ಬುಧವಾರ, ಜೂನ್ 3, 2020
27 °C
ಆ್ಯಪ್‌ ಮೂಲಕ ಮಕ್ಕಳಿಗೆ ಗಣಿತ ಕಲಿಸಲು ಮುಂದಾಗಿರುವ ಅಕ್ಷರ ಫೌಂಡೇಷನ್‌

ಮೊಬೈಲ್‌ನಲ್ಲಿ ಕಲಿಯಿರಿ ಮೋಜಿನ ಗಣಿತ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿರುವ ಮಕ್ಕಳ ಬೇಸರ ಕಳೆಯಲು ‘ಬಿಲ್ಡಿಂಗ್‌ ಬ್ಲಾಕ್ಸ್‌ ಅಕ್ಷರ’ ಆ್ಯಪ್‌ ನೆರವಾಗಿದೆ. ಈ ಆ್ಯ‍ಪ್‌ ಮೂಲಕ ಆಟದ ಜತೆಗೆ ಗಣಿತ ಕಲಿಸುವ ಪ್ರಯತ್ನ ನಿರಂತರ ನಡೆದಿದೆ.


ಬಿಲ್ಡಿಂಗ್‌ ಬ್ಲಾಕ್ಸ್ ಅಕ್ಷರ ಆ್ಯಪ್‌

ಬೆಂಗಳೂರಿನ ಅಕ್ಷರ ಫೌಂಡೇಷನ್‌ ಇದನ್ನು‌ ಅಭಿವೃದ್ಧಿಪಡಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ‘ಗಣಿತ ಕಲಿಕಾ ಆಂದೋಲನ’ ಆರಂಭಿಸಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಒದಗಿಸಿದೆ.

ಮಕ್ಕಳ ಮೊಬೈಲ್‌ ಗೀಳನ್ನೇ ಸಕಾರಾತ್ಮಕವಾಗಿ ಬಳಸಿಕೊಂಡು ಮನರಂಜನೆಯೊಂದಿಗೆ ಗಣಿತ ಕಲಿಸುವ ಪ್ರಕ್ರಿಯೆ ಇದು. ಕಲಬುರ್ಗಿ, ಬೀದರ್‌, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ. ಇತರ ಜಿಲ್ಲೆಗಳ ವಿದ್ಯಾರ್ಥಿಗಳು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಕಲಿಯಬಹುದು. ಆಯಾ ತರಗತಿಯ ಪಠ್ಯದಲ್ಲಿ ಇರುವ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ, ಬೀಜಗಣಿತ, ರೇಖಾಗಣಿತ... ಹೀಗೆ ಎಲ್ಲ ಪ್ರಕಾರದ ಲೆಕ್ಕಗಳನ್ನೂ ಕಲಿಯಬಹುದು.‌ 

ಸ್ವಯಂ ಕಲಿಕೆಗೆ ಪ್ರೇರಣೆ: ‘ಹಣ್ಣು, ತರಕಾರಿ, ಪೀಠೋಪ‍ಕರಣ ಹೀಗೆ ಪರಿಚಿತ ವಸ್ತುಗಳನ್ನು ಮಾದರಿಯಾಗಿ ಬಳಸಿ, ಗಣಿತ ಕಲಿಸುವುದು ಇದರ ವಿಶೇಷ. ಆಕರ್ಷಕ ಬಣ್ಣ ಹಾಗೂ ಸಂಗೀತದ ಜತೆಗೆ ಹಿನ್ನೆಲೆ ಧ್ವನಿಯಲ್ಲಿ ಲೆಕ್ಕ ಹೇಳಿಕೊಡಲಾಗುತ್ತದೆ. ವಿದ್ಯಾರ್ಥಿ ಲೆಕ್ಕವನ್ನು ಸರಿಯಾಗಿ ಬಿಡಿಸಿದರೆ ‘ಸ್ಟಾರ್‌’ಗಳನ್ನೂ ಕೊಡುತ್ತದೆ. ತಪ್ಪಾದರೆ, ಎಲ್ಲಿ ತಪ್ಪಾಗಿದೆ ಎಂದು ತಿಳಿಸುತ್ತದೆ. ಲೆಕ್ಕ ಸರಿ ಆಗುವವರೆಗೂ ಆಟ ಮುಂದೆ ಸಾಗದು.  ಹೀಗಾಗಿ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮೂಡಿಸುವಲ್ಲಿ ಇದು ಯಶಸ್ವಿಯಾಗುತ್ತಿದೆ’ ಎನ್ನುತ್ತಾರೆ ಅಕ್ಷರ ಫೌಂಡೇಷನ್‌ನ  ಕ್ಷೇತ್ರೀಯ ವ್ಯವಸ್ಥಾಪಕ ರಂಗನಾಥ ಪಲ್ಲೇದ‌.

‘ಸಂಸ್ಥೆಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಈ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.  ಈಗಾಗಲೇ 2,150 ಮಕ್ಕಳು ಈ ಮೂಲಕ ಗಣಿತ ಕಲಿಯುತ್ತಿದ್ದಾರೆ’ ಎಂದು ಹೇಳಿದರು.

ಆ್ಯ‍ಪ್‌ನಲ್ಲಿ 250 ನಮೂನೆಯ ಗಣಿತದ ಆಟಗಳಿವೆ. ಕನ್ನಡ, ಇಂಗ್ಲಿಷ್‌, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿದೆ.  ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ building blocks akshara ಆ್ಯಪ್ ಲಭ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು