ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಭಾಷಿಕ ಕರಾವಳಿಯಲ್ಲಿ ಕನ್ನಡದ ನಂಟು

ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ
Last Updated 30 ನವೆಂಬರ್ 2019, 20:24 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು 1980ರಲ್ಲಿ ಆರಂಭಗೊಂಡಿದ್ದರೂ, ಅದಕ್ಕೂ ಪೂರ್ವದಲ್ಲಿಯೇ ಮೈಸೂರು ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿ 1968ರಲ್ಲಿ ಇಲ್ಲಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಆರಂಭಗೊಂಡಿತ್ತು.

ಕನ್ನಡದ ಜೊತೆ ತುಳು, ಕೊಂಕಣಿ, ಬ್ಯಾರಿ, ಕೊಡವ ಸೇರಿದಂತೆ ಬಹುಭಾಷಿಕ ನೆಲೆಯಾದ ಕರಾವಳಿಯನ್ನು ಕನ್ನಡ ಮತ್ತು ಕರ್ನಾಟಕದ ಇತರ ಭಾಗಗಳ ಜೊತೆ ಜೋಡಿಸಿದ ಹೆಮ್ಮೆ ವಿಭಾಗಕ್ಕಿದೆ. ಇದರಿಂದಾಗಿ ಕರಾವಳಿ ಹಾಗೂ ಕೊಡಗಿನ ಪ್ರಾದೇಶಿಕ, ಮಹಿಳಾ, ಜಾನಪದ, ಸಾಂಸ್ಕೃತಿಕ ಅಧ್ಯಯನಗಳು ನಡೆದಿವೆ.

ದಯಾನಂದ ಪೈ ಮತ್ತು ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಕನಕದಾಸ ಸಂಶೋಧನಾ ಕೇಂದ್ರ, ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಡಾ.ಕೆ.ಶಿವರಾಮ ಕಾರಂತ ಪೀಠ, ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ, ಶ್ರೀಅಂಬಿಗರ ಚೌಡಯ್ಯ ಅಧ್ಯಯನ ಪೀಠ, ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠಗಳು ಇಲ್ಲಿವೆ. ಆರ್ಥಿಕ ಮತ್ತು ಸಿಬ್ಬಂದಿ ಮಿತಿಯ ಕಾರಣ ಪೀಠಗಳು ನಿಗದಿತ ಕಾರ್ಯಕ್ರಮಗಳಿಗೆ ಸೀಮಿತವಾಗಿವೆ.

ಸರ್ಕಾರದ ಅನುದಾನ–ಯೋಜನೆಗಳಿಗಿಂತ ಹೆಚ್ಚಾಗಿ ಪೀಠದಲ್ಲಿ ಕಾರ್ಯನಿರ್ವಹಿಸಿದ ವಿದ್ವಾಂಸರು ನಡೆಸಿದ ಸಾಂಸ್ಕೃತಿಕ ಜನಜೀವನದ ಅಧ್ಯಯನ ಹಾಗೂ ಸಂಶೋಧನೆಗಳಿಂದ ಬಹುಭಾಷೆಗಳ ನಡುವೆ ಕನ್ನಡತನ ಉಳಿಸಿಕೊಂಡು ಬರುವಲ್ಲಿ ಸಾಧ್ಯವಾಗಿದೆ.

ಈ ಪ್ರಯತ್ನಗಳ ಭಾಗವಾಗಿ ಫಿನ್‌ಲ್ಯಾಂಡ್‌ನ ತುರ್ಕು ವಿಶ್ವವಿದ್ಯಾಲಯದ ಜಾನಪದ ಮತ್ತು ಕಲೇವಾಲ ಮೌಖಿಕ ಪುರಾಣ ವಿಭಾಗ, ಜರ್ಮನಿಯ ವೂಜ್‌ಬರ್ಗ್‌ ವಿಶ್ವವಿದ್ಯಾಲಯ, ಜಪಾನಿನ ವಸೆದಾ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸಂಶೋಧನೆ– ಅಧ್ಯಯನಗಳು ನಡೆದಿವೆ. ಆದರೆ, ಸಂಸ್ಥೆ ಸಂಗ್ರಹಿಸಿದ ಅಮೂಲ್ಯ ತಾಳೆಗರಿ, ಹಳೇ ಪತ್ರಿಕೆಗಳು, ಕೃತಿಗಳು, ಕೃಷಿ, ಭೂತಾರಾಧನೆ, ಧಾರ್ಮಿಕ–ಕೌಟುಂಬಿಕ ಸಂಗ್ರಹಾಲಯ, ಕಾಷ್ಠ ಶಿಲ್ಪಗಳನ್ನು ಇಡಲು ವಸ್ತು ಸಂಗ್ರಹಾಲಯವೊಂದಿತ್ತು. ಈ ಹಿಂದಿನ ವಿಶ್ವವಿದ್ಯಾಲಯದ ಆಡಳಿತವು ಕಟ್ಟಡವನ್ನು ಆಡಳಿತ ವಿಭಾಗಕ್ಕೆ ನೀಡಿದ್ದು, ಅಮೂಲ್ಯ ವಸ್ತುಗಳು ರಾಶಿ ಬೀಳುವಂತಾಗಿದೆ. ಇನ್ನೊಂದೆಡೆ ಬೋಧಕ ಹುದ್ದೆಗಳು ಖಾಲಿ ಇದ್ದು, ಕನ್ನಡದ ಕೆಲಸಕ್ಕೆ ಅಡ್ಡಿಯಾಗಿದೆ.

‘ಕರಾವಳಿಯ ಅನನ್ಯ ಸಂಸ್ಕೃತಿಯ ಅಧ್ಯಯನ ಹಾಗೂ ಸಂಶೋಧನಾ ಕಾರ್ಯವು ಮಂಗಳೂರು ವಿಶ್ವವಿದ್ಯಾಲಯದಿಂದ ಸಾಧ್ಯವಾಗಿದೆ. ಆದರೆ, ಈ ನಿಟ್ಟಿನಲ್ಲಿ ಕೆಲಸಗಳನ್ನು ಮುಂದುವರಿಸಲು ಸಿಬ್ಬಂದಿ, ಮೂಲಸೌಲಭ್ಯಗಳು ಇನ್ನಷ್ಟು ಬೇಕಾಗಿದೆ’ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ಪ್ರೊ.ಅಭಯ ಕುಮಾರ್, ಪ್ರಾಧ್ಯಾಪಕ ಧನಂಜಯ ಕುಂಬ್ಳೆ ಮತ್ತಿತರರು.

ಕನ್ನಡದಲ್ಲೇ ಜಗತ್ತಿನ ಜ್ಞಾನ ಸಿಗಬೇಕು

ಕನ್ನಡದ ದೇಸಿ ಜ್ಞಾನ ಹೊರಜಗತ್ತಿಗೆ ಪರಿಚಯಗೊಳ್ಳಲು ಜಗತ್ತಿನ ಭಾಷೆಗಳಿಗೆ ಅನುವಾದ ಆಗಬೇಕು.ಕನ್ನಡದ ವೈಶಿಷ್ಟ್ಯತೆ, ಅಸ್ಮಿತೆಯು ಹೊರಜಗತ್ತಿಗೆ ಪರಿಚಯಗೊಳ್ಳಬೇಕು. ತಂತ್ರಜ್ಞಾನ ಸೇರಿದಂತೆ ಎಲ್ಲೆಡೆ ಕನ್ನಡ ಬಳಕೆಯ ಸಾಧ್ಯತೆಗಳು ಹೆಚ್ಚಾಗಬೇಕು. ಕನ್ನಡದ ಮೂಲಕವೇ (ಶಿಕ್ಷಣ, ಉದ್ಯೋಗ) ಬದುಕುವ ಧೈರ್ಯ ಬರಬೇಕು. ಕನ್ನಡದಲ್ಲೇ ಸ್ಥಳೀಯ ಮತ್ತು ಜಗತ್ತಿನ ಜ್ಞಾನ ಸಿಗುವಂತಾಗಬೇಕು. ಕನ್ನಡ ಸಂವಹನ ಹಾಗೂ ಬಳಕೆ ಅನಿವಾರ್ಯ ಆಗಬೇಕು.

ಕರಾವಳಿ–ಕೊಡಗಿನಲ್ಲಿ ಕನ್ನಡ ಅಧ್ಯಯನವು ಮಂಗಳೂರು ವಿಶ್ವವಿದ್ಯಾಲಯದ ಸ್ಥಾಪನೆ ಬಳಿಕ ವ್ಯಾಪಕಗೊಂಡಿದೆ. ಇಲ್ಲಿ ಪ್ರಾಚೀನ ಪಂಡಿತ ಪರಂಪರೆ ಇತ್ತು. ಆದರೆ, ವಿ.ವಿಯಿಂದಾಗಿ ಎಲ್ಲ ಸಮುದಾಯ ತೆರೆದುಕೊಳ್ಳುವಂತಾಯಿತು. ಕನ್ನಡದ ಪ್ರಸರಣ ಮತ್ತು ಜಾಗೃತಿ ಆಯಿತು.ಅಲ್ಲದೇ, ಸ್ಥಳೀಯ ಸಂಸ್ಕೃತಿ ಬಗ್ಗೆ ಕನ್ನಡದಲ್ಲಿ ಕೃತಿಗಳು ಬಂದವು. ಆ ಮೂಲಕ ಇಲ್ಲಿನ ಬದುಕು ಮತ್ತು ಸಂಸ್ಕೃತಿ ಕರ್ನಾಟಕಕ್ಕೆ ಪರಿಚಯಗೊಂಡಿತು. ಕನ್ನಡದ ವಿದ್ವತ್ ವಲಯದ ಜೊತೆ ಕರಾವಳಿಯ ಬೆಸುಗೆ ಸಾಧ್ಯವಾಯಿತು. ಕನ್ನಡದ ಬೌದ್ಧಿಕ ಜ್ಞಾನ ಬೆಳೆಯಿತು.

–ಪ್ರೊ.ಬಿ.ಎ.ವಿವೇಕ ರೈ, ವಿಶ್ರಾಂತ ಕುಲಪತಿ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT