ಶುಕ್ರವಾರ, ಜನವರಿ 17, 2020
22 °C
ಪಾಸ್‌ಪೋರ್ಟ್‌ ರದ್ದತಿಗೆ ಕೋರಿಕೆ ಸಲ್ಲಿಸಲು ನಿರ್ಧಾರ

ವಿದೇಶದಿಂದ ಪ್ರಚೋದನೆ ಸೆರೆಗೆ ಪೊಲೀಸರ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಂಗಳೂರು: ಡಿಸೆಂಬರ್‌ 19ರಂದು ನಡೆದ ಗಲಭೆ, ಗೋಲಿಬಾರ್‌ಗೂ ಮುನ್ನ ಹಾಗೂ ನಂತರ ಹಿಂಸೆಗೆ ಪ್ರಚೋದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹಾಕಿದ್ದವರಲ್ಲಿ 50ಕ್ಕೂ ಹೆಚ್ಚು ಮಂದಿ ವಿದೇಶದಲ್ಲಿದ್ದಾರೆ. ಈ ಎಲ್ಲ ಆರೋಪಿಗಳ ಪಾಸ್‌ಪೋರ್ಟ್‌ ರದ್ದತಿಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸುವಂತೆ ಪ್ರಚೋದನೆ ನೀಡಿರುವವರು, ಗಲಭೆ ಮತ್ತು ಗೋಲಿಬಾರ್‌ ನಂತರ ಪೊಲೀಸರ ವಿರುದ್ಧ ಪ್ರತೀಕಾರಕ್ಕೆ ಪ್ರಚೋದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಾಕಿದವರ ವಿರುದ್ಧ ಸೈಬರ್‌ ಅಪರಾಧ ಠಾಣೆಯಲ್ಲಿ ಹಲವು ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 50ಕ್ಕೂ ಹೆಚ್ಚು ಮಂದಿ ವಿದೇಶಗಳಲ್ಲಿ ಇದ್ದಾರೆ ಎಂಬುದು ಐಪಿ ವಿಳಾಸ ಪರಿಶೀಲನೆ ಬಳಿಕ ಖಚಿತವಾಗಿದೆ.

ಕಾನೂನು ತಜ್ಞರೊಂದಿಗೆ ಸಮಾಲೋಚನೆ:ವಿದೇಶದಲ್ಲಿರುವ ಆರೋಪಿಗಳನ್ನು ಕಾನೂನು ಕ್ರಮಕ್ಕೆ ಗುರಿಪಡಿಸುವ ಅವಕಾಶಗಳ ಕುರಿತು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಹಲವು ಅಭಿಪ್ರಾಯಗಳು ವ್ಯಕ್ತವಾಗಿದ್ದು, ಸದ್ಯದಲ್ಲಿಯೇ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 166–ಎ ಅಡಿಯಲ್ಲಿ ‘ಲೆಟರ್ಸ್‌ ರೊಗೇಟರಿ’ ರವಾನೆ ಮಾಡಿ ಆರೋಪಿಗಳನ್ನು ದೇಶಕ್ಕೆ ಕರೆಸುವ ಅವಕಾಶದ ಕುರಿತು ತಜ್ಞರು ಸಲಹೆ ನೀಡಿದ್ದಾರೆ. ಈ ಸೆಕ್ಷನ್‌ನಡಿ ವಿಚಾರಣಾ ನ್ಯಾಯಾಲಯದಿಂದ ಆರೋಪಿ ಇರುವ ರಾಷ್ಟ್ರದ ನ್ಯಾಯಾಲಯಕ್ಕೆ ಕೋರಿಕೆ ಪತ್ರ ರವಾನಿಸಲಾಗುತ್ತದೆ. ಅಲ್ಲಿನ ನ್ಯಾಯಾಲಯ ಆರೋಪಿಯ ವಿಚಾರಣೆ ನಡೆಸಿ, ಭಾರತಕ್ಕೆ ರವಾನಿಸಲು ಕ್ರಮ ಕೈಗೊಳ್ಳಬಹುದು.

‘ಆರೋಪಿಗಳ ಪಾಸ್‌ಪೋರ್ಟ್‌ ಆಮದು ಆದೇಶವನ್ನು ನ್ಯಾಯಾಲಯದಿಂದ ಪಡೆಯುವ ಬಗ್ಗೆಯೂ ತಜ್ಞರು ಸಲಹೆ ನೀಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಲಭ್ಯವಿರುವ ಸಾಕ್ಷ್ಯಗಳನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ವಿಸ್ತೃತ ವರದಿ ಸಲ್ಲಿಸಿ, ಪಾಸ್‌ಪೋರ್ಟ್‌ ಆಮದು ಆದೇಶಕ್ಕೆ ಮನವಿ ಮಾಡಬೇಕು. ನ್ಯಾಯಾಲಯ ಆದೇಶ ಹೊರಡಿಸಿದರೆ, ವಿದೇಶಾಂಗ ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಿ ಪಾಸ್‌ಪೋರ್ಟ್‌ ಆಮದು ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆಗ ಆರೋಪಿಯನ್ನು ಆತ ನೆಲೆಸಿರುವ ರಾಷ್ಟ್ರದ ಸರ್ಕಾರ ಹೊರಹಾಕುತ್ತದೆ’ ಎಂದು ಕಮಿಷನರ್‌ ಡಾ.ಪಿ.ಎಸ್‌.ಹರ್ಷ ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಪಿಗಳ ವೀಸಾ ರದ್ದು ಮಾಡುವಂತೆ ಸಂಬಂಧಿಸಿದ ರಾಷ್ಟ್ರಗಳ ಸರ್ಕಾರಗಳಿಗೆ ಮನವಿ ಮಾಡುವುದೂ ಸೇರಿದಂತೆ ಹಲವು ಸಾಧ್ಯತೆಗಳ ಕುರಿತು ಚರ್ಚಿಸಲಾಗುತ್ತಿದೆ. ಕಾನೂನು ತಜ್ಞರ ಸಲಹೆಯಂತೆ ಮುಂದುವರಿಯಲಾಗುವುದು ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು