ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: 42 ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪಾರು

ಹಿಮಾಚಲ ಪ್ರದೇಶ ಸಿ.ಎಂ ಪುತ್ರಿ, ಸ್ನೇಹಿತರಿಗೆ ಹೊಸೂರು ಗ್ರಾಮಸ್ಥರ ನೆರವು
Last Updated 9 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬಾಗಲಕೋಟೆ: ಮಲಪ್ರಭೆಯ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ಪುತ್ರಿ ಅವಂತಿಕಾ ಸೂದ್ ಸೇರಿದಂತೆ 42 ಮಂದಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಶುಕ್ರವಾರ ಬೆಳಗಿನ ಜಾವ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಅವಂತಿಕಾ, ಉಡುಪಿ ಜಿಲ್ಲೆ ಮಣಿಪಾಲದಲ್ಲಿ ಆರ್ಕಿಟೆಕ್ಟ್ ವಿಷಯದಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದಾರೆ. ಇಬ್ಬರು ಶಿಕ್ಷಕರು ಹಾಗೂ ಸಹಪಾಠಿಗಳೊಂದಿಗೆ ಐಷಾರಾಮಿ ಬಸ್‌ನಲ್ಲಿ ಬೆಂಗಳೂರಿನಿಂದ ಗಜೇಂದ್ರಗಡ ಮಾರ್ಗವಾಗಿ ಬಾದಾಮಿಗೆ ಹೊರಟಿದ್ದರು. ಅವರಿದ್ದ ಬಸ್ ಬೆಳಗಿನ ಜಾವ 3.30ರ ವೇಳೆ ಶಿವಯೋಗ ಮಂದಿರದ ಬಳಿ ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿದೆ. ನೀರಿನ ಮಟ್ಟ ದಿಢೀರ್‌ ಏರುತ್ತಿದ್ದ ಕಾರಣ ಜೀವಭಯದಿಂದ ಅದರಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ.

ಬಸ್‌ನಲ್ಲಿರುವವರು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ. ನಂತರ ಹೊಸೂರು ಗ್ರಾಮಸ್ಥರ ಸಹಾಯದಿಂದ ಅವರನ್ನು ರಕ್ಷಿಸಲಾಗಿದೆ. ಅಲ್ಲಿಂದ ಏಳು ಕಿ.ಮೀ ದೂರದ ಹೊಸೂರಿನಲ್ಲಿ ಅವರಿಗೆ ಆಶ್ರಯ ನೀಡಲಾಗಿತ್ತು.

ಎಸ್‌ಪಿ ಕಚೇರಿ ಮಾಹಿತಿ: ‘ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಸಂಬಂಧಿ ಇರುವ ಬಸ್ ಪ್ರವಾಹಕ್ಕೆ ಸಿಲುಕಿದೆ. ಅವರಿಗೆ ನೆರವು ನೀಡಿ ಎಂದು ನಮಗೆ ಎಸ್‌ಪಿ ಕಚೇರಿಯಿಂದ ಮಾಹಿತಿ ಬಂದಿತ್ತು. ಹೀಗಾಗಿ ವಾಹನ ಕೊಂಡೊಯ್ದು ಎಲ್ಲರನ್ನೂ ರಕ್ಷಿಸಿ ಕರೆತಂದೆವು’ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ದೊಡ್ಡಯ್ಯ ಭೂಸನೂರಮಠ ತಿಳಿಸಿದರು.

ವಿದ್ಯಾರ್ಥಿಗಳ ತಂಡಕ್ಕೆ ಅಲ್ಲಿನ ಸಮುದಾಯ ಭವನದಲ್ಲಿ ವಿಶ್ರಾಂತಿ ಪಡೆಯಲು ಗ್ರಾಮಸ್ಥರು ಅವಕಾಶ ಕಲ್ಪಿಸಿದ್ದರು. ನಂತರ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹುನಗುಂದ ಮಾರ್ಗವಾಗಿ ಉಡುಪಿಗೆ ಕಳುಹಿಸಿಕೊಡಲಾಯಿತು.

‘ಎರಡು ದಿನಗಳ ಹಿಂದೆ ಮಣಿಪಾಲದಿಂದ ಬೆಂಗಳೂರಿಗೆ ಹೋಗಿ ಅಲ್ಲಿಂದ ಬಾದಾಮಿಗೆ ಹೊರಟಿದ್ದೆವು. ಕತ್ತಲೆ, ನೀರಿನ ನಡುವೆ ಸಿಲುಕಿದ್ದ ನಮಗೆ ಕ್ಷಣ ಕ್ಷಣಕ್ಕೂ ಏರುತ್ತಿದ್ದ ನೀರು ಭಯ ತರಿಸಿತ್ತು. ಗ್ರಾಮಸ್ಥರು ಬಂದು ನೆರವಾದರು’ ಎಂದು ಮಂಗಳೂರಿನ ಕೊಟ್ಟಾರಚೌಕಿಯ ನಿವಾಸಿ ಸುಹಾಸ್ ಹತ್ವಾರ ಹೇಳಿದರು.

ಪ್ರವಾಹದಲ್ಲಿ ಮುಳುಗಿದ ಬಸ್...

‘ನೀವು ಮಾಧ್ಯಮದವರು ನಮಗೊಂದು ಸಹಾಯ ಮಾಡುವಿರಾ, ಪ್ರವಾಹದಲ್ಲಿ ಸಿಲುಕಿರುವ ನಮ್ಮ ಬಸ್‌ನಲ್ಲಿ ಲ್ಯಾಪ್‌ಟಾಪ್, ಕ್ಯಾಮೆರಾ ಸೇರಿದಂತೆ ಬೆಲೆಬಾಳುವ ವಸ್ತುಗಳಿವೆ. ಅವುಗಳನ್ನು ಸುರಕ್ಷಿತವಾಗಿ ನಮಗೆ ತಲುಪಿಸಲು ವ್ಯವಸ್ಥೆ ಮಾಡುತ್ತೀರಾ’ ಎಂದು ಅವಂತಿಕಾ ‘ಪ್ರಜಾವಾಣಿ’ಗೆ ವಿನಂತಿಸಿದರು. ಆದರೆ ಮಲಪ್ರಭೆ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಮಧ್ಯಾಹ್ನದ ವೇಳೆಗೆ ಬಸ್ ಪ್ರವಾಹದ ನೀರಿನಲ್ಲಿ ಮುಳುಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT