸಹಕರಿಸದ ಆರೋಗ್ಯದ ಮಧ್ಯೆಯೂ ಪಕ್ಷ ಸಂಘಟನೆಗಾಗಿ ರಾಜ್ಯ ಸುತ್ತಾಡಬೇಕಾದ ಒತ್ತಡದಿಂದ ಪಾರಾಗುವುದು.

ಕಚೇರಿಗೆ ರಾಜೀನಾಮೆ ಪತ್ರ

‘ದೇವೇಗೌಡರಲ್ಲಿ ರಾಜೀನಾಮೆ ನೀಡುವ ಬಗ್ಗೆ ಮಾತನಾಡುವ ಧೈರ್ಯ ಇಲ್ಲ. ಹೀಗಾಗಿ ಪತ್ರಕರ್ತರ ಮುಂದೆ ರಾಜೀನಾಮೆ ಪ್ರಕಟಿಸಿದ್ದೇನೆ. ಪಕ್ಷ ನೀಡಿದ ಕಾರಿನಲ್ಲಿ ಕಚೇರಿಗೆ ಹೋಗಿ ಅಧ್ಯಕ್ಷರ ಮೇಜಿನ ಮೇಲೆ ರಾಜೀನಾಮೆ ಪತ್ರ ಇಟ್ಟು, ಅಲ್ಲಿಂದ ಫೋನ್‌ ಮಾಡುತ್ತೇನೆ. ಕಾರನ್ನು ಕಚೇರಿಯಲ್ಲೇ ಬಿಟ್ಟು ವಾಪಸ್‌ ಬರುತ್ತೇನೆ. ಸಂಜೆ ನಡೆಯುವ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ’ ಎಂದು ವಿಶ್ವನಾಥ್‌ ಹೇಳಿದರು.

‘ನನಗೆ ಅವಸರ ಇಲ್ಲ: ‘ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿಗ್ಗಾಮಗ್ಗಾ ಹೊಡೆಸಿಕೊಂಡಿದೆ. ಅಂತಹ ಪಕ್ಷವನ್ನು ಸೇರುವುದಿಲ್ಲ. ಮಂತ್ರಿ ಸ್ಥಾನ ಕೊಟ್ಟರೆ ಖಂಡಿತ ಬೇಡ ಎನ್ನುವುದಿಲ್ಲ. ಹಾಗಂತ ಮಂತಿ ಸ್ಥಾನಕ್ಕಾಗಿ ಯಾರಲ್ಲೂ ಅಂಗಲಾಚುವುದಿಲ್ಲ. ಅವಸರ ಇದ್ದವರು ಮಂತ್ರಿಗಳಾಗಲಿ, ನನಗೆ ಅಂತಹ ಅವಸರವೇನೂ ಇಲ್ಲ’ ಎಂದರು. ಲೋಕಸಭೆ ಚುನಾವಣೆ ಬೇರೆ, ಸ್ಥಳೀಯ ಸಂಸ್ಥೆ ಚುನಾವಣೆ ಬೇರೆ, ನಿಮಗೆ ಉನ್ನತ ಸ್ಥಾನ ಕೊಟ್ಟರೆ ಬಿಜೆಪಿಗೆ ಹೋಗುತ್ತೀರಾ ಎಂದು ಕೇಳಿದಾಗ ಉತ್ತರಿಸದೆ ಜಾರಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT