ಭಾನುವಾರ, ಮಾರ್ಚ್ 29, 2020
19 °C

‘ಸೈಬರ್ ಅಪರಾಧ ತನಿಖೆಗೆ ತಂತ್ರಜ್ಞಾನ ಬಳಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ಇರುವ ಕೆಲ ಸಿಬ್ಬಂದಿಗೆ ಸೈಬರ್ ಅಪರಾಧದ ತನಿಖೆ ನಡೆಸಲು ಸಹಕಾರಿ ಆಗುವಂತೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಸಿಬ್ಬಂದಿಗೆ ತರಬೇತಿ ಇದ್ದರೆ ತನಿಖೆಗೆ ನೆರವಾಗಲಿದೆ. ಹೊರ ರಾಜ್ಯ ಹಾಗೂ ಇತರೆಡೆಯ ತನಿಖಾ ವಿಧಾನಗಳು, ತಂತ್ರಜ್ಞಾನದ ಮಾಹಿತಿ ಆಧರಿಸಿ ತರಬೇತಿ ನೀಡಲಾಗುತ್ತದೆ. ಅಗತ್ಯ ಸಿಬ್ಬಂದಿಯನ್ನೂ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಪ್ರತಿ ಠಾಣೆಯಲ್ಲೂ ಇಬ್ಬರು ಸಬ್‌ಇನ್ಸ್‌ಪೆಕ್ಟರ್ ಇರುವಂತೆ ನೋಡಿಕೊಳ್ಳಲಾಗುವುದು. ಒಬ್ಬರು ಕಾನೂನು ಸುವ್ಯವಸ್ಥೆಗೆ ಹಾಗೂ ಮತ್ತೊಬ್ಬರು ಅಪರಾಧಗಳ ತನಿಖೆ ನಡೆಸಲಿದ್ದಾರೆ. ಕೆಲವು ಠಾಣೆಗಳಲ್ಲಿ ಇಬ್ಬರು ಎಸ್‌.ಐಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ ಠಾಣೆಗಳಿಗೂ ನಿಯೋಜಿಸಲಾಗುವುದು. ಖಾಲಿ ಸ್ಥಾನಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.

‘ನಿರ್ಭಯ ಯೋಜನೆ’ಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಿ, ಆಧುನಿಕ ತಂತ್ರಜ್ಞಾನ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಸಿ.ಸಿ ಟಿ.ವಿ ಅಳವಡಿಕೆ, ಆ ದೃಶ್ಯಗಳ ವಿಶ್ಲೇಷಣೆಯಿಂದ ಹಿಡಿದು ವಿಶ್ವದ ಇತರೆ ಭಾಗಗಳಲ್ಲಿ ಅಪರಾಧಗಳ ತನಿಖೆಗೆ ಅಳವಡಿಸಿಕೊಂಡಿರುವ ತಂತ್ರಜ್ಞಾನದ ಅಧ್ಯಯನ, ನಮಗೆ ಹೊಂದುವಂತೆ ಅದರ ಅಳವಡಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಜಾಗತಿಕ ಮಟ್ಟದ ಸಂಸ್ಥೆಗಳ ಜತೆಗೂ ಚರ್ಚಿಸಲಾಗಿದ್ದು, ಅಂತಹ ಸಂಸ್ಥೆಗಳ ಜತೆಗೂ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದರು.

ಔರಾದಕರ ವರದಿ: ಪೊಲೀಸ್‌ ಸಿಬ್ಬಂದಿ ವೇತನ ತಾರತಮ್ಯ ನಿವಾರಣೆ ಸೇರಿದಂತೆ ಇಲಾಖೆಯ ಸುಧಾರಣೆಗೆ ಸಂಬಂಧಿಸಿ ರಾಘವೇಂದ್ರ ಔರಾದಕರ ನೀಡಿರುವ ವರದಿ ಜಾರಿ ಮಾಡಲಾಗುವುದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಮುಂದಿನ ವಾರ ಈ ಬಗ್ಗೆ ಚರ್ಚಿಸಿದ ನಂತರ ಕ್ರಮ ವಹಿಸಲಾಗುವುದು ಎಂದು ಹೇಳಿದರು.

‘ಗೌರವಯುತವಾಗಿ ಸುಮ್ಮನಿರಲಿ’
‘ಆಪರೇಷನ್ ಕಮಲ’ ಹೆಸರು ಹೇಳಿಕೊಂಡು ಬಿಜೆಪಿ ಮುಖಂಡರು ಹಾಗೂ ಬಿ.ಎಸ್.ಯಡಿಯೂರಪ್ಪ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಇನ್ನು ಮುಂದಾದರೂ ಇಂತಹ ಪ್ರಯತ್ನ ಬಿಟ್ಟು ಗೌರವಯುತವಾಗಿ ಇರಬೇಕು ಎಂದು ಎಂ.ಬಿ.ಪಾಟೀಲ್ ಅಸಮಾಧಾನ ಹೊರ ಹಾಕಿದರು.

ಬಿಜೆಪಿಯವರು ಬಯಸಿದಷ್ಟು ಶಾಸಕರು ಕಾಂಗ್ರೆಸ್‌ನಿಂದ ಹೋಗುತ್ತಿಲ್ಲ. ಇನ್ನೂ ನಾಲ್ಕು ವರ್ಷಗಳ ಕಾಲ ಆಪರೇಷನ್ ಕಮಲದ ಹೆಸರು ಮುಂದುವರಿಯುತ್ತದೆ. ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.

ಸಂಪುಟ ವಿಸ್ತರಣೆ, ಪುನರ್ ರಚನೆ ಸೇರಿದಂತೆ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಕಾಂಗ್ರೆಸ್‌ನ ಎಲ್ಲ ಸಚಿವರು ಬದ್ದರಾಗಿದ್ದು, ಒಗ್ಗಟ್ಟಿನಿಂದ ಇದ್ದೇವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಈಗ ಖಾಲಿ ಇಲ್ಲದಿರುವುದರಿಂದ, ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು