ಭಾನುವಾರ, ಜನವರಿ 19, 2020
29 °C
ಗುಂಡ್ಲುಪೇಟೆಯಲ್ಲಿ ಇಬ್ಬರು ವಶಕ್ಕೆ

ಶಂಕಿತ ಮೆಹಬೂಬ್ ಪಾಷಾ ‘ಐಎಸ್‌ ಸದಸ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಮತೀಯ ಗಲಭೆ ಹುಟ್ಟುಹಾಕಲು ಹಾಗೂ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸುತ್ತಿದ್ದ ಮೆಹಬೂಬ್ ಪಾಷಾ, ಐಎಸ್‌ (ಇಸ್ಲಾಮಿಕ್ ಸ್ಟೇಟ್) ಉಗ್ರ ಸಂಘಟನೆ ಸದಸ್ಯನೆಂಬ ಸಂಗತಿ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ. 

ಇದರ ಬೆನ್ನಲ್ಲೇ, ಶಂಕಿತ ಉಗ್ರರ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಇಬ್ಬರನ್ನು ಶನಿವಾರ ತಡರಾತ್ರಿ ವಶಕ್ಕೆ ಪಡೆಯಲಾಗಿದೆ.

ಶಂಕಿತ ಉಗ್ರ ಮೆಹಬೂಬ್ ಪಾಷಾ ಮತ್ತು ಆತನ 16 ಸಹಚರರ ವಿರುದ್ಧ ಬೆಂಗಳೂರಿನ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿರುವ ಸಿಸಿಬಿ ಇನ್‌ಸ್ಪೆಕ್ಟರ್‌, ಹಲವು ಮಹತ್ವದ ಸಂಗತಿಗಳನ್ನು ಅದರಲ್ಲಿ ಪ್ರಸ್ತಾಪಿಸಿದ್ದಾರೆ.

‘ಬೆಂಗಳೂರು ಗುರಪ್ಪನಪಾಳ್ಯದಲ್ಲಿ ನೆಲೆಸಿದ್ದ ಮೆಹಬೂಬ್ ಪಾಷಾ, ಐಎಸ್ (ಇಸ್ಲಾಮಿಕ್‌ ಸ್ಟೇಟ್‌) ಉಗ್ರ ಸಂಘಟನೆಗೆ ಸೇರಿದವನು. ತನ್ನ ಗುರಪ್ಪನಪಾಳ್ಯದ ಮನೆಯಲ್ಲೇ ಸಹಚರರ ಸಭೆ ನಡೆಸಿ, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದ’ ಎಂದು ಇನ್‌ಸ್ಪೆಕ್ಟರ್ ದೂರಿನಲ್ಲಿ ತಿಳಿಸಿದ್ದಾರೆ.

ತಮಿಳುನಾಡಿನ ಹಿಂದೂ ಮುಖಂಡ ಸುರೇಶ್ ಎಂಬುವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ ಖ್ವಾಜಾ ಮುಹಿನುದ್ದೀನ್ ಅಲಿಯಾಸ್ ಜಲಾಲ್ ಮತ್ತು ಆತನ ಸಹಚರರಾರ ಅಬ್ದುಲ್ ಸಮದ್, ತೌಸಿಫ್ ಅಲಿಯಾಸ್ ತೌಕಿರ್, ಸೈಯದ್ ಅಲಿ ನವಾಜ್, ಜಾಫರ್ ಅಲಿ ಅಲಿಯಾಸ್ ಉಮರ್, ಅಬ್ದುಲ್ ಶಮೀನ್ ಮತ್ತು ಇತರರ ಜೊತೆ ಮೆಹಬೂಬ್‌ ಪಾಷಾ ಸಂಪರ್ಕವಿಟ್ಟುಕೊಂಡಿದ್ದ ಎಂದು ವಿವರಿಸಿದ್ದಾರೆ

‘ಹಿಂದೂ ಮುಖಂಡರ ಹತ್ಯೆ, ಕೋಮು ಗಲಭೆ ಹಾಗೂ ದೇಶ ವಿರೋಧಿ ಚಟುವಟಿಕೆ ನಡೆಸಲು ಮೆಹಬೂಬ್ ಪಾಷಾ ಸಂಚು ರೂಪಿಸುತ್ತಿದ್ದ. ಅದಕ್ಕೆ ಸಹಚರರಾದ ಇಮ್ರಾನ್ ಖಾನ್, ಮೊಹಮ್ಮದ್ ಹನೀಫ್, ಮೊಹಮ್ಮದ್ ಮನ್ಸೂರ್, ಸಲೀಂ ಖಾನ್, ಅಬ್ದುಲ್ ಮತಿನ್ ಅಹ್ಮದ್, ಹುಸೇನ್, ಅನಿಸ್, ಶಾಜಿಬ್ ಜಬೀವುಲ್ಲಾ, ಅಜಾಜ್ ಪಾಷ, ಜಬೀಬ್‌ವುಲ್ಲಾ ಹಾಗೂ ಮುಸಾವೀರ್ ಹುಸೇನ್ ಕೈ ಜೋಡಿಸಿದ್ದರು. ಎಲ್ಲರೂ ಸೇರಿಯೇ ಶಸ್ತ್ರಾಸ್ತ್ರ, ಸ್ಫೋಟಕ ಸಂಗ್ರಹಿಸುವಲ್ಲಿ ನಿರತರಾಗಿದ್ದರು’ ಎಂದು ದೂರಿನಲ್ಲಿ ಇನ್‌ಸ್ಪೆಕ್ಟರ್‌ ತಿಳಿಸಿದ್ದಾರೆ.

ಸಿಮಿ ಜೊತೆಯೂ ಸಂಪರ್ಕ: ಆರೋಪಿ ಮೊಹಮ್ಮದ್ ಮನ್ಸೂರ್ ಎಂಬಾತ ನಿಷೇಧಿತ ಸಿಮಿ (ಇಂಡಿಯನ್ ಮುಜಾಹಿದ್ದೀನ್) ಸಂಘಟನೆ ಸದಸ್ಯ ಸಾದಿಕ್ ಸಮೀರ್ ಜೊತೆ ಸಂಪರ್ಕ ಹೊಂದಿದ್ದ ಸಂಗತಿಯೂ ತನಿಖೆಯಿಂದ ಗೊತ್ತಾಗಿದೆ’ ಎಂಬುದಾಗಿ ಸಿಸಿಬಿ ಇನ್‌ಸ್ಪೆಕ್ಟರ್‌ ಹೇಳಿದ್ದಾರೆ.

ಶಂಕಿತರನ್ನು ಹಿಡಿದುಕೊಟ್ಟ ಮೊಬೈಲ್ ಕರೆ: ‘ತಮಿಳುನಾಡಿನ ಹಿಂದೂ ಮುಖಂಡ ಸುರೇಶ್ ಹತ್ಯೆ ಪ್ರಕರಣದ ಐವರು ಆರೋಪಿಗಳಲ್ಲಿ ಮೂವರಿಗೆ ಜಾಮೀನು ಸಿಕ್ಕಿತ್ತು. ಆ ಮೂವರು ಜೈಲಿನಿಂದ ಹೊರಬಂದು ದೆಹಲಿಗೆ ಹೋಗಿ ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ಆರೋಪಿಯೊಬ್ಬನ ಮೊಬೈಲ್‌ಗೆ ಪಾಷಾ ಕರೆ ಮಾಡಿದ್ದ. ಅದರ ಬೆನ್ನತ್ತಿದ್ದಾಗಲೇ ಮೆಹಬೂಬ್ ಪಾಷಾ ಉಗ್ರ ಚಟುವಟಿಕೆ ಬಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಸ್ಫೋಟದ ಆರೋಪಿಗಳ ಸಹಚರರು: ‘ಪಾಷಾ ಹಾಗೂ ಆತನ ಸಹಚರರು, 2013ರಲ್ಲಿ ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ಸಂಭವಿಸಿದ್ದ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳ ಸಹಚರರೂ ಆಗಿದ್ದರು. ತಮಿಳುನಾಡಿನಲ್ಲೇ ಬಾಂಬ್‌ ಸ್ಫೋಟಿಸಲು ಸಂಚು ರೂಪಿಸಿದ್ದರು’ ಎಂದೂ ಮೂಲಗಳು ತಿಳಿಸಿವೆ.

ಅಜ್ಞಾತ ಸ್ಥಳದಲ್ಲಿ ಶಂಕಿತರ ವಿಚಾರಣೆ

ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ವಶಕ್ಕೆ ಪಡೆದಿರುವ ಶಂಕಿತರನ್ನು ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಸಿಸಿಬಿ, ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ), ಭಯೋತ್ಪಾದನಾ ನಿಗ್ರಹ ದಳ ಹಾಗೂ ಚಾಮರಾಜನಗರ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಬಂಧಿತರಲ್ಲಿ ಒಬ್ಬರು ಮೌಲ್ವಿಯಾಗಿದ್ದು, ಕೇರಳದ ಶಂಕಿತ ಉಗ್ರರೊಂ ದಿಗೆ ಸಂಪರ್ಕ ಹೊಂದಿದ ವ್ಯಕ್ತಿಗೆ ಆಶ್ರಯ ನೀಡಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರ ಹೆಸರನ್ನೂ ಪೊಲೀಸರು ಬಹಿರಂಗಪಡಿಸಿಲ್ಲ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು