ಶನಿವಾರ, ಫೆಬ್ರವರಿ 22, 2020
19 °C

ಮಂಗಳೂರು: ಬಾಂಬ್‌ 'ಸ್ಫೋಟಿಸಿ' ಪ್ರಾಣಹಾನಿ ತಪ್ಪಿಸಿದ ಭದ್ರತಾ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು:  ಬಜ್ಪೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸುಧಾರಿತ ಬಾಂಬ್‌ ಇರುವ ಬ್ಯಾಗ್‌ ಅನ್ನು ಭದ್ರತಾ ಸಿಬ್ಬಂದಿಗಳು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಯಶಸ್ವಿಯಾಗಿ ಸ್ಫೋಟಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಬಾಂಬ್‌ ಪತ್ತೆ: ಆಟೊ ರಿಕ್ಷಾ, ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ

ಸೋಮವಾರ ಬೆಳಗ್ಗೆ  ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿನ ಭದ್ರತಾ ತಪಾಸಣಾ ಗೇಟ್ ಬಳಿ ಜೀವಂತ ಬಾಂಬ್‌ ಇರುವ  ಬ್ಯಾಗ್ ಪತ್ತೆಯಾಗಿತ್ತು. ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಬಾಂಬ್‌ ನಿಷ್ಕ್ರಿಯಗೊಳಿಸಲು ಮುಂದಾದರು. 

ನಾಣ್ಯ ಸಂಗ್ರಹಕ್ಕೆ ಬಳಸುವ ಲೋಹದ ಡಬ್ಬಿಯಲ್ಲಿ ಬಾಂಬ್‌ ಇಡಲಾಗಿತ್ತು. ಸ್ಫೋಟಕ್ಕೆ ಬಳಸುವ ರಾಸಾಯನಿಕ ಪುಡಿ, ಲೋಹದ ತಂತಿ, ಲೋಹದ ತುಣುಕುಗಳು, ಟೈಮರ್ ಬಳಸಿ ಬಾಂಬ್ ತಯಾರಿಸಲಾಗಿತ್ತು. ಬಳಸಿದ್ದ ಟೈಮರ್ ಸ್ಥಗಿತಗೊಂಡಿತ್ತು ಎಂದು  ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಗಳು ಸ್ಥಳದಲ್ಲೇ ಮಾಹಿತಿ ನೀಡಿದ್ದರು.

ಬಾಂಬ್‌ ಸ್ಫೋಟಿಸುವ ಸಿದ್ಧತೆಯಲ್ಲಿ ಸಿಬ್ಬಂದಿ

ಭದ್ರತಾ ಸಿಬ್ಬಂದಿಗಳು ಪತ್ತೆಯಾಗಿರುವ ಬ್ಯಾಗ್‌ ಅನ್ನು ಬಾಂಬ್‌ ನಿಷ್ಕ್ರಿಯಗೊಳಿಸುವ ವಾಹನದಲ್ಲಿ ಹಾಕಿ ಅದನ್ನು ಕೆಂಜಾರು ಮೈದಾನಕ್ಕೆ ತೆಗೆದುಕೊಂಡು ಬಂದರು. ಇಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಗಳು ಟೈಮರ್ ಸಂಪರ್ಕ ಸ್ಥಗಿತವಾಗಿದ್ದ ಕಾರಣ ಬಾಂಬ್ ಇರುವ ಚೀಲವನ್ನು ತೆರೆಯದೇ ಸ್ಫೋಟಿಸಲು ನಿರ್ಧರಿಸಿದರು.

ಸುಮಾರು 350 ಮೀಟರ್‌ ದೂರದಲ್ಲಿ ಬಾಂಬ್‌ ಚೀಲವನ್ನು ಇರಿಸಿ, ಅಲ್ಲಿ ಸಾಕಷ್ಟು ಮರಳಿನ ಚೀಲಗಳನ್ನು ಪೇರಿಸಿದ ಬಳಿಕ  ವೈರ್‌ ಅಳವಡಿಸಿ ಸುರಕ್ಷಿತವಾಗಿ ಬಾಂಬ್ ಸ್ಫೋಟಿಸುವಲ್ಲಿ ಸಿಬ್ಬಂದಿಗಳು ಯಶಸ್ವಿಯಾದರು. ಮೊದಲ ಹಂತದಲ್ಲಿ ಬಾಂಬ್‌ ನಿಷ್ಕ್ರಿಯಗೊಳಿಸಲು ನಡೆದ ಯತ್ನ ವಿಫಲವಾದ ಹಿನ್ನೆಲೆಯಲ್ಲಿ, ಹೊಸ ಕೇಬಲ್ ಅಳವಡಿಕೆ ಮಾಡಲಾಯಿತು. 2ನೇ ಹಂತದ ಪ್ರಯತ್ನದಲ್ಲಿ ಬಾಂಬ್ ಸ್ಫೋಟಿಸಲು ಸಾಧ್ಯವಾಯ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು