ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಲೀಥಿಯಂ ಅಂಶ ಪತ್ತೆ

Last Updated 19 ಫೆಬ್ರುವರಿ 2020, 19:53 IST
ಅಕ್ಷರ ಗಾತ್ರ

ಮಂಡ್ಯ: ವಿದ್ಯುತ್‌ಚಾಲಿತ ಕಾರುಗಳ ಬ್ಯಾಟರಿ ತಯಾರಿಕೆಗೆ ಅಗತ್ಯವಾಗಿರುವ ಲೀಥಿಯಂ ನಿಕ್ಷೇಪಕ್ಕಾಗಿ ದೇಶದಾದ್ಯಂತ ಸಾವಿರಾರು ಕಡೆ ಹುಡುಕಾಟ ನಡೆಸಲಾಗುತ್ತಿದೆ. ಕರ್ನಾಟಕದಲ್ಲೂ ಈ ಸಂಶೋಧನೆ ಪ್ರಗತಿಯಲ್ಲಿದ್ದು ಮಂಡ್ಯ ಜಿಲ್ಲೆಯ ವಿವಿಧೆಡೆ ಸಂಶೋಧನೆ ನಡೆಸ
ಲಾಗುತ್ತಿದೆ ಎಂದು ಅಣು ಖನಿಜ ನಿರ್ದೇಶನಾಲಯ (ಎಎಂಡಿ)ದ ಬೆಂಗಳೂರು ಪ್ರಾದೇಶಿಕ ಕೇಂದ್ರ ತಿಳಿಸಿದೆ.

ದೇಶದಲ್ಲಿ ಆಟೊಮೊಬೈಲ್‌ ಕಂಪನಿಗಳು ವಿದ್ಯುತ್‌ಚಾಲಿತ ಕಾರು ಉತ್ಪಾದನೆಯತ್ತ ಒಲವು ತೋರಿಸಿರುವ ಹಿನ್ನೆಲೆಯಲ್ಲಿ ಈ ಲೋಹದ ಸಂಶೋಧನೆ ನಡೆಯುತ್ತಿದೆ. ಆದರೆ, ಇಲ್ಲಿಯವರೆಗೂ ದೇಶದ ಯಾವುದೇ ಭಾಗದಲ್ಲಿ ನಿಖರವಾಗಿ ಅದು ಪತ್ತೆಯಾಗಿಲ್ಲ. ಆದರೆ, ಲೀಥಿಯಂ ಅಂಶವಿರುವ ನಿಕ್ಷೇಪ ಪತ್ತೆಯಾಗಿದ್ದು ಆ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ ಎಂದು ಪ್ರಾದೇಶಿಕ ಕೇಂದ್ರದ ನಿರ್ದೇಶಕರು ತಿಳಿಸಿದರು.

ಲೀಥಿಯಂ ಸಂಶೋಧನೆ ಬಗ್ಗೆ ದೇಶದಾದ್ಯಂತ ಚರ್ಚೆ, ಉಪನ್ಯಾಸ, ವಿಚಾರ ಸಂಕಿರಣಗಳು ನಡೆಯುತ್ತಿವೆ. ಭಾರತೀಯ ವಿಜ್ಞಾನ ಕೇಂದ್ರದ ವಿಜ್ಞಾನಿಯೊಬ್ಬರು ತಮ್ಮ ಪ್ರಬಂಧದಲ್ಲಿ ಮಂಡ್ಯ ಜಿಲ್ಲೆಯ ವಿವಿಧೆಡೆ ಲೀಥಿಯಂ ಅಂಶದ ನಿಕ್ಷೇಪ ಪತ್ತೆಯಾಗಿರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದನ್ನು ಆಧಾರವಾಗಿಟ್ಟುಕೊಂಡು ಹಲವರು ಚರ್ಚಿಸುತ್ತಿದ್ದಾರೆ; ಮಾಧ್ಯಮಗಳು ವರದಿ ಮಾಡುತ್ತಿವೆ. ಮಂಡ್ಯ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಹಲವೆಡೆಯೂ ಈ ಲೋಹದ ಅಂಶ ಪತ್ತೆಯಾಗಿದೆ. ಈಗಲೇ ಆ ಸ್ಥಳಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದರು.

‘ವಿದ್ಯುತ್‌ಚಾಲಿತ ಕಾರುಗಳ ಬ್ಯಾಟರಿ ತಯಾರಿಕೆಯಲ್ಲಿ ಈ ಲೋಹವನ್ನು ಮುಖ್ಯ ಕಚ್ಚಾವಸ್ತುವನ್ನಾಗಿ ಬಳಸಲಾಗುತ್ತದೆ. ಸದ್ಯ ಭಾರತದಲ್ಲಿ ದೊರೆಯದ ಕಾರಣ ಹೊರ ದೇಶಗಳಿಂದ ಅತ್ಯಧಿಕ ಹಣ ಕೊಟ್ಟು ಆಮದು ಮಾಡಿಕೊಳ್ಳಬೇಕಾಗಿದೆ. ನಮ್ಮ ದೇಶದಲ್ಲೇ ಲಭ್ಯವಾದರೆ ವಿದ್ಯುತ್‌ಚಾಲಿತ ವಾಹನಗಳ ಮಾರುಕಟ್ಟೆ ಗಣನೀಯವಾಗಿ ವಿಸ್ತರಣೆಯಾಗಲಿದೆ’ ಎಂದು ನಗರದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಆಟೊಮೊಬೈಲ್‌ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ಜಗದೀಶ್‌ ತಿಳಿಸಿದರು.

ಸಂಶೋಧನಾ ಘಟಕ ಸ್ಥಾಪನೆ
ಶ್ರೀರಂಗಪಟ್ಟಣ:
ತಾಲ್ಲೂಕಿನ ಅಲ್ಲಾಪಟ್ಟಣ ಗ್ರಾಮದ ಬಳಿ ಸರ್ವೆ ನಂಬರ್‌ 220 ಹಾಗೂ ಆಸುಪಾಸಿನಲ್ಲಿ ಮೂರು ದಶಕದ ಹಿಂದೆಯೇ ಲೀಥಿಯಂ ಅಂಶ ಪತ್ತೆಯಾಗಿದ್ದು ಅಣು ಖನಿಜ ನಿರ್ದೇಶನಾಲಯವು ಗ್ರಾಮದಲ್ಲಿ ಸಂಶೋಧನಾ ಘಟಕ ಸ್ಥಾಪಿಸಿದೆ.

ಅಲ್ಲಿ ದೊರೆಯುವ ಖನಿಜದ ಸಂಶೋಧನೆ ನಿರಂತರವಾಗಿ ನಡೆಯುತ್ತಿದೆ. ವಿವಿಧೆಡೆ ಕುಳಿಗಳನ್ನು ತೋಡಿ ಪರೀಕ್ಷೆ ನಡೆಸಲಾಗುತ್ತಿದೆ. ಅಕ್ಕಪಕ್ಕದ ಹಳ್ಳಿಗಳ 25–30 ಜನರು ಇಲ್ಲಿ ಕಾಯಂ ಉದ್ಯೋಗವನ್ನೂ ಪಡೆದಿದ್ದಾರೆ.

‘ಇಲ್ಲಿ ಏನು ನಡೆಯುತ್ತಿದೆ ಎಂಬುದೇ ಸ್ಥಳೀಯರಿಗೆ ಗೊತ್ತಿರಲಿಲ್ಲ. ಕಾಗೆ ಬಂಗಾರ ತೆಗೆಯುತ್ತಿದ್ದಾರೆ ಎಂದೇ ಜನರು ನಂಬಿದ್ದರು. ಇಲ್ಲಿ ಲೀಥಿಯಂ ತೆಗೆಯುತ್ತಿದ್ದಾರೆ ಎಂಬ ಅಂಶ ಈಚೆಗೆ ಗೊತ್ತಾಗಿದೆ’ ಎಂದು ಗ್ರಾಮದ ಎಲ್‌. ಲಿಂಗರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT